ಬಳಕೆಯಾಗದೆ ದುಸ್ಥಿತಿಯಲ್ಲಿರುವ ಸರ್ಕಾರಿ ವಸತಿಗೃಹ

KannadaprabhaNewsNetwork | Published : Jan 30, 2024 2:00 AM

ಸಾರಾಂಶ

ಪಟ್ಟಣದಲ್ಲಿ ಹಲವು ಸರ್ಕಾರಿ ಕಚೇರಿಗಳಿಗೆ ಸ್ವಂತ ಕಟ್ಟಡಗಳಿಲ್ಲ. ಈ ಎರಡೂ ಬಂಗಳೆಗನ್ನು ಕೆಡವಿ ಒಂದೇ ಸ್ಥಳದಲ್ಲಿ ಸರ್ಕಾರಿ ಕಚೇರಿಗಳ ಸಮುಚ್ಛಯ ನಿರ್ಮಾಣ ಮಾಡಿದರೆ ಜನತೆಗೆ ಅನುಕೂಲವಾಗುತ್ತದೆ

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಪಟ್ಟಣದಲ್ಲಿ ಎರಡು ಪ್ರಮುಖ ಸರ್ಕಾರಿ ವಸತಿ ಗೃಹಗಳನ್ನು ಅಧಿಕಾರಿಗಳು ಬಳಕೆ ಮಾಡದೆ ಕಡೆಗಣಿಸಿರುವುದರಿಂದ ದುಸ್ಥಿತಿಯಲ್ಲಿವೆ. ಈ ಎರಡೂ ಗೃಹಗಳನ್ನು ಕೆಡವಿ ಸರ್ಕಾರಿ ಕಚೇರಿಗಳನ್ನು ನಿರ್ಮಾಣ ಮಾಡಲಿ ಎಂಬುದು ಸಾರ್ವಜನಿಕರ ಅಭಿಪ್ರಾಯ.ಪಟ್ಟಣದ ತಾಪಂ ಕಚೇರಿ ಬಳಿ ತಹಸೀಲ್ದಾರ್‌ ವಸತಿಗಾಗಿ ನಿರ್ಮಿಸಿದ ವಸತಿ ಗೃಹ ದಶಕಗಳಿಂದ ಬಳಕೆ ಮಾಡದ ಕಾರಣ ಶಿಥಿಲಾವಸ್ಥೆಗೆ ತಲುಪಿದೆ. ಅಲ್ಲದೆ ವಸತಿ ಗೃಹ ಸುತ್ತಲೂ ಮುಳ್ಳುಗಿಡಗಳಿಂದ ಆವರಿಸಿದೆ. ಆದರೂ ಅಧಿಕಾರಿಗಳು ಈ ವಸತಿ ಗೃಹವನ್ನು ದುರಸ್ತಿ ಮಾಡಿಸುಲ ಮುಂದಾಗುತ್ತಿಲ್ಲ.

ಎಇಇ ವಸತಿಗೃಹದ್ದೂ ಇದೇ ಕತೆಇದೇ ರೀತಿ ಲೋಕೋಪಯೋಗಿ ಇಲಾಖೆಯ ಎಇಇಗಾಗಿ ನಿರ್ಮಾಣ ಮಾಡಿರುವ ಬೃಹತ್ ಬಂಗಲೆ ಸಹ ಬಳಕೆಯಾಗದೆ ದುಸ್ಥಿತಿಯಲ್ಲಿದೆ. ಪಟ್ಟಣದಲ್ಲಿ ಲೋಕೋಪಯೋಗಿ ಇಲಾಖೆಯ ಎಇಇ ಕಚೇರಿಯ ಹಳೆಯ ಕಟ್ಟಡ ಕೆಡವಿ ಹೊಸ ಕಟ್ಟಡ ನಿರ್ಮಿಸುವ ಉದ್ದೇಶದಿಂದ ಕಚೇರಿಯನ್ನು ಎಇಇ ವಸತಿಗೃಹಕ್ಕೆ ಸ್ಥಳಾಂತರ ಮಾಡಲಾಯಿತು. ಅದಕ್ಕೂ ಮುನ್ನ ಬಂಗಲೆಯನ್ನು ಯಾರೂ ಬಳಸದೆ ಮೂಲೆಗುಂಪು ಮಾಡಲಾಗಿತ್ತು. ಬಳಿಕ ಕಟ್ಟವನ್ನು ಕಚೇರಿಗೆ ಬೇಕಾದ ರೀತಿ ಬದಲಾಯಿಸಿಕೊಂಡು ದುರಸ್ತಿಗೊಳಿಸಿದ್ದರು.

ಹೊಸ ಕಟ್ಟಡಕ್ಕೆ ಸ್ಥಳಾಂತರ

ಈಗ ಪೊಲೀಸ್ ಠಾಣೆ ಹಿಂಬಾಗದಲ್ಲಿ ನಿರ್ಮಿಸಿರುವ ಪಿಡಬ್ಲ್ಯೂಡಿ ಇಲಾಖೆಯ ಹೊಸ ಕಟ್ಟಡಕ್ಕೆ ಕಚೇರಿ ಸ್ಥಳಾಂತರವಾಗಿ ಎರಡು ವರ್ಷ ಕಳೆದಿದೆ. ಕಚೇರಿ ಸ್ಥಳಾಂತರ ಬಳಿಕ ಎಇಇ ಬಂಗಲೆಯನ್ನು ಮೂಲೆಗುಂಪು ಮಾಡಲಾಗಿದೆ. ಇಲಾಖೆಯ ಪ್ರಮುಖ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲೆ ಇರಬೇಕೆಂಬ ಉದ್ದೇಶದಿಂದ ಸರ್ಕಾರ ಎರಡೂ ಇಲಾಖೆಗಳ ಪ್ರಮುಖರಿಗೆ ಸ್ವಂತ ಬಂಗಲೆ ಭಾಗ್ಯ ಕಲ್ಪಿಸಿದೆ. ಆದರೆ ಈ ಇಬ್ಬರೂ ಅಧಿಕಾರಿಗಳು ಸರ್ಕಾರಿ ವಸತಿ ಕಟ್ಟಡಲ್ಲಿ ವಾಸವಾಗಿಲ್ಲ.

ಸರ್ಕಾರ ಲಕ್ಷಾಂತರ ರು.ಗಳ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಈ ಎರಡೂ ಕಟ್ಟಡಗಳು ಅನಾಥವಾಗಿದ್ದು, ರಾತ್ರಿ ವೇಳೆ ಪುಂಡ ಪೋಕರಿಗಳ ಬಾರ್ ಅಂಡ್ ರೆಸ್ಟೋರೆಂಟಾಗಿ ಬದಲಾಗಿದೆ.

ಶ್ರೀಗಂಧದ ಮರಗಳು ನಾಪತ್ತೆ

ತಹಸೀಲ್ದಾರ್ ಬಂಗಲೆ ಸುತ್ತಲೂ ಅಪಾರ ಪ್ರಮಾಣದ ಶ್ರೀಗಂಧ ಮರಗಳು ಸೇರಿದಂತೆ ಇತರೇ ಮರಗಳನ್ನು ಬೆಳೆಸಲಾಗಿತ್ತು. ಬಂಗಲೆಯನ್ನು ಕಡೆಗಣಿಸಿದ್ದರಿಂದ ಶ್ರೀಗಂಧ ಮರಗಳು ಮಾಯವಾಗಿವೆ. ಸುತ್ತಲೂ ಕಾಂಪೌಂಡ್ ಇರುವುದರಿಂದ ಒತ್ತುವರಿಯಾಗಿಲ್ಲ. ಈ ಬಂಗಲೆಯನ್ನು ದುರಸ್ತಿಗೊಳಿಸುವಂತೆ ಈ ಹಿಂದೆ ಇದ್ದ ಹಲವು ತಹಸೀಲ್ದಾರ್‌ಗಳು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರೂ ಕಡತಕ್ಕೆ ಮೋಕ್ಷ ಸಿಕ್ಕಿಲ್ಲ.

ಪಟ್ಟಣದಲ್ಲಿ ಹಲವು ಸರ್ಕಾರಿ ಕಚೇರಿಗಳಿಗೆ ಸ್ವಂತ ಕಟ್ಟಡಗಳಿಲ್ಲ. ಈ ಎರಡೂ ಬಂಗಳೆಗನ್ನು ಕೆಡವಿ ಒಂದೇ ಸ್ಥಳದಲ್ಲಿ ಸರ್ಕಾರಿ ಕಚೇರಿಗಳ ಸಮುಚ್ಛಯ ನಿರ್ಮಾಣ ಮಾಡಿದರೆ ಜನತೆಗೆ ಅನುಕೂಲವಾಗುತ್ತದೆ. ಅಲ್ಲದೆ ಸರ್ಕಾರಿ ಕಚೇರಿಗಳು ಖಾಸಗಿ ಕಟ್ಟಡಗಳಿಗೆ ಬಾಡಿಗೆ ಕಟ್ಟುವುದು ಉಳಿಯುತ್ತದೆ ಎಂಬುದು ಸಾರ್ವಜನಿಕರ ವಾದವಾಗಿದೆ.

Share this article