ಹಾವೇರಿ: ಮಹಾತ್ಮಾ ಗಾಂಧೀಜಿ ಹಾಗೂ ಲಾಲ್‌ಬಹದ್ದೂರ್ ಶಾಸ್ತ್ರೀಜಿ ಈ ಇಬ್ಬರು ಮಹಾನ್ ವ್ಯಕ್ತಿಗಳ ಆಚಾರ-ವಿಚಾರ, ಜೀವನ ಚರಿತ್ರೆ ಇಂದಿಗೂ ಪ್ರಸ್ತುತ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹೇಳಿದರು.
ಗಾಂಧೀಜಿ ಅವರ ಜೀವನ ಹಾಗೂ ಬದುಕಿನ ಆದರ್ಶದಿಂದ ರಾಷ್ಟ್ರಪಿತ ಎಂದು ಕರೆಸಿಕೊಂಡರು. ತತ್ವರಹಿತ ರಾಜಕಾರಣ, ದುಡಿಮೆಯಿಲ್ಲದ ಸಂಪತ್ತು, ಆತ್ಮಸಾಕ್ಷಿಯಿಲ್ಲದ ಸಂತೋಷ, ಚಾರಿತ್ರ‍್ಯವಿಲ್ಲದ ಶಿಕ್ಷಣ, ನೀತಿಯಿಲ್ಲದ ವ್ಯಾಪಾರ, ಮಾನವೀಯತೆಯಿಲ್ಲದ ವಿಜ್ಞಾನ ಹಾಗೂ ತ್ಯಾಗವಿಲ್ಲದ ಪೂಜೆ ಈ ಏಳು ಪಾಪಗಳನ್ನು ತೊಡೆದುಹಾಕಬೇಕು ಎಂದು ಗಾಂಧೀಜಿ ಅವರು ಹೇಳುತ್ತಿದ್ದರು. ರಾಜಕೀಯ ಸ್ವಾತಂತ್ರ‍್ಯದ ಜೊತೆಗೆ ಸ್ವತಂತ್ರ ಸಮಾಜ ನಿರ್ಮಾಣ ಅವರ ಆಶಯವಾಗಿತ್ತು ಎಂದರು.
ಗಾಂಧೀಜಿ ಅವರು ಅಹಿಂಸಾ ಹಾಗೂ ಸತ್ಯಾಗ್ರಹದಿಂದ ದೇಶಕ್ಕೆ ಸ್ವಾತಂತ್ರ‍್ಯ ತಂದುಕೊಟ್ಟವರು. ಗಾಂಧೀಜಿ ಅವರು “ನನ್ನ ಜೀವನವೇ ನನ್ನ ಸಂದೇಶ” ಎಂದು ಹೇಳುತ್ತಿದ್ದರು. ಸತ್ಯ ಹಾಗೂ ಅಹಿಂಸಾ ಮಾರ್ಗದಿಂದ ಸ್ವಾತಂತ್ರ್ಯ ಪಡೆದ ಹಿನ್ನೆಲೆಯಲ್ಲಿ ವಿಶ್ವ ಭಾರತಕ್ಕೆ ಬಹಳ ಗೌರವ ನೀಡುತ್ತದೆ. ಗಾಂಧೀಜಿ ಅವರು ಸ್ವಚ್ಛತೆಗೆ ಹಾಗೂ ಸ್ವದೇಶಿ ಬಟ್ಟೆಗೆ ಬಹಳ ಆದ್ಯತೆ ನೀಡಿದ್ದರು. ಸ್ವಾವಲಂಬಿ ರಾಷ್ಟ್ರ ಮಾಡಬೇಕು ಎಂಬುದು ಅವರ ಆಶಯವಾಗಿತ್ತು. ಗಾಂಧೀಜಿ ಅವರು ರಾಮರಾಜ್ಯದ ಕನಸು ಕಂಡಿದ್ದರು. ಈ ನಿಟ್ಟಿನಲ್ಲಿ ಇಂದು ಆಡಳಿತವನ್ನು ಗ್ರಾಮ ಮಟ್ಟದಲ್ಲಿ ತೆಗೆದುಕೊಂಡು ಹೋಗಲಾಗಿದೆ ಎಂದರು.ಲಾಲ್‌ಬಹದ್ದೂರ ಶಾಸ್ತ್ರಿ ಅವರು ದೇಶ ಕಂಡ ಸರಳ ಪ್ರಧಾನ ಮಂತ್ರಿಗಳಾಗಿದ್ದರು. “ಜೈ ಜವಾನ್ ಜೈ ಕಿಸಾನ್” ಎಂಬ ಘೋಷವಾಕ್ಯದೊಂದಿಗೆ ರೈತರನ್ನು ಹಾಗೂ ಯೋಧರನ್ನು ಹುರಿದುಂಬಿಸಿದವರು. ಈ ಇಬ್ಬರು ನಾಯಕರ ಆದರ್ಶ ಮಾರ್ಗಗಳಲ್ಲಿ ಎಲ್ಲರೂ ನಡಿಯೋಣ. ಲಾಲಬಹದ್ದೂರ ಶಾಸ್ತ್ರಿಜಿ ಅವರು ಸರಳ ಸಜ್ಜನಿಕೆ ಅಪರೂಪದ ವ್ಯಕ್ತಿಗಳಾಗಿದ್ದರು. ಇಬ್ಬರು ಮಹಾನ್ ನಾಯಕರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಮತ್ತು ರಾಷ್ಟ್ರಭಕ್ತಿ ಹೊಂದಬೇಕು ಎಂದು ಹೇಳಿದರು.
ಲಾಲ್‌ಬಹದ್ದೂರ ಶಾಸ್ತ್ರಿ ಅವರು ಸರಳ, ಪ್ರಾಮಾಣಿಕ ನಾಯಕ. ಗಾಂಧೀಜಿ ಹಾಗೂ ಶಾಸ್ತ್ರಿಜಿ ಅದಮ್ಯ ಚೇತನಗಳು ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಡೆದರೆ ಅವರಿಗೆ ನಿಜವಾದ ಗೌರವ ಸಲ್ಲಿಸಿದಂತೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ, ಜಿಪಂ ಸಿಇಒ ದಲ್ಜೀತಕುಮಾರ, ಅಪರ ಜಿಲ್ಲಾಧಿಕಾರಿ ಡಾ. ನಾಗರಾಜ್ ಎಲ್, ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಳೆ, ಅಧಿಕಾರಿಗಳಾದ ಚಂದ್ರಪ್ಪ, ಮೋಹನ ದಂಡಿನ, ಎನ್.ಎನ್.ಪಾಟೀಲ, ಅಮೂಲ್ಯ ಬೊಮ್ಮಣ್ಣನವರ, ರೇವತಿ ಹೊಸಮಠ, ಎಚ್.ಕಾಂತರಾಜು, ವೀರಯ್ಯಸ್ವಾಮಿ ಹಿರೇಮಠ, ಲತಾ ಬಿ.ಎಚ್, ಮಲ್ಲೇಶ ಕರಿಗಾರ, ಉಡಚಪ್ಪ ಮಾಳಗಿ, ಬಸವರಾಜ ಹೆಡಿಗ್ಗೊಂಡ ಇತರರು ಉಪಸ್ಥಿತರಿದ್ದರು. ಶಿಕ್ಷಕ ನಾಗರಾಜ ನಡುವಿನಮಠ ನಿರೂಪಿಸಿದರು.
ಬಹುಮಾನ ವಿತರಣೆ:ಸಮಾರಂಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯೋಜಿಸಿದ ಜಿಲ್ಲಾ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಾದ ಪ್ರೌಢಶಾಲಾ ವಿಭಾಗದಿಂದ ಗಣೇಶ ಬಂಕಾಪುರ, ಬಿಬಿಹಾಜರಾ ಗರೀಸಾಬವರ, ಶಾಫಿಯಾ ಮುಲ್ಲಾ, ಪದವಿ ಪೂರ್ವ ವಿಭಾಗದಿಂದ ರಮ್ಯಾ ರಾಕೇರ, ಶಿಲ್ಪಾ ಚಂದ್ರಾಪಟ್ಟಣ, ಅರ್ಚನಾ ಹಟ್ಟಿ, ಪದವಿ ವಿಭಾಗದಿಂದ ರೇಖಾ ದೊಡ್ಡಕುರುಬರ, ಬಿಂದು ನೀಲನಗೌಡ್ರ ಹಾಗೂ ಸುಫೀಯಾ ಹಳ್ಳಿ ಇವರುಗಳಿಗೆ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನದ ಪ್ರಮಾಣಪತ್ರ ವಿತರಣೆ ಮಾಡಲಾಯಿತು.