ಬಳ್ಳಾರಿ: ತುಂಗಭದ್ರಾ ಜಲಾಶಯದಿಂದ ಬೇಸಿಗೆ ಬೆಳೆಗೆ ನೀರು ಬಿಡಬೇಕು. ಕ್ರಸ್ಟ್‌ಗೇಟ್ ನಿರ್ಮಾಣ ನೆಪದಲ್ಲಿ ಯಾವುದೇ ಕಾರಣಕ್ಕೂ ಜಲಾಶಯದ ನೀರನ್ನು ವ್ಯರ್ಥವಾಗಿ ನದಿಗೆ ಬಿಡದೆ ರೈತರ ಬೆಳೆಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ತುಂಗಭದ್ರಾ ರೈತ ಸಂಘದ ಅಧ್ಯಕ್ಷ ದರೂರು ಪುರುಷೋತ್ತಮಗೌಡ ಒತ್ತಾಯಿಸಿದರು.
ರೈತರ ಹಿತ ಕಾಯಬೇಕಾದ ಸಚಿವ ಶಿವರಾಜ ತಂಗಡಗಿ ಸಹ ನೀರು ನದಿಗೆ ಬಿಡುವ ಕುರಿತು ಹೇಳುತ್ತಿದ್ದಾರೆ. ಇದು ರೈತರಿಗೆ ಆಘಾತವನ್ನುಂಟು ಮಾಡಿದೆ. ಯಾವುದೇ ಕಾರಣಕ್ಕೂ ನೀರನ್ನು ವ್ಯರ್ಥವಾಗಿ ನದಿಗೆ ಬಿಡದೇ ಬೇಸಿಗೆ ಬೆಳೆಗೆ ನೀರು ಪೂರೈಸಬೇಕು. ಕ್ರಸ್ಟ್‌ಗೇಟ್ ಅಳವಡಿಕೆಗೆ ಸಂಬಂಧ ನೀರಾವರಿ ತಜ್ಞರು ಸೇರಿದಂತೆ ರೈತರ ಜೊತೆ ಸಭೆ ನಡೆಸಿ, ಪೂರಕ ನಿರ್ಧಾರಗಳನ್ನು ಕೈಗೊಳ್ಳಬೇಕು. ಜಲಾಶಯ ತಜ್ಞ ಕನ್ನಯ್ಯ ನಾಯ್ಡು 33 ಕ್ರಸ್ಟ್‌ಗೇಟ್‌ನ್ನು ಮೂರು ತಿಂಗಳೊಳಗೆ ಅಳವಡಿಸಬಹುದು ಎಂದು ಹೇಳಿದ್ದಾರೆ. ಕ್ರಸ್ಟ್‌ಗೇಟ್‌ನ್ನು ಫೆಬ್ರವರಿ ತಿಂಗಳಲ್ಲಿ ಆರಂಭಿಸಬಹುದಾಗಿದ್ದು ರೈತರಿಗೆ ತೊಂದರೆಯಾಗುವ ಯಾವುದೇ ನಿರ್ಧಾರವನ್ನು ಕೈಗೊಳ್ಳಬಾರದು ಎಂದು ಆಗ್ರಹಿಸಿದರು.
ಬೇಸಿಗೆ ಬೆಳೆಗೆ ನೀರು ಬಿಡುವ ಸಂಬಂಧ ಜಿಲ್ಲೆಯ ಎಲ್ಲ ಶಾಸಕರು ಹಾಗೂ ಜಿಲ್ಲಾ ಸಚಿವ ಜಮೀರ್ ಅಹ್ಮದ್ ಅವರಿಗೆ ಮನವಿ ಮಾಡಿಕೊಳ್ಳಲಾಗಿದೆ. ನಾಗೇಂದ್ರ ಹೊರತುಪಡಿಸಿ ಜಿಲ್ಲೆಯ ಯಾವುದೇ ಶಾಸಕರು ರೈತರ ಹಿತ ಕಾಯುವ ಕಾಳಜಿ ತೋರಿಸುತ್ತಿಲ್ಲ.ಸಚಿವ ಶಿವರಾಜ ತಂಗಡಗಿ ನೀರಾವರಿ ಸಲಹಾ ಸಮಿತಿ ಸಭೆ ಕರೆಯುವುದಿಲ್ಲ. ನೀರು ಬಿಡುವುದಿಲ್ಲ ಎಂದು ಏಕಪಕ್ಷೀಯ ಹೇಳುತ್ತಿದ್ದಾರೆ. ಜಲಸಂಪನ್ಮೂಲ ಸಚಿವರ ಜೊತೆ ಯಾವುದೇ ಚರ್ಚೆ ಮಾಡದೆ ತಂಗಡಗಿ ಸ್ವಯಂ ನಿರ್ಧಾರ ಕೈಗೊಂಡಿರುವುದು ರೈತ ವಿರೋಧಿ ನಿಲುವಾಗಿದೆ. ಕ್ರಸ್ಟ್ ಗೇಟ್ ಅಳವಡಿಕೆ ಸಂಬಂಧ ತಜ್ಞರ ಜೊತೆ ಚರ್ಚೆಯೇ ಮಾಡದೆ ಕ್ರಸ್ಟ್‌ಗೇಟ್ ಅಳವಡಿಕೆಯ ನಿರ್ಧಾರ ಕೈಗೊಳ್ಳುವುದನ್ನು ನಾವು ಒಪ್ಪುವುದಿಲ್ಲ. ನಿಜಕ್ಕೂ ಸರ್ಕಾರ ಹಾಗೂ ಜನಪ್ರತಿನಿಧಿಗಳಿಗೆ ರೈತರ ಬಗ್ಗೆ ಕಾಳಜಿಯಿದ್ದರೆ ಬೇಸಿಗೆ ಬೆಳೆಗೆ ನೀರು ಬಿಡುವುದರ ಜೊತೆಗೆ ಕ್ರಸ್ಟ್‌ಗೇಟ್ ಅಳವಡಿಕೆಗೆ ಸಂಬಂಧ ಯಾವ ರೀತಿ ಕ್ರಮ ಕೈಗೊಳ್ಳಬಹುದು ಎಂಬುದು ವೈಜ್ಞಾನಿಕವಾಗಿ ಚರ್ಚಿಸಿಯೇ ಸೂಕ್ತ ನಿರ್ಧಾರಕ್ಕೆ ಬರಬೇಕು. ಕನ್ನಯ್ಯನಾಯ್ಡು ಅವರ ಸಲಹೆಯಂತೆ ಏಪ್ರಿಲ್ ನಿಂದ ಮೂರು ತಿಂಗಳು ಕ್ರಸ್ಟ್ ಗೇಟ್ ಕೂಡಿಸಬೇಕು ಎಂದು ಒತ್ತಾಯಿಸಿದರಲ್ಲದೆ, ರೈತರ ಬೆಳೆಗಳಿಗೆ ನೀರು ಕೊಡುವ ವಿಚಾರದಲ್ಲಿ ಸರ್ಕಾರ ಹಾಗೂ ಸಚಿವ ಶಿವರಾಜ ತಂಗಡಗಿ ಅವರು ನಿರ್ಲಕ್ಷ್ಯ ವಹಿಸಿದರೆ ನವೆಂಬರ್ 5 ರಂದು ಹೋರಾಟಕ್ಕೆ ಸಜ್ಜಾಗುತ್ತೇವೆ. ರಾಜ್ಯ ಹೆದ್ದಾರಿಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದರು.
ರೈತ ಸಂಘದ ಮುಖಂಡರಾದ ಶಿವಯ್ಯ, ವೀರಭದ್ರನಾಯಕ್, ಸಾಗರ್ ದರೂರು, ಭೀಮಣ್ಣ ಮೋಕಾ, ರಾಜಾಸಾಬ್, ಕೊಂಚಿಗೇರಿ ಗೋವಿಂದಪ್ಪ, ವೀರನಗೌಡ ಶ್ರೀಧರಗಡ್ಡೆ, ಜಾಲಿಹಾಳ್ ಶ್ರೀಧರ್, ದುರುಗಪ್ಪ, ಗೆಣೆಕೆಹಾಳ್ ಶಾಂತಪ್ಪ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.