ಗದಗ: ಹಿಂದಿಯು ಸರಳ ಹಾಗೂ ಸುಮಧುರ ಭಾಷೆಯಾಗಿದ್ದು, ಜನಸಾಮಾನ್ಯರಿಗೂ ಸಂವಹನವಾಗುವ ಭಾರತದ ಪ್ರಮುಖ ಸಂಪರ್ಕ ಭಾಷೆಯಾಗಿದೆ. ವಿವಿಧ ಪ್ರಾಂತ್ಯಗಳ ಜನರನ್ನು ಭಾಷೆಯ ಮೂಲಕ ಬೆಸೆದು ರಾಷ್ಟ್ರಪ್ರೇಮ ಬೆಳೆಸುವ ಭಾಷೆಯಾಗಿದೆ ಎಂದು ನಗರಸಭೆಯ ಪಪೂ ಕಾಲೇಜಿನ ಹಿರಿಯ ಹಿಂದಿ ಉಪನ್ಯಾಸಕಿ ಡಾ. ಸುಜಾತಾ ಮಾಗಡಿ ತಿಳಿಸಿದರು.ಸ್ಥಳೀಯ ವಿದ್ಯಾದಾನ ಸಮಿತಿ ಬಾಲಕಿಯರ ಪಪೂ ಕಾಲೇಜಿನಲ್ಲಿ ನಡೆದ ಹಿಂದಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾರತದಲ್ಲಿ ಎಲ್ಲಿಯೇ ಹೋದರೂ ಹಿಂದಿಯನ್ನು ಪ್ರಮುಖ ಸಂವಹನ ಭಾಷೆಯಾಗಿ ಬಳಸಿಕೊಳ್ಳಬಹುದು. ಹಿಂದಿ ಪ್ರಪಂಚದ ಅತ್ಯಂತ ಪ್ರಸ್ತುತತೆ ಹೊಂದಿರುವ ಭಾಷೆಯಾಗಿದ್ದು, ಪ್ರತಿವರ್ಷ ಸೆ. 14ಅನ್ನು ಹಿಂದಿ ದಿನವಾಗಿ ಆಚರಿಸಲಾಗುತ್ತದೆ. ಹಿಂದಿಯು ಉತ್ತರ ಭಾರತ ಮತ್ತು ದಕ್ಷಿಣ ಭಾರತವನ್ನು ಬೆಸೆಯುವ ಭಾಷೆಯಾಗಿದೆ. ಹಿಂದಿ ಅತ್ಯಂತ ಶ್ರೀಮಂತವಾದ ಸಾಹಿತ್ಯವನ್ನು ಹೊಂದಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ವಿದ್ಯಾದಾನ ಸಮಿತಿಯ ಕಾರ್ಯದರ್ಶಿ ಶ್ರೀನಿವಾಸ ಹುಯಲಗೋಳ ಮಾತನಾಡಿ, ಹಿಂದಿ ಪ್ರಮುಖ ಸಂಪರ್ಕ ಭಾಷೆಯಾಗಿದ್ದು, ಅಗಾಧವಾದ ಜ್ಞಾನಸಾಗರ ಹೊಂದಿದೆ. ಇದರ ಅಧ್ಯಯನ ಮಾಡುವ ಮೂಲಕ ವಿದ್ಯಾರ್ಥಿಗಳು ಭಾಷಾ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕೆಂದರು. ಪ್ರಾ. ಡಾ. ಬಿ.ಎಸ್. ರಾಠೋಡ ಪ್ರಾಸ್ತಾವಿಕವಾಗಿ ಮಾತನಾಡಿ, ಕೇಂದ್ರ ಸರ್ಕಾರವು ಹಿಂದಿಗೆ ಅಪಾರ ಮಹತ್ವ ನೀಡಿದೆ. ದೇಶ ಸುತ್ತಿ ನೋಡು ಕೋಶ ಓದು ಎಂಬ ನಾಣ್ಣುಡಿಯಂತೆ ವಿದ್ಯಾರ್ಥಿಗಳು ಕೇವಲ ಒಂದೆರಡು ಭಾಷೆಗಳ ಅಧ್ಯಯನಕ್ಕೆ ಸೀಮಿತರಾಗದೇ ಹಲವು ಭಾಷೆಗಳನ್ನು ಕಲಿಯುವುದರ ಮೂಲಕ ತಮ್ಮ ಸಂಪರ್ಕ ಮತ್ತು ಸಂವಹನಾ ಶಕ್ತಿಯನ್ನು ವೃದ್ಧಿಸಿಕೊಳ್ಳಬೇಕೆಂದರು.
ಈ ಸಂದರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ನಾಮಫಲಕ ಹಾಗೂ ಮತದಾರರ ಸಾಕ್ಷರತಾ ಕ್ಲಬ್ ನಾಮಫಲಕವನ್ನು ಅನಾವರಣಗೊಸಲಾಯಿತು. ಹೇಮಂತ ದಳವಾಯಿ, ಬಿ.ಬಿ. ಮಿರ್ಜಿ, ಪ್ರಶಾಂತ ಪಾಟೀಲ, ಟಿ.ಎಂ. ನದಾಫ, ಅಶ್ವಿನಿ ಜಾಡರ, ಸಮೀರ ಹಂದಿಗೋಳ, ಬಸವರಾಜ ಬಾರಕೇರ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ಭೂಮಿಕಾ ಚವಾಣ ಪ್ರಾರ್ಥಿಸಿದರು. ಉಪನ್ಯಾಸಕ ಡಾ. ದತ್ತಪ್ರಸನ್ನ ಪಾಟೀಲ ಸ್ವಾಗತಿಸಿದರು. ವರ್ಷಾ ಜಾಧವ ನಿರೂಪಿಸಿದರು. ಕವಿತಾ ಲಮಾಣಿ ವಂದಿಸಿದರು.