ಯತ್ನಾಳ ಪರ ಹಿಂದು ಸಂಘಟನೆಗಳ ಪ್ರತಿಭಟನೆ

KannadaprabhaNewsNetwork | Published : Apr 2, 2025 1:03 AM

ಸಾರಾಂಶ

ಕನ್ನಡಪ್ರಭ ವಾರ್ತೆ ತಾಳಿಕೋಟೆ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳರನ್ನು ಬಿಜೆಪಿ ಉಚ್ಚಾಟಿಸಿರುವುದನ್ನು ಖಂಡಿಸಿ ಮಿಣಜಗಿ ಗ್ರಾಮದಲ್ಲಿ ಹಿಂದುಪರ ಸಂಘಟನೆಗಳ ಕಾರ್ಯಕರ್ತರು ಬೃಹತ್ ಮಂಗಳವಾರ ಪ್ರತಿಭಟನೆ ನಡೆಸಿದರು. ಈ ವೇಳೆ ಬಿ.ಎಸ್.ಯಡಿಯೂರಪ್ಪ, ವಿಜಯೇಂದ್ರ ಹಾಗೂ ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರ ಭಾವಚಿತ್ರಗಳಿಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ನಡೆಸಿದರು. ಅಲ್ಲದೇ, ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳರನ್ನು ಬಿಜೆಪಿ ಉಚ್ಚಾಟಿಸಿರುವುದನ್ನು ಖಂಡಿಸಿ ಮಿಣಜಗಿ ಗ್ರಾಮದಲ್ಲಿ ಹಿಂದುಪರ ಸಂಘಟನೆಗಳ ಕಾರ್ಯಕರ್ತರು ಬೃಹತ್ ಮಂಗಳವಾರ ಪ್ರತಿಭಟನೆ ನಡೆಸಿದರು. ಈ ವೇಳೆ ಬಿ.ಎಸ್.ಯಡಿಯೂರಪ್ಪ, ವಿಜಯೇಂದ್ರ ಹಾಗೂ ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರ ಭಾವಚಿತ್ರಗಳಿಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ನಡೆಸಿದರು. ಅಲ್ಲದೇ, ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ಹಿನ್ನೆಲೆಯಲ್ಲಿ ಮಿಣಜಗಿ ಗ್ರಾಮದಲ್ಲಿ ಬೆಳಿಗ್ಗೆಯಿಂದಲೇ ಬಂದ್‌ ವಾತಾವರಣ ನಿರ್ಮಾಣವಾಗಿತ್ತು. ವ್ಯಾಪಾರಸ್ಥರು ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತವಾಗಿ ಬಂದ್ ಮಾಡಿ ಪ್ರತಿಭಟನೆಗೆ ಬೆಂಬಲ ಸೂಚಿಸಿದರು. ಬಳಿಕ, ಸುಮಾರು ೬ ಗಂಟೆಗಳ ಕಾಲ ರಾಜ್ಯ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿ ಯತ್ನಾಳರನ್ನು ಬಿಜೆಪಿಗೆ ಗೌರವಯುತವಾಗಿ ಸೇರ್ಪಡೆ ಮಾಡಿಕೊಳ್ಳಬೇಕು. ಹಿಂದುಗಳು ಬಿಜೆಪಿಯಿಂದ ಹಿಂದೆ ಸರಿಯಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.

ಮಿಣಜಗಿ ಗ್ರಾಮದ ದ್ವಾರ ಬಾಗಿಲಿನಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ತಾಳಿಕೋಟೆ ರಸ್ತೆಗೆ ತೆರಳಿ ಮರಳಿ ಸೇವಾಲಾಲ್‌ ವೃತ್ತ ಚನ್ನಮ್ಮ ವೃತ್ತದಲ್ಲಿ ರಸ್ತೆ ತಡೆ ನಡೆಸಿದರು. ಚನ್ನಮ್ಮ ವೃತ್ತದಲ್ಲಿಯೇ ಪ್ರತಿಭಟನಾಕಾರರ ಬಹಿರಂಗ ಸಭೆ ನಡೆಸಲಾಯಿತು.

ಜಿಪಂ ಮಾಜಿ ಅಧ್ಯಕ್ಷ ಪ್ರಭುಗೌಡ ದೇಸಾಯಿ ಮಾತನಾಡಿ, ಅಪ್ಪ ಮಕ್ಕಳು ಕೂಡಿ ಬಿಜೆಪಿ ಪಕ್ಷವನ್ನು ಮೂಲೆಗುಂಪು ಮಾಡಲು ಹೊರಟಿದ್ದಾರೆ. ಅವರ ವಿರುದ್ಧ ದ್ವನಿ ಎತ್ತಿದ್ದಕ್ಕೆ ಯತ್ನಾಳ ಅವರನ್ನು ಉಚ್ಚಾಟನೆ ಮಾಡಿದ್ದು ಸರಿಯಲ್ಲ. ಮಾಜಿ ಶಾಸಕ ನಡಹಳ್ಳಿ ತೊಗಲಿನ ನಾಲಿಗೆ ಇದೆ ಎಂದು ಯತ್ನಾಳ ಅವರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಯತ್ನಾಳ ಕರ್ನಾಟಕದ ಹಿಂದು ಹುಲಿ. ನೀನು ಯಾವ ಲೆಕ್ಕ. ಮುದ್ದೇಬಿಹಾಳದಲ್ಲಿಯೇ ೧ ಲಕ್ಷ ಜನರನ್ನು ಸೇರಿಸಿ ಬೃಹತ್ ಹೋರಾಟ ಮಾಡಿ ತೋರಿಸುತ್ತೇವೆ. ಬೇಕಿದ್ದರೆ ಜನರನ್ನು ಲೆಕ್ಕ ಹಾಕಿಕೊಂಡು ಹೋಗಲಿ ಎಂದು ಗುಡುಗಿದರು. ಉಚ್ಚಾಟನೆಯನ್ನು ಪರಿಶೀಲಿಸಬೇಕು. ಯತ್ನಾಳ ಮತ್ತೆ ಬಿಜೆಪಿಗೆ ಬಂದೇ ಬರ್ತಾರ. ನಾಲಿಗೆ ಹರಿಬಿಟ್ಟವರಿಗೆ ಮುಂದೆ ಮಾರಿಹಬ್ಬ ಕಾದಿದೆ ಎಂದು ಎಚ್ಚರಿಸಿದರು.

ಮುಖಂಡ ಸುರೇಶ ಹಜೇರಿ ಮಾತನಾಡಿ, ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಯತ್ನಾಳ ಹುಲಿ ಅಲ್ಲ, ಇಲಿಯಾಗಿದ್ದಾರೆಂದು ಟೀಕಿಸಿದ್ದಾರೆ. ಯತ್ನಾಳ ಅವರು ಹುಲಿಯೋ ಅಥವಾ ಇಲಿ ಎಂಬುದನ್ನು ತಕ್ಕ ಉತ್ತರ ಮುದ್ದೇಬಿಹಾಳ ಕ್ಷೇತ್ರದ ಜನರು ನೀಡುತ್ತಿದ್ದಾರೆ. ನಡಹಳ್ಳಿ ಬಾಯಿ ಚಪಲಕ್ಕೆ ಮಾತನಾಡುವದನ್ನು ಬಿಡಬೇಕು. ಅವರ ಬಗ್ಗೆ ಮಾತಾಡಿದರೆ ಇತನಿಗೆ ಯತ್ನಾಳ ಅವರ ಅಭಿಮಾನಿಗಳು ಉತ್ತರ ನೀಡಲು ಸಿದ್ದರಿದ್ದೇವೆ ಎಂದು ಎಚ್ಚರಿಕೆ ನೀಡಿದರು.

ಮಡುಸಾಹುಕಾರ ಬಿರಾದಾರ, ವಿರೇಶಗೌಡ ಹಡ್ಲಗೇರಿ, ಮಿಣಜಗಿ ಗ್ರಾಮದ ಮುಖಂಡರು ಯತ್ನಾಳರನ್ನು ಬಿಜೆಪಿಗೆ ಮರು ಸೇರ್ಪಡೆ ಮಾಡಿಕೊಳ್ಳಬೇಕೆಂದು ಒತ್ತಾಯಿಸಿದರು.ಪ್ರತಿಭಟನಾ ನೇತೃತ್ವವನ್ನು ಮಿಣಜಗಿ ಗ್ರಾಮದ ಮುಖಂಡರುಗಳು ವಹಿಸಿದ್ದರು.

Share this article