ಗದಗ: ಸನಾತನ ಹಿಂದೂ ಧರ್ಮವನ್ನು ಜಗತ್ತಿನ ಕೆಲವು ಶಕ್ತಿಗಳು ಹಾಗೂ ನಮ್ಮೊಳಗಿನ ಕೆಲವು ಶಕ್ತಿಗಳು ಛಿದ್ರ ಮಾಡಬೇಕೆಂಬ ಪ್ರಯತ್ನ ನೂರಾರು ವರ್ಷದಿಂದ ನಡೆಸಿವೆ. ಆದರೆ, ಸಾಧ್ಯವಾಗಿಲ್ಲ. ಯಾವ ಶಕ್ತಿಗಳು ಈ ಧರ್ಮವನ್ನು ಮುಟ್ಟಲು ಬಂದಿವೆಯೋ ಆವೆಲ್ಲ ಶಕ್ತಿಗಳು ನಾಮಾವಶೇಷವಾಗಿ ಹೋಗಿವೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.ನಗರದ ವಿಡಿಎಸ್‌ಟಿಸಿ ಶಾಲಾ ಮೈದಾನದಲ್ಲಿ ಮಂಗಳವಾರ ಅತಿರುದ್ರ ಮಹಾಯಾಗ ಸೇವಾ ಸಮಿತಿ ಏರ್ಪಡಿಸಿದ್ದ ಅತಿರುದ್ರ ಮಹಾಯಾಗ ಹಾಗೂ ಕಿರಿಯ ಕುಂಭ ಮೇಳದ ಭವ್ಯ ಶೋಭಾಯಾತ್ರೆಯ ವೇದಿಕೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಎಲ್ಲಿ ದೈವ ಇದೆ ಅಲ್ಲಿ ದೇವರಿದ್ದಾನೆ. ಕುಂಭ ಹೊತ್ತುಕೊಂಡು ಬಂದ ಮಾತೆಯರನ್ನು ನೋಡಿದಾಗ ಆದಿಶಕ್ತಿಯನ್ನು ನೋಡಿದಂತಾಗುತ್ತದೆ. ಹುಟ್ಟಿದ ಪ್ರತಿಯೊಬ್ಬ ಮಾನವನೂ ಶಕ್ತಿಯ ಕೇಂದ್ರ ಅದನ್ನು ಹೇಗೆ ಬಳಕೆ ಮಾಡುತ್ತೇವೆ, ಯಾರಿಗಾಗಿ ಬಳಕೆ ಮಾಡುತ್ತೇವೆ, ಅದರ ಮೇಲೆ ನಮ್ಮ ಕೀರ್ತಿ, ಯಶಸ್ಸು ಅಪಯಶಸ್ಸು ಇದೆ ಎಂದರು.ಎಲ್ಲಕ್ಕಿಂತ ಮೊದಲು ಇದ್ದಿದ್ದು ಸತ್ಯಯುಗ. ಆಗ ಇದ್ದಿದ್ದು ಏಕಾತ್ಮ, ಒಂದೆ ಆತ್ಮ ಇತ್ತು. ಆ ಮೇಲೆ ದ್ವಾಪರ ಯುಗ ಬಂತು. ಅಲ್ಲಿ ಆತ್ಮದ ಜತೆಗೆ ಪರಮಾತ್ಮ ಬಂತು. ಆ ಮೇಲೆ ತ್ರೇತಾಯುಗದಲ್ಲಿ ಪರಮಾತ್ಮನನ್ನು ಕಾಣುವ ಮಾರ್ಗ ತೋರುವ ಗುರುಗಳ ಸೃಷ್ಟಿಯಾಯಿತು.
ಯಜ್ಞ ಯಾಗ ಅಲ್ಲಿ ಪ್ರಾರಂಭವಾಯಿತು. ದೈವ ಶಕ್ತಿ ಜತೆಗೆ ಸುರ ಮತ್ತು ಅಸುರರ ಶಕ್ತಿ ಇತ್ತು. ಸುರ ಅಸುರರ ನಡುವೆ ಯಾವಾಗಲೂ ಸಂಘರ್ಷ ಆಗುತ್ತದೆ. ಆದರೆ, ಯಾಗ ಯಜ್ಞದಿಂದ ಗುರುಗಳು ಸತ್ಯಕ್ಕೆ, ನ್ಯಾಯಕ್ಕೆ ಧರ್ಮಕ್ಕೆ ಜಯವನ್ನು ತಂದು ಕೊಟ್ಟಿದ್ದಾರೆ. ಅದು ಗುರುವಿನ ಶಕ್ತಿ ಎಂದರು.ಸುರ ಅಸುರರ ಶಕ್ತಿಯನ್ನು ನಿಗ್ರಹಿಸಿರುವುದು ಮಹಾಶಿವ, ಮಹಾದೇವ ವಿಷಕಂಠನಾಗಿ ಸುರ ಅಸುರರ ನಡುವೆ ನಡೆದ ಯುದ್ಧದಲ್ಲಿ ಹಾಲಾಹಲವನ್ನು ನುಂಗಿ ಇಡೀ ಜಗತ್ತಿಗೆ ಕಲ್ಯಾಣ ಮಾಡಿದ ಮಹಾದೇವ, ಅಂತಹ ಮಹಾದೇವನ ಹೆಸರಿನಲ್ಲಿ ಇವತ್ತು ಯಜ್ಞ ಯಾಗಾದಿ ನಡೆಯುತ್ತಿದೆ. ಗುರುಗಳು ಗದುಗಿಗೆ ಪದಾರ್ಪಣೆ ಮಾಡಿರುವುದು ಒಳ್ಳೆಯ ಸಮಯ ಈಗ ಬಂದಿದೆ. ಗುರುವಿನಲ್ಲಿ ಅಪಾರ ಶಕ್ತಿ ಇದೆ. ಗುರುವನ್ನು ಒಲಿಸಿಕೊಳ್ಳಲು ಭಕ್ತಿ ಮಾರ್ಗ ಬಹಳ ಮುಖ್ಯ ಎಂದರು.
ಈ ವೇಳೆ ಶ್ರೀಪಂಚದಶನಂ ಜುನಾ ಆಖಾಢ ಪೀಠಾಧೀಶ್ವರ, ಅಮರನಾಥ ಮಹಾದೇವ ಮಠ, ಕುಷ್ಟಗಿ ಶ್ರೀಗಳಾದ ಸಹದೇವಾನಂದ ಗಿರಿಜಿ ಮಹಾರಾಜರು ನೇತೃತ್ವ ವಹಿಸಿದ್ದರು. ಶಾಸಕ ಸಿ.ಸಿ. ಪಾಟೀಲ ಸೇರಿದಂತೆ ಹಲವಾರು ಪ್ರಮುಖರು ಹಾಗೂ ಸಂಘಟಕರು ಇದ್ದರು.