ಹಗರಿಬೊಮ್ಮನಹಳ್ಳಿ: ಪಟ್ಟಣದಲ್ಲಿ ಹಿಂದೂ ಸಮಾವೇಶ ಸಮಿತಿ ಶನಿವಾರ ಆಯೋಜಿಸಿದ್ದ ಹಿಂದೂ ಸಮಾವೇಶ; ಒಂದೆಡೆ ಹಿಂದೂ ಶಕ್ತಿಯ ವಿರಾಟ ಸ್ವರೂಪ ಅನಾವರಣಗೊಳಿಸಿದರೆ, ಇನ್ನೊಂದೆಡೆ ಮುಸ್ಲಿಮರ ಕೋಮು ಸೌಹಾರ್ದತೆಗೂ ವೇದಿಕೆಯಾಯಿತು.
ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದ ಬಿಜೆಪಿ ಮುಖಂಡ ಬಲ್ಲಾಹುಣಸಿ ರಾಮಣ್ಣ ಮಾತನಾಡಿ, ಹಿಂದೂ ಸಮಾಜದ ನಾನಾ ಜಾತಿಗಳು ಇಂದಿಗೂ ಪರಸ್ಪರ ಸಾಮೂಹಿಕವಾಗಿ ಸಹಭಾಗಿತ್ವ ತತ್ವದಡಿ ಬದುಕಿರುವುದು ಬಸವಣ್ಣನವರ ಕಾಲಘಟ್ಟದ ಅನುಭವ ಮಂಟಪ ನೆನಪಿಸುತ್ತದೆ ಎಂದು ಪ್ರತಿಪಾದಿಸಿದರು.
ಶೋಭಾಯಾತ್ರೆ ಅಲ್ಲದೇ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಎಲ್ಲರಿಗೂ ಇಲ್ಲಿನ ಮುಸ್ಲಿಮರು ಕಲ್ಲಂಗಡಿ ಹಣ್ಣು, ಜ್ಯೂಸ್ ವಿತರಿಸಿ ಕೋಮು ಸೌಹಾರ್ದ ಮೆರೆದಿದ್ದು ಸಮಾವೇಶದ ವಿಶೇಷವಾಗಿತ್ತು.ಸಂಜೆ ಶೋಭಾಯಾತ್ರೆ ಪಟ್ಟಣದ ಯು.ಕೆ. ಕೊಟ್ರಬಸಪ್ಪನವರ ಬೃಹತ್ ನಿವೇಶನದಲ್ಲಿ ಸಂಪನ್ನವಾಗುತ್ತಿದ್ದಂತೆಯೇ ಸಮಾವೇಶದ ವೇದಿಕೆಯಲ್ಲಿ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಸಮಾವೇಶಕ್ಕೆ ಚಾಲನೆ ನೀಡಲಾಯಿತು.
ದಿಕ್ಸೂಚಿ ಭಾಷಣಕಾರರಾಗಿ ಆಗಮಿಸಿದ್ದ ದೇವಸ್ಥಾನ ಸಂವರ್ಧನಾ ಸಮಿತಿಯ ರಾಜ್ಯ ಸಂಯೋಜಕ ಮನೋಹರ್ ಮಠದ ಮಾತನಾಡಿ, ನಿರಂತರವಾಗಿ ಹಿಂದೂ ಸಮಾಜದ ಮೇಲೆ ಪರಕೀಯರಾದ ಮೊಘಲರು, ಡಚ್ಚರು, ಪಾರ್ಸಿಗಳು, ಶೂಣರು ಹಾಗೂ ಬ್ರಿಟಿಷರು ಮತ್ತಿತರರು ದಾಳಿ ನಡೆಸಿ ಸಾಮಾಜಿಕ ಕ್ಷೋಭೆ ನಡೆಸಿದರೂ ಹಿಂದೂ ಧರ್ಮ ಮತ್ತು ಸಮಾಜ ಇಂದಿಗೂ ಉಳಿದಿದೆ ಎಂದು ಹರ್ಷ ವ್ಯಕ್ತಪಡಿಸಿದರು.ವಿವಿಧತೆಯಲ್ಲಿ ಏಕತೆ ಹಿಂದೂ ಧರ್ಮದ ಮೂಲ ಮಂತ್ರವಾಗಿದೆ. ನಾನಾ ಜಾತಿಗಳ ಹಿಂದೂ ಧರ್ಮದವರ ಪೂಜೆ ಸಂಸ್ಕಾರದಲ್ಲಿ ವಿಭಿನ್ನ ಆಚರಣೆಗಳು ಇದ್ದರೂ ದೇವರಲ್ಲಿನ ನಂಬಿಕೆ, ಭಕ್ತಿ ಮತ್ತು ಮೋಕ್ಷದ ಹುಡುಕಾಟ ಒಂದೇ ಆಗಿದೆ ಎಂದರು.
ವೇದಿಕೆಯ ಅಧ್ಯಕ್ಷ ಡಾ.ಬಂಡ್ರಿ ವಿಶ್ವನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು. ನಂದೀಪುರ ಮಹೇಶ್ವರ ಸ್ವಾಮಿ, ಹಂಪಸಾಗರ ನವಲಿ ಮಠಾಧೀಶ ಶಿವಲಿಂಗ ರುದ್ರಮುನಿ ಸ್ವಾಮೀಜಿ, ಹಾಲಸಿದ್ದೇಶ್ವರ ಸ್ವಾಮೀಜಿ ಮತ್ತು ಲೇಖಕಿ ಪದ್ಮಾ ವಿಠಲ್ ಉಪಸ್ಥಿತರಿದ್ದರು. ಸಮಿತಿಯ ಉಪಾಧ್ಯಕ್ಷ ಕನ್ನಿಹಳ್ಳಿ ಚಂದ್ರಶೇಖರ್, ಕೆ.ಎಂ.ಶಿವಶಂಕರ್ ಮತ್ತು ಜೋಗಿ ಹನಮಂತಪ್ಪ ಕಾರ್ಯಕ್ರಮ ನಿರ್ವಹಿಸಿದರು.