ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ ಮುಂದುವರಿದಿದೆ. ಕರಾವಳಿಯಲ್ಲಿ ಮಳೆಯ ಆರ್ಭಟ ಹೆಚ್ಚಿದೆ. ಕೆಲವು ರಸ್ತೆಗಳು ಜಲಾವೃತವಾದರೆ, ಗುಡ್ಡ ಕುಸಿತದಿಂದ ಮಿರ್ಜಾನ್- ಕತಗಾಲ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಜನಜೀವನ ಅಸ್ತವ್ಯಸ್ತವಾಗಿದೆ.
ಕರಾವಳಿಯಲ್ಲಿ ಮಳೆಯ ಅಬ್ಬರ ಹೆಚ್ಚಿದೆ. ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳಗಳಲ್ಲಿ ನಿರಂತರವಾಗಿ ಭಾರಿ ಮಳೆಯಾಗುತ್ತಿದೆ. ಘಟ್ಟದ ಮೇಲಿನ ತಾಲೂಕುಗಳಾದ ಶಿರಸಿ, ಸಿದ್ಧಾಪುರ, ಯಲ್ಲಾಪುರ, ಮುಂಡಗೋಡ, ಜೋಯಿಡಾಗಳಲ್ಲಿ ಹೆಚ್ಚು ಮಳೆಯಾಗಿದೆ. ದಾಂಡೇಲಿ, ಹಳಿಯಾಳದ ಕೆಲವೆಡೆ ಸಾಧಾರಣ ಮಳೆಯಾಗಿದೆ.ಖೈರೆ ಬಳಿ ಗುಡ್ಡ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಮಿರ್ಜಾನ್- ಕತಗಾಲ ರಸ್ತೆ ಸಂಪರ್ಕ ಸ್ಧಗಿತವಾಗಿದೆ. ತಾತ್ಕಾಲಿಕವಾಗಿ ರಸ್ತೆಯಲ್ಲಿ ಸಂಚಾರ ನಿಷೇಧಿಸಲಾಗಿದೆ. ಕುಮಟಾ ಶಿರಸಿ ಹೆದ್ದಾರಿಯಲ್ಲಿ ದೇವಿಮನೆ ಘಟ್ಟದ ಬಳಿ ಗುಡ್ಡದಿಂದ ಕಲ್ಲು ಮಣ್ಣು ಉರುಳಿದೆ.
ಮಾದನಗೇರಿ ಗೋಕರ್ಣ ರಸ್ತೆಯಲ್ಲಿ ತೊರ್ಕೆ ಬಳಿ ನೀರು ನಿಂತು ಸಂಚಾರಕ್ಕೆ ವ್ಯತ್ಯಯ ಉಂಟಾಗಿತ್ತು. ನಂತರ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಜೆಸಿಬಿ ಬಳಸಿ ನೀರು ಸರಾಗವಾಗಿ ಹರಿದು ಹೋಗುವಂತೆ ಕ್ರಮ ಕೈಗೊಂಡರು.ಭಟ್ಕಳದ ಸಂಶುದ್ದೀನ್ ವೃತ್ತ ಹಾಗೂ ಕುಮಟಾದ ಹಂದಿಗೋಣ, ಅಳ್ವೆಕೋಡಿ ಚತುಷ್ಪಥ ಹೆದ್ದಾರಿಯ ಒಂದು ಪಾರ್ಶ್ವ ಜಲಾವೃತವಾಗಿ ವಾಹನ ಸಂಚಾರಕ್ಕೆ ವ್ಯತ್ಯಯ ಉಂಟಾಗಿತ್ತು.
ಮುಂಡಗೋಡದಲ್ಲಿ ನಂದಿಕೇಶ್ವರ ಕೆರೆಯ ಒಡ್ಡು ಕುಸಿದು ಹಾನಿ ಉಂಟಾಗಿದ್ದು, ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಜೋಯಿಡಾದಲ್ಲಿ ಬೆಳಗಾವಿ ಮಂಗಳೂರು ಬಸ್ ಅಣಶಿ ಮಾರ್ಗದಲ್ಲಿ ಗಟಾರಕ್ಕೆ ಜಾರಿತು. ಆದರೆ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.ಜಿಲ್ಲೆಯಾದ್ಯಂತ ದಟ್ಟವಾದ ಮೋಡ ಕವಿದ ವಾತಾವರಣ ಇದೆ. ಗುರುವಾರವೂ ರೆಡ್ ಅಲರ್ಟ್ ಇದ್ದು, ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮಳೆ ವಿವರ:ಮಂಗಳವಾರ ಬೆಳಗ್ಗೆ 8 ಗಂಟೆಯಿಂದ ನಂತರದ 24 ಗಂಟೆಗಳಲ್ಲಿ ಉಂಟಾದ ಮಳೆಯ ವಿವರ ಮಿ.ಮೀ.ಗಳಲ್ಲಿ ಹೀಗಿದೆ. ಅಂಕೋಲಾ 133.3 ಮಿ.ಮೀ., ಭಟ್ಕಳ 175.2, ಹಳಿಯಾಳ 17.2, ಹೊನ್ನಾವರ 183.5, ಕಾರವಾರ 69.5, ಕುಮಟಾ 168.0, ಮುಂಡಗೋಡ 39.2, ಸಿದ್ಧಾಪುರ 69.3, ಶಿರಸಿ 49.5, ಜೋಯಿಡಾ 13.3, ಯಲ್ಲಾಪುರ 27.8 ಹಾಗೂ ದಾಂಡೇಲಿ 13.3. ಮಿ.ಮೀ. ಮಳೆಯಾಗಿದೆ.