ಮುಸ್ಲಿಂ ‌ಮದುವೆಯಲ್ಲಿ ಹಿಂದೂ ಸಾಮರಸ್ಯ

KannadaprabhaNewsNetwork |  
Published : Nov 01, 2025, 02:15 AM IST
ಗಬ್ಬೂರಿನ ಜಾಕೀರ್ ಹುಸೇನ ಮೊರಬ ತಮ್ಮ ಮಕ್ಕಳ ವಿವಾಹ ಮಹೋತ್ಸವದಲ್ಲಿ ಕುಂದಗೋಳ ಕಲ್ಯಾಣಪುರ ಮಠದ ಅಭಿನವ ಬಸವಣ್ಣಜ್ಜನವರಿಗೆ ಬಸವಣ್ಣನವರ ಭಾವಚಿತ್ರ ನೀಡಿ ಸನ್ಮಾನಿಸಿದರು. | Kannada Prabha

ಸಾರಾಂಶ

ಗಬ್ಬೂರ ನಿವಾಸಿಗಳಾದ ಜಾಕೀರ್ ಹುಸೇನ ಖಾಜೇಸಾಬ ಮೊರಬ ಅವರು ತಮ್ಮ ಇಬ್ಬರು ಮಕ್ಕಳ ಮದುವೆಯಲ್ಲಿ ಜಗಜ್ಯೋತಿ ಬಸವೇಶ್ವರರ ತತ್ವ ಪಾಲಿಸಿದ್ದಾರೆ. ಇವನಾರವ, ಇವನಾರವ ಎಂದೆನಿಸದಿರಯ್ಯ ಇವ ನಮ್ಮವ, ಇವ ನಮ್ಮವ ಎಂದೆನಿಸಯ್ಯ... ಎಂಬ ಸಂದೇಶ ಸಾರಿ ಹಿಂದೂ- ಮುಸ್ಲಿಂ ಏಕತೆಯ ಸಂದೇಶ ಸಾರಿದ್ದಾರೆ.

ಹುಬ್ಬಳ್ಳಿ:

ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಸಮುದಾಯಗಳ ನಡುವೆ ಶಾಂತಿಯುತ ಸಹಬಾಳ್ವೆ ಮತ್ತು ಸಹಕಾರದ ಪರಸ್ಪರ ಗೌರವ, ತಿಳಿವಳಿಕೆ ಮತ್ತು ರಾಷ್ಟ್ರೀಯ ಏಕತೆಯನ್ನು ಉತ್ತೇಜಿಸುತ್ತದೆ ಎಂಬುದಕ್ಕೆ ಮುಸ್ಲಿಂ ಕುಟುಂಬವೊಂದು ಸಾಕ್ಷಿಯಾಗಿದೆ.

ಇಲ್ಲಿನ ಗಬ್ಬೂರ ನಿವಾಸಿಗಳಾದ ಜಾಕೀರ್ ಹುಸೇನ ಖಾಜೇಸಾಬ ಮೊರಬ ಅವರು ತಮ್ಮ ಇಬ್ಬರು ಮಕ್ಕಳ ಮದುವೆಯಲ್ಲಿ ಜಗಜ್ಯೋತಿ ಬಸವೇಶ್ವರರ ತತ್ವ ಪಾಲಿಸಿದ್ದಾರೆ. ಇವನಾರವ, ಇವನಾರವ ಎಂದೆನಿಸದಿರಯ್ಯ ಇವ ನಮ್ಮವ, ಇವ ನಮ್ಮವ ಎಂದೆನಿಸಯ್ಯ... ಎಂಬ ಸಂದೇಶ ಸಾರಿ ಹಿಂದೂ- ಮುಸ್ಲಿಂ ಏಕತೆಯ ಸಂದೇಶ ಸಾರಿದ್ದಾರೆ.

ಮದುವೆಯಲ್ಲಿ ಶ್ರೀ ‌ಬಸವೇಶ್ವರರ ಭಾವಚಿತ್ರವನ್ನು ಉಡುಗೊರೆಯಾಗಿ ನೀಡಿದ್ದಾರೆ. ಸ್ವತಃ ಮಠಾಧೀಶರಿಗೆ ಆಹ್ವಾನ ಪತ್ರಿಕೆ ನೀಡಿ‌ ಮದುವೆಗೆ ಕರೆದಿದ್ದಾರೆ. ಬಂದ ಶ್ರೀಗಳಿಗೆ ಗೌರವ ಸತ್ಕಾರದ ಜತೆಗೆ ಮಾನವೀಯತೆಯ ಮೌಲ್ಯ ಸಾರುವ ಸಂದೇಶ‌ ಪುಸ್ತಕ ನೀಡಿ ನೂತನ ವಧು-ವರರಿಗೆ ಶ್ರೀಗಳಿಂದ ಆಶೀರ್ವಾದ ಪಡೆದುಕೊಂಡಿದ್ದಾರೆ. ಇಷ್ಟೇ ಅಲ್ಲ ಆಗಮಿಸಿದ ಎಲ್ಲರಿಗೂ ಶಾಲು, ಮಾಲೆ ಹಾಕಿ, ಸರ್ವರಿಗೂ ಒಂದೇ ರೀತಿಯ ಭೋಜನ ವ್ಯವಸ್ಥೆ ಮಾಡಿದ್ದಾರೆ.

ಈ ಅಪರೂಪದ ವಿವಾಹ ಕಾರ್ಯಕ್ರಮ ಆಯೋಜಿಸಿರುವ ಜಾಕೀರ್ ಹುಸೇನ ಮೊರಬ ಅವರದ್ದು ದೊಡ್ಡ ಕುಟುಂಬ, ಮೂಲತಃ ಕೃಷಿಕರಾಗಿರುವ ಇವರು, ಗೋ ಪೂಜೆಯಿಂದಲೇ ತಮ್ಮ ಕಾಯಕ ಆರಂಭಿಸುತ್ತಾರೆ. ಎತ್ತುಗಳೆಂದರೆ ಇವರಿಗೆ ಪಂಚಪ್ರಾಣ. ಸಾವಯುವ ಕೃಷಿಯಲ್ಲಿ ಸಾಕಷ್ಟು ಪ್ರಗತಿ ಕಂಡಿರುವ ಇವರು, ಮನೆಯಲ್ಲಿ ಹಿಂದೂ-ಮುಸ್ಲಿಮರ ದೇವರ ಪೋಟೋಗಳನ್ನಿಟ್ಟಿದ್ದಾರೆ. ಕಾರಹುಣ್ಣಿಮೆ, ದೀಪಾವಳಿ, ಮಹಾನವಮಿ, ಯುಗಾದಿ ಹೀಗೆ ಎಲ್ಲ ಹಬ್ಬಗಳನ್ನು ಚಾಚೂ ತಪ್ಪದೇ ಹಿಂದೂ ಸಂಪ್ರದಾಯದಂತೆ ಆಚರಿಸುತ್ತಾರೆ.

ಕಳೆದ ಬಾರಿ ಕುಂದಗೋಳ ಕಲ್ಯಾಣ ಪುರದ ಲಿಂ. ಬಸವಣ್ಣಜ್ಜನವರ ಧನ ಮತ್ತು ದಾನ್ಯದ ತುಲಾಭಾರದ ಸೇವೆ ಕೂಡ‌‌ ಮಾಡಿ ಭಕ್ತಿ ಸಮರ್ಪಿಸಿದ್ದಾರೆ. ತಮ್ಮ ಮನೆಗೆ ಅನೇಕ ಶ್ರೀಗಳನ್ನು ಕರೆಸಿ ಅವರ ಪಾದಪೂಜೆ ಮಾಡಿ‌ದ್ದಾರೆ.

ಭಾರತದಂತಹ ಬಹು ಸಂಸ್ಕೃತಿಯ ದೇಶದಲ್ಲಿ ಸಾಮಾಜಿಕ ಶಾಂತಿ ಇದು ಅತ್ಯಗತ್ಯವಾಗಿದೆ. ಕೋಮು ಸೌಹಾರ್ದತೆಯು ಪ್ರಜಾಪ್ರಭುತ್ವದ ಲಕ್ಷಣವಾಗಿದೆ ಎಂಬ ಸಂದೇಶ ಸಾರಿರುವ ಮೊರಬದ್ ಕುಟುಂಬದವರು, ಮಕ್ಕಳ ಮದುವೆಯ ಜತೆಗೆ ಗೃಹ ಪ್ರವೇಶ ಕೂಡ ಮಾಡಿದ್ದಾರೆ. ಅ. 29, 30 ಹಾಗೂ 31ರಂದು ಒಟ್ಟು‌ ಮೂರು ದಿನಗಳ ಕಾಲ ಜರುಗಿದ ಅವರ ಕುಟುಂಬ ವರ್ಗದ ಮದುವೆ, ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ವಿವಿಧ ಧಾರ್ಮಿಕ, ಅಧ್ಯಾತ್ಮಿಕ ಕಾರ್ಯಕ್ರಮವನ್ನೂ ಸಹ ಆಯೋಜಿಸಿದ್ದಾರೆ. ಇಂತಹ ಅಪರೂಪದ ಮೊರಬ, ಕುಟುಂಬ ವರ್ಗದವರೆಲ್ಲರೂ ಸಾಮರಸ್ಯ ಸಾರಿದ್ದು ಬಹುತೇಕರನ್ನು ಅಚ್ಚರಿ ಮೂಡಿಸಿತು.

ಹುಬ್ಬಳ್ಳಿ ಹೊರ ವಲಯದ ಹಳೆ ಗಬ್ಬೂರ ಬಳಿಯ ಗಾರ್ಡನ್‌ನಲ್ಲಿ ಆಯೋಜಿಸಿದ್ದ ವಿವಾಹ ಕಾರ್ಯಕ್ರಮಕ್ಕೆ ರಾಜಕಾರಣಿಗಳು, ಪೊಲೀಸರು, ವಿವಿಧ ಮಠಾಧೀಶರೂ ಕೂಡ ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸಿ ವಧು-ವರರಿಗೆ ಶುಭ ಕೋರಿದರು. ಸದ್ಯದ ದಿನಮಾನಗಳಲ್ಲಿ ಜಾತಿ, ಧ್ವೇಷದ ವಿಷವರ್ತುಳದಲ್ಲೊಂದು ಸಾಮರಸ್ಯದ ಮದುವೆ ಸಾಕ್ಷಿಯಾಗಿ ಅಚ್ಚರಿ ಮೂಡಿಸಿತಲ್ಲದೇ ಕನಕದಾಸರ ಕುಲಕುಲವೆಂದು ಹೊಡೆದಾಡದಿರಿ ನಿಮ್ಮ‌ ಕುಲದ ನೆಲೆ ಏನಾದರೂ ಬಲ್ಲಿರಾ? ಎಂಬ ವಾಣಿ ನೆನಪಿಸದೇ‌ ಬಿಡಲಿಲ್ಲ.

ಜಾಕೀರ್ ಹುಸೇನ್ ಕುಟುಂಬ ವರ್ಗದ ಎಲ್ಲ ಸದಸ್ಯರೂ ಮಠಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಸದ್ಗುರು ಸಿದ್ಧಾರೂಢರು ಸೇರಿದಂತೆ ಹಲವು ಮಹಾತ್ಮರ ತತ್ವಾದರ್ಶ ಪಾಲಿಸುವ ಇವರದ್ದು ದ್ವೇಷ ಬಿಡು, ಪ್ರೀತಿ ಮಾಡು ಎಂಬ ಸಂದೇಶ ಪಾಲಿಸುತ್ತಾರೆ ಎಂಬುದು ಸಂತಸ ತಂದಿದೆ.

ಅಭಿನವ ಬಸವಣ್ಣಜ್ಜನವರು, ಕಲ್ಯಾಣಪುರ, ಕುಂದಗೋಳ

ನಮ್ಮದು ಕೃಷಿ‌ ಕುಟುಂಬ.‌ ನಮ್ಮ‌ ಮಕ್ಕಳ‌ ಮದುವೆಗೆ ಸರ್ವರನ್ನೂ ಕರೆದಿದ್ದೇವೆ. ಎಲ್ಲ ಹಬ್ಬಗಳನ್ನು ಆಚರಿಸುತ್ತೇವೆ. ನಮಗೆ ಯಾವುದೇ ಜಾತಿ, ಭೇದವಿಲ್ಲ. ಬಸವಣ್ಣನವರ ತತ್ವಾದರ್ಶ ಪಾಲಿಸುವ ನಮಗೆ ದೇವರೊಂದೇ ನಾಮ ಹಲವು.

ಜಾಕೀರ್ ಹುಸೇನ ಮೊರಬ

PREV

Recommended Stories

ಇಂದಿರಾರ ಆದರ್ಶವನ್ನು ಎಲ್ಲರೂ ಪಾಲಿಸಬೇಕು : ಸಿದ್ದರಾಮಯ್ಯ
ಕುಡಚಿ ಶಾಸಕ ಪುತ್ರಗೆ ಡಿಕೆಶಿಯಿಂದ ‘ಶಿವಕುಮಾರ್‌’ ಎಂದು ನಾಮಕರಣ!