ಶ್ರೀರಂಗಪಟ್ಟಣ ದಸರಾ ವೈಭವಕ್ಕೆ ಸಜ್ಜು

KannadaprabhaNewsNetwork |  
Published : Sep 25, 2026, 01:30 AM IST
24ಕೆಎಂಎನ್‌ಡಿ-4ಶ್ರೀರಂಗಪಟ್ಟಣದ ಟಿಎಪಿಸಿಎಂಎಸ್ ಕಲ್ಯಾಣ ಮಂಟಪದಲ್ಲಿ ದಸರಾ ಪೂರ್ವಸಿದ್ಧತೆ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಶಾಸಕ ರಮೇಶ್‌ ಬಂಡಿಸಿದ್ದೇಗೌಡ ಮಾತನಾಡಿದರು. | Kannada Prabha

ಸಾರಾಂಶ

ದಸರಾ ಕಾರ್ಯಕ್ರಮಗಳಲ್ಲಿ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಅವಕಾಶ ಕಲ್ಪಿಸಬೇಕು. ಪ್ರತಿ ವರ್ಷ ಸ್ಥಳೀಯ ಪ್ರತಿಭೆಗಳಿಗೆ ವೇದಿಕೆ ದೊರೆಯುವಂತೆ ಕಾರ್ಯಕ್ರಮ ರೂಪಿಸಬೇಕು. ಈ ಬಾರಿ ಎರಡು ದಿನಗಳ ಕಾಲ ಯುವ ಸಂಭ್ರಮ ಆಯೋಜಿಸಲಾಗುತ್ತಿದ್ದು, ಖ್ಯಾತ ನಟ ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಂದ ಉದ್ಘಾಟಿಸಲು ಉದ್ದೇಶಿಸಲಾಗಿದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಶ್ರೀರಂಗಪಟ್ಟಣ ದಸರಾ ಆಚರಣೆಯನ್ನು ಅರ್ಥಪೂರ್ಣವಾಗಿ ಹಾಗೂ ವೈಭವದಿಂದ ನಡೆಸಲು ಅಗತ್ಯವಿರುವ ಎಲ್ಲಾ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳಬೇಕು. ದಸರಾ ಕಾರ್ಯಕ್ರಮಗಳಲ್ಲಿ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಅವಕಾಶ ಕಲ್ಪಿಸುವುದರ ಜೊತೆಗೆ ನಗರದ ಸೌಂದರ್ಯೀಕರಣಕ್ಕೆ ಆದ್ಯತೆ ನೀಡಬೇಕು ಎಂದು ಶಾಸಕ ಎ.ಬಿ.ರಮೇಶ್ ಬಂಡಿಸಿದ್ದೇಗೌಡ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಶ್ರೀರಂಗಪಟ್ಟಣದ ಟಿಎಪಿಸಿಎಂಎಸ್ ಕಲ್ಯಾಣ ಮಂಟಪದಲ್ಲಿ ಕನ್ನಡಪರ ಸಂಘಟನೆಗಳು, ಪ್ರಗತಿಪರರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ದಸರಾ ಪೂರ್ವ ಸಿದ್ಧತೆ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸ್ಥಳೀಯ ಕಲಾವಿದರಿಗೆ ಆದ್ಯತೆ:

ದಸರಾ ಕಾರ್ಯಕ್ರಮಗಳಲ್ಲಿ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಅವಕಾಶ ಕಲ್ಪಿಸಬೇಕು. ಪ್ರತಿ ವರ್ಷ ಸ್ಥಳೀಯ ಪ್ರತಿಭೆಗಳಿಗೆ ವೇದಿಕೆ ದೊರೆಯುವಂತೆ ಕಾರ್ಯಕ್ರಮ ರೂಪಿಸಬೇಕು. ಈ ಬಾರಿ ಎರಡು ದಿನಗಳ ಕಾಲ ಯುವ ಸಂಭ್ರಮ ಆಯೋಜಿಸಲಾಗುತ್ತಿದ್ದು, ಖ್ಯಾತ ನಟ ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಂದ ಉದ್ಘಾಟಿಸಲು ಉದ್ದೇಶಿಸಲಾಗಿದೆ ಎಂದರು.

ಸಂಜೆ 6 ಗಂಟೆಯ ನಂತರ ನಡೆಯುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸ್ಥಳೀಯ ಕಲಾವಿದರು ಸೇರಿದಂತೆ ಎಲ್ಲರಿಗೂ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ಕವಿಗೋಷ್ಠಿ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಆಯೋಜಿಸಲಾಗುವುದು ಎಂದರು.

ನಗರ ಸೌಂದರ್ಯೀಕರಣಕ್ಕೆ ಒತ್ತು:

ದಸರಾ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣ ನಗರದಲ್ಲಿ ಹೆಚ್ಚಿನ ವಿದ್ಯುತ್ ಅಲಂಕಾರ ಕೈಗೊಳ್ಳಬೇಕು. ಮುಜರಾಯಿ ದೇವಾಲಯಗಳು, ಗಂಜಾಂ ಸೇರಿದಂತೆ ಪ್ರಮುಖ ಐತಿಹಾಸಿಕ ಹಾಗೂ ಪ್ರವಾಸಿ ಸ್ಥಳಗಳಲ್ಲಿಯೂ ವಿದ್ಯುತ್ ಅಲಂಕಾರಕ್ಕೆ ಆದ್ಯತೆ ನೀಡಬೇಕು. ನಗರದ ಪ್ರಮುಖ ಪ್ರವೇಶದ್ವಾರಗಳಲ್ಲಿ ಸ್ವಾಗತ ಕಮಾನುಗಳನ್ನು ಅಳವಡಿಸುವುದರ ಜೊತೆಗೆ ಹಳೆಯ ಸ್ವಾಗತ ಫಲಕಗಳನ್ನು ದುರಸ್ತಿ ಮಾಡಬೇಕು ಎಂದರು.

ಕೋಟೆ ಬಾಗಿಲು ಸೇರಿದಂತೆ ಐತಿಹಾಸಿಕ ಕಟ್ಟಡಗಳ ಸೌಂದರ್ಯ ಹೆಚ್ಚಿಸುವ ಹಾಗೂ ಅಗತ್ಯ ದುರಸ್ತಿ ಕಾಮಗಾರಿಗಳನ್ನು ಕೈಗೊಳ್ಳುವ ಕುರಿತು ಪುರಾತತ್ವ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಇಲಾಖೆಯ ಎಂಜಿನಿಯರ್‌ಗಳನ್ನು ಸ್ಥಳಕ್ಕೆ ಕಳುಹಿಸಿ ಕ್ರಮ ಕೈಗೊಳ್ಳುವ ಭರವಸೆ ದೊರೆತಿದೆ ಎಂದರು.

ಐತಿಹಾಸಿಕ ಸ್ಮಾರಕಗಳು ಹಾಗೂ ದೇವಾಲಯಗಳಲ್ಲಿ ವಿದ್ಯುತ್ ಅಲಂಕಾರ ಮಾಡುವ ವೇಳೆ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಬೆಳಕಿನ ವ್ಯವಸ್ಥೆ ಕಲ್ಪಿಸಬೇಕು. ಈ ಬಾರಿ ಶ್ರೀರಂಗಪಟ್ಟಣ ಜೊತೆಗೆ ಗಂಜಾಂ ಪ್ರದೇಶವನ್ನೂ ವಿದ್ಯುತ್ ಅಲಂಕಾರದ ವ್ಯಾಪ್ತಿಗೆ ತರಲಾಗುವುದು ಎಂದರು.

ಹೆರಿಟೇಜ್ ಸ್ಟಾಲ್‌ಗಳು ಹಾಗೂ ಆಹಾರ ಮಳಿಗೆಗಳನ್ನು ಸ್ಥಾಪಿಸುವ ಬೇಡಿಕೆಯನ್ನೂ ಪರಿಗಣಿಸಲಾಗುವುದು. ಸ್ಥಳೀಯ ಉತ್ಪನ್ನಗಳು, ಆಹಾರ ಹಾಗೂ ಕರಕುಶಲ ವಸ್ತುಗಳಿಗೆ ಅವಕಾಶ ಕಲ್ಪಿಸುವ ಮೂಲಕ ದಸರಾ ಕಾರ್ಯಕ್ರಮವನ್ನು ಜನಸ್ನೇಹಿಯಾಗಿಸಲಾಗುವುದು ಎಂದರು.

ಸಭೆಯಲ್ಲಿ ಜಿಲ್ಲಾಧಿಕಾರಿಗಳಾದ ಡಾ.ಕುಮಾರ, ಪಾಂಡವಪುರ ಉಪವಿಭಾಗಾಧಿಕಾರಿ ಶ್ರೀನಿವಾಸ್, ಶ್ರೀರಂಗಪಟ್ಟಣ ತಹಸೀಲ್ದಾರ್ ಚೇತನಾ ಯಾದವ್, ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಜಾನನ ಶಿಕ್ಷಕರ ಸಹಕಾರ ಸಂಘಕ್ಕೆ ₹9.34 ಲಕ್ಷ ಲಾಭ
ರಾಜ್ಯದ ಕಾಂಗ್ರೆಸ್ ಸಂಪೂರ್ಣ ದಿವಾಳಿ ಅಂಚಿನಲ್ಲಿ: ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್