ಕನ್ನಡಪ್ರಭ ವಾರ್ತೆ ತುಮಕೂರು
ನಗರದ ಶ್ರೀಸಿದ್ದಿವಿನಾಯಕ ಸಮುದಾಯ ಭವನದಲ್ಲಿ ರಾಜ್ಯ ಲಿಂಗಾಯತ ಮಠಾಧೀಶರ ಒಕ್ಕೂಟದಿಂದ ಆಯೋಜಿಸಿದ್ದ ಬಸವ ಸಂಸ್ಕೃತಿ ಆಭಿಯಾನದ ಅಂಗವಾಗಿ ಬೆಳಗಾವಿಯ ಡಾ.ಮಹಂತ ಪ್ರಭು ಸ್ವಾಮೀಜಿಗಳ ನೇತೃತ್ವದಲ್ಲಿ ಏರ್ಪಡಿಸಿದ್ದ ವಿದ್ಯಾರ್ಥಿಗಳೊಂದಿಗೆ ವಚನ ಸಂವಾದ ಕಾರ್ಯಕ್ರಮದಲ್ಲಿ ನಗರದ ಎಸ್.ಆರ್.ಎಸ್ ಕಾಲೇಜಿನ ವಿದ್ಯಾರ್ಥಿಯೊಬ್ಬಳ ಪ್ರಶ್ನೆಗೆ ಶ್ರೀಗಳು ಉತ್ತರಿಸಿದರು.
ಬಸವಣ್ಣ ಲಿಂಗಾಯತರಿಗೆ ಸೀಮಿತವಲ್ಲ. ಸಕಲರಿಗೆ ಒಳಿತನ್ನೇ ಬಯಸುವುದೇ ನಿಜವಾದ ಧರ್ಮ. ಆದೇ ಬಸವ ಧರ್ಮ ಅಥವಾ ಲಿಂಗಾಯತ ಧರ್ಮ. ಹಾಗಾಗಿ ಲಿಂಗಾಯತ ಪ್ರತ್ಯೇಕ ಧರ್ಮ ಎಂದು ಸ್ಪಷ್ಟಪಡಿಸಿದರು.ಮಠಕ್ಕೆ ಭಕ್ತರು ನೀಡುವ ಕಾಣಿಕೆ ಪಡೆಯುವ ಸಂದರ್ಭದಲ್ಲಿ ಇದು ಒಳ್ಳೆಯ ದಾರಿಯಲ್ಲಿ ಸಂಪಾದನೆ ಮಾಡಿದ್ದೆ ಇಲ್ಲವೇ ಎಂದು ಸ್ವಾಮೀಜಿಗಳು ಪ್ರಶ್ನೆ ಮಾಡಿದ್ದೀರಾ ಎಂಬ ವಿದ್ಯಾರ್ಥಿನಿಯೊಬ್ಬಳ ಪ್ರಶ್ನೆಗೆ ಉತ್ತರ ನೀಡಿದ ನಿಜಗುಣನಂದಶ್ರೀಗಳು, ಮಠಕ್ಕೆ ಕಾಣಿಕೆ ನೀಡುವ ಪ್ರತಿಯೊಬ್ಬರನ್ನು ಪ್ರಶ್ನಿಸಿ ಖಚಿತ ಪಡಿಸಿಕೊಳ್ಳುವುದು ಕಷ್ಟ ಸಾಧ್ಯ. ದಾನವು ಸತ್ಯ, ಶುದ್ಧ ಕಾಯಕದಿಂದ ಕೂಡಿದ್ದರೆ ಅದು ಲಿಂಗಕ್ಕೆ ಅರ್ಪಿತ ಎಂದು ಬಸವಣ್ಣನವರೇ ಹೇಳಿದ್ದಾರೆ. ಆದರೆ ತಾಯಂದಿರು ಮನಸ್ಸು ಮಾಡಿ, ತಮ್ಮ ಗಂಡಂದಿರು ದುಡಿದು ತರುವ ಆದಾಯವನ್ನು ಇದು ಒಳ್ಳೆಯ ಮಾರ್ಗದಲ್ಲಿ ದುಡಿದ್ದೋ, ಇಲ್ಲವೋ ಎಂದು ಪ್ರಶ್ನಿಸಿದರೆ ದೇಶದಲ್ಲಿ ನಡೆಯುವ ಅರ್ಧದಷ್ಟು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬಹುದು. ಈ ನಿಟ್ಟಿನಲ್ಲಿ ತಾಯಂದಿರು ಮುನ್ನುಡಿ ಬರೆಯಬೇಕೆಂದರು.
ತಸ್ಮೀಯ ಎಂಬ ಯುವತಿಯ ದಾಸೋಹ ಪರಿಕಲ್ಪನೆಯ ಮಹತ್ವ ಕುರಿತ ಪ್ರಶ್ನೆಗೆ ಉತ್ತರ ನೀಡಿದ ಕೂಡಲಸಂಗಮದ ಬಸವ ಧರ್ಮ ಪೀಠದ ಡಾ.ಗಂಗಾಮಾತಾಜಿ, ಸತ್ಯ, ಶುದ್ಧ ಕಾಯಕದಿಂದ ಗಳಿಸಿದ್ದನ್ನು, ಇಲ್ಲದವರಿಗೆ ಹಂಚುವುದು ದಾಸೋಹ. ಅದು ಅನ್ನ, ಅಕ್ಷರ, ಆಶ್ರಯ ಎಲ್ಲವೂ ದಾಸೋಹದ ಪ್ರತೀಕವೇ ಆಗಿವೆ. ಹಾಗಾಗಿಯೇ ಸಾವಿರಾರು ಮಕ್ಕಳಿಗೆ ಅನ್ನ, ಅಕ್ಷರ, ಆಶ್ರಯ ನೀಡಿದ ಡಾ. ಶಿವಕುಮಾರ ಸ್ವಾಮೀಜಿಗಳನ್ನು ತ್ರಿವಿಧ ದಾಸೋಹಿ ಎಂದು ಕರೆಯಲಾಗುತಿತ್ತು. ಕಾಯಕ, ದಾಸೋಹ, ಅಂತರಜಾತಿ ವಿವಾಹಗಳಂತಹ ಕ್ರಾಂತಿಕಾರಿ ಕೆಲಸಗಳಿಂದ ವಿಚಲಿತರಾದ ಸಂಪ್ರದಾಯವಾದಿಗಳು, ಬಿಜ್ಜಳ ಮತ್ತು ಬಸವಣ್ಣನ ನಡುವೆ ವೈಮನಸ್ಸು ಉಂಟಾಗುವಂತೆ ಹುನ್ನಾರ ನಡೆಸಿದರು ಎಂದರು.
ಜನ ಕಲ್ಯಾಣವೇ ಲಿಂಗಾಯತ ಧರ್ಮದ ಉದ್ದೇಶ. ಎಲ್ಲರೂ ಅಂಗೈಯಲ್ಲಿ ಇಷ್ಟಲಿಂಗವನ್ನಿಟ್ಟು ಪೂಜಿಸುವ ಅವಕಾಶ ಕಲ್ಪಿಸಿ, ಸಮಾಜದಲ್ಲಿ ಮೇಲು, ಕೀಳು, ಬಡವ, ಬಲ್ಲಿದ, ಹೆಣ್ಣು, ಗಂಡ ಎಂಬ ಭೇಧ ಭಾವ ಹೋಗಲಾಡಿಸಲು ಬಸವಾದಿ ಶರಣರು ಪ್ರಯತ್ನಿಸಿದ್ದರು ಎಂದು ಬಾಲ್ಕಿಯ ಡಾ. ಬಸವಲಿಂಗ ಪಟ್ಟದೇವರು ತಿಳಿಸಿದರು.