ಓಲೈಕೆ ರಾಜಕಾರಣದಿಂದಾಗಿ ಹಿಂದೂ ಹಬ್ಬ ಆಚರಿಸದಂತಹ ಸ್ಥಿತಿ: ಬಿ.ವೈ. ವಿಜಯೇಂದ್ರ

KannadaprabhaNewsNetwork |  
Published : Mar 30, 2026, 01:00 AM IST
ಹುಬ್ಬಳ್ಳಿಯ ಬಾನಿ ಓಣಿಯಲ್ಲಿ ಶ್ರೀರಾಮನವಮಿ ಅಂಗವಾಗಿ ನಡೆದ ಶ್ರೀರಾಮನವಮಿ ಉತ್ಸವದ ಬೃಹತ್ ಶೋಭಾಯಾತ್ರೆ ಹಾಗೂ ಛತ್ರಪತಿ ಶಿವಾಜಿ ಮಹರಾಜರ ಜಯಂತಿಗೆ ಗಣ್ಯರು ಚಾಲನೆ ನೀಡಿದರು. | Kannada Prabha

ಸಾರಾಂಶ

ರಾಜ್ಯ ಸರ್ಕಾರದ ಓಲೈಕೆ ರಾಜಕಾರಣದಿಂದಾಗಿ ಗಣೇಶೋತ್ಸವ ಸೇರಿದಂತೆ ಹಿಂದೂಗಳ ಹಬ್ಬಗಳನ್ನು ಸಡಗರ, ಸಂಭ್ರಮದಿಂದ ಆಚರಿಸಲೂ ರಾಜಕೀಯವಾಗಿ ತೊಂದರೆ ಕೊಡುವ ಕೆಲಸವಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

ಹುಬ್ಬಳ್ಳಿ: ರಾಜ್ಯ ಸರ್ಕಾರದ ಓಲೈಕೆ ರಾಜಕಾರಣದಿಂದಾಗಿ ಗಣೇಶೋತ್ಸವ ಸೇರಿದಂತೆ ಹಿಂದೂಗಳ ಹಬ್ಬಗಳನ್ನು ಸಡಗರ, ಸಂಭ್ರಮದಿಂದ ಆಚರಿಸಲೂ ರಾಜಕೀಯವಾಗಿ ತೊಂದರೆ ಕೊಡುವ ಕೆಲಸವಾಗುತ್ತಿದೆ. ಈ ಕುರಿತು ಸಮಾಜ ಬಾಂಧವರು ಒಗ್ಗಟ್ಟಿನಿಂದ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

ಅವರು ಭಾನುವಾರ ಸಂಜೆ ಇಲ್ಲಿಯ ಬಾನಿ ಓಣಿಯಲ್ಲಿ ಶ್ರೀಶಕ್ತಿ ಯುವಕ ಮಂಡಳ, ಶ್ರೀರಾಮ ನವಮಿ ಉತ್ಸವ ಸಮಿತಿಯಿಂದ ಶ್ರೀರಾಮನವಮಿ ಅಂಗವಾಗಿ ನಡೆದ ಶ್ರೀರಾಮನವಮಿ ಉತ್ಸವದ ಬೃಹತ್ ಶೋಭಾಯಾತ್ರೆ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಉದ್ಘಾಟಿಸಿ ಮಾತನಾಡಿದರು.

ರಾಜ್ಯ ಸರ್ಕಾರದ ಅಲ್ಪಸಂಖ್ಯಾತರ ಓಲೈಕೆ ರಾಜಕಾರಣದಿಂದ ರಾಜ್ಯದಲ್ಲಿ ಕಳೆದ 2-3 ವರ್ಷಗಳಿಂದ ಹಿಂದೂಗಳು ಗೌರವಯುತವಾಗಿ ಓಡಾದಂತಹ ದುಸ್ಥಿತಿ ನಿರ್ಮಾಣವಾಗಿದೆ. ಅಲ್ಪಸಂಖ್ಯಾತರ ಓಲೈಕೆಯಿಂದಾಗಿ ಹಿಂದೂ ಮಹಿಳೆಯರಿಗೆ ರಕ್ಷಣೆ ಇಲ್ಲದಾಗಿದೆ. ಇಂತಹ ದುಷ್ಟ ಶಕ್ತಿ ಸಂಹಾರ ಮಾಡುವ ದಿನ ದೂರ ಉಳಿದಿಲ್ಲ. ಅಖಂಡ ಹಿಂದೂ ಸಮಾಜ ಶಾಂತಿಯಿಂದ ಇದೆ ಎಂದರೆ, ಸಮಾಜದ ದೌರ್ಬಲ್ಯವಲ್ಲ. ಸಂಘಟಿತ ಹೋರಾಟ ಆಗಬೇಕಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಕೋಟ್ಯಂತರ ಹಿಂದೂಗಳ ಭಾವನೆ ಅರ್ಥ ಮಾಡಿಕೊಂಡು ರಾಮ ಮಂದಿರ ನಿರ್ಮಿಸಿ ಅವರ ಕನಸು ನನಸು ಮಾಡಿದ್ದಾರೆ. ಅಲ್ಲದೇ, ದೇಶದಲ್ಲಿ ಹಿಂದೂಗಳಿಗೆ ರಕ್ಷಣೆ ನೀಡುವ ಕೆಲಸ ಮೋದಿ ನಾಯಕತ್ವದಲ್ಲಿ ನಡೆಯುತ್ತಿದೆ. ಹೀಗಾಗಿ, ಹಿಂದೂ ಸಮಾಜ ಅವರಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕು ಎಂದರು.

ಸಂಸದ ಜಗದೀಶ ಶೆಟ್ಟರ ಮಾತನಾಡಿ, ಜಗತ್ತಿನಾದ್ಯಂತ ನಿರಂತರವಾಗಿ ಯುದ್ಧಗಳು ನಡೆಯುತ್ತಿವೆ. ಈ ಮಧ್ಯೆಯೂ ನಾವೆಲ್ಲರೂ ಸುರಕ್ಷಿತವಾಗಿದ್ದೇವೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಕಾರಣ. ಪ್ರಭು ಶ್ರೀರಾಮ, ಛತ್ರಪತಿ ಶಿವಾಜಿ ಮಹಾರಾಜರ ಆದರ್ಶ, ಗುಣಗಳನ್ನು ಪ್ರಧಾನಿ ಮೋದಿ ಅಳವಡಿಸಿಕೊಂಡು ಹಿಂದೂಗಳ ರಕ್ಷಣೆ ನಿಂತಿದ್ದಾರೆ. ಈ ಮಧ್ಯೆ ರಾಜ್ಯ ಸರ್ಕಾರ ಹಿಂದೂ ಧಾರ್ಮಿಕ ಕಾರ್ಯಕ್ರಮಗಳಿಗೆ ಅಡಚಣೆ ಮಾಡುತ್ತಿದ್ದು, ಇದಕ್ಕೆ ಜನರು ತಕ್ಕ ಉತ್ತರ ನೀಡಲಿದ್ದಾರೆ ಎಂದರು.

ಸಾನ್ನಿಧ್ಯ ವಹಿಸಿದ್ದ ಮೂರುಸಾವಿರ ಮಠದ ಡಾ. ಗುರುಸಿದ್ದ ರಾಜಯೋಗೀಂದ್ರ ಶ್ರೀಗಳು ಮಾತನಾಡಿ, ನಮ್ಮದು ಹಿಂದೂ ದೇಶ. ನಮ್ಮ ಧರ್ಮ ಹಿಂದೂ ಧರ್ಮ, ನಮ್ಮ ಸಂಸ್ಕೃತಿ ಹಿಂದೂ ಆಗಿದೆ. ಶ್ರೀರಾಮನವಮಿ ಆಚರಣೆ ಹಿಂದೂ ಧರ್ಮ ಪ್ರತೀಕವಾಗಿದ್ದು, ಅಖಂಡ ಭಾರತದಲ್ಲಿ ಆಚರಣೆಗೊಳ್ಳುತ್ತದೆ. ಇಂತಹ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಧರ್ಮವನ್ನು ಉತ್ತುಂಗಕ್ಕೆ ಒಯ್ಯುವ ಕೆಲಸ ಇನ್ನೂ ಹೆಚ್ಚೆಚ್ಚು ಆಗಬೇಕು. ಈ ಮೂಲಕ ಹಿಂದೂ ಧರ್ಮದ ರಕ್ಷಣೆ ಮಾಡುವ ಜತೆಗೆ ಹಿಂದೂ ಸಮಾಜ ಸ್ವಾಭಿಮಾನದಿಂದ ಬದುಕುವಂತಾಗಬೇಕು ಎಂದರು.

ಹೂಲಿಕಟ್ಟಿಯ ಭಾರ್ಗವಾನಂದ ಗಿರಿ ಮಹಾರಾಜರು, ಜೈನ ಮುನಿ ಪುಣ್ಯಸಾಗರ ಮಹರಾಜರು ಸಾನ್ನಿಧ್ಯ ವಹಿಸಿದ್ದರು. ವಿಪ ಸದಸ್ಯ ಪ್ರದೀಪ ಶೆಟ್ಟರ, ಶ್ರೀರಾಮನವಮಿ ಉತ್ಸವ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಶಿರಕೋಳ, ಉಪಾಧ್ಯಕ್ಷ ಮಲ್ಲಪ್ಪ ಶಿರಕೋಳ, ಮೇಯರ್ ಜ್ಯೋತಿ ಪಾಟೀಲ, ಲಿಂಗರಾಜ ಪಾಟೀಲ, ಜಯತೀರ್ಥ ಕಟ್ಟಿ, ಡಾ. ಮಲ್ಲಿಕಾರ್ಜುನ ಬಾಳಿಕಾಯಿ, ತಿಪ್ಪಣ್ಣ ಮಜ್ಜಗಿ, ರಮೇಶ ಕದಂ, ಸಂಜಯ ಬಡಸ್ಕರ, ಸುಭಾಷಸಿಂಗ್ ಜಮಾದಾರ, ವಿಜಯ ಸೈಗಲ್, ಈಶ್ವರ ಶಿರಕೋಳ, ಪರಮೇಶ್ವರ ಶಿರಕೋಳ, ಕಲ್ಲಪ್ಪ ಶಿರಕೋಳ, ರಘು ವದ್ದಿ ಹಲವರಿದ್ದರು.

ಅದ್ಧೂರಿ ಶೋಭಾಯಾತ್ರೆ

ಇಲ್ಲಿಯ ಬಾನಿ ಓಣಿಯ ಶಕ್ತಿ ರಸ್ತೆಯಲ್ಲಿ ಶ್ರೀರಾಮ ನವಮಿ ಉತ್ಸವದ ಬೃಹತ್ ಶೋಭಯಾತ್ರೆಗೆ ಮೂರುಸಾವಿರ ಮಠದ ಡಾ. ಗುರುಸಿದ್ಧ ರಾಜಯೋಗೀಂದ್ರ ಶ್ರೀಗಳು ಚಾಲನೆ ನೀಡಿದರು. ಶ್ರೀರಾಮ, ಹನುಮಂತ, ಛತ್ರಪತಿ ಶಿವಾಜಿ ಮಹಾರಾಜರು ಹಾಗೂ ಭಗೀರಥ ಮಹರ್ಷಿಗಳ ಮೂರ್ತಿಗಳ ಭವ್ಯ ಮೆರವಣಿಗೆ ಸಂಭ್ರಮದಿಂದ ನಡೆಯಿತು. ಬಾನಿ ಓಣಿಯಿಂದ ಆರಂಭಗೊಂಡ ಶೋಭಾಯಾತ್ರೆಯು ಸ್ಟೇಷನ್ ರಸ್ತೆ ಮಾರ್ಗವಾಗಿ ಮರಾಠಾಗಲ್ಲಿ, ಕೊಪ್ಪಿಕರ ರಸ್ತೆ ಮಾರ್ಗವಾಗಿ ಶಕ್ತಿ ರಸ್ತೆಗೆ ಬಂದು ಸಂಪನ್ನಗೊಂಡಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಏಣಗಿ ಬಾಳಪ್ಪ, ಸಕ್ಕರಿ ಬಾಳಾಚಾರ್ಯ ರಂಗ ಸೇವೆ ಸ್ಮರಣೀಯ: ಡಾ.ವೀರಣ್ಣ ರಾಜೂರ
ಕಲೆಯಿಂದ ಮನುಷ್ಯನಲ್ಲಿ ಉತ್ಸಾಹ ಹೆಚ್ಚಳ