ಭಾರಿ ಮಳೆಗೆ ಕುಸಿದ ಗುಡ್ಡ, ಕೊಚ್ಚಿಹೋದ ರಸ್ತೆ

KannadaprabhaNewsNetwork | Published : Aug 2, 2024 12:52 AM

ಸಾರಾಂಶ

ಯಾಣದ ಮುಖ್ಯರಸ್ತೆಯಿಂದ ಹೆಗ್ಗಾರಗದ್ದೆ ಲಕ್ಷ್ಮೀನಾರಾಯಣ ದೇವಾಲಯಕ್ಕೆ ಹೋಗುವ ರಸ್ತೆ ಕೊಚ್ಚಿಹೋಗಿದೆ. ಈ ರಸ್ತೆಯಲ್ಲಿ ವಾಹನಗಳ ಸಂಚಾರವಿರಲಿ, ಕಾಲ್ನಡಿಗೆಯಿಂದ ಸಾಗುವುದೂ ದುಸ್ತರದ ಮಾತಾಗಿದೆ.

ಕಾರವಾರ:

ಭಾರಿ ಮಳೆಯಿಂದ ಕುಸಿದ ಗುಡ್ಡ, ಕೊಚ್ಚಿಹೋದ ರಸ್ತೆ, ಒಡ್ಡು, ಬದುಕಿಗೆ ಆಸರೆಯಾಗಿದ್ದ ಅಡಕೆಗೆ ಕೊಳೆರೋಗ ಇವುಗಳಿಂದ ಪ್ರಸಿದ್ಧ ಪ್ರವಾಸಿ ತಾಣವಾದ ಕುಮಟಾ ತಾಲೂಕಿನ ಯಾಣ ಹಾಗೂ ಸುತ್ತಮುತ್ತಲಿನ ಜನತೆಯ ಬದುಕು ಮೂರಾಬಟ್ಟೆಯಾಗಿದೆ.

ಯಾಣದ ಆಕರ್ಷಕ ಭೈರವೇಶ್ವರ ಶಿಖರದಿಂದ ಕೇವಲ 50 ಮೀಟರ್ ದೂರದಲ್ಲಿ ಗುಡ್ಡ ಕುಸಿತವಾಗಿದೆ. ಶಿಖರದ ಹಿಂದುಗಡೆ ಶಿಖರದಿಂದ ಒಂದೂವರೆ ಕಿಮೀ ದೂರದಲ್ಲಿ ಗುಡ್ಡ ಬಿರುಕು ಬಿಟ್ಟಿದೆ. ಪುರಾಣ ಪ್ರಸಿದ್ಧ ಹಾಗೂ ನೈಸರ್ಗಿಕ ಸೊಬಗಿನಿಂದ ಜನರನ್ನು ಸೆಳೆಯುವ ಯಾಣದಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದಿದ್ದಲ್ಲಿ ಮುಂದೊಂದು ದಿನ ಭಾರಿ ಅಪಾಯವಾಗುವ ಸಾಧ್ಯತೆ ಇದೆ.

ಯಾಣದ ಮುಖ್ಯರಸ್ತೆಯಿಂದ ಹೆಗ್ಗಾರಗದ್ದೆ ಲಕ್ಷ್ಮೀನಾರಾಯಣ ದೇವಾಲಯಕ್ಕೆ ಹೋಗುವ ರಸ್ತೆ ಕೊಚ್ಚಿಹೋಗಿದೆ. ಈ ರಸ್ತೆಯಲ್ಲಿ ವಾಹನಗಳ ಸಂಚಾರವಿರಲಿ, ಕಾಲ್ನಡಿಗೆಯಿಂದ ಸಾಗುವುದೂ ದುಸ್ತರದ ಮಾತಾಗಿದೆ.

ಬೆಳ್ಳಂಗಿ ದೇವಾಲಯದ ಬಳಿ ಹಳ್ಳಕ್ಕೆ ನಿರ್ಮಿಸಿದ ಒಡ್ಡು ಸುಮಾರು 50 ಎಕರೆ ಹೊಲಗದ್ದೆಗಳಿಗೆ ನೀರುಣಿಸುವ ತಾಣವಾಗಿತ್ತು. ಭಾರಿ ಮಳೆಯಿಂದ ಹಳ್ಳದಲ್ಲಿ ಬಂದ ಪ್ರವಾಹ ಈ ಒಡ್ಡನ್ನು ಕೊಚ್ಚಿಕೊಂಡು ಹೋಗಿದೆ. ನೀರಿಗಾಗಿ ಈ ಒಡ್ಡನ್ನು ಆಶ್ರಯಿಸಿದವರು ಕಂಗಾಲಾಗಿದ್ದಾರೆ.

ಯಾಣ ಹಾಗೂ ಸುತ್ತಮುತ್ತಲಿನ ಪ್ರದೇಶದ ಜನರ ಬದುಕಿಗೆ ಆಸರೆಯಾಗಿದ್ದು ಅಡಕೆ ಬೆಳೆ. ನಿರಂತರ ಮಳೆಯಿಂದ ವ್ಯಾಪಕವಾಗಿ ಕೊಳೆರೋಗ ಬಂದಿದ್ದು, ಅಡಕೆಗಳು ತರೆಗೆಲೆಗಳಂತೆ ಉದುರುತ್ತಿವೆ. ಉದುರಿದ ಅಡಕೆಗಳು ಪ್ರವಾಹದಲ್ಲಿ ಕೊಚ್ಚಿಹೋಗಿದ್ದು, ಕೊಳೆ ಅಡಕೆಯೂ ಕೃಷಿಕರಿಗೆ ಸಿಗದಂತಾಗಿದೆ. ಅಡಕೆ ತೋಟಕ್ಕೆ ಹಾಕಿದ್ದ ಗೊಬ್ಬರವಷ್ಟೇ ಅಲ್ಲ, ಮಣ್ಣೂ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದೆ. ಬೆಲೆಯೂ ಇಲ್ಲದೆ, ಬೆಳೆಯೂ ಇಲ್ಲದೆ ಕೃಷಿಕರು ಮುಂದೇನು ಎಂಬ ಚಿಂತೆಯಲ್ಲಿದ್ದಾರೆ.

ಯಾಣ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರಿ ಮಳೆಯಿಂದ ಉಂಟಾದ ಅನಾಹುತಗಳ ಬಗ್ಗೆ ಆ ಭಾಗವನ್ನು ಪ್ರತಿನಿಧಿಸುವ ಅಳಕೋಡ ಗ್ರಾಮ ಪಂಚಾಯಿತಿ ಸದಸ್ಯ ರಾಜೀವ ಕೆ. ಭಟ್ ಸಂಬಂಧಪಟ್ಟವರ ಗಮನ ಸೆಳೆದಿದ್ದಾರೆ. ಆ ಪ್ರದೇಶದ ಜನಜೀವನಕ್ಕೆ ಅನುಕೂಲ ಕಲ್ಪಿಸಬೇಕೆಂದು ಆಗ್ರಹಿಸಿದ್ದಾರೆ. ಕೋಟ್-

ವ್ಯಾಪಕ ಮಳೆಯಿಂದ ಯಾಣ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಕಲ್ಪಿಸಲಾದ ಮೂಲ ಸೌಲಭ್ಯಗಳು ಕೊಚ್ಚಿಹೋಗಿವೆ. ಜೀವನಾಧಾರವಾದ ಅಡಕೆಗೆ ಕೊಳೆರೋಗ ಜನರನ್ನು ಕಂಗೆಡಿಸಿದೆ. ಇಲ್ಲಿನ ಜನರ ಬದುಕು ಅಸಹನೀಯವಾಗಿದೆ. ಮೂಲ ಸೌಲಭ್ಯ ಕಲ್ಪಿಸಿ ಹಾಗೂ ಅಡಕೆ ಬೆಳೆಗಾರರಿಗೆ ಪರಿಹಾರ ನೀಡುವಂತೆ ಸರ್ಕಾರವನ್ನು ಆಗ್ರಹಿಸುತ್ತೇನೆ.

ರಾಜೀವ ಕೆ. ಭಟ್, ಗ್ರಾಪಂ ಸದಸ್ಯರು, ಅಳಕೋಡ

Share this article