ಜನಿವಾರಕ್ಕೆ ಹಿಜಾಬ್‌ ಹೋಲಿಕೆ: ವಿವಾದ ಸೃಷ್ಟಿಸಿದ ‘ಎಕ್ಸ್‌’ ಸಂದೇಶ

KannadaprabhaNewsNetwork | Published : Apr 23, 2025 12:32 AM

ಸಾರಾಂಶ

ಹಿಜಾಬ್ ಪರ ಹೋರಾಟಗಾರ್ತಿ ಆಲಿಯಾ ಅಸ್ಸಾದಿ ಅವರು ವಿದ್ಯಾರ್ಥಿಗಳ ಹಿಜಾಬ್‌ ತೆಗಿಸಿದ ಮತ್ತು ಜನಿವಾರ ತೆಗೆಸಿದ ನೋವು ಒಂದೇ ಅಲ್ಲವೇ, ಬ್ರಾಹ್ಮಣರಿಗೆ ಜನಿವಾರ ಎಷ್ಟು ಅಗತ್ಯವೋ ನಮಗೂ ಹಿಜಾಬ್ ಅಷ್ಟೇ ಅಗತ್ಯ, ಜನಿವಾರ ತೆಗೆದ ಅಧಿಕಾರಿಯನ್ನು ಸಸ್ಪೆಂಡ್ ಮಾಡಿದ್ದಾರೆ, ಆದರೆ ಹಿಜಾಬಿಗಳ‍ನ್ನು ತಡೆದ ಅಧಿಕಾರಿಗೆ ಯಾವ ಶಿಕ್ಷೆಯೂ ಇಲ್ಲ ಎಂದು ಎಕ್ಸ್‌ ಖಾತೆಯಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ಈ ಹಿಂದೆ ಉಡುಪಿ ಬಾಲಕಿಯರ ಕಾಲೇಜಿನಲ್ಲಿ ಹಿಜಾಬ್‌ ಧರಿಸಿ ವಿವಾದಕ್ಕೆ ಕಾರಣವಾಗಿದ್ದ ವಿದ್ಯಾರ್ಥಿನಿ ಹಿಜಾಬ್‌ನ್ನು ಜನಿವಾರಕ್ಕೆ ಹೋಲಿಸಿ ಇನ್ನೊಮ್ಮೆ ವಿವಾದಕ್ಕೆ ಕಾರಣವಾಗಿದ್ದಾರೆ.

ಹಿಜಾಬ್ ಪರ ಹೋರಾಟಗಾರ್ತಿ ಆಲಿಯಾ ಅಸ್ಸಾದಿ ಅವರು ವಿದ್ಯಾರ್ಥಿಗಳ ಹಿಜಾಬ್‌ ತೆಗಿಸಿದ ಮತ್ತು ಜನಿವಾರ ತೆಗೆಸಿದ ನೋವು ಒಂದೇ ಅಲ್ಲವೇ, ಬ್ರಾಹ್ಮಣರಿಗೆ ಜನಿವಾರ ಎಷ್ಟು ಅಗತ್ಯವೋ ನಮಗೂ ಹಿಜಾಬ್ ಅಷ್ಟೇ ಅಗತ್ಯ, ಜನಿವಾರ ತೆಗೆದ ಅಧಿಕಾರಿಯನ್ನು ಸಸ್ಪೆಂಡ್ ಮಾಡಿದ್ದಾರೆ, ಆದರೆ ಹಿಜಾಬಿಗಳ‍ನ್ನು ತಡೆದ ಅಧಿಕಾರಿಗೆ ಯಾವ ಶಿಕ್ಷೆಯೂ ಇಲ್ಲ ಎಂದು ಎಕ್ಸ್‌ ಖಾತೆಯಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇದಕ್ಕೆ ಉಡುಪಿ ಶಾಸಕ ಯಶಪಾಲ್‌ ಸುವರ್ಣ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜನಿವಾರವನ್ನು ಹಿಜಾಬ್ ಗೆ ಹೋಲಿಸುವುದು ದುಷ್ಟ ನೀತಿ, ಹಿಜಾಬ್ ವಿಚಾರದಲ್ಲಿ ಹೈಕೋರ್ಟ್ ತೀರ್ಪು ನೀಡಿದೆ. ಸಮವಸ್ತ್ರ ಇದ್ದಲ್ಲಿ ಹಿಜಾಬ್‌ಗೆ ಅವಕಾಶ ಇಲ್ಲ ಎಂದು ಹೇಳಿದೆ. ಜನಿವಾರವನ್ನು ವಿಜಾಬ್ ಜೊತೆ ಹೋಲಿಕೆ ಮಾಡುವುದು ಸರಿಯಲ್ಲ, ಮತ್ತೊಮ್ಮೆ ಜನಿವಾರದ ಬಗ್ಗೆ ಮಾತನಾಡಿದರೆ ಸರಿಯಾಗಿ ಪ್ರತಿರೋಧ ಕೊಡಬೇಕಾಗುತ್ತದೆ ಎಂದವರು ಹೇಳಿದ್ದಾರೆ.

ಹಿಜಾಬ್‌ ಧರಿಸಿದರೆ ಪರೀಕ್ಷೆ ಬರೆಯುವವರು ಯಾರು ಎಂದು ಗೋತ್ತಾಗುವುದಿಲ್ಲ. ಹಾಗಾಗಿ ಸರ್ಕಾರ ಪರೀಕ್ಷೆ ಬರೆಯುವಾಗ ಹಿಜಾಬ್ ಧರಿಸಬಾರದು ಎಂದು ಸೂಚನೆ ನೀಡಿರಬಹುದು. ಆದರೆ ಜನಿವಾರ ಇರೋದು ಅಂಗಿಯೊಳಗೆ, ಅದು ಯಾರಿಗೂ ಕಾಣಿಸುವುದಿಲ್ಲ, ಅದರಿಂದ ಗುರುತು ಹಿಡಿಯಲು ತೊಂದರೆಯಾಗುವುದಿಲ್ಲ, ಆದ್ದರಿಂದ ಜನಿವಾರ ಮತ್ತು ಹಿಜಾಬ್ ಹೋಲಿಕೆ ಸರಿಯಲ್ಲ, ಜನಿವಾರಕ್ಕೂ ಪರೀಕ್ಷೆಗೂ ಏನು ಸಂಬಂಧ ? ಇದು ಬೇಕಂತಲೇ ಸೃಷ್ಟಿ ಮಾಡಿ ವಿವಾದ, ಜನಿವಾರಕ್ಕೆ ಧಕ್ಕೆ ಬಂದರೇ ಸಹಿಸುವುದಿಲ್ಲ ಎಂದು ಸ್ಥಾನಿಕ ಬ್ರಾಹ್ಮಣ ಮಹಾಮಂಡಲದ ರಾಜ್ಯಾಧ್ಯಕ್ಷ ಮಂಜುನಾಥ ಹೆಬ್ಬಾರ್ ಹೇಳಿದ್ದಾರೆ.

Share this article