ಹೊಸಪೇಟೆ: ಹಿಂದೂ ಸಮಾಜ ಎಚ್ಚೆತ್ತು ಜಾತಿ-ಭೇದ, ಮೇಲು-ಕೀಳು, ಅಸ್ಪೃಶ್ಯತೆ ಮರೆತು ರಾಷ್ಟ್ರವೇ ಸರ್ವೋಚ್ಚ ಎಂಬ ಚಿಂತನೆಯಡಿ ಒಂದಾಗಬೇಕು ಎಂದು ಚಿತ್ರದುರ್ಗ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ನುಡಿದರು.ಸಾಮಾಜಿಕ ಸಾಮರಸ್ಯ ವೇದಿಕೆಯಿಂದ ನಗರದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಉತ್ತರ ಪ್ರಾಂತ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮಲ್ಲಿ ಜಾತಿ, ಧರ್ಮದ ಹೆಸರಿನಲ್ಲಿ ಸೃಷ್ಟಿಯಾಗಿರುವ ಸಮಸ್ಯೆಯಿಂದ ಮುಂದೆ ಎದುರಾಗಬಹುದಾದ ಆಪತ್ತಿನ ಗಂಭೀರತೆ ಅರಿತು ತಕ್ಷಣವೇ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ. ಇಲ್ಲದಿದ್ದರೆ ನಮ್ಮ ಧರ್ಮ, ಮಠ, ಮಂದಿರ, ನಮ್ಮತನ ಎಲ್ಲವೂ ಕಳೆದುಕೊಳ್ಳುವುದು ತಪ್ಪಿದ್ದಲ್ಲ ಎಂದರು.
ರಾಷ್ಟ್ರೀಯತೆ ಪಾಲನೆ ಆಗಲಿ:
ಜಾತಿ, ಧರ್ಮ, ಮಠ, ಪೀಠ ಎಲ್ಲಕ್ಕಿಂತ ಮಿಗಿಲಾಗಿ ರಾಷ್ಟ್ರೀಯತೆ, ರಾಷ್ಟ್ರಧರ್ಮದ ಪಾಲನೆಗೆ ಒತ್ತು ನೀಡುವುದು ಇಂದಿನ ಅನಿವಾರ್ಯ. ಸಮಾಜದಲ್ಲಿ ಜಾತಿ ಹೆಸರಿನಲ್ಲಿ ಕಂದಕ ನಿರ್ಮಿಸುವ ಕೆಲಸ ನಡೆದಿದ್ದರಿಂದಲೇ ನಮ್ಮಲ್ಲಿ ಇಂದು ಅನೇಕ ಮಠ, ಪೀಠಗಳು ಹುಟ್ಟಿಕೊಂಡು ವಿಘಟನೆ, ಪ್ರತ್ಯೇಕವಾಗುತ್ತ ಸಾಗಿದ್ದೇವೆ. ಬಾಂಗ್ಲಾದೇಶದ ಬೆಳವಣಿಗೆ ನಂತರವೂ ನಾವು ಎಚ್ಚೆತ್ತುಕೊಳ್ಳುತ್ತಿಲ್ಲ. ನಮ್ಮ ಮನೆಗೆ ಬೆಂಕಿ ಬಿದ್ದಾಗ ಮಾತ್ರ ಎಚ್ಚರವಾಗೋಣ ಎಂಬ ಧೋರಣೆ ದುರದೃಷ್ಟಕರ ಎಂದರು.ಆರೆಸ್ಸೆಸ್ ಉತ್ತರ ಪ್ರಾಂತ ಸಹ ಕಾರ್ಯವಾಹ ಟಿ.ಪ್ರಸನ್ನ ಮಾತನಾಡಿದರು. ಸಾಮರಸ್ಯ ವೇದಿಕೆ ಉತ್ತರ ಪ್ರಾಂತ ಸಂಯೋಜಕ ಶಿವಲಿಂಗ ಕುಂಬಾರ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು.
ಸಾಮರಸ್ಯ ವೇದಿಕೆ ಅಖಿಲ ಭಾರತೀಯ ಸಹ ಸಂಯೋಜಕ ರವೀಂದ್ರ ಕಿರಕೋಳೆ, ಉತ್ತರ ಪ್ರಾಂತ ಸಂಘಚಾಲಕ ಬಸವರಾಜ ಡಂಬಳ, ವಿಪ ಸದಸ್ಯ ಡಾ.ಸಾಬಣ್ಣ ತಳವಾರ, ನರೇಂದ್ರಜಿ, ಸು.ಕೃಷ್ಣಮೂರ್ತಿ, ಶ್ರೀಧರ ಜೋಶಿ, ಸೀತಾರಾಮ ಭಟ್ ಇದ್ದರು.ಮಾರುತಿ ಕಟ್ಟಿಮನಿ, ಎನ್.ಹಂಸವೇಣಿ, ಭಗಿನಿ ಪೂಜಾ ಜೋಶಿ ನಿರ್ವಹಿಸಿದರು. ಉತ್ತರ ಪ್ರಾಂತದ 15 ಜಿಲ್ಲೆಗಳ 500 ಕ್ಕೂ ಹೆಚ್ಚು ಕಾರ್ಯಕರ್ತರು ಸಮಾವೇಶದಲ್ಲಿ ಭಾಗಿಯಾಗಿದ್ದರು.
ಮಾದಾರ ಚನ್ನಯ್ಯ ಗುರುಪೀಠದ ಜ.ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿದರು.