ರಟ್ಟೀಹಳ್ಳಿ: ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಹಿಂದೂ ಮಹಾಸಭಾ ಗಣಪತಿಯನ್ನು ಅತ್ಯಂತ ಸಡಗರ ಸಂಭ್ರಮದಿಂದ, ವಿವಿಧ ಕಲಾ ತಂಡಗಳು ಹಾಗೂ ಡಿಜೆಯೊಂದಿಗೆ ಬೃಹತ್ ಶೋಭಾಯಾತ್ರೆಯ ಮೂಲಕ ಶಾಂತಿಯುತವಾಗಿ ಗುರುವಾರ ರಾತ್ರಿ ಕುಮದ್ವತಿ ನದಿಯಲ್ಲಿ ವಿಸರ್ಜನೆ ಮಾಡಲಾಯಿತು.
ಈ ವೇಳೆ ಮಾತನಾಡಿದ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ, ಬ್ರಿಟಿಷರ ಧಾಸ್ಯದಿಂದ ಬಿಡಿಸಲು ಬಾಲಗಂಗಾಧರ ತಿಲಕರು ಮನೆಗಳಿಗೆ ಸೀಮಿತವಾಗಿದ್ದ ಗಣೋಶೋತ್ಸವವನ್ನು ಬೀದಿಗಳಲ್ಲಿ ಇಡುವ ಮೂಲಕ ಯುವ ಸಮುದಾಯ ಒಗ್ಗಟ್ಟಾಗಿ ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಒಗ್ಗೂಡಿಸು ಸಲುವಾಗಿ ಆರಂಭವಾದ ಗಣೇಶೋತ್ಸವ ಇಂದು 133 ವರ್ಷಗಳು ಗತಿಸಿವೆ. ಇಂದು ನಮ್ಮ ಹಬ್ಬ ಹರಿದಿನಗಳನ್ನು ಆಚರಿಸಬೇಕಾದರೆ ನೂರೆಂಟು ಕಟ್ಟು ಪಾಡುಗಳನ್ನು ಸರಕಾರ ನಮ್ಮ ಮೇಲೆ ಹೇರುತ್ತಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರ್ಕಾರ ಧರ್ಮ ಧರ್ಮಗಳ ಮಧ್ಯ ವಿಷಬೀಜ ಬಿತ್ತಿ ತಮ್ಮ ಓಟಿನ ಚಟಕ್ಕಾಗಿ ದೇಶದ್ರೋಹಿ ಕಸಬ್‌ನನ್ನು ದೇಶ ಪ್ರೇಮಿ ಎಂದು ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್ ನಾಯಕರ ದೇಶಪ್ರೇಮವನ್ನು ದೇಶದ ಜನ ಗಮನಿಸುತ್ತಿದ್ದಾರೆ. ಆದ್ದರಿಂದ ಇಂಥ ಕೀಳು ರಾಜಕಾರಣ ಬಿಟ್ಟು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಅವರ ಹಬ್ಬ ಹರಿದಿನಗಳನ್ನು ಆಚರಿಸುವ ಸ್ವಾತಂತ್ರ್ಯವಿದ್ದು ಅದಕ್ಕೆ ಕಡಿವಾಣ ಹಾಕದೆ ಎಲ್ಲ ಜಾತಿ ಧರ್ಮಗಳು ಒಗ್ಗಟ್ಟಾಗಿ ಹಬ್ಬಗಳನ್ನು ಆಚರಿಸಲು ಮುಕ್ತಗೊಳಿಸಬೇಕು ಎಂದರು.ಮಾಜಿ ಕೃಷಿ ಸಚಿವ ಬಿ.ಸಿ. ಪಾಟೀಲ್, ರಟ್ಟೀಹಳ್ಳಿ ಕಬ್ಬಿಣಕಂತಿ ಮಠದ ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಆರ್ಶೀವಚನ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೊಡಿ, ಹೆಚ್ಚುವರಿ ಎಸ್.ಪಿ. ಶಿರಕೋಳ, ರಾಣಿಬೆನ್ನೂರ ಡಿವೈಎಸ್ಪಿ ಜಿ. ಲೋಕೇಶಕುಮಾರ, ಸಿಪಿಐ ಮಂಜುನಾಥ ಪಂಡಿತ್, ರಟ್ಟೀಹಳ್ಳಿ ಠಾಣೆ ಪಿಎಸ್‌ಐ ಚಂದ್ರಶೇಖರ ನಾಯ್ಕ ಸೇರಿದಂತೆ ನೂರಾರು ಪೊಲೀಸರು ಬಂದೋಬಸ್ತ ಏರ್ಪಡಿಸಿದ್ದರು.