ಉಪ್ಪಿನಂಗಡಿ: ಬ್ರಿಟಿಷರ ಕಾಲದಿಂದಲೂ ಹಿಂದು ಧರ್ಮದ ಮೇಲೆ ದಾಳಿಗಳು ನಡೆಯುತ್ತಲೇ ಬಂದಿದೆ. ಇತ್ತೀಚಿನ ಕಾಲಘಟ್ಟದಲ್ಲಿ ಬುದ್ಧಿಜೀವಿಗಳು ಅದನ್ನು ಮುಂದುವರಿಸುತ್ತಿದ್ದಾರೆ. ವಿಶಿಷ್ಟ ಕಲ್ಪನೆಯನ್ನು ಹುಟ್ಟುಹಾಕಿ ಸನಾತನ ಹಿಂದೂ ಧರ್ಮವನ್ನು ಅಧಃಪತನಕ್ಕೆ ಕೊಂಡೊಯ್ಯಲು ಹುನ್ನಾರ ನಡೆಯುತ್ತಿದೆ. ಇದಕ್ಕೆಲ್ಲ ಹಿಂದುಗಳು ಒಗ್ಗಟ್ಟಾಗಿ ಹೋರಾಟ ಮಾಡುವ ಅನಿವಾರ್ಯತೆ ಎದುರಾಗಿದೆ ಎಂದು ಸುಬ್ರಹ್ಮಣ್ಯ ನರಸಿಂಹ ಮಠದ ಶ್ರೀ ವಿದ್ಯಾಪ್ರಸನ್ನ ಸ್ವಾಮೀಜಿ ಹೇಳಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಡಾ. ವಿರೇಂದ್ರ ಹೆಗ್ಗಡೆಯವರ ವಿರುದ್ದ ನಡೆಯುವ ಷಡ್ಯಂತ್ರ ಖಂಡಿಸಿ ಸೋಮವಾರ ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವಠಾರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮ ಸಂರಕ್ಷಣಾ ವೇದಿಕೆ ಕಡಬ ತಾಲೂಕು ವತಿಯಿಂದ ನಡೆದ ಜಾಗೃತಿ ಸಮಾವೇಶದಲ್ಲಿ ಅವರು ಆರ್ಶೀವಚನ ನೀಡಿದರು. ಹಿಂದೂಗಳ ನಡುವೆ ಕಂದಕ ನಿರ್ಮಾಣ ಮಾಡಿ ಹಿಂದು ದೇವಾಲಯಗಳನ್ನು ಒಡೆಯುವ ಕಾರ್ಯ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿದೆ. ಬಹಳಷ್ಟು ಪ್ರಸಿದ್ದಿ ಪಡೆದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿನ ಧಾರ್ಮಿಕ ನಂಬಿಕೆಗಳಿಗೆ ಅಪಚಾರವೆಸಗುವ ಕಾರ್ಯ ನಡೆಯುತ್ತಿದ್ದು ನಮ್ಮೊಳಗೆ ಅನುಮಾನ ಉಂಟಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಮಾಜಿ ಸಂಸದ ನಳೀನ್ ಕುಮಾರ್ ಕಟೀಲು ಉದ್ಘಾಟಿಸಿದರು. ಸಾಮಾಜಿಕ ಕಾರ್ಯಕರ್ತೆ ಸಹನಾ ಕುಂದಾರ್ ಉಡುಪಿ ಪ್ರಧಾನ ಭಾಷಣ ಮಾಡಿದರು.ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಕೆಪಿಸಿಸಿ ಸದಸ್ಯ ಜಿ ಕೃಷ್ಣಪ್ಪ, ಕುಕ್ಕೆ ಸುಬ್ರಹ್ಮಣ್ಯ ವ್ಯವಸ್ಥಾಪನ ಸಮಿತಿ ಸದಸ್ಯ ಡಾ.ಬಿ ರಘು ಬೆಳ್ಳಿಪ್ಪಾಡಿ ಮಾತನಾಡಿದರು.
ಜನಜಾಗೃತಿ ವೇದಿಕೆಯ ಕಡಬ ತಾಲೂಕು ಅಧ್ಯಕ್ಷ ಮಹೇಶ್ ಕೆ ಸವಣೂರು, ಇಚ್ಲಂಪಾಡಿ ಬೀಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಮುಖರಾದ ಶುಭಕರ ಹೆಗ್ಡೆ, ಶ್ರೀ ಕ್ಷೇತ್ರ ಧರ್ಮಸ್ಥಳ ಭಜನಾ ಪರಿಷತ್ ಕಡಬ ತಾಲೂಕು ಅಧ್ಯಕ್ಷ ಸುಂದರ ಗೌಡ ಒಗ್ಗು, ರೆಂಜಿಲಾಡಿ ಬೀಡನ ಯಶೋಧರ ಯಾನೆ ತಮ್ಮಯ್ಯ ಬಳ್ಳಾಲ್, ಜ್ಯೋತಿಷಿ ಶ್ರೀಧರ ಗೋರೆ, ಧಾರ್ಮಿಕ ಮುಖಂಡ ಚೆನ್ನಕೇಶವ ಗುತ್ತುಪಾಲು ಮೊದಲಾದವರು ಇದ್ದರು.ಸಭಾ ಕಾರ್ಯಕ್ರಮಕ್ಕೂ ಮುನ್ನ ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದಲ್ಲಿ ತಾಲೂಕಿನ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸೇವೆ ನಡೆಯಿತು.
ಭಜನಾ ಸೇವೆಗೆ ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಚಂದ್ರಶೇಕರ ಕರ್ಕೆರ ಚಾಲನೆ ನೀಡಿದರು. ಧರ್ಮಸ್ಥಳ ಗ್ರಾ.ಪಂ ಮಾಜಿ ಅಧ್ಯಕ್ಷ ಕೇಶವ ಗೌಡ ಬೆಳಾಲ್ ಪ್ರಸ್ತಾವಿಸಿದರು. ಧರ್ಮ ಸಂರಕ್ಷಣಾ ವೇದಿಕೆ ಅಧ್ಯಕ್ಷ ದಿನೇಶ್ ಮೆದು ಸ್ವಾಗತಿಸಿದರು. ಸಂಚಾಲಕ ಗಣೇಶ್ ಕೈಕುರೆ ವಂದಿಸಿದರು. ರಾಕೇಶ್ ರೈ ಕೆಡೆಂಜಿ ನಿರೂಪಿಸಿದರು.