ರಾಮನಗರವನ್ನು "ಬೆಂಗಳೂರು ದಕ್ಷಿಣ "ಎಂದು ಮರುನಾಮಕರಣ ಮಾಡುವ ರಾಜ್ಯ ಸರ್ಕಾರದ ಯೋಚನೆಯನ್ನು ಕೈಬಿಡಬೇಕು ಎಂದು ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ ಮತ್ತು ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯಿಂದ ಅಪರ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ ಅವರಿಗೆ ಮನವಿ ಸಲ್ಲಿಸಲಾಯಿತು
ಹಾಸನ :ರಾಮನಗರವನ್ನು "ಬೆಂಗಳೂರು ದಕ್ಷಿಣ "ಎಂದು ಮರುನಾಮಕರಣ ಮಾಡುವ ರಾಜ್ಯ ಸರ್ಕಾರದ ಯೋಚನೆಯನ್ನು ಕೈಬಿಡಬೇಕು. ಅಕ್ರಮವಾಗಿ ಬೆಂಗಳೂರಿಗೆ ಕಳಪೆ ಗುಣಮಟ್ಟದ ಮಾಂಸ ಸರಬರಾಜು ಮಾಡುವವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಹಾಗೂ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡುವುದನ್ನು ತಡೆಯಲು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ ಮತ್ತು ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯಿಂದ ಬುಧವಾರ ಅಪರ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ ಅವರಿಗೆ ಮನವಿ ಸಲ್ಲಿಸಲಾಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಾಧ್ಯಮದೊಂದಿಗೆ ಹಿಂದೂ ಜನಜಾಗೃತಿ ಸಮಿತಿಯ ಗೋವಿಂದರಾಜು ಮಾತನಾಡಿ, ರಾಜ್ಯ ಸರ್ಕಾರವು ರಾಮನಗರ ಜಿಲ್ಲೆಯನ್ನು ’ಬೆಂಗಳೂರು ದಕ್ಷಿಣ’ ಎಂದು ಮರುನಾಮಕರಣ ಮಾಡಲು ನಿಶ್ಚಯ ಮಾಡಿರುವ ನಿರ್ಧಾರವು ಅತ್ಯಂತ ಖಂಡನೀಯವಾಗಿದೆ.
ಇದು ಶ್ರೀರಾಮನ ಮೇಲಿನ ಕಾಂಗ್ರೆಸ್ ನಾಯಕರ ದ್ವೇಷದ ಪರಮಾವಧಿಯಾಗಿದೆ. ರಾಮಾಯಣದ ಕಾಲದಲ್ಲಿ ಪ್ರಭು ಶ್ರೀರಾಮಚಂದ್ರನು ವನವಾಸದಲ್ಲಿ ರಾಮನಗರದ ಶ್ರೀರಾಮ ದೇವರ ಬೆಟ್ಟದಲ್ಲಿ ಸರಿಸುಮಾರು ಒಂದು ವರ್ಷಗಳ ಕಾಲ ವಾಸವಾಗಿದ್ದಂತಹ ಐತಿಹಾಸಿಕ ಸ್ಥಳವಾಗಿದ್ದು, ಪವಿತ್ರ, ಪಾವನ ಭೂಮಿಯಾಗಿದೆ. ಅಲ್ಲಿ ಸ್ವತಃ ಸುಗ್ರೀವನು ಸ್ಥಾಪನೆ ಮಾಡಿದ ಶ್ರೀರಾಮಮೂರ್ತಿ ಸಮೇತ ಇರುವ ಶ್ರೀರಾಮ ಮಂದಿರ ಇದೆ. ಈ ಶ್ರೀರಾಮ ದೇವರ ಬೆಟ್ಟದ ಕಾರಣದಿಂದ ರಾಮನಗರ ಎಂಬ ಹೆಸರು ಬಂದಿತು. ಆದರೆ ಸರ್ಕಾರವು ಶ್ರೀರಾಮನ ಬಗ್ಗೆ ಇರುವ ದ್ವೇಷದ ಕಾರಣದಿಂದ ಈ ನಿರ್ಧಾರ ಮಾಡುತ್ತಿದೆ ಎಂದರು.
ಗಾಯಕ್ಕೆ ಉಪ್ಪು ಸವರಿದಂತಿದೆ: ೫೦೦ ವರ್ಷಗಳ ನಂತರ, ಅಯೋಧ್ಯೆಯಲ್ಲಿ ಭಗವಾನ್ ಶ್ರೀರಾಮನ ಭವ್ಯ ಮಂದಿರವನ್ನು ನಿರ್ಮಿಸಿದ ಬಳಿಕ ದೇಶಾದ್ಯಂತ ರಾಮನದ್ದೇ ಗುಣಗಾನವಿರುವಾಗ ಕರ್ನಾಟಕದಲ್ಲಿ ಮಾತ್ರ ’ರಾಮನಗರ’ ಜಿಲ್ಲೆಯನ್ನು ’ಬೆಂಗಳೂರು ದಕ್ಷಿಣ’ ಎಂದು ಮರುನಾಮಕರಣ ಮಾಡಲು ಕಾಂಗ್ರೆಸ್ ಸರ್ಕಾರ ನಿರ್ಣಯ ಖೇದಕರವಾಗಿದೆ. ಶ್ರೀರಾಮನ ಭೂಮಿಯಂದೇ ಖ್ಯಾತಿ ಪಡೆದಿರುವ ಭಾರತದಲ್ಲಿ ಶ್ರೀರಾಮನ ಹೆಸರನ್ನು ಅಳಿಸಿ ಹಾಕಿದರೆ ಅದನ್ನು ಹಿಂದೂ ಸಮಾಜ ಎಂದಿಗೂ ಸಹಿಸುವುದಿಲ್ಲ. ಈ ನಿರ್ಧಾರವು ಹಿಂದೂಗಳ ಗಾಯಕ್ಕೆ ಉಪ್ಪು ಸವರಿದಂತಿದೆ. ಕಾಂಗ್ರೆಸ್ ಈ ಹಿಂದೆ ಶ್ರೀರಾಮನನ್ನು ಕಾಲ್ಪನಿಕ ಎಂದಿತ್ತು, ನಂತರ ಶ್ರೀರಾಮಲಲ್ಲಾನ ಮೂರ್ತಿ ಪ್ರಾಣಪ್ರತಿಷ್ಠಾಪನೆಯ ಕಾರ್ಯಕ್ರಮಕ್ಕೆ ಹೋಗಲಿಲ್ಲ ಮತ್ತು ಈಗ ರಾಮನಗರದ ಹೆಸರು ಬದಲಾಯಿಸಿದೆ. ಇದರಿಂದ ಕಾಂಗ್ರೆಸ್ಸಿನ ’ಶ್ರೀರಾಮ’ನ ಬಗ್ಗೆ ವಿರೋಧ ಸ್ಪಷ್ಟವಾಗಿದೆ ಎಂದು ದೂರಿದರು.
ಬದಲಾವಣೆ ಮಾಡಬಾರದು: ರಾಮನಗರದ ಹೆಸರನ್ನು ಬದಲಾಯಿಸಲು ನಿರ್ಧರಿಸಿದ ಕಾಂಗ್ರೆಸ್ ಪಕ್ಷವು ಮತಾಂಧ ಕ್ರೂರಿ ಔರಂಗಜೇಬನ ಹೆಸರಿರುವ ದೆಹಲಿಯ ಔರಂಗಜೇಬ ರಸ್ತೆ, ತುಘಲಕ್ ರಸ್ತೆ ಇತ್ಯಾದಿ ಆಕ್ರಮಣಕಾರಿಗಳ ಹೆಸರನ್ನು ಬದಲಾಯಿಸಲು ಪ್ರಯತ್ನಿಸಿದೆಯೇ? ಕರ್ನಾಟಕದಲ್ಲಿರುವ ಮಹಾನಗರಗಳು ಮತ್ತು ನಗರಗಳ ಇಸ್ಲಾಮಿಕ್ ಹೆಸರುಗಳನ್ನು ಬದಲಾಯಿಸಲು ರಾಜ್ಯ ಸರಕಾರ ಧೈರ್ಯ ತೋರುವುದೇ? ರಾಮನಗರ ಹೆಸರು ಬದಲಾವಣೆಗೆ ಹಿಂದೂ ಸಮಾಜವು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದು, ಯಾವುದೇ ಕಾರಣಕ್ಕೂ ರಾಮನಗರದ ಹೆಸರನ್ನು ಬದಲಾವಣೆ ಮಾಡಬಾರದು ಮತ್ತು ಹೆಸರು ಬದಲಾವಣೆಯ ನಿರ್ಧಾರ ಹಿಂಪಡೆಯದಿದ್ದರೆ ಹಿಂದೂ ಸಮಾಜವು ಬೀದಿಗಿಳಿಯದೆ ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದರು.
ಕ್ರಮ ಜರುಗಿಸಬೇಕು: ಬೆಂಗಳೂರಿಗೆ ಅಕ್ರಮವಾಗಿ ಕಳಪೆ ಗುಣಮಟ್ಟದ ಮಾಂಸವನ್ನು ಸರಬರಾಜು ಮಾಡುವವರ ಮೇಲೆ ಕಾನೂನು ಕ್ರಮ ಜರುಗಿಸಲು ಆಗ್ರಹಿಸಿ ಮತ್ತು ಪುನೀತ್ ಕೆರೆಹಳ್ಳಿಯವರ ಮೇಲೆ ದೌರ್ಜನ್ಯ ಎಸಗಿದ ಪೊಲೀಸ್ ಎಸಿಪಿ ಚಂದನ್ ಕುಮಾರ್ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಬೆಂಗಳೂರಿಗೆ ಕಳೆದ ಅನೇಕ ವರ್ಷಗಳಿಂದ ಅಕ್ರಮವಾಗಿ ಹೊರರಾಜ್ಯಗಳಿಂದ ಸಿಟಿ ರೈಲ್ವೇ ನಿಲ್ದಾಣದ ಮೂಲಕ ರೆಸ್ಟೋರೆಂಟ್, ಪ್ರತಿಷ್ಠಿತ ಹೊಟೆಲ್ ಗಳಿಗೆ ಸರಬರಾಜು ಆಗುತ್ತಿದೆ. ಆಹಾರ ಇಲಾಖೆಯ ನಿಯಮಗಳನ್ನು ಉಲ್ಲಂಘನೆ ಮಾಡಿ, ಥರ್ಮಾಕೋಲ್ ಬಾಕ್ಸ್ ಮೂಲಕ ಸರಬರಾಜು ಮಾಡಲಾಗುತ್ತದೆ. ಮಾಂಸದ ವ್ಯಾಪಾರಸ್ಥರು ಕಳೆದ ತಿಂಗಳು ಸರ್ಕಾರದ ವಿವಿಧ ಇಲಾಖೆಗಳಿಗೆ ದೂರು ನೀಡಿದ್ದರೂ ಸಹ, ಅಕ್ರಮ ಮಾಂಸದ ದಂಧೆಯು ನಡೆಯುತ್ತಿರುವುದು ಅತ್ಯಂತ ಗಂಭೀರವಾದ ವಿಷಯವಾಗಿದೆ ಎಂದು ಆರೋಪಿಸಿದರು.
ಆರೋಗ್ಯದ ಜೊತೆ ಚೆಲ್ಲಾಟ: ಇದೊಂದು ಕೊಟ್ಯಂತರ ರುಪಾಯಿಗಳ ಅಕ್ರಮ ಮಾಂಸದ ದಂಧೆಯಾಗಿದ್ದು, ಹಣಕ್ಕಾಗಿ ಅತ್ಯಂತ ಕಳಪೆ ಮಟ್ಟದ ಆಹಾರವನ್ನು ಸಾರ್ವಜನಿಕರಿಗೆ ತಿನ್ನಿಸುತ್ತಿದ್ದಾರೆ. ಇದರೊಂದಿಗೆ ಜನರ ಆರೋಗ್ಯದ ಜೊತೆಗೆ ಚೆಲ್ಲಾಟವಾಡಲಾಗುತ್ತಿದೆ. ಆದರೆ ಪೊಲೀಸ್ ಅಧಿಕಾರಿಗಳು, ಆರೋಗ್ಯ ಇಲಾಖೆಯ ಅಧಿಕಾರಿಗಳು ಈ ಅಕ್ರಮ ಮಾಂಸದ ರೂವಾರಿಗಳ ಮೇಲೆ ಯಾವುದೇ ಕ್ರಮ ಜರುಗಿಸದೇ ಇರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ. ದಯಮಾಡಿ ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಮತ್ತು ಅಕ್ರಮ ಮಂಸ ದಂದೆಯ ರೂವಾರಿಯನ್ನು ಬಂಧನ ಮಾಡಬೇಕೆಂದು ಆಗ್ರಹ ಮಾಡುತ್ತೇವೆ ಎಂದು ಹೇಳಿದರು.
ರಾಷ್ಟ್ರಧ್ವಜಕ್ಕೆ ಅವಮಾನವಾಗುವುದನ್ನು ತಡೆಯಲು ಕೃತಿ ಸಮಿತಿಯನ್ನು ಸ್ಥಾಪಿಸಿ, ಅವಮಾನಿಸುವುದರ ವಿರುದ್ಧ ಜನಜಾಗೃತಿ ಮೂಡಿಸುತ್ತಿದೆ. ಸಮಿತಿಯು ಶಾಲಾ-ಕಾಲೇಜುಗಳಲ್ಲಿ ಉಪನ್ಯಾಸ, ಪ್ರಶೋತ್ತರ ಸ್ಪರ್ಧೆಗಳನ್ನು ಆಯೋಜಿಸುವುದು, ಕರಪತ್ರಗಳನ್ನು ವಿತರಿಸುವುದು, ಪೋಸ್ಟರ್- ಫ್ಲೆಕ್ಸ್‌ಗಳನ್ನು ಹಾಕುವುದು, ಸ್ಥಳೀಯ ಕೇಬಲ್ ಚಾನೆಲ್‌ಗಳಲ್ಲಿ ವಿಡಿಯೊಗಳನ್ನು (ಸಿಡಿ) ತೋರಿಸುವುದು, ರಸ್ತೆಗಳಲ್ಲಿ ಬಿದ್ದಿರುವ ರಾಷ್ಟ್ರಧ್ವಜಗಳನ್ನು ಸಂಗ್ರಹಿಸುವುದು, ಸಾಮಾಜಿಕ ಜಾಲತಾಣದ ಮೂಲಕ ಪ್ರಚಾರ ಕಾರ್ಯಗಳನ್ನು ಕೈಗೊಳ್ಳುತ್ತಿದೆ ಎಂದು ತಮ್ಮ ಉದ್ದೇಶವನ್ನು ತಿಳಿಸಿದರು. ಇದೇ ವೇಳೆ ಹಿಂದೂ ಜನಜಾಗೃತಿ ಸಮಿತಿ ಮತ್ತು ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ಪುಟ್ಟಸ್ವಾಮಿ, ಸುಜಾತ, ಸಿದ್ದಪ್ಪಚಾರ್, ಅನಂತರಾಜು, ಸುರೇಶ್, ಬ್ಯಾಟಚಾರ್, ರಾಜೇಂದ್ರನ್, ರಾಘವಚಾರ್, ಸೋಮಶೇಖರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.ಬಾಕ್ಸ್: ಪ್ಲಾಸ್ಟಿಕ್ ಧ್ವಜ ಬೇಡ
ರಾಷ್ಟ್ರಧ್ವಜವೇ ರಾಷ್ಟ್ರದ ಆತ್ಮವಾಗಿದೆ. ಈ ರಾಷ್ಟ್ರೀಯ ಧ್ವಜಗಳನ್ನು ಆಗಸ್ಟ್ ೧೫ ಮತ್ತು ೨೬ ಜನವರಿಯಲ್ಲಿ ಹೆಮ್ಮೆಯಿಂದ ಪ್ರದರ್ಶಿಸಲಾಗುತ್ತದೆ. ಆದರೆ ಅದೇ ದಿನ ಅದೇ ರಾಷ್ಟ್ರಧ್ವಜ ರಸ್ತೆ ಹಾಗೂ ಚರಂಡಿಗಳಲ್ಲಿ ಹರಿದ ಸ್ಥಿತಿಯಲ್ಲಿ ಬಿದ್ದಿರುವುದು ಕಂಡು ಬಂದಿದೆ. ಪ್ಲಾಸ್ಟಿಕ್ ಧ್ವಜಗಳು ತಕ್ಷಣವೇ ನಾಶವಾಗುವುದಿಲ್ಲ. ಆದ್ದರಿಂದ ಈ ರಾಷ್ಟ್ರಧ್ವಜಗಳು ಅನೇಕ ದಿನಗಳವರೆಗೆ ಅಗೌರವವನ್ನು ಕಾಣಬೇಕಾಗಿದೆ. ರಾಷ್ಟ್ರಧ್ವಜದ ಈ ಅಗೌರವವನ್ನು ತಡೆಯಲು ಹಿಂದೂ ಜನಜಾಗೃತಿ ಸಮಿತಿಯಿಂದ ಮುಂಬೈ ಹೈಕೋರ್ಟ್‌ನಲ್ಲಿ ದೂರು ಕೊಡಲಾಗಿದ್ದು, ಈ ಸಂಬಂಧ ವಿಚಾರಣೆ ವೇಳೆ ನ್ಯಾಯಾಲಯವು ಪ್ಲಾಸ್ಟಿಕ್ ರಾಷ್ಟ್ರಧ್ವಜದಿಂದ ಆಗುವ ಅವಮಾನವನ್ನು ನಿಲ್ಲಿಸುವಂತೆ ಸರ್ಕಾರಕ್ಕೆ ಆದೇಶ ನೀಡಿತ್ತು. ಅದರ ಪ್ರಕಾರ, ಪ್ಲಾಸ್ಟಿಕ್ ರಾಷ್ಟ್ರಧ್ವಜಗಳನ್ನು ಮಾರಾಟ ಮಾಡುವುದು ಕಾನೂನು ಪ್ರಕಾರ ಅಪರಾಧವಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ಗೋವಿಂದರಾಜು ಹೇಳಿದರು.