ಇಂದು ಹಿಂದೂ ಮಹಾಗಣಪತಿ ಮೆರವಣಿಗೆ, ವಿಸರ್ಜನೆ: ಪೊಲೀಸ್‌ ಸರ್ಪಗಾವಲು

KannadaprabhaNewsNetwork | Published : Oct 5, 2024 1:33 AM

ಸಾರಾಂಶ

ದಾವಣಗೆರೆ ನಗರದ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ಸಾರ್ವಜನಿಕ ಹಿಂದೂ ಮಹಾಗಣಪತಿ ಟ್ರಸ್ಟ್‌ನಿಂದ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಯ ಶೋಭಾಯಾತ್ರೆಗೆ ದಾವಣಗೆರೆ ಸಜ್ಜುಗೊಂಡಿದ್ದು, ಇಡೀ ನಗರ ಕೇಸರಿಮಯಗೊಂಡಿದೆ.

- ಹೈಸ್ಕೂಲ್‌ ಮೈದಾನದಲ್ಲಿ 7ರಂದು ಮೂರ್ತಿ ಪ್ರತಿಷ್ಠಾಪಿಸಿದ್ದು, 29ನೇ ದಿನದ ಅದ್ಧೂರಿ ರಾಜಬೀದಿ ಉತ್ಸವಕ್ಕೆ ಸಕಲ ಸಜ್ಜು - - - ಕನ್ನಡಪ್ರಭ ವಾರ್ತೆ ದಾವಣಗೆರೆ ನಗರದ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ಸಾರ್ವಜನಿಕ ಹಿಂದೂ ಮಹಾಗಣಪತಿ ಟ್ರಸ್ಟ್‌ನಿಂದ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಯ ಶೋಭಾಯಾತ್ರೆಗೆ ದಾವಣಗೆರೆ ಸಜ್ಜುಗೊಂಡಿದ್ದು, ಇಡೀ ನಗರ ಕೇಸರಿಮಯಗೊಂಡಿದೆ.

ಟ್ರಸ್ಟ್‌ನಿಂದ ಈ ವರ್ಷ ಕಾಶಿವಿಶ್ವನಾಥ ದೇವಸ್ಥಾನ ಮಾದರಿ ಮಂಟಪದಲ್ಲಿ ಗಣಪತಿಯನ್ನು ಪ್ರತಿಷ್ಠಾಪಿಸಲಾಗಿದ್ದು, ದಿನನಿತ್ಯ ಅಪಾರ ಸಂಖ್ಯೆಯ ಭಕ್ತರು ಬಂದು ಗಣಪತಿ ದರ್ಶನ ಪಡೆದು, ಪೂಜೆ ಸಲ್ಲಿಸಿ, ಪುನೀತರಾಗಿದ್ದಾರೆ. ಸೆ.7ರಂದು ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದು, ಇದೀಗ 29ನೇ ದಿನವಾದ ಶನಿವಾರ ಗಣಪತಿ ವಿಸರ್ಜನೆ ಕಾರ್ಯ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕ ಹಿಂದೂ ಮಹಾಗಣಪತಿ ಟ್ರಸ್ಟ್ ನೇತೃತ್ವದಲ್ಲಿ ಬೃಹತ್ ಶೋಭಾಯಾತ್ರೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಬೈಕ್ ರ‍್ಯಾಲಿ ಸಂಪನ್ನ:

ಗಣಪತಿ ವಿಸರ್ಜನೆಗೆ ಪೂರ್ವಭಾವಿಯಾಗಿ ಶುಕ್ರವಾರ ನಗರದಲ್ಲಿ ಬೈಕ್ ರ‍್ಯಾಲಿ ನಡೆಸಲಾಯಿತು. ರ‍್ಯಾಲಿಯಲ್ಲಿ ಭಾಗವಹಿಸಿದ್ದವರು ಭಗವಾಧ್ವಜ, ಕೇಸರಿ ಶಾಲುಗಳೊಂದಿಗೆ ಜೈ ಶ್ರೀರಾಮ್ ಘೋಷಣೆ ಕೂಗುತ್ತಾ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದರು.

ಬಾವುಟ-ಬ್ಯಾನರ್‌- ಬಂಟಿಂಗ್ಸ್‌:

ಹಿಂದೂ ಮಹಾಗಣಪತಿ ವಿಸರ್ಜನೆಯ ಮೆರವಣಿಗೆ ಪ್ರಯುಕ್ತ ಜಿಲ್ಲಾ ಕೇಂದ್ರದ ಪ್ರಮುಖ ರಸ್ತೆ, ವೃತ್ತಗಳಲ್ಲಿ ಕೇಸರಿ ಬಾವುಟ, ಬಂಟಿಂಗ್ಸ್, ಬ್ಯಾನರ್ ರಾರಾಜಿಸುತ್ತಿವೆ. ಮೆರವಣಿಗೆ ಸಾಗುವ ಮಾರ್ಗದಲ್ಲಿ ಶ್ರೀರಾಮ, ಬಸವಣ್ಣ, ವಾಲ್ಮೀಕಿ, ಕನಕದಾಸರು ಸೇರಿದಂತೆ ಅನೇಕ ದಾರ್ಶನಿಕರ ಪ್ರತಿಕೃತಿಗಳನ್ನು ಅಳವಡಿಸಲಾಗಿದೆ. ಹೈಸ್ಕೂಲ್ ಮೈದಾನದಿಂದ ಪ್ರಾರಂಭವಾಗುವ ಶೋಭಾಯಾತ್ರೆಯು ಅಕ್ಕ ಮಹಾದೇವಿ ರಸ್ತೆ, ಅಂಬೇಡ್ಕರ್ ವೃತ್ತ, ಜಯದೇವ ವೃತ್ತ, ಲಾಯರ್‌ ರಸ್ತೆ, ಪಿ.ಬಿ. ರಸ್ತೆ ಮಾರ್ಗವಾಗಿ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ನಡೆಯಲಿದೆ. ಅನಂತರ ಗಣೇಶ ಮೂರ್ತಿಯನ್ನು ಬಾತಿ ಕೆರೆಯಲ್ಲಿ ವಿಸರ್ಜನೆ ಮಾಡಲಾಗುತ್ತಿದೆ.

ಅ.5ರಂದು ಬೆಳಗ್ಗೆ 11 ಗಂಟೆಗೆ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ಆರಂಭವಾಗಲಿದೆ. ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ಮಾಜಿ ಸಂಸದ ಡಾ.ಜಿ.ಎಂ.ಸಿದ್ದೇಶ್ವರ್, ಮಾಜಿ ಸಚಿವ ಎಸ್.ಎ.ರವೀಂದ್ರನಾಥ್ ಸೇರಿದಂತೆ ಅನೇಕ ಮುಖಂಡರು ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ.

ಗಣೇಶ ವಿಸರ್ಜನೆ ಶೋಭಾಯಾತ್ರೆಯಲ್ಲಿ ಚಂಡೆವಾದ್ಯ, ಡ್ರಮ್ ಸೆಟ್ ಸೇರಿದಂತೆ ಹತ್ತಾರು ಜಾನಪದ ಕಲಾ ತಂಡಗಳು ಭಾಗಿಯಾಗಲಿವೆ. ಮಹಿಳೆಯರಿಗಾಗಿ ಪ್ರತ್ಯೇಕ ಡಿಜೆ ಸಹಿತ ಒಟ್ಟು ಐದು ಡಿಜೆ ಸೆಟ್ ವ್ಯವಸ್ಥೆ ಮಾಡಲಾಗಿದೆ. ಹಿಂದೂ ಮಹಾಗಣಪತಿ ಶೋಭಾಯಾತ್ರೆ ಹಿನ್ನೆಲೆ ಜಿಲ್ಲಾಡಳಿತ, ಪೊಲೀಸ್ ಇಲಾಖೆಯಿಂದಲೂ ಹಲವು ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿದೆ. ಶನಿವಾರ ಕೆಲವು ಮಾರ್ಗಗಳಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದ್ದು, ಪರ‍್ಯಾಯ ವ್ಯವಸ್ಥೆ ಮಾಡಲಾಗಿದೆ.

- - -

ಬಾಕ್ಸ್‌ * ಮದ್ಯ ಮಾರಾಟ- ಪೊಲೀಸ್‌ ಬಂದೋಬಸ್ತ್‌ ಮುನ್ನೆಚ್ಚರಿಕೆ ಕ್ರಮವಾಗಿ ಶುಕ್ರವಾರ ಸಂಜೆಯಿಂದ ಅ.5ರಂದು ಮಧ್ಯರಾತ್ರಿವರೆಗೆ ಪಾಲಿಕೆ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ. ಜಿಲ್ಲಾ ಪೊಲೀಸ್ ಇಲಾಖೆಯಿಂದ ಕಾನೂನು ಹಾಗೂ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಅಧಿಕಾರಿ, ಸಿಬ್ಬಂದಿ ಹಾಗೂ ಕೆಎಸ್‌ಆರ್‌ಪಿ ಮತ್ತು ಡಿಎಆರ್ ತುಕಡಿಗಳನ್ನು ನಿಯೋಜಿಸಲಾಗಿದೆ. ಅಲ್ಲದೇ, ಗೃಹರಕ್ಷಕ ಸಿಬ್ಬಂದಿ ಸೇವೆಯನ್ನೂ ಬಳಸಿಕೊಳ್ಳಲಾಗುತ್ತಿದೆ. ಮೆರವಣಿಗೆ ಮಾರ್ಗದುದ್ದಕ್ಕೂ ಸಿಸಿ ಕ್ಯಾಮೆರಾ ಅಳವಡಿಸಿದ್ದು, ಮೆರವಣಿಗೆಯ ಸಂಪೂರ್ಣ ಚಿತ್ರಿಕರಣಕ್ಕೆ ವಿಡಿಯೋಗ್ರಾಫರ್ಸ್ ಜೊತೆಗೆ, ಮೆರವಣಿಗೆಗೆ ಡ್ರೋನ್ ಕಣ್ಗಾವಲು ಒದಗಿಸಲಾಗಿದೆ.

- - - -4ಕೆಡಿವಿಜಿ53ಃ:

ದಾವಣಗೆರೆಯಲ್ಲಿ ಪ್ರತಿಷ್ಠಾಪಿಸಿರುವ ಹಿಂದೂ ಮಹಾಗಣಪತಿ. -57, 58, 59ಃ

ದಾವಣಗೆರೆಯಲ್ಲಿ ಹಿಂದೂ ಮಹಾಗಣಪತಿ ವಿಸರ್ಜನೆ ಹಿನ್ನೆಲೆ ಶುಕ್ರವಾರ ಎಸ್‌ಪಿ ಉಮಾ ಪ್ರಶಾಂತ್ ನೇತೃತ್ವದಲ್ಲಿ ಪೊಲೀಸ್ ಪಥ ಸಂಚಲನ ನಡೆಯಿತು.

Share this article