ಸಂಚಾರಕ್ಕೆ ಮುಕ್ತವಾಗದ ಹೆದ್ದಾರಿಗಳು, ಶವ ಶೋಧ ಕಾರ್ಯಾಚರಣೆ ಮುಂದುವರಿಕೆ

KannadaprabhaNewsNetwork | Published : Jul 21, 2024 1:21 AM

ಸಾರಾಂಶ

ಶಿರೂರು ಗುಡ್ಡ ಕುಸಿತದಿಂದ ಬಂದ್ ಆದ ಹೆದ್ದಾರಿಗಳು ಇನ್ನೂ ಸಂಚಾರಕ್ಕೆ ಮುಕ್ತವಾಗಿಲ್ಲ.

ಕನ್ನಡಪ್ರಭ ವಾರ್ತೆ ಕಾರವಾರ

ಶಿರೂರು ಗುಡ್ಡ ಕುಸಿತ ಪ್ರದೇಶಕ್ಕೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಶನಿವಾರ ಭೇಟಿ ನೀಡಿದ್ದಾರೆ. ಈ ನಡುವೆ ದುರಂತದಲ್ಲಿ ನಾಪತ್ತೆಯಾದ ಮೂವರಿಗಾಗಿ ಹುಡುಕಾಟ ಮುಂದುವರಿದಿದೆ. ದುರಂತದಲ್ಲಿ ನಾಪತ್ತೆಯಾದ ಕೇರಳದ ಲಾರಿ ಚಾಲಕ ಅರ್ಜುನ್ ಹಾಗೂ ಜಗನ್ನಾಥ ನಾಯ್ಕ ಅವರನ್ನು ಪತ್ತೆಹಚ್ಚುವಂತೆ ಅವರು ಕುಟುಂಬದವರು ಒತ್ತಾಯಿಸುತ್ತಿದ್ದಾರೆ. ಗುಡ್ಡ ಕುಸಿತದಿಂದ ಬಂದ್ ಆದ ಹೆದ್ದಾರಿಗಳು ಇನ್ನೂ ಸಂಚಾರಕ್ಕೆ ಮುಕ್ತವಾಗಿಲ್ಲ.

ಕೇಂದ್ರ ಸಚಿವ ಕುಮಾರಸ್ವಾಮಿ ಸಂತ್ರಸ್ತರಿಗೆ ಸಾಂತ್ವನ ಹೇಳಿದರಲ್ಲದೆ, ಈ ಘಟನೆಯಲ್ಲಿ ರಾಜ್ಯ ಸರ್ಕಾರದ ಹೊಣೆಗಾರಿಕೆ ಹೆಚ್ಚಿದೆ. ಹೆದ್ದಾರಿ ಕಾಮಗಾರಿ ಬಗ್ಗೆ ಸಂಬಂಧಿಸಿದ ಸಚಿವರೊಂದಿಗೆ ಮಾತುಕತೆ ನಡೆಸುತ್ತೇನೆ ಎಂದು ಭರವಸೆ ನೀಡಿದರು.

ಕೇರಳದ ಲಾರಿ ಚಾಲಕ ಬೆಂಜ್ ಲಾರಿಯಲ್ಲಿ ಮಣ್ಣಿನಡಿ ಹೂತುಹೋಗಿದ್ದು, ಆತನನ್ನು ಪತ್ತೆಹಚ್ಚುವಂತೆ ಕುಟುಂಬದವರು ಆಗ್ರಹಿಸುತ್ತಿದ್ದಾರೆ. ಹಾಗೆ ನಾಪತ್ತೆಯಾದ ಜಗನ್ನಾಥ ನಾಯ್ಕ ಅವರನ್ನು ಹುಡುಕಿಕೊಡುವಂತೆ ಅವರ ಕುಟುಂಬದವರು ಅಂಗಲಾಚುತ್ತಿದ್ದಾರೆ. ಸ್ಥಳಕ್ಕೆ ರಾಡಾರ್ ತರಿಸಲಾಗಿದ್ದು, ರಾಡಾರ್ ಮೂಲಕ ಪತ್ತೆಕಾರ್ಯಕ್ಕೆ ಮುಂದಾಗಿದ್ದಾರೆ.

ಉತ್ತರ ಕನ್ನಡದ ಬಹುತೇಕ ಕಡೆ ಮಳೆಯ ಅಬ್ಬರ ಇಳಿಮುಖವಾಗಿದ್ದರೂ, ಕೆಲವೆಡೆ ಭಾರಿ ಮಳೆಯಿಂದ ಅವಾಂತರ ಮುಂದುವರಿದಿದೆ. ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಗೆ ಕುಮಟಾ ತಾಲೂಕಿನ ಪಗಾರ ಕೊಪ್ಪ ಊರು ಜಲಾವೃತವಾಯಿತು. ಅಲ್ಲಿನ 30 ಮನೆಗಳ 75 ಜನರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು.

ಭಟ್ಕಳ, ಕುಮಟಾ, ಹೊನ್ನಾವರ, ಅಂಕೋಲಾ ಹಾಗೂ ಕಾರವಾರದಲ್ಲಿ ಆಗೊಮ್ಮೆ ಈಗೊಮ್ಮೆ ಭಾರಿ ಮಳೆ ಬರುತ್ತಿದೆ. ಆದರೆ, ದಿನವಿಡಿ ಸುರಿಯುತ್ತಿದ್ದ ಮಳೆಗೆ ಶನಿವಾರ ವಿರಾಮ ಬಿದ್ದಿದೆ. ಶಿರಸಿ, ಸಿದ್ಧಾಪುರ, ಯಲ್ಲಾಪುರ, ಜೋಯಿಡಾಗಳಲ್ಲಿ ಆಗಾಗ ಮಳೆ ಸುರಿಯುತ್ತಿದೆ. ಮಳೆಯ ತೀವ್ರತೆ ಕಡಿಮೆಯಾಗಿರುವುದರಿಂದ ಅಘನಾಶಿನಿ, ಗಂಗಾವಳಿ, ಚಂಡಿಕಾ, ಗುಂಡಬಾಳ, ಬಡಗಣಿ ನದಿಗಳ ನೀರಿನ ಮಟ್ಟ ಇಳಿಕೆಯಾಗಿದೆ.

ಕುಮಟಾ ಶಿರಸಿ ಹೆದ್ದಾರಿ, ಕುಮಟಾ ಚಂದಾವರ ಸಿದ್ಧಾಪುರ ರಸ್ತೆ, ಕಾರವಾರ ಇಳಕಲ್ ಹೆದ್ದಾರಿಯಲ್ಲಿ ಕುಸಿದ ಗುಡ್ಡವನ್ನು ತೆರವುಗೊಳಿಸುವ ಕಾರ್ಯ ಪೂರ್ಣಗೊಂಡಿಲ್ಲ. ಇದರಿಂದ ಈ ರಸ್ತೆಗಳಲ್ಲಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಭಾರಿ ದುರಂತ ಸಂಭವಿಸಿದ ಅಂಕೋಲಾದ ಶಿರೂರಿನಲ್ಲಿ ಒಂದು ರಸ್ತೆಯಲ್ಲಿದ್ದ ಮಣ್ಣು ಕಲ್ಲುಗಳನ್ನು ತೆರವುಗೊಳಿಸಿದ್ದರೂ ಸಂಚಾರಕ್ಕೆ ಮುಕ್ತವಾಗಿಲ್ಲ. ಆಗಾಗ ಸಣ್ಣ ಪ್ರಮಾಣದಲ್ಲಿ ಗುಡ್ಡ ಕುಸಿಯುತ್ತಿರುವುದು ಕಾರ್ಯಾಚರಣೆಗೆ ಅಡ್ಡಿ ಉಂಟಾಗುತ್ತಿದೆ.ಗಂಗೆಕೊಳ್ಳದ ಯುವಕನೂ ಶಿರೂರಿನಲ್ಲಿ ನಾಪತ್ತೆ

ಕನ್ನಡಪ್ರಭ ವಾರ್ತೆ ಗೋಕರ್ಣಇಲ್ಲಿನ ಗಂಗೆಕೊಳ್ಳದ ಲೋಕೇಶ್ ನಾಯ್ಕ ಸಹ ಶಿರೂರು ಗುಡ್ಡದ ತಪ್ಪಲಿನಲ್ಲಿನಿಂದ ಕಣ್ಮರೆಯಾಗಿದ್ದು, ಈ ವರೆಗೂ ಆತನ ಸುಳಿವು ಸಿಕ್ಕಿಲ್ಲ.

ಶಿರೂರಿನ ಚಹದ ಅಂಗಡಿ ಮುಂದೆ ಈತ ನಿಂತಿರುವುದನ್ನು ಕೆಎಸ್‍ಆರ್‌ಟಿಸಿ ಬಸ್ ಚಾಲಕರೊಬ್ಬರು ಕೊನೆಯದಾಗಿ ನೋಡಿದ್ದು, ಅದಾದ ನಂತರ ಆತನ ಬಗ್ಗೆ ಯಾರಿಗೂ ಮಾಹಿತಿ ಇಲ್ಲ. ಗೋವಾದಲ್ಲಿ ದೋಣಿ ರಿಪೇರಿ ಮಾಡಿಕೊಂಡಿದ್ದ ಲೋಕೇಶ್ ನಾಯ್ಕ ಜ್ವರ ಬಂದ ಕಾರಣ ಊರಿಗೆ ಮರಳಿದ್ದ. ನಂತರ ಶೃಂಗೇರಿಗೆ ಹೋಗಿಬರುವುದಾಗಿ ಹೇಳಿ ಹೋದವ ಶೃಂಗೇರಿ ತಲುಪಿಲ್ಲ. ಗೋವಾದ ಕೆಲಸಕ್ಕೂ ಆತ ಹೋಗಿ ಸೇರಿಲ್ಲ. ಆತನ ಸಹೋದರ ವಿನಾಯಕ ರತ್ನಾಗಿರಿಯಲ್ಲಿದ್ದು ಆತನಿಗೂ ಲೋಕೇಶ ಎಲ್ಲಿ ಹೋದ? ಎಂದು ಗೊತ್ತಾಗಿಲ್ಲ.ಜುಲೈ 16ರಂದು ಈತ ಶಿರೂರು ಗುಡ್ಡದ ಕೆಳಗಿರುವ ಚಹದ ಅಂಗಡಿ ಬಳಿ ಬ್ಯಾಗ್ ಹಾಕಿಕೊಂಡು ನಿಂತಿರುವುದನ್ನು ಅದೇ ಮಾರ್ಗದಲ್ಲಿ ಹೋಗುತ್ತಿದ್ದ ಗಂಗೆಕೊಳ್ಳದ ಬಸ್ ಚಾಲಕ ವಿನೋದ ನಾಯ್ಕ ಆತನನ್ನು ನೋಡಿದ್ದು, ಅದಾದ ನಂತರ ಲೋಕೇಶನನ್ನು ನೋಡಿದವರಿಲ್ಲ. ಇದೀಗ ಲೋಕೇಶನ ತಾಯಿ ಮಾದೇವಿ ಆತನ ಫೋಟೋ ಹಿಡಿದು ಎಲ್ಲಡೆ ಅಡ್ಡಾಡುತ್ತಿದ್ದಾರೆ. ಕಂಡ ಕಂಡವರಲ್ಲಿ `ನನ್ನ ಮಗನನ್ನು ನೋಡಿದ್ದೀರಾ?'''''''' ಎಂದು ಪ್ರಶ್ನಿಸುತ್ತಿದ್ದಾರೆ. ಪೊಲೀಸರ ಬಳಿಯೂ `ಮಗನನ್ನು ಹುಡುಕಿಕೊಡಿ'''''''' ಎಂದು ಆಕೆ ಮನವಿ ಮಾಡಿದ್ದು, ಯಾರಿಂದಲೂ ಯಾವುದೇ ಉತ್ತರ ಸಿಕ್ಕಿಲ್ಲ. ಹೆತ್ತ ತಾಯಿಯ ರೋಧನ ಹೇಳ ತೀರದಾಗಿದ್ದು, ಈತನ ಪತ್ತೆಗೆ ಜಿಲ್ಲಾಡಳಿತ ಸಹಕರಿಸ ಬೇಕಿದೆ.

Share this article