ಹಗರಿಬೊಮ್ಮನಹಳ್ಳಿ: ಹಿಂದೂ ಸಮಾಜ ಹಲವಾರು ಜಾತಿಗಳನ್ನೊಳಗೊಂಡ ಸರ್ವ ಜನಾಂಗದ ಶಾಂತಿಯ ತೋಟವಾಗಿದೆ. ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರ ಸನಾತನವಾಗಿದೆ. ಎಲ್ಲರೂ ಜಾತಿ ಮರೆತು ಒಗ್ಗೂಡಿ ಪ್ರತಿವರ್ಷ ಅದ್ಧೂರಿಯಾಗಿ ಹಿಂದೂ ಸಮಾವೇಶ ನಡೆಸುವ ಮೂಲಕ ಸಮಾಜವನ್ನು ಎಚ್ಚರದ ಸ್ಥಿತಿಯಲ್ಲಿಡಬೇಕು ಎಂದು ಶಾಸಕ ನೇಮಿರಾಜ್ ನಾಯ್ಕ ಅಭಿಪ್ರಾಯಪಟ್ಟರು.
ರಾಜಕಾರಣ ಚುನಾವಣೆಗೆ ಸೀಮಿತವಾಗಬೇಕು, ಹಿಂದುತ್ವದಲ್ಲಿರುವ ಕತ್ತಲೆ ಅಳಿಸಲು ಹಿಂದೂ ಸಮಾವೇಶಗಳ ಅಗತ್ಯವಿದೆ. ಹಿಂದೂಗಳು ಜಾತಿ ಮರೆತು ಒಗ್ಗೂಡದಿದ್ದರೆ ನಾವೆಲ್ಲ ಆಂತರಿಕವಾಗಿ ದುರ್ಬಲಗೊಳ್ಳುವ ಅಪಾಯವಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಮುಖಂಡ ಬಲ್ಲಾಹುಣಸಿ ರಾಮಣ್ಣ ಮಾತನಾಡಿ, ದೇಶದ ನಾನಾ ಜಾತಿ ಸಂಸ್ಕೃತಿಗಳು 12ನೇ ಶತಮಾನದ ಅನುಭವ ಮಂಟಪವನ್ನು ನೆನಪಿಸುತ್ತವೆ. ಜಾತಿಗಳಲ್ಲಿನ ಪರಸ್ಪರ ಸಹಭಾಗಿತ್ವದ ಅಗತ್ಯದ ಅರಿವು ಇಲ್ಲದ ಪರಿಣಾಮವಾಗಿ ನಮ್ಮ ದೇಶವನ್ನು ಮೊಘಲರು 800 ವರ್ಷ ಮತ್ತು ಬ್ರಿಟೀಶರು 200 ವರ್ಷ ಆಳಿದರು ಎಂದು ಬೇಸರ ವ್ಯಕ್ತಪಡಿಸಿದರು.ಹಿಂದೂ ಮಹಾಸಭಾದ ಅಧ್ಯಕ್ಷ ಡಾ. ಬಂಡ್ರಿ ವಿಶ್ವನಾಥ ಪ್ರಾಸ್ತಾವಿಕವಾಗಿ ಮಾತನಾಡಿ, ಹಿಂದೂ ಧರ್ಮದ ಪದ್ದತಿಗಳನ್ನು ಗುರುತಿಸುವ ಜೊತೆಗೆ ಸನಾತನ ಸಂಪ್ರದಾಯಗಳನ್ನು ಮುಂದಿನ ಪೀಳಿಗೆಯೂ ತಮ್ಮ ಬದುಕಿನುದ್ದಕ್ಕೂ ಅಚರಿಸುವ ತುರ್ತು ಇದೆ ಎಂದು ಆಶಿಸಿದರು.
ವಾಲ್ಮೀಕಿ ಸಮಾಜದ ಅಧ್ಯಕ್ಷ ಪವಾಡಿ ಹನಮಂತಪ್ಪ, ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಬಾದಾಮಿ ಮೃತ್ಯುಂಜಯ, ರೆಡ್ಡಿ ಸಮಾಜದ ಬಸವರಾಜ ರೆಡ್ಡಿ, ಹೆಗ್ಡಾಳ್ ರಾಮಣ್ಣ, ಪುರಸಭೆ ಸದಸ್ಯೆ ಕಮಲಮ್ಮ ಸಹಿತ ಸಭೆಯಲ್ಲಿದ್ದ ಹಲವರು ಸಮಾವೇಶದ ರೂಪುರೇಷೆಗಳ ಕುರಿತು ಸಲಹೆ ನೀಡಿದರು.
ಮಾಧವಿ ಚಿದ್ರಿ ಪ್ರಾರ್ಥಿಸಿದರು. ಕನ್ನಿಹಳ್ಳಿ ಚಂದ್ರಶೇಖರ್, ಜೋಗಿ ಹನಮಂತಪ್ಪ ಮತ್ತು ಕೆ.ಎಂ.ಶಿವಶಂಕರ್ ನಿರ್ವಹಿಸಿದರು.