ಧಾರವಾಡದ 78 ಅಕ್ರಮ ಮಾಂಸದಂಗಡಿ ಮುಚ್ಚಿ: ಮೇಯರ್‌ ಜ್ಯೋತಿ ಪಾಟೀಲ

KannadaprabhaNewsNetwork |  
Published : Sep 27, 2025, 12:00 AM IST
33465465 | Kannada Prabha

ಸಾರಾಂಶ

ಶಿವಾಜಿ ವೃತ್ತದಿಂದ ಮಣಿಕಿಲ್ಲದ ವರೆಗೆ ಮತ್ತು ಭೂಸಪ್ಪ ಚೌಕ್‌ನಿಂದ ಲೈನ್ ಬಜಾರ್‌ನ ರಾಮಮಂದಿರ ವರೆಗೆ 78ಕ್ಕೂ ಹೆಚ್ಚು ಅನಧಿಕೃತ ಮಾಂಸದ ಅಂಗಡಿಗಳು ಕಾರ್ಯನಿರ್ವಹಿಸುತ್ತಿವೆ. ಇವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಮೇಯರ್‌ ಅವರನ್ನು ಶಳಕೆ ಒತ್ತಾಯಿಸಿದರು.

ಧಾರವಾಡ:

ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಕ್ರಮ ಮಾಂಸದ ಅಂಗಡಿಗಳ ವಿರುದ್ಧ ಕ್ರಮಕೈಗೊಳ್ಳಲು ವಿಫಲರಾದ ಮಹಾನಗರ ಪಾಲಿಕೆ ಅಧಿಕಾರಿಗಳನ್ನು ಬಿಜೆಪಿ ಸದಸ್ಯರು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ಶುಕ್ರವಾರ ನಡೆದ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಜರುಗಿತು.

ಇಲ್ಲಿನ ಪಾಲಿಕೆ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಸದಸ್ಯ ಶಂಕರ್ ಶಳಕೆ, ವಧೆಗಾಗಿ ಅಕ್ರಮವಾಗಿ ಜಾನುವಾರು ಸಾಗಿಸಲಾಗುತ್ತಿದೆ. ಇಂದೇ 49 ಹಸು ಮತ್ತು ಎತ್ತುಗಳನ್ನು ಮಣಿಕಿಲ್ಲದಲ್ಲಿರುವ ಕಸಾಯಿಖಾನೆಗೆ ಸ್ಥಳಾಂತರಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆಗ ಅಧಿಕಾರಿಗಳು, ಅವುಗಳನ್ನು ರಕ್ಷಿಸಿ ಗೋಶಾಲೆಯಲ್ಲಿ ಪುನರ್ವಸತಿ ಕಲ್ಪಿಸಿ, ಎಫ್‌ಐಆರ್ ದಾಖಲಿಸಲಾಗಿದೆ ಎಂದರು. ಆಗ, ಅಕ್ರಮ ಮಾಂಸದ ಅಂಗಡಿಗಳ ಬಗ್ಗೆ ಪಾಲಿಕೆ ಬಳಿ ನಿಖರ ಮಾಹಿತಿ ಇದೆಯೇ ಎಂದು ಪ್ರಶ್ನಿಸಿದರು. ಶಿವಾಜಿ ವೃತ್ತದಿಂದ ಮಣಿಕಿಲ್ಲದ ವರೆಗೆ ಮತ್ತು ಭೂಸಪ್ಪ ಚೌಕ್‌ನಿಂದ ಲೈನ್ ಬಜಾರ್‌ನ ರಾಮಮಂದಿರ ವರೆಗೆ 78ಕ್ಕೂ ಹೆಚ್ಚು ಅನಧಿಕೃತ ಮಾಂಸದ ಅಂಗಡಿಗಳು ಕಾರ್ಯನಿರ್ವಹಿಸುತ್ತಿವೆ. ಇವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಮೇಯರ್‌ ಅವರನ್ನು ಶಳಕೆ ಒತ್ತಾಯಿಸಿದರು. ಆಗ ಮೇಯರ್‌ ಜ್ಯೋತಿ ಪಾಟೀಲ, ಧಾರವಾಡದಲ್ಲಿರುವ ಎಲ್ಲ ಅಕ್ರಮ ಅಂಗಡಿ ಗುರುತಿಸಲು ಮತ್ತು ಗುರುತಿಸಲಾದ 78 ಅಂಗಡಿ ತಕ್ಷಣವೇ ಮುಚ್ಚುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ನೀರಸಾಗರ:

ಹುಬ್ಬಳ್ಳಿಯ ಕೆಲವು ಭಾಗಗಳಿಗೆ ಕುಡಿಯುವ ನೀರು ಪೂರೈಸುವ ನೀರಸಾಗರ ಜಲಾಶಯ ಮೇಲ್ದರ್ಜೆಗೇರಿಸುವ ಕುರಿತು ಪಾಲಿಕೆ ಆಯುಕ್ತ ರುದ್ರೇಶ ಘಾಳಿ ಸಭೆಯ ಗಮನಕ್ಕೆ ತಂದರು. ಪ್ರಸ್ತುತ, ನಿತ್ಯ 35 ಎಂಎಲ್‌ಡಿ ನೀರು ಪಂಪ್‌ ಮಾಡುತ್ತಿದ್ದು ಹೆಚ್ಚುತ್ತಿರುವ ನೀರಿನ ಬೇಡಿಕೆ ಪೂರೈಸಲು ವಿಸ್ತರಣೆ ಅಗತ್ಯವಿದೆ ಎಂದರು. ಆಗ ಪಾಲಿಕೆ ಸಭಾ ನಾಯಕ ವೀರೇಶ ಅಂಚಟಗೇರಿ, ಜಲಾಶಯ ಬಹು ಸಂಸ್ಥೆಗಳು, ಪಾಲಿಕೆ, ಕೆಯುಐಡಿಎಫ್‌ಸಿ ಮತ್ತು ಸಣ್ಣ ನೀರಾವರಿ ಇಲಾಖೆಯ ಅಡಿ ಬರುತ್ತದೆ. ಹೀಗಾಗಿ ಇತರ ಸಂಸ್ಥೆಗಳ ಅನುಮೋದನೆ ಇಲ್ಲದೆ ಪಾಲಿಕೆ ಮಾತ್ರ ಮುಂದುವರಿಸಲು ಸಾಧ್ಯವಿಲ್ಲ ಎಂದರು. ಆಗ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಮೊದಲು ಸಂಬಂಧಪಟ್ಟ ಇಲಾಖೆಗಳೊಂದಿಗೆ ಜಂಟಿ ಸಭೆ ನಡೆಸಲು ಸದನ ನಿರ್ಧರಿಸಿತು.

ಹಸಿರು-ಹವಾಮಾನ ಬಾಂಡ್‌:ಇಂದೋರ್ ಮತ್ತು ಸೂರತ್ ನಿಗಮಗಳ ಉದಾಹರಣೆ ಉಲ್ಲೇಖಿಸಿ ಆಯುಕ್ತ ಘಾಳಿ, ಹಸಿರು ಮತ್ತು ಹವಾಮಾನ ಬಾಂಡ್‌ಗಳ ಮೂಲಕ ₹ 100 ಕೋಟಿ ಸಂಗ್ರಹಿಸಲು ಪ್ರಸ್ತಾಪಿಸಿದರು. ಸುಸ್ಥಿರ ನಗರ ಚಲನಶೀಲತೆ ಮತ್ತು ಹವಾಮಾನ ಬದಲಾವಣೆ ಯೋಜನೆಯಡಿ ಈ ಉಪಕ್ರಮವು ಕೇಂದ್ರ ನಗರ ವಸತಿ ಸಚಿವಾಲಯದಿಂದ ₹ 13 ಕೋಟಿ ಸಹಾಯ ಪಡೆಯುತ್ತದೆ ಎಂದರು. ಆಗ ಸದಸ್ಯರು, ಅದರ ಸಾಧಕ-ಬಾಧಕ ಅಧ್ಯಯನ ಮಾಡದೆ ಆತುರದಿಂದ ನಿರ್ಧಾರ ತೆಗೆದುಕೊಳ್ಳದಂತೆ ಎಚ್ಚರಿಕೆ ನೀಡಿದರು. ಕಾರ್ಯಸಾಧ್ಯತೆಯನ್ನು ಅಧ್ಯಯನ ಮಾಡಲು ಉಪ ಮೇಯರ್ ನೇತೃತ್ವದಲ್ಲಿ ಬಾಂಡ್ ಸ್ಟೀರಿಂಗ್ ಸಮಿತಿ ರಚಿಸುವಂತೆ ಸದಸ್ಯ ತಿಪ್ಪಣ್ಣ ಮಜ್ಜಗಿ ಸಲಹೆ ನೀಡಿದರು. ಮೇಯರ್ ಜ್ಯೋತಿ ಈ ಸಲಹೆ ಸ್ವೀಕರಿಸಿ, ಒಂದು ವಾರದೊಳಗೆ ಸಮಿತಿ ರಚಿಸಲಾಗುವುದು ಎಂದು ತೀರ್ಪು ನೀಡಿದರು.

ಜಾಹೀರಾತು ಆದಾಯ:ಪಾಲಿಕೆ ಸಭಾ ನಾಯಕ ವೀರೇಶ ಅಂಚಟಗೇರಿ, ಜಾಹೀರಾತು ಶುಲ್ಕ ಸಂಗ್ರಹಿಸುವಲ್ಲಿ ಅಧಿಕಾರಿಗಳ ಕಳಪೆ ಕಾರ್ಯಕ್ಷಮತೆಗಾಗಿ ಟೀಕಿಸಿದರು. ಬಿಬಿಎಂಪಿ ವಾರ್ಷಿಕವಾಗಿ ₹ 300 ಕೋಟಿ ಸಂಗ್ರಹಿಸಿದರೆ, ಹು-ಧಾ ಮಹಾನಗರ ಪಾಲಿಕೆ ₹ 10 ಕೋಟಿ ಗಳಿಸುವ ಸಾಮರ್ಥ್ಯ ಹೊಂದಿದ್ದರೂ ₹ 3 ಕೋಟಿಗಿಂತ ಕಡಿಮೆ ಸಂಗ್ರಹಿಸುತ್ತಿದೆ. ಇದರಿಂದ ಪಾಲಿಕೆಗೆ ₹ 6 ಕೋಟಿ ನಷ್ಟವಾಗುತ್ತಿದೆ ಎಂದು ದೂರಿದರು.ಉಪಸಮಿತಿ:

ಪಾಲಿಕೆ ಒಡೆತನದ ಭೂಮಿ ಅತಿಕ್ರಮಣ ಮಾಡಿರುವ ಕುರಿತು ಸಾಕಷ್ಟು ದೂರು ಬಂದ ಹಿನ್ನೆಲೆಯಲ್ಲಿ ಪಾಲಿಕೆಯ ಭೂಮಿ ಗುರುತಿಸಲು ಉಪಸಮಿತಿ ರಚಿಸಲು ಸದನ ನಿರ್ಧರಿಸಿತು. ಪಾಲಿಕೆಯ ಹಲವು ಖಾಲಿ ಆಸ್ತಿಗಳನ್ನು ಅತಿಕ್ರಮಣ ಮಾಡಿಕೊಂಡು ವಾಣಿಜ್ಯ ಸಂಸ್ಥೆಗಳಾಗಿ ಪರಿವರ್ತಿಸಲಾಗಿದೆ. ಇದರಿಂದ ಸಾಕಷ್ಟು ನಷ್ಟವಾಗಿದ್ದು ಭೂಗಳ್ಳರಿಗೆ ಅವಕಾಶ ಕಲ್ಪಿಸಿದಂತೆ ಆಗಿದೆ ಎಂದು ಅಂಚಟಗೇರಿ ಆರೋಪಿಸಿದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಮೇಯರ್, ಮೂರು ದಿನದಲ್ಲಿ ಉಪಸಮಿತಿ ರಚಿಸಲಾಗುವುದು ಎಂದು ಘೋಷಿಸಿದರು. ಜತೆಗೆ ಪಾಲಿಕೆ ಭೂಮಿಯಲ್ಲಿರುವ ಎಲ್ಲ ಅನಧಿಕೃತ ಕಟ್ಟಡ ಕೆಡವಲು ನಿರ್ದೇಶಿಸಿದರು.

ಸಭೆ ಆರಂಭದಲ್ಲಿ ಸಾಹಿತಿ ಡಾ. ಎಸ್‌.ಎಲ್. ಭೈರಪ್ಪ ಮತ್ತು ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಂ. ಶಿವಣ್ಣ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಸಭೆಯಲ್ಲಿ ಉಪಮೇಯರ್‌ ಸಂತೋಷ ಚವ್ಹಾಣ ಸೇರಿದಂತೆ ಪಾಲಿಕೆ ಸದಸ್ಯರು, ಅಧಿಕಾರಿಗಳು ಇದ್ದರು.

PREV

Recommended Stories

ಹತ್ತು ವರ್ಷವಾದ್ರೂ ನೇಕಾರರ ಮನೆಗಳಿಗಿಲ್ಲ ಮುಕ್ತಿ
ಭೀಮಾನದಿ ನೀರಿನ ಹರಿವು ಮತ್ತೆ ಏರಿಕೆ