ಹಿಂದೂ ಎನ್ನುವುದು ಜೀವನ ಸ್ವಭಾವ, ಆಚರಣೆಯಲ್ಲ

KannadaprabhaNewsNetwork |  
Published : Mar 29, 2026, 02:45 AM IST
ಮೋಹನ ಭಾಗವಾತ ಮಾತನಾಡುತ್ತಿರುವುದು | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿ ಹಿಂದೂ ಎಂದರೆ ಕೇವಲ ಪೂಜಾ ವಿಧಾನ, ಆಹಾರ ಪದ್ಧತಿ ಅಥವಾ ಆಚರಣೆಗಳಲ್ಲ, ಅದು ಒಂದು ಜೀವನ ಸ್ವಭಾವ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ ಭಾಗವತ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಹಿಂದೂ ಎಂದರೆ ಕೇವಲ ಪೂಜಾ ವಿಧಾನ, ಆಹಾರ ಪದ್ಧತಿ ಅಥವಾ ಆಚರಣೆಗಳಲ್ಲ, ಅದು ಒಂದು ಜೀವನ ಸ್ವಭಾವ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ ಭಾಗವತ ಅಭಿಪ್ರಾಯಪಟ್ಟರು.ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸುಕ್ಷೇತ್ರ ಯಡೂರ ವೀರಭದ್ರೇಶ್ವರನ ದರ್ಶನ ಪಡೆದು ಶನಿವಾರ ಶ್ರೀಕಾಡಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿ ತುಲಾಭಾರ ಕಾರ್ಯಕ್ರಮ ನಡೆಸಿದರು. ಅಲ್ಲದೇ, ಇದೇ ವೇಳೆ ಅಲ್ಲಿಯ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಬಳಿಕ ಮಾತನಾಡಿದರು. ನಾನಾ ಪಂಥ, ಭಾಷೆ, ಪ್ರಾಂತ್ಯಗಳಿದ್ದರೂ ನಾವು ಪ್ರಾಚೀನ ಕಾಲದಿಂದಲೂ ಒಟ್ಟಿಗೆ ಬೆರೆತು ಬದುಕುತ್ತಿರುವುದೇ ನಮ್ಮ ಸಂಸ್ಕೃತಿ. ನಮ್ಮ ಸಮಾಜದಲ್ಲಿ ಅನೇಕ ದೇವರುಗಳು, ವಿಭಿನ್ನ ಆಹಾರ ಪದ್ಧತಿಗಳು ಮತ್ತು ಆಚರಣೆಗಳಿವೆ. ಭಿನ್ನತೆಗಳನ್ನು ನಾವು ಒಪ್ಪಿಕೊಳ್ಳುವುದಷ್ಟೇ ಅಲ್ಲ, ಗೌರವಿಸುತ್ತೇವೆ. ಯಾರನ್ನೂ ಮತಾಂತರ ಮಾಡುವುದಿಲ್ಲ. ಎಲ್ಲರನ್ನೂ ಅವರು ಹೇಗಿದ್ದಾರೋ ಹಾಗೆಯೇ ಸ್ವೀಕರಿಸುತ್ತೇವೆ ಎಂದು ಹೇಳಿದರು.

ನಿಮ್ಮ ನಂಬಿಕೆಯ ಮೇಲೆ ನೀವು ದೃಢವಾಗಿರಿ ಮತ್ತು ಇತರರ ನಂಬಿಕೆಯನ್ನು ಗೌರವಿಸಿ. ಪೂಜಾ ಪದ್ಧತಿ ವೈಯಕ್ತಿಕ ಮೋಕ್ಷಕ್ಕೆ ಸಂಬಂಧಿಸಿದ ವಿಷಯವಾಗಿರಬಹುದು. ಆದರೆ, ಎಲ್ಲರೂ ಒಟ್ಟಾಗಿ ಬದುಕುವುದು ಧರ್ಮದ ಸಾರವಾಗಿದೆ ಎಂದು ವಿವರಿಸಿದರು.ಜಾಗತಿಕ ಸಂಘರ್ಷಗಳ ಕುರಿತು ಕಳವಳ ವ್ಯಕ್ತಪಡಿಸಿದ ಅವರು, ರಷ್ಯಾ-ಉಕ್ರೇನ್ ಯುದ್ಧ ಸೇರಿದಂತೆ ಇತ್ತೀಚಿನ ಘಟನೆಗಳನ್ನು ಉಲ್ಲೇಖಿಸಿ, ನಾನು ಮತ್ತು ನನ್ನದು ಎಂಬ ಸ್ವಾರ್ಥವೇ ಜಗತ್ತಿನ ಬಿಕ್ಕಟ್ಟುಗಳಿಗೆ ಪ್ರಮುಖ ಕಾರಣವಾಗುತ್ತಿದೆ. ಪ್ರತಿಯೊಂದು ವಿಷಯದಲ್ಲೂ ಸ್ವಾರ್ಥದ ಅಂಶಗಳನ್ನು ಮುಂದಿರಿಸುವ ಮನೋಭಾವವೇ ಜಾಗತಿಕ ವಿಭಜನೆಗೆ ಕಾರಣವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಪರಿಸರ ಬಿಕ್ಕಟ್ಟಿನಿಂದ ಹಿಡಿದು ಯುದ್ಧಗಳವರೆಗೆ ಪ್ರಪಂಚದ ಸಮಸ್ಯೆಗಳ ಮೂಲ ಮಾನವ ಧರ್ಮ ಅಥವಾ ವಿಶ್ವ ಧರ್ಮದ ಮರೆವಿನಲ್ಲಿದೆ ಎಂದು ಹೇಳಿದರು.

ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಮಾತನಾಡಿ, ತೀರ್ಥಕ್ಷೇತ್ರ ಯಡೂರಿನ ಇತಿಹಾಸದಲ್ಲಿ ಇದು ಮರೆಯಲಾಗದ ಕ್ಷಣ. ಇಂದು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ.ಮೋಹನ್ ಭಾಗವತ್ ಅವರ ರೂಪದಲ್ಲಿ, ಜ್ಞಾನದ ಕುಂಭಾಭಿಷೇಕ ನಡೆದಿದೆ. ಕೊರೋನಾ ಸಾಂಕ್ರಾಮಿಕ ರೋಗದ ಸಮಯದಲ್ಲಿ ಸಂಘವು ಜನರಿಗೆ ಸಲ್ಲಿಸಿದ ಸೇವೆ ಶ್ಲಾಘನೀಯ. ಯುವ ಪೀಳಿಗೆಗೆ ಡಾಮೋಹನ್ ಭಾಗವತ್ ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡಬೇಕು ಮತ್ತು ಸಮಾಜ ಮತ್ತು ದೇಶಕ್ಕಾಗಿ ಕೆಲಸ ಮಾಡುವುದು ತಮ್ಮ ವೃತ್ತಿ ಎಂದು ಅರ್ಥಮಾಡಿಕೊಳ್ಳಬೇಕು. ಸದ್ಗುಣಶೀಲ ನಾಗರಿಕರಾಗಬೇಕು. ಧಾರ್ಮಿಕ ಅರಿವು ಮತ್ತು ಧರ್ಮದ ರಕ್ಷಣೆ ಅಗತ್ಯ. ಧರ್ಮ ಮತ್ತು ದೇಶವನ್ನು ರಕ್ಷಿಸಿದರೆ, ನಿಜವಾದ ಸಂತೋಷ ಮತ್ತು ತೃಪ್ತಿಯನ್ನು ಸಾಧಿಸಲಾಗುತ್ತದೆ. ಯುವ ಪೀಳಿಗೆ ಧಾರ್ಮಿಕ ಅರಿವು ಮತ್ತು ದೇಶದ ರಕ್ಷಣೆಗೆ ಪ್ರಾಮುಖ್ಯತೆ ನೀಡಬೇಕು ಎಂದು ಹೇಳಿದರು. ಹುಕೇರಿ ಮಠದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ, ಸೇರಿದಂತೆ ಉಪಸ್ಥಿತರಿದ್ದರು..

ಈ ಸಂದರ್ಭದಲ್ಲಿ ಹುಕ್ಕೇರಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಆರ್.ಎಸ್.ಎಸ್ ಪದಾಧಿಕಾರಿಗಳು, ನೂಲ್‌ನ ಸರ್ಗೀಶ್ವರ ಮಠದ ಗುರು ಸಿದ್ಧೇಶ್ವರ ಸ್ಚಾಮೀಜಿ, ಶ್ರೀಕಾಂತ್ ಉಮರಾಣಿ, ಶಿವಲಿಂಗಯ್ಯ ಅಲ್ಲಯ್ಯನವರಮಠ ಸೇರಿದಂತೆ ಹಲವು ಮಠಾಧೀಶರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಂಟ್ವಾಳ ಶಾಸಕರು ಮಂಡಿಸಿದ ಹಕ್ಕುಚ್ಯುತಿಯಿಂದ ನೋವಾಗಿದೆ: ರಮಾನಾಥ ರೈ
ಕೊಡೇರಿ ಶ್ರೀ ರಾಮ ಭಜನಾ ಮಂದಿರದಲ್ಲಿ ತೊಟ್ಟಿಲೋತ್ಸವ