ಕನ್ನಡಪ್ರಭ ವಾರ್ತೆ ಸವದತ್ತಿ ಗ್ರಾಮೀಣ ಮಟ್ಟದ ರಂಗಭೂಮಿ ಕಲೆಗಳು ಇಂದು ನಶಿಸುತ್ತಿವೆ. ಅವುಗಳನ್ನು ಉಳಿಸಿ ಬೆಳೆಸುತ್ತಿರುವ ರಂಗ ಆರಾಧನಾ ಸಂಘಟನೆ ಜೊತೆಗೆ ನಾವೆಲ್ಲರೂ ಕೈಜೋಡಿಸಬೇಕಿದೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.
ಯ.ರು.ಪಾಟೀಲ ಮಾತನಾಡಿ, ಸುಮಾರು ಮೂರು ದಶಕಗಳಿಂದ ಈ ಭಾಗದಲ್ಲಿ ರಂಗಭೂಮಿ ಕಲಾವಿದರು ಮಾಡುತ್ತಿರುವ ರಂಗ ಚಟುವಟೆಕೆಗಳಿಗೆ ಸರಿಯಾದ ಸಂಪನ್ಮೂಲಗಳು ಇಲ್ಲದಾಗಿವೆ. ಕಲಾವಿದರಿಗೆ ಅವಶ್ಯಕವಾಗಿರುವ ರಂಗ ಮಂದಿರದ ಜೊತೆಗೆ ಮೂಲ ಸೌಕರ್ಯಗಳನ್ನು ಕಲ್ಪಿಸಲು ಜನಪ್ರತಿನಿಧಿಗಳು ಆಸಕ್ತಿ ತೋರಬೇಕು. ಸವದತ್ತಿಯ ದೇಸಾಯಿ ಕೋಟೆಯ ಪ್ರಮುಖ ದ್ವಾರದ ಬಳಿ ಗೋಡೆಗಳು ಬಿರುಕು ಬಿಟ್ಟು ಕುಸಿದು ಬೀಳುವ ಹಂತದಲ್ಲಿರುವದರಿಂದ ಕೋಟೆಯ ಪುನರುತ್ಥಾನದ ಕಡೆಗೆ ಶಾಸಕರು ವಿಶೇಷ ಗಮನಹರಿಸಬೇಕೆಂದರು.
ಡಾ.ಎ.ಸಿ.ಕಬ್ಬಿಣ ಮಾತನಾಡಿ, ರಂಗ ಆರಾಧನಾ ಸಂಘಟನೆ ಕಲಾವಿದರು ಪ್ರತಿವರ್ಷ ರಂಗ ಚಟುವಟಿಕೆಗಳ ಮುಖಾಂತರ ಜನರನ್ನು ರಂಜಿಸುತ್ತಾ ಬಂದಿದ್ದು, ಅವರ ಕಾರ್ಯವು ಎಲ್ಲರಲ್ಲಿ ರಂಗಭೂಮಿ ಅಭಿರುಚಿ ಹೆಚ್ಚಿಸುತ್ತಿದೆ ಎಂದರು.ಪ್ರಶಸ್ತಿ ಪುರಸ್ಕೃತ ಬಿ.ರಾಜು ಮತ್ತು ಬಾಬಾಸಾಹೇಬ ಕಾಂಬಳೆ ಮಾತನಾಡಿದರು. ಪ್ರಗತಿ ಪರ ರೈತ ರುದ್ರಪ್ಪ ಶಿಂಧೆ ಇವರಿಂದ ಕೊಡಲ್ಪಡುವ ರಂಗ ಆರಾಧಕ ಪ್ರಶಸ್ತಿಯನ್ನು ಧಾರವಾಡದ ಖ್ಯಾತ ಪ್ರಸಾಧನಕಾರ ಸಂತೋಷ ಗಜಾನನ ಮಹಾಲೆಯವರಿಗೆ ನೀಡಲಾಯಿತು.
ಚಂದ್ರಣ್ಣ ಶಾಮರಾಯನವರ, ಶ್ರೀಧರ ಗಸ್ತಿ, ಅರುಣ ಸುಳ್ಳದ, ಸಿದ್ದಯ್ಯ ವಡಿಯರ, ರುದ್ರಪ್ಪ ಶಿಂಧೆ, ಡಾ.ವೈ.ಎಂ. ಯಾಕೊಳ್ಳಿ, ಡಾ.ಎ.ಬಿ.ವಗ್ಗರ, ಭಾರತಿ ಕಡೇಮನಿ ಇದ್ದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಹಿರಿಯ ನ್ಯಾಯವಾದಿ ದಿ.ವಿ.ಆರ್. ಕಾರದಗಿ, ದಿ.ಮೋಹನದಾಸ ಕಡೇಮನಿ, ದಿ.ಕೆ.ಸಂಕಪ್ಪ ಮಾಸ್ತರ ಹಿರೇಕೊಪ್ಪ, ಯಲ್ಲವ್ವ ಯಾಕೊಳ್ಳಿ, ಹನಮವ್ವ ವಗ್ಗರವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು. ಝಕೀರ ನದಾಫ ಸ್ವಾಗತಿಸಿದರು. ಶಿವಾನಂದ ತಾರೀಹಾಳ ನಿರೂಪಿಸಿದರು. ಗೋಪಾಲ ಪಾಸಲಕರ ವಂದಿಸಿದರು.