- ಉತ್ಸವದಲ್ಲಿ 6 ಲಕ್ಷ ಜನ ಸೇರುವ ನಿರೀಕ್ಷೆ, ಬಾತಿಕೆರೆಯಲ್ಲಿ ಗಣೇಶ ವಿಸರ್ಜನೆ: ಜೊಳ್ಳಿ ಗುರು । ಇಂದು ಬೈಕ್ ರ‍್ಯಾಲಿ
- - -ಕನ್ನಡಪ್ರಭ ವಾರ್ತೆ, ದಾವಣಗೆರೆ
ಸಾರ್ವಜನಿಕ ಹಿಂದೂ ಮಹಾ ಗಣಪತಿ ಟ್ರಸ್ಟ್ ವತಿಯಿಂದ ಇಲ್ಲಿನ ಸರ್ಕಾರಿ ಬಾಲಕರ ಪ್ರೌಢಶಾಲಾ ಮೈದಾನದಲ್ಲಿ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿ ವಿಸರ್ಜನೆ ಕಾರ್ಯಕ್ರಮವು ಅ.5ರಂದು ನಡೆಯಲಿದ್ದು, ಬಾತಿಕೆರೆಯಲ್ಲಿ ಗಣೇಶನ ವಿಸರ್ಜನೆ ನಡೆಯಲಿದೆ ಎಂದು ಟ್ರಸ್ಟ್ ಅಧ್ಯಕ್ಷ ಜೊಳ್ಳಿ ಗುರು ಹೇಳಿದರು.ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ಹಿನ್ನೆಲೆಯಲ್ಲಿ ಅ.4ಂದು ಶುಕ್ರವಾರ ಬೆಳಗ್ಗೆ 11 ಗಂಟೆಗೆ ಬೈಕ್ ರ‍್ಯಾಲಿ ಹಮ್ಮಿಕೊಳ್ಳಲಾಗಿದ್ದು ಜನಪ್ರತಿನಿಧಿಗಳು ರ‍್ಯಾಲಿಗೆ ಚಾಲನೆ ನೀಡುವರು ಎಂದರು.
ರ್ಯಾಲಿ ಸಾಗುವ ಮಾರ್ಗ:ಸರ್ಕಾರಿ ಬಾಲಕರ ಪ್ರೌಢಶಾಲಾ ಮೈದಾನದಿಂದ ಪ್ರಾರಂಭ ಆಗುವ ರ‍್ಯಾಲಿ ಮಹಾನಗರ ಪಾಲಿಕೆ ರಸ್ತೆ, ಗಡಿಯಾರ ಕಂಬ, ಕಾಳಿಕಾದೇವಿ ರಸ್ತೆ, ದುರ್ಗಾಂಬಿಕಾ ದೇವಿ ರಸ್ತೆ, ಹೊಂಡದ ವೃತ್ತ, ಅರುಣ ಚಿತ್ರಮಂದಿರ ವೃತ್ತ, ವಿನೋಬ ನಗರ ಎರಡನೇ ಮುಖ್ಯ ರಸ್ತೆ, ಎಂಸಿಸಿ ಎ ಬ್ಲಾಕ್, ವಿದ್ಯಾನಗರ, 60 ಅಡಿ ರಸ್ತೆ, ನಿಟುವಳ್ಳಿ ದುರ್ಗಾಂಬಿಕಾ ದೇವಸ್ಥಾನ ರಸ್ತೆ, ಡಾಂಗೇ ಪಾರ್ಕ್, ಶಿವಪ್ಪಯ್ಯ ಸರ್ಕಲ್, ಜಯದೇವ ವೃತ್ತದ ಮೂಲಕ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ಮುಕ್ತಾಯವಾಗಲಿದೆ ಎಂದು ತಿಳಿಸಿದರು. ಅ.5ರ ಬೆಳಗ್ಗೆ 10.30 ಕ್ಕೆ ಗಣೇಶ ವಿಸರ್ಜನಾ ಮೆರವಣಿಗೆಗೆ ಚಾಲನೆ ನೀಡಲಾಗುವುದು. ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್, ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ್, ಮಾಜಿ ಸಚಿವ ಎಸ್ ಎ.ರವೀಂದ್ರನಾಥ್ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಲಿದ್ದಾರೆ ಎಂದರು. ಗಣೇಶನ ಮೆರವಣಿಗೆಯು ನಗರದ ಹೈಸ್ಕೂಲ್ ಮೈದಾನದಿಂದ ಪ್ರಾರಂಭವಾಗಿ ಎವಿಕೆ ರಸ್ತೆ, ಡಾ. ಬಿ.ಆರ್. ಅಂಬೇಡ್ಕರ್ ಸರ್ಕಲ್, ಜಯದೇವ ಸರ್ಕಲ್, ಲಾಯರ್ ರಸ್ತೆ, ಪಿ.ಬಿ. ರಸ್ತೆ ಮೂಲಕ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ಬೃಹತ್ ಶೋಭಾ ಯಾತ್ರೆ ನಡೆಯಲಿದೆ. ಅನಂತರ ಬಾತಿಕೆರೆಯಲ್ಲಿ ಗಣೇಶನ ವಿಸರ್ಜನೆ ಮಾಡಲಾಗುವುದು ಎಂದರು.
5 ಡಿಜೆ ಸೌಂಡ್ಸ್ ವ್ಯವಸ್ಥೆ:ಶೋಭಾ ಯಾತ್ರೆಯಲ್ಲಿ ಚಂಡೆನಾದ, ಡ್ರಮ್ ಸೆಟ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 10 ಜಾನಪದ ಕಲಾ ತಂಡಗಳು ಹಾಗೂ ಮಹಿಳೆಯರಿಗಾಗಿ ಪ್ರತ್ಯೇಕ ಸೇರಿದಂತೆ ಐದು ಡಿಜೆ ವ್ಯವಸ್ಥೆ ಮಾಡಲಾಗಿದೆ. ಸುಮಾರು 5ರಿಂದ 6 ಲಕ್ಷ ಜನರು ಭಾಗವಹಿಸುವ ನಿರೀಕ್ಷೆಯಿದೆ. ವಿಸರ್ಜನಾ ಮೆರವಣಿಗೆ ಹಿನ್ನೆಲೆಯಲ್ಲಿ ನಗರದಾದ್ಯಂತ ಬಂಟಿಂಗ್ಸ್, ಬಾವುಟ ಕಟ್ಟಲಾಗಿದೆ. ಬಸವಣ್ಣ, ವಾಲ್ಮೀಕಿ, ಕನಕದಾಸರು ಸೇರಿದಂತೆ 11ಕ್ಕೂ ಹೆಚ್ಚು ದಾರ್ಶನಿಕರ ಮೂರ್ತಿಯನ್ನು ಮೆರವಣಿಗೆ ಸಾಗುವ ಮಾರ್ಗದಲ್ಲಿ ಪ್ರತಿಷ್ಠಾಪಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಿದ್ದೇಶ್, ಮಾಗಿ ಜಯಪ್ರಕಾಶ, ಕಮಲ್ ಗಿರೀಶ್, ಸಿದ್ದೇಶ್ವರ್, ಗುರು, ಜರೀಕಟ್ಟೆ ಚಂದ್ರಣ್ಣ, ಪ್ರಕಾಶ್ ಐಗೂರು ಇತರರು ಇದ್ದರು.- - -
ಕೋಟ್ ಗಣಪತಿ ಶೋಭಾಯಾತ್ರೆಯಲ್ಲಿ ಯಾವುದೇ ರಾಜಕಾರಣಿಗಳು, ಚಿತ್ರನಟರು, ವೈಯಕ್ತಿಕ ಬಾವುಟ ಹಾಗೂ ಬ್ಯಾನರ್ ಪ್ರದರ್ಶನ ಮಾಡದಂತೆ ಸೂಚನೆ ನೀಡಲಾಗಿದೆ. ಆಟೋ ಚಾಲಕರು, ಬಸ್ ಚಾಲಕರು, ಲಾರಿ ಚಾಲಕರು, ಅಂಗಡಿ ಮುಂಗಟ್ಟುಗಳವರು ಸ್ವಪ್ರೇರಣೆಯಿಂದ ಬಂದ್ ಮಾಡಿ ಶೋಭಾಯಾತ್ರೆ ಯಶಸ್ವಿಯಾಗಿ ನಡೆಯಲು ಸಹಕಾರ ನೀಡಬೇಕು- ಜೊಳ್ಳಿ ಗುರು, ಟ್ರಸ್ಟ್ ಅಧ್ಯಕ್ಷ
- - - -3ಕೆಡಿವಿಜಿ32ಃ:ದಾವಣಗೆರೆಯಲ್ಲಿ ಸಾರ್ವಜನಿಕ ಹಿಂದೂ ಮಹಾ ಗಣಪತಿ ಟ್ರಸ್ಟ್‌ನಿಂದ ಪ್ರತಿಷ್ಠಾಪಿಸಿರುವ ಗಣಪತಿ ವಿಸರ್ಜನೆ ಕಾರ್ಯಕ್ರಮ ಕುರಿತು ಜೊಳ್ಳಿ ಗುರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.