ಕನ್ನಡಪ್ರಭ ವಾರ್ತೆ ಸೊರಬ
ಸನಾತನ ಹಿಂದೂ ಸಂಸ್ಕೃತಿಯಲ್ಲಿ ಮಾಡುವ ಎಲ್ಲ ಸಾಂಪ್ರದಾಯಕ ಕಾರ್ಯವಿಧಾನಗಳು ಆರೋಗ್ಯಕ್ಕೆ ಪೂರಕವಾಗಿರುತ್ತದೆ. ಹಿಂದೂ ಸಂಸ್ಕೃತಿ ಬಿಟ್ಟು ಮಾಡುವ ಕಾರ್ಯವಿಧಾನಗಳು ಆರೋಗ್ಯಕ್ಕೆ ಮತ್ತು ಸಮಾಜಕ್ಕೆ ಮಾರಕವಾಗಿರುತ್ತದೆ ಎಂದು ಜಡೆ ಸಂಸ್ಥಾನ ಮಠದ ಡಾ. ಶ್ರೀ. ಮಹಾಂತ ಸ್ವಾಮೀಜಿಗಳು ತಿಳಿಸಿದರು.ಜಡೆ ಮಠದ ಆವರಣದಲ್ಲಿ ಹಿರೇಕಬೂರ ಗ್ರಾಮದಿಂದ ಜಡೆ ಸಂಸ್ಥಾನ ಮಠದವರೆಗೆ ಯುಗಾದಿ ಹಬ್ಬದ ಪ್ರಯುಕ್ತ ಪಾದಯಾತ್ರೆಯಿಂದ ಬಂದ ಹಿರೇಕಬೂರ ಮತ್ತು ಪಕ್ಕದ ಗ್ರಾಮಗಳ ಸದ್ಭಕ್ತರನ್ನು ಉದ್ದೇಶಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಯುಗಾದಿ ದಿನ ಸುಖದ ಸಂಕೇತವಾದ ಬೆಲ್ಲವನ್ನೂ ಮತ್ತು ಕಷ್ಟದ ಸಂಕೇತವಾದ ಬೇವನ್ನೂ ಸಮನಾಗಿ ಸ್ವೀಕರಿಸುವರು. ತಿಂದ ಮೇಲೆ ಬೆಲ್ಲವು ಹೊಟ್ಟೆಯೊಳಗೆ ಉರಿ ಅಥವಾ ಶಾಖವನ್ನು ಉಂಟು ಮಾಡಿದರೆ ಬೇವು ಆ ಉರಿ ಶಮನಕಾರಿ ಮಾಡುತ್ತದೆ ಎಂದರು.ಪ್ರಪಂಚದಾದ್ಯಂತ ಜ.೧ರಂದು ಹೊಸ ವರ್ಷ ಆಚರಿಸಲಾಗುತ್ತದೆ. ಆದರೆ ಹಿಂದೂ ಪಂಚಾಂಗದ ಪ್ರಕಾರ ಯುಗಾದಿ ಹಬ್ಬ ಆಚರಿಸುವ ದಿನವೇ ಹೊಸ ವರ್ಷದ ಮೊದಲ ದಿನ. ಯುಗಾದಿ ಅಂದರೆ ಯುಗದ ಆದಿ ಹೊಸ ಯುಗದ ಆರಂಭ ಎಂದರ್ಥ ನಿಸರ್ಗವಾಗಿ ಆರಂಭ, ಮಳೆ, ಚಿಗುರು ಇವುಗಳು ನಿಸರ್ಗ ಕೊಡುವ ಕೊಡುಗೆಯಾಗಿದ್ದು ನಾವು ಸ್ವಾದಿಸಬೇಕಾಗಿದೆ ಎಂದು ತಿಳಿಸಿದರು.
ಯುಗಾದಿ ವಸಂತ ಋತುವಿನ ಪ್ರಾರಂಭದ ದಿನ. ಪ್ರಕೃತಿಯೂ ಕೂಡ ಚಿಗುರೆಲೆಗಳಿಂದ ಹೊಸ ಋತುವಿಗೆ ಸ್ವಾಗತ ಕೋರಲು ಸಜ್ಜಾಗಿರುವ ಸಮಯ. ಈ ಸಮಯದಲ್ಲಿ ಮರಗಳ ಎಲೆಗಳು ಉದುರುತ್ತದೆ ಮತ್ತು ಹೊಸ ಚಿಗುರು ಪ್ರಾರಂಭವಾಗುತ್ತದೆ. ಹಾಗಾಗಿ ಹೊಸತನದ ಸಂಕೇತವನ್ನು ಪ್ರಕೃತಿಯೂ ಕೂಡ ನೀಡಲು ಪ್ರಾರಂಭಿಸುವ ಸುದಿನವಾಗಿದೆ. ಹಿಂದೂ ಕ್ಯಾಲೆಂಡರ್ ಕೇವಲ ಸಾಂಪ್ರದಾಯಿಕವಾಗಿ ಇರುವುದು ಮಾತ್ರವಲ್ಲದೆ ವೈಜ್ಞಾನಿಕವಾಗಿಯೂ ಮತ್ತು ಖಗೋಳಶಾಸ್ತ್ರದ ಪ್ರಕಾರವೂ ಕೂಡ ಹಲವು ಗ್ರಹಗಳ ಕ್ಷಣಗಳನ್ನು ವಿವರಿಸುವ ಸಂಪರ್ಕ ಸಾಧನವಾಗಿದೆ ಎಂದರು.ಈ ಸಂದರ್ಭದಲ್ಲಿ ಶಶಿಧರ್ ಗೌಡ, ಮೂಕಪ್ಪ ಸ್ವಾಮಿಗಳು ತತೂರು, ಲಿಂಗಪ್ಪ ಶರಣರು, ಜಯಶೀಲ ಗೌಡ, ಮಹೇಶ್ ಕಳ್ಳಿಮನೆ ಹಿರೇಕಬೂರ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಇದ್ದರು.