ಕನ್ನಡಪ್ರಭ ವಾರ್ತೆ ಬೆಂಗಳೂರು
ಪರಿಚಿತ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿ ಜೀವ ಬೆದರಿಕೆ ಹಾಕಿದ ಆರೋಪದ ಮೇರೆಗೆ ಬೆಂಗಳೂರು ವಿಶ್ವ ವಿದ್ಯಾಲಯದ ನಿವೃತ್ತ ಪ್ರೊ.ಬಿ.ಸಿ.ಮೈಲಾರಪ್ಪ ಅವರನ್ನು ಬಸವೇಶ್ವರ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.ಕೆಲ ದಿನಗಳ ಭೂ ವಿವಾದ ಸಂಬಂಧ ಮಾತುಕತೆಗೆ ಕರೆದು ವೆಸ್ಟ್ ಆಫ್ ಕಾರ್ಡ್ ರಸ್ತೆಯ ಹೋಟೆಲ್ ಬಳಿ ಸಂತ್ರಸ್ತೆ ಮೇಲೆ ಮೈಲಾರಪ್ಪ ಹಲ್ಲೆ ನಡೆಸಿದ್ದರು. ಬಳಿಕ ಆಕೆಯ ಮನೆಗೆ ತೆರಳಿ ಸಹ ಲೈಂಗಿಕ ದೌರ್ಜನ್ಯ ನಡೆಸಿ ಜೀವ ಬೆದರಿಕೆ ಹಾಕಿದ್ದರು ಎಂದು ಸಂತ್ರಸ್ತೆ ಆರೋಪಿಸಿದ್ದರು. ಈ ಬಗ್ಗೆ ಎಫ್‌ಐಆರ್ ದಾಖಲಿಸಿದ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ.
ಸದಾಶಿವನಗರದಲ್ಲಿರುವ ಪ್ರೊ.ಮೈಲಾರಪ್ಪ ಅವರ ಒಡೆತನದ ಖಾಸಗಿ ಸಂಸ್ಥೆಯಲ್ಲಿ ಸಂತ್ರಸ್ತೆ ಕೆಲಸಕ್ಕಿದ್ದರು. ಎರಡು ವರ್ಷಗಳ ಹಿಂದೆ ಅವರ ಪತಿ ಮೃತಪಟ್ಟ ಬಳಿಕ ಭೂ ವಿವಾದ ಉಂಟಾಗಿತ್ತು. ತಮ್ಮ ಪತಿಯ ಹೆಸರಿನಲ್ಲಿದ್ದ ಕೆಲ ಆಸ್ತಿಗಳನ್ನು ಪರಭಾರೆ ಮಾಡಿಕೊಡುವಂತೆ ಮೈಲಾರಪ್ಪ ಒತ್ತಡ ಹಾಕುತ್ತಿದ್ದರು. ಇದಕ್ಕೆ ಸಂತ್ರಸ್ತೆ ಸ್ಪಂದಿಸಿರಲಿಲ್ಲ. ಅಲ್ಲದೆ ತಮ್ಮ ಸೋದರ ಸಂಬಂಧಿ ಪರಿಚಿತ ವಕೀಲರ ಮೂಲಕ ಕಾನೂನು ಹೋರಾಟಕ್ಕೆ ಅವರು ಆರಂಭಿಸಿದ್ದರು. ಈ ಬೆಳವಣಿಗೆ ಹಿನ್ನಲೆಯಲ್ಲಿ ಸಂತ್ರಸ್ತೆಗೆ ಮೈಲಾರಪ್ಪ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.ವಕೀಲರ ಮಾವನಿಂದ ಕೇಸ್
ತಮ್ಮ ಅಳಿಯನ ಚಾರಿತ್ರ್ಯಹರಣ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಪ್ರೊ.ಮೈಲಾರಪ್ಪ ವಿರುದ್ಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ವಕೀಲ ರಘು ಎಂಬುವರ ಮಾವ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಮೈಲಾರಪ್ಪ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ.ತಮ್ಮ ಪರಿಚಿತ ಮಹಿಳೆ ಪರವಾಗಿ ರಘು ವಕಾಲತ್ತು ತೆಗೆದುಕೊಂಡಿದ್ದಾರೆ. ಆದರೆ ಆಕೆ ಜತೆ ರಘು ಅವರಿಗೆ ಅಕ್ರಮ ಸಂಬಂಧವಿದೆ ಎಂದು ಸುಳ್ಳು ಹೇಳಿದ್ದರು. ಅಲ್ಲದೆ ಮಾತುಕತೆ ನೆಪದಲ್ಲಿ ವಿವಿಯ ತಮ್ಮ ಕಚೇರಿಗೆ ಕರೆಸಿ ಬೆದರಿಸಿದರು ಎಂದು ದೂರಿನಲ್ಲಿ ಆರೋಪಿಸಿದ್ದಾರೆ.