ಹಿಂದೂ ಸಂಸ್ಕೃತಿ ಒಪ್ಪುವ ಯಾವುದೇ ಪಕ್ಷ ಇರಲಿ ಸ್ವೀಕರಿಸಲು ಸಿದ್ಧ

KannadaprabhaNewsNetwork |  
Published : Mar 09, 2026, 02:00 AM IST
೭ಕೆಎಂಎನ್‌ಡಿ-೩ಮಂಡ್ಯದ ಕಮಲಮಂದಿರದಲ್ಲಿ ಮಂಥನ ವೈಚಾರಿಕ ವೇದಿಕೆ ವತಿಯಿಂದ ನಡೆದ ಸಂವಾದ ಕಾರ್ಯಕ್ರಮದಲ್ಲಿ ಸಂಘದ ಕರ್ನಾಟಕ ಉತ್ತರ ಮತ್ತು ದಕ್ಷಿಣ ಪ್ರಚಾರ ಪ್ರಮುಖ್ ಅರುಣ್‌ಕುಮಾರ್ ಮಾತನಾಡಿದರು. | Kannada Prabha

ಸಾರಾಂಶ

ನಮಗೆ ಹಿಂದೂ ಧರ್ಮ, ಈ ನೆಲದ ಸಂಸ್ಕೃತಿ, ಆಚಾರ- ವಿಚಾರಗಳು, ಪರಂಪರೆ ಮುಖ್ಯ. ಅದೆಲ್ಲವನ್ನೂ ಬಿಜೆಪಿ ಒಪ್ಪಿಕೊಂಡಿದೆ. ಅದರಿಂದಾಗಿಯೇ ಬಿಜೆಪಿ ಆರ್‌ಎಸ್‌ಎಸ್‌ನ ಒಂದು ಭಾಗವಾಗಿದೆ. ಇದೀಗ ಜೆಡಿಎಸ್ ಕೂಡ ಹಿಂದುತ್ವವನ್ನು ಒಪ್ಪಿಕೊಂಡು ಬಂದಿರುವುದರಿಂದ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಹಿಂದೂ ಸಂಸ್ಕೃತಿಯನ್ನು ಒಪ್ಪಿಕೊಂಡು ಬರುವ ಯಾವುದೇ ರಾಜಕೀಯ ಪಕ್ಷವನ್ನು ಮುಕ್ತವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಅಪ್ಪಿಕೊಳ್ಳಲಿದೆ ಎಂದು ಸಂಘದ ಕರ್ನಾಟಕ ಉತ್ತರ ಮತ್ತು ದಕ್ಷಿಣ ಪ್ರಚಾರ ಪ್ರಮುಖ್ ಅರುಣ್‌ಕುಮಾರ್ ತಿಳಿಸಿದರು.

ನಗರದ ಕಮಲ ಮಂದಿರದಲ್ಲಿ ಮಂಥನ, ಮಂಡ್ಯ ವೈಚಾರಿಕ ವೇದಿಕೆ ಆಶ್ರಯದಲ್ಲಿ ನಡೆದ ಆರ್‌ಎಸ್‌ಎಸ್-೧೦೦ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ನಮಗೆ ಹಿಂದೂ ಧರ್ಮ, ಈ ನೆಲದ ಸಂಸ್ಕೃತಿ, ಆಚಾರ- ವಿಚಾರಗಳು, ಪರಂಪರೆ ಮುಖ್ಯ. ಅದೆಲ್ಲವನ್ನೂ ಬಿಜೆಪಿ ಒಪ್ಪಿಕೊಂಡಿದೆ. ಅದರಿಂದಾಗಿಯೇ ಬಿಜೆಪಿ ಆರ್‌ಎಸ್‌ಎಸ್‌ನ ಒಂದು ಭಾಗವಾಗಿದೆ. ಇದೀಗ ಜೆಡಿಎಸ್ ಕೂಡ ಹಿಂದುತ್ವವನ್ನು ಒಪ್ಪಿಕೊಂಡು ಬಂದಿರುವುದರಿಂದ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲಾಗಿದೆ. ಮುಂದೆ ಕಾಂಗ್ರೆಸ್ ಕೂಡ ಹಿಂದೂ ಧರ್ಮ- ಸಂಸ್ಕೃತಿಯನ್ನು ಒಪ್ಪಿ ಬಂದರೆ ಅವರನ್ನೂ ನಾವು ಮುಕ್ತವಾಗಿ ಸ್ವೀಕರಿಸುವುದಾಗಿ ಹೇಳಿದರು.

ಆರ್‌ಎಸ್‌ಎಸ್‌ನಲ್ಲಿ ಜಾತಿ- ಬೇಧ ಮಾಡುತ್ತಾರೆಂಬುದು ಅಪ್ಪಟ ಸುಳ್ಳು. ಯಾರು ಬೇಕಾದರೂ ಸಂಘವನ್ನು ಸೇರುವುದಕ್ಕೆ ಅವಕಾಶವಿದೆ. ಸಂಘಕ್ಕೆ ಸೇರಿಸಿಕೊಳ್ಳುವಾಗ ಜಾತಿ ಗುರುತಿಸಿ ಸೇರಿಸಿಕೊಳ್ಳುವ ಪದ್ಧತಿಯೇ ಇಲ್ಲ. ಸಂಘ ಕಂಡರೆ ಆಗದವರು ಸುಮ್ಮನೆ ಅಪಪ್ರಚಾರ ಮಾಡುತ್ತಿದ್ದಾರೆ. ಸಂಘವನ್ನು ಹಿಂದೆ ನಿಂತು ನಿಂದಿಸುವವರು ಸಂಘ ಸೇರಿ ನಮ್ಮ ಕಾರ್ಯಚಟುವಟಿಕೆಗಳನ್ನು ತಿಳಿಯಲಿ. ಆನಂತರ ಅಭಿಪ್ರಾಯಗಳನ್ನು ತಿಳಿಸಲಿ. ಸಂಘದ ಕಾರ್ಯವೈಖರಿಯೇ ತಿಳಿಯದೆ ಕುರುಡುತನದಿಂದ ಟೀಕಿಸಬಾರದು ಎಂದು ತಿಳಿಸಿದರು.

ಭವ್ಯ ರಾಮಮಂದಿರಕ್ಕೆ ಶಿಲಾನ್ಯಾಸ ನೆರವೇರಿಸಿದವರು ಒಬ್ಬ ದಲಿತ. ಅದೇ ಕಾರಣಕ್ಕೆ ರಾಮಮಂದಿರ ಅತಿ ಶೀಘ್ರವಾಗಿ ನಿರ್ಮಾಣಗೊಳ್ಳಲು ಸಾಧ್ಯವಾಯಿತು ಎನ್ನುವುದು ನನ್ನ ಭಾವನೆ. ನಾವು ಗಾಂಧಿ, ಅಂಬೇಡ್ಕರ್‌ಗೆ ಜೈ ಎನ್ನುತ್ತೇವೆ. ಭಾರತ ಮಾತೆಗೆ ಜೈ ಎನ್ನುತ್ತೇವೆ. ಆರ್‌ಎಸ್‌ಎಸ್‌ನ ಸಂಸ್ಥಾಪಕರ್‍ಯಾರಿಗೂ ನಾವು ಜೈ ಎನ್ನುವುದಿಲ್ಲ. ಅದು ನಮ್ಮ ಆರ್‌ಎಸ್‌ಎಸ್‌ನ ಶಿಸ್ತು ಎಂದು ಖಡಕ್ಕಾಗಿ ಹೇಳಿದರು.

ಆರ್‌ಎಸ್‌ಎಸ್ ನೋಂದಣಿಯಾಗಿಲ್ಲ ನಿಜ. ಆದರೆ, ನಮ್ಮ ಲೆಕ್ಕ-ಪತ್ರಗಳೆಲ್ಲವೂ ಪಕ್ಕಾ ಇದೆ. ಪ್ರತಿ ವರ್ಷ ಆಡಿಟ್ ನಡೆಯುತ್ತದೆ. ಒಂದು ಪೈಸೆ ಹಣವೂ ವ್ಯರ್ಥವಾಗದಂತೆ ಲೆಕ್ಕ ಇಡಲಾಗುತ್ತಿದೆ. ಇದನ್ನು ಯಾರು ಬೇಕಾದರೂ ಪರಿಶೀಲನೆ ನಡೆಸಬಹುದು. ನಮ್ಮಲ್ಲಿ ಎಲ್ಲವೂ ಮುಕ್ತ ಹಾಗೂ ಪಾರದರ್ಶಕವಾಗಿದೆ. ಸಂವಿಧಾನದಡಿಯಲ್ಲೇ ಸಂಘ ನಿಯಮ ಮತ್ತು ಕಾನೂನುಬದ್ಧವಾಗಿ ನಡೆಯುತ್ತಿದೆ. ಕಾನೂನು ವಿರೋಧಿಯಾಗಿ ನಡೆಯುತ್ತಿರುವ ಒಂದೇ ಒಂದು ಸಾಕ್ಷಿ ನೀಡುವಂತೆ ಸವಾಲು ಹಾಕಿದರು.

ಇಂಗ್ಲಿಷ್ ಭಾಷೆಗೆ ಭಾರತೀಯರು ಅಡಿಯಾಳಾಗುವುದು ಬೇಡ. ಅದನ್ನು ಕಾಲಕ್ರಮೇಣ ದೇಶದಿಂದ ದೂರವಾಗಿಸಬೇಕು. ನಮ್ಮದು ಬಹುಭಾಷೆಗಳನ್ನು ಒಳಗೊಂಡಿರುವ ದೇಶ. ಇಲ್ಲಿ ಎಲ್ಲಾ ಭಾಷೆಗಳೂ ರಾಷ್ಟ್ರೀಯ ಭಾಷೆಗಳೇ. ಎಲ್ಲಾ ಭಾಷೆಗಳಿಗೂ ಸಮಾನ ಅವಕಾಶ, ಸ್ಥಾನ- ಮಾನ, ಬೆಳವಣಿಗೆಗೆ ಪೂರಕ ವಾತಾವರಣವನ್ನು ಕಲ್ಪಿಸಿಕೊಡಬೇಕಿದೆ. ಎಲ್ಲಾ ಭಾಷೆಗಳನ್ನು ಗಟ್ಟಿಗೊಳಿಸಿ ಬೆಳೆಸಬೇಕು ಎಂದ ಅರುಣ್‌ಕುಮಾರ್, ಹಿಂದಿ ಹೇರಿಕೆ ಎಂಬ ಭಾವನೆ ಬೇಡ. ಭಾರತದಲ್ಲಿ ಅತಿ ಹೆಚ್ಚು ಜನ ಮಾತನಾಡುವ ಹಿಂದಿಭಾಷೆಯನ್ನು ಸಂವಿಧಾನ ರಚನಾಕಾರರ ಆಶಯದಂತೆ ನಿರ್ಣಯಿಸಲಾಗಿದೆ. ಉತ್ತರ ಮತ್ತು ದಕ್ಷಿಣವನ್ನು ಸಂಪರ್ಕಿಸುವ ಸೇತುವಾಗಿ ಹಿಂದಿಯನ್ನು ತರಲಾಗುತ್ತಿದೆ. ಅದೊಂದು ಸಂಪರ್ಕ ಭಾಷೆಯಾಗಿರುತ್ತದೆಯಷ್ಟೇ. ಹಿಂದಿ ಭಾಷೆಗೆ ಸಿಗುವಷ್ಟೇ ಮಾನ್ಯತೆಯನ್ನು ಇತರೆ ಎಲ್ಲಾ ಭಾಷೆಗಳಿಗೆ ನೀಡಬೇಕು ಎನ್ನುವುದು ಆರ್‌ಎಸ್‌ಎಸ್ ಉದ್ದೇಶವಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ನಾವೆಲ್ಲಾ ಹಿಂದೂ, ನಾವೆಲ್ಲಾ ಒಂದು ಎಂಬ ಭಾವನೆಯನ್ನು ದೇಶದಲ್ಲಿ ಮೂಡಿಸಬೇಕಿದೆ. ಜಾತಿ ಸಂಘರ್ಷ, ಮೇಲು- ಕೀಳು ಎಂಬ ಭಾವನೆಯನ್ನು ಎಲ್ಲರೂ ತೊರೆಯಬೇಕು. ಎಲ್ಲಾ ಜಾತಿ- ಜನಾಂಗದವರು ಹಿಂದೂಗಳೆಂಬ ಮನೋಭಾವ ಜನಮಾನಸದಲ್ಲಿ ಬೆಳೆಯಬೇಕು. ಆಗ ಒಗ್ಗಟ್ಟು ಮೂಡಲು ಸಾಧ್ಯವಾಗುತ್ತದೆ. ಹಲವಾರು ಜಾತಿಗಳು ರಾಜಕೀಯವಾಗಿ ವೈರುಧ್ಯಗಳನ್ನು ಹೊಂದಿದ್ದರೂ ಆರ್‌ಎಸ್‌ಎಸ್ ಎಲ್ಲರನ್ನೂ ಒಂದುಗೂಡಿಸುವ ಸಂಕಲ್ಪ ಮಾಡಿ ಆ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯನ್ನು ಇರಿಸಿದೆ. ಒಕ್ಕಲಿಗ, ಲಿಂಗಾಯತ, ವೀರಶೈವ, ಬ್ರಾಹ್ಮಣ, ದಲಿತ, ಹಿಂದುಳಿದ ವರ್ಗ ಎಂಬ ನೂರಾರು ಜಾತಿಗಳಲ್ಲಿರುವವರೆಲ್ಲಾ ಹಿಂದೂಗಳೇ. ಅವರನ್ನು ಒಗ್ಗೂಡಿಸಿದಾಗ ದೇಶದ ಏಕತೆ, ಅಖಂಡತೆಗೆ ಅರ್ಥ ಬರುತ್ತದೆ ಎಂದು ಹೇಳಿದರು.

ಜಿಲ್ಲಾ ಕಾರ್ಯವಾಹ ಅವಿನಾಶ್, ಮಂಥನ ಜಿಲ್ಲಾ ಪ್ರಮುಖ್ ಪ್ರದೀಪ್‌ರೆಡ್ಡಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿಗೆ ಹಜ್ ಭವನ ಘೋಷಣೆ: ಸಲೀಂ ಅಹ್ಮದ್‌ಗೆ ಅಭಿನಂದನೆ
ಹಕ್ಕುಪತ್ರ ಪಡೆಯಲು ಮಾರ್ಚ್ ಅಂತ್ಯದೊಳಗೆ ಶುಲ್ಕ ಪಾವತಿಸಿʼ: ಕೆ.ಎಸ್‌.ಆನಂದ್‌.