ಇಂದು ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ

KannadaprabhaNewsNetwork |  
Published : Sep 25, 2026, 01:30 AM IST
ಪೋಟೋ: 25ಎಸ್‌ಎಂಜಿಕೆಪಿ05ಶಿವಮೊಗ್ಗ ಅಮೀರ್ ಅಹಮ್ಮದ್ ವೃತ್ತದಿಂದ ಸಿಂಹಾರೂಢ ಭವಾನಿಯು ಛತ್ರಪತಿ ಶಿವಾಜಿಗ ಖಡ್ಗ ನೀಡುವ ದೃಶ್ಯದ ಕಲಾಕೃತಿ ಎಲ್ಲರನ್ನು ಆಕರ್ಷಿಸುತ್ತಿದೆ. | Kannada Prabha

ಸಾರಾಂಶ

ಸದಾ ಹಸಿರಿನಿಂದ ಕಂಗೊಳಿಸುತ್ತಿದ್ದ ಶಿವಮೊಗ್ಗ ಈಗ ಸಂಪೂರ್ಣ ಕೇಸರಿಮಯವಾಗಿದೆ. ಶುಕ್ರವಾರ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ಹಿನ್ನೆಲೆ ನಗರದ ಪ್ರಮುಖ ರಸ್ತೆಗಳು ಕೇಸರಿಮಯಗೊಂಡಿವೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಸದಾ ಹಸಿರಿನಿಂದ ಕಂಗೊಳಿಸುತ್ತಿದ್ದ ಶಿವಮೊಗ್ಗ ಈಗ ಸಂಪೂರ್ಣ ಕೇಸರಿಮಯವಾಗಿದೆ. ಶುಕ್ರವಾರ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ಹಿನ್ನೆಲೆ ನಗರದ ಪ್ರಮುಖ ರಸ್ತೆಗಳು ಕೇಸರಿಮಯಗೊಂಡಿವೆ.

ಗಾಂಧಿ ಬಜಾರ್‌ನ ಮುಖ್ಯದ್ವಾರದಲ್ಲಿ ನಿರ್ಮಾಣ ಮಾಡಲಾಗಿರುವ ಪಂಚಮುಖಿ ಆಂಜನೇಯ ಕಲಾಕೃತಿಯಂತೂ ಕಣ್ಣಿಗೆ ಕಟ್ಟುವಂತೆ ರಾರಾಜಿಸುತ್ತಿದೆ. ಅಮೀರ್ ಅಹಮ್ಮದ್ ವೃತ್ತದಿಂದ ಸಿಂಹಾರೂಢ ಭವಾನಿಯು ಛತ್ರಪತಿ ಶಿವಾಜಿಗೆ ಖಡ್ಗ ನೀಡುವ ದೃಶ್ಯದ ಕಲಾಕೃತಿ ಎಲ್ಲರನ್ನು ಆಕರ್ಷಿಸುತ್ತಿದೆ. ಬಿ.ಎಚ್‌.ರಸ್ತೆಯಲ್ಲಿ ಬೃಹತ್‌ ಮಹಾದ್ವಾರದ ಮೇಲೆ ಶ್ರೀ ಬಲಭದ್ರ ಸ್ವಾಮಿ ರಥ, ದೇವಿ ಸುಭದ್ರಾ ರಥ ಮತ್ತು ಶ್ರೀ ಜಗನ್ನಾಥ ಸ್ವಾಮಿ ರಥದ ಪ್ರತಿಕೃತಿಗಳು ನೋಡುಗರ ಗಮನ ಸೆಳೆಯುತ್ತಿದೆ. ಇನ್ನು ಸಾಗರ ರಸ್ತೆಯ ಗಾಡಿಕೊಪ್ಪದಲ್ಲಿ ಗೆಳೆಯರ ಬಳಗದಿಂದ ನಿರ್ಮಿಸಿರುವ ಸಮುದ್ರ ಮಂಥನ ದೃಶ್ಯದ ಕಲಾಕೃತಿಗಳು ತಲೆಯೆತ್ತಿವೆ. ಇನ್ನೂ ಶಿವಮೊಗ್ಗ ಪೊಲೀಸ್‌ ಇಲಾಖೆಯೂ ಎಲ್ಲ ಭದ್ರತಾ ಕ್ರಮಗಳನ್ನು ತೆಗೆದುಕೊಂಡಿದೆ.

ಎಸ್‌ಪಿಎಂ ರಸ್ತೆ, ರಾಮಣ್ಣ ಶ್ರೇಷ್ಠಿ ಪಾರ್ಕ್, ಗಾಂಧಿಬಜಾರ್, ಶಿವಪ್ಪ ನಾಯಕ ವೃತ್ತ, ಅಮೀರ್ ಅಹಮ್ಮದ್ ವೃತ್ತ, ಬಿ.ಎಚ್.ರಸ್ತೆ, ಅಶೋಕ ವೃತ್ತ, ನೆಹರೂ ರಸ್ತೆ, ಗೋಪಿವೃತ್ತ, ದುರ್ಗಿಗುಡಿ, ಮಹಾವೀರ ವೃತ್ತ, ಬಾಲರಾಜ್ ಅರಸು ರಸ್ತೆ ಸೇರಿದಂತೆ ಪ್ರಮುಖ ವೃತ್ತ ಹಾಗೂ ರಸ್ತೆಗಳಲ್ಲಿ ಕೇಸರಿ ಬಾವುಟಗಳು ರಾರಾಜಿಸುತ್ತಿವೆ. ಪ್ರಮುಖ ವೃತ್ತಗಳನ್ನು ಕೇಸರಿ ಧ್ವಜಗಳಿಂದ ಅಲಂಕರಿಸಲಾಗಿದೆ. ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಸಾಗುವ ಮಾರ್ಗದುದ್ದಕ್ಕೂ ತಳಿರು ತೋರಣಗಳು ಕೇಸರಿ ಬಾವುಟಗಳನ್ನು ಕಟ್ಟಲಾಗಿದೆ.

ಪಂಚಮುಖಿ ಆಂಜನೇಯನ ಕಲಾಕೃತಿ ನೋಡುಗರನ್ನು ಹುಬ್ಬೇರಿಸುವಂತಿದೆ. ಈ ವಿಗ್ರಹವನ್ನು ನೋಡಲು ಜನಸ್ತೋಮವೇ ತಂಡೋಪತಂಡವಾಗಿ ಬರುತ್ತಿದ್ದು, ಜನರು ಸೆಲ್ಪಿ ತೆಗೆದುಕೊಳ್ಳುತ್ತಿದ್ದಾರೆ.

ಓತಿಘಟ್ಟದಲ್ಲಿರುವ ಜೀವನ್ ಕಲಾ ಸನ್ನಿಧಿಯಲ್ಲಿ ಕಲಾವಿದ ಜೀವನ್ ಮತ್ತು ಅವರ ತಂಡ ಈ ಬಾರಿಯ ನರಸಿಂಹಸ್ವಾಮಿಯ ಉಗ್ರಾವತಾರದ ಪ್ರತಿಮೆ ನಿರ್ಮಿಸಿದ್ದಾರೆ. ಒಂದು ತಿಂಗಳು 20 ಕಲಾವಿದರು ಇದಕ್ಕಾಗಿ ಕೆಲಸ ಮಾಡಿದ್ದಾರೆ.

ಇಂದು ರಾಜಬೀದಿ ಉತ್ಸವ: ಎಸ್. ಎನ್. ಚನ್ನಬಸಪ್ಪ

ಶಿವಮೊಗ್ಗ: ನಗರದ ಕೋಟೆ ಭೀಮೇಶ್ವರ ದೇವಾಲಯದಲ್ಲಿ ಪ್ರತಿಷ್ಠಾಪಿಸಿರುವ ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವ ಸೆ.25ರಂದು ನಡೆಯಲಿದೆ. ಉತ್ಸವದ ಹಿನ್ನೆಲೆಯಲ್ಲಿ ಇಡೀ ನಗರ ಅದ್ಧೂರಿಯಾಗಿ ಸಿಂಗಾರಗೊಂಡಿದ್ದು, ಪ್ರಮುಖ ರಸ್ತೆಗಳು ಹಾಗೂ ವೃತ್ತಗಳು ಕಲಾಕೃತಿಗಳಿಂದ ಕಂಗೊಳಿಸುತ್ತಿವೆ ಎಂದು ಶಾಸಕ ಎಸ್. ಎನ್. ಚನ್ನಬಸಪ್ಪ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹಿಂದೂ ಕೇಸರಿ ಅಲಂಕಾರ ಸಮಿತಿಯಿಂದ ಗಣಪತಿ ಸಾಗುವ ಮಾರ್ಗಗಳಲ್ಲಿ ಮಾತ್ರವಲ್ಲದೆ ನಗರದ ಪ್ರಮುಖ ವೃತ್ತಗಳು ಹಾಗೂ ರಸ್ತೆಗಳಲ್ಲಿ ವಿವಿಧ ಕಲಾಕೃತಿಗಳನ್ನು ನಿರ್ಮಿಸಲಾಗಿದೆ. ಕೇಸರಿ ಬಂಟಿಂಗ್‌ಗಳಿಂದ ನಗರವನ್ನು ಅಲಂಕರಿಸಲಾಗಿದ್ದು, ಶಿವಮೊಗ್ಗ ಕೇಸರಿಮಯವಾಗಿ ಕಂಗೊಳಿಸುತ್ತಿದೆ ಎಂದರು.

ರಾಜಬೀದಿ ಉತ್ಸವಕ್ಕೆ ಶಿವಮೊಗ್ಗ ಮಾತ್ರವಲ್ಲದೆ ವಿವಿಧೆಡೆಯಿಂದ ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸುವ ನಿರೀಕ್ಷೆಯಿದೆ. ಸಾರ್ವಜನಿಕರಿಗೆ ತಿಂಡಿ, ಪಾನೀಯ, ಪ್ರಸಾದ, ನೀರು ಹಾಗೂ ಮಜ್ಜಿಗೆ ವಿತರಿಸಲು ವಿವಿಧ ಸಂಘ-ಸಂಸ್ಥೆಗಳು ಮತ್ತು ಯುವಕ ಸಂಘಗಳು ಸಿದ್ಧತೆ ಮಾಡಿಕೊಂಡಿವೆ ಎಂದರು.

ಸೆ.25ರಂದು ಬೆಳಗ್ಗೆ 10 ರಿಂದ 10.30ರೊಳಗೆ ಉತ್ಸವದ ಗಣಪತಿ ರಾಜಬೀದಿ ಮೆರವಣಿಗೆ ಆರಂಭವಾಗಲಿದೆ. ಗಾಡಿಕೊಪ್ಪ ಸೇರಿದಂತೆ ಗಾಂಧಿ ಬಜಾರ್, ಅಕ್ಕಮಹಾದೇವಿ ವೃತ್ತ ವಿವಿಧೆಡೆ ಸ್ವಾಗತ ಕಮಾನು ಹಾಗೂ ವಿಶೇಷ ಅಲಂಕಾರ ಮಾಡಲಾಗಿದೆ. ಗಾಂಧಿ ಬಜಾರ್‌ನಲ್ಲಿ ಕಲಾವಿದ ಜೀವನ್ ಅವರ ನೇತೃತ್ವದಲ್ಲಿ ಆಂಜನೇಯನ ಬೃಹತ್ ಕಲಾಕೃತಿ ನಿರ್ಮಿಸಲಾಗಿದೆ ಎಂದರು.

ಹಿಂದೂ ಸಂಘಟನಾ ಮಹಾಮಂಡಳಿಯ ಗಣೇಶೋತ್ಸವ 82ನೇ ವರ್ಷಕ್ಕೆ ಕಾಲಿಟ್ಟಿದ್ದು, ಹಲವು ವರ್ಷಗಳಿಂದ ವಿವಿಧ ಸವಾಲುಗಳ ನಡುವೆಯೂ ಉತ್ಸವವನ್ನು ಮುಂದುವರಿಸಿಕೊಂಡು ಬರಲಾಗಿದೆ. ಲೋಕಮಾನ್ಯ ತಿಲಕರ ಸಾರ್ವಜನಿಕ ಗಣೇಶೋತ್ಸವದ ಆಶಯ ಹಾಗೂ ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಗಣೇಶೋತ್ಸವ ವಹಿಸಿದ್ದ ಪಾತ್ರವನ್ನು ಸ್ಮರಿಸಲಾಗುತ್ತಿದೆ ಎಂದು ಹೇಳಿದರು.

ಹಿಂದೂ ಸಂಘಟನಾ ಮಹಾಮಂಡಳಿ ಅಧ್ಯಕ್ಷ ಶ್ರೀಧರ್ ರಾವ್, ಕಾರ್ಯದರ್ಶಿ ಎ.ಎನ್. ಸತ್ಯನಾರಾಯಣ, ಸಂಚಾಲಕ ಹಾಗೂ ಖಜಾಂಚಿ ದತ್ತಾತ್ರೇಯ, ನಿರ್ದೇಶಕರಾದ ಹರಿಗೆ ಗೋಪಾಲ್ ಸ್ವಾಮಿ, ನಿರಂಜನ್, ರಾಜಶೇಖರ್ ಅಲಸೆ , ಚೇತನ್, ಚಂದ್ರಶೇಖರ್ ಇದ್ದರು.

ವಂದೇ ಮಾತರಂ ಹೆಸರಿನ ಸ್ವಾಗತ ಕಮಾನು ನಿರ್ಮಾಣ

ಶಿವಪ್ಪನಾಯಕ ವೃತ್ತದ ಬಳಿ ಛತ್ರಪತಿ ಶಿವಾಜಿ ಮಹಾರಾಜರ ಪರಿಕಲ್ಪನೆಯ ಅಲಂಕಾರ ಮಾಡಲಾಗಿದ್ದು, ‘ವಂದೇ ಮಾತರಂ’ ಹೆಸರಿನ ಸ್ವಾಗತ ಕಮಾನು ನಿರ್ಮಿಸಲಾಗಿದೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ತಿಳಿಸಿದರು. ರಾಜಬೀದಿ ಉತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುವ ಹಿನ್ನೆಲೆಯಲ್ಲಿ ಸಂಚಾರ ನಿಯಂತ್ರಣ ಹಾಗೂ ಭದ್ರತೆಗೆ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಉತ್ಸವವು ಶಾಂತಿಯುತವಾಗಿ ನಡೆಯಲು ನಾಗರಿಕರು, ವಿವಿಧ ಸಂಘ-ಸಂಸ್ಥೆಗಳು ಹಾಗೂ ಎಲ್ಲ ಸಮುದಾಯಗಳ ಜನರು ಸಹಕರಿಸಬೇಕು ಎಂದು ಮನವಿ ಮಾಡಿದರು.

3000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ

ಶಿವಮೊಗ್ಗ: ನಗರದ ಪ್ರಸಿದ್ಧ ಹಿಂದೂ ಮಹಾಸಭಾ ಗಣಪತಿಯ ವಿಸರ್ಜನಾ ಪೂರ್ವ ಮೆರವಣಿಗೆ ಸೆ.25ರಂದು ನಡೆಯಲಿದ್ದು, ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆಯಿಂದ ಎಲ್ಲ ರೀತಿಯ ಪೂರ್ವಸಿದ್ಧತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಎಸ್ಪಿ ಬಿ.ನಿಖಿಲ್ ತಿಳಿಸಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸೆ.25ರಂದು ಬೆಳಗ್ಗೆ 10.30ಕ್ಕೆ ನಗರದ ಭೀಮೇಶ್ವರ ದೇವಸ್ಥಾನದಿಂದ ಮೆರವಣಿಗೆ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ ಎಂದರು.

ವಿಸರ್ಜನಾ ಮೆರವಣಿಗೆಯ ಹಿನ್ನೆಲೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಭದ್ರತೆಗಾಗಿ 5 ಜನ ಎಸ್ಪಿ, 22 ಜನ ಡಿಎಸ್‌ಪಿ, 84 ಜನ ಸಿಪಿಐ, 289 ಜನ ಪಿಎಸ್‌ಐ, 108 ಎಎಸ್‌ಐ ಹಾಗೂ ಎಚ್‌ಸಿ, ಪಿಸಿ ಸೇರಿದಂತೆ ಒಟ್ಟು 2,134 ಸಿಬ್ಬಂದಿ ಒಳಗೊಂಡಂತೆ 3000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.

12 ಕೆಎಸ್‌ಆರ್‌ಪಿ, 10 ಡಿಎಆರ್, 2 ಕ್ಯೂಆರ್‌ಟಿ, 1 ಡಿ-ಸ್ವಾಟ್, 2 ಆರ್‌ಎಎಫ್‌, 1 ಎಸ್‌ಎಎ- ತುಕಡಿ, ಮುಂಜಾಗ್ರತಾ ಕ್ರಮವಾಗಿ 7 ಅಗ್ನಿಶಾಮಕ ವಾಹನಗಳು, 4 ಆಂಬ್ಯುಲೆನ್ಸ್‌ಗಳು, 3500 ವಿಡಿಯೋ ಹಾಗೂ ಸಿಸಿಟಿವಿ ಕ್ಯಾಮೆರಾಗಳು ಮತ್ತು 12 ಡ್ರೋನ್ ಕ್ಯಾಮೆರಾಗಳ ಮೂಲಕ ಕಣ್ಗಾವಲು ಇಡಲಾಗಿದೆ. ಶಾಂತಿ-ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಕಳೆದ 10 ದಿನಗಳಲ್ಲಿ 2 ಬಾರಿ ರೌಡಿ ಪೆರೇಡ್ ನಡೆಸಿ, 20 ರೌಡಿ ಆಸಾಮಿಗಳನ್ನು ಜೈಲಿಗೆ ಕಳುಹಿಸಲಾಗಿದೆ ಹಾಗೂ 32 ಜನರನ್ನು ಗಡಿಪಾರು ಮಾಡಲಾಗಿದೆ ಎಂದರು.

ಶಿವಮೊಗ್ಗ: ನಗರದಲ್ಲಿ ಸೆ.25ರಂದು ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆ ಕಾರಣ ಸಂಚಾರ ವ್ಯವಸ್ಥೆ ಸುಗಮಗೊಳಿಸುವ ಸಲುವಾಗಿ ವಾಹನಗಳ ಸಂಚಾರ ನಿಷೇಧ, ನಿಲುಗಡೆ ಹಾಗೂ ಮಾರ್ಗ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ತಾತ್ಕಾಲಿಕ ಅಧಿಸೂಚನೆ ಹೊರಡಿಸಿದ್ದಾರೆ. ಅಂದು ಬೆಳಗ್ಗೆ 6 ರಿಂದ ರಾತ್ರಿ 12 ಗಂಟೆವರೆಗೆ ನಿಯಮ ಜಾರಿಯಲ್ಲಿರಲಿದೆ. ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆಯು ಭೀಮೇಶ್ವರ ದೇವಸ್ಥಾನದಿಂದ ಆರಂಭವಾಗಿ ಎಸ್‌ಪಿಎಂ ಮುಖ್ಯ ರಸ್ತೆ, ರಾಮಣ್ಣ ಶ್ರೇಷ್ಠಿ ಪಾರ್ಕ್, ಗಾಂಧಿ ಬಜಾರ್ ಮುಖ್ಯ ರಸ್ತೆ, ಎಸ್‌ಎನ್ ಸರ್ಕಲ್, ಎ.ಎ.ಸರ್ಕಲ್, ನೆಹರು ರಸ್ತೆ, ಗೋಪಿ ಸರ್ಕಲ್, ದುರ್ಗಿಗುಡಿ ಮಾರ್ಗವಾಗಿ ಮಹಾವೀರ ಸರ್ಕಲ್, ಡಿವಿಎಸ್ ಸರ್ಕಲ್, ಕಾನ್ವೆಂಟ್ ರಸ್ತೆ, ಕೋಟೆ ರಸ್ತೆ ಮಾರ್ಗವಾಗಿ ಭೀಮೇಶ್ವರ ದೇವಸ್ಥಾನದ ಹತ್ತಿರ ತುಂಗಾ ನದಿಯಲ್ಲಿ ವಿಸರ್ಜನೆ ಮಾಡಲಾಗುವುದು. ಮೆರವಣಿಗೆ ಮಾರ್ಗದಲ್ಲಿ ಮತ್ತು ಮಾರ್ಗದ ಸುತ್ತಮುತ್ತ 100 ಮೀಟರ್ ಅಂತರದಲ್ಲಿ ಎಲ್ಲಾ ವಾಹನಗಳ ಸಂಚಾರ ಹಾಗೂ ನಿಲುಗಡೆಯನ್ನು ನಿಷೇಧಿಸಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಜಾನನ ಶಿಕ್ಷಕರ ಸಹಕಾರ ಸಂಘಕ್ಕೆ ₹9.34 ಲಕ್ಷ ಲಾಭ
ರಾಜ್ಯದ ಕಾಂಗ್ರೆಸ್ ಸಂಪೂರ್ಣ ದಿವಾಳಿ ಅಂಚಿನಲ್ಲಿ: ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್