ಫ್ಯಾಸಿಸ್ಟ್‌ ನೀತಿ ಸೋಲಿಗೆ ಐಕ್ಯ ಹೋರಾಟ ಏಕೈಕ ಮಾರ್ಗ: ಕಬೀರ್‌

KannadaprabhaNewsNetwork |  
Published : Sep 28, 2025, 02:00 AM IST
ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ಸಿಪಿಐ (ಎಂ.ಎಲ್), ದಲಿತ ಸಂಘಟನೆಗಳ ಒಕ್ಕೂಟ ಸೇರಿದಂತೆ ಜಿಲ್ಲೆಯ ಪ್ರಗತಿಪರ ಸಂಘಟನೆಗಳು ಸಹಯೋಗದಲ್ಲಿ ಶನಿವಾರ ಆರ್‌ಎಸ್ಎಸ್‌ ಹಿಂದುತ್ವ- ಸಂವಿಧಾನ ಮತ್ತು ಪ್ರಜಾಪ್ರಭುತ್ವ ಕುರಿತು ವಿಚಾರ ಸಂಕಿರಣನಡೆಯಿತು. | Kannada Prabha

ಸಾರಾಂಶ

ಚಿಕ್ಕಮಗಳೂರು, ಹಿಂದೂ ಫ್ಯಾಸಿಸ್ಟ್ ನೀತಿಯನ್ನು ಸೋಲಿಸಲು ಐಕ್ಯ ಹೋರಾಟ ಏಕೈಕ ಮಾರ್ಗವೆಂದು ಸಿಪಿಐ (ಎಂ.ಎಲ್.) ರೆಡ್‌ ಸ್ಟಾರ್ ಪಕ್ಷದ ಪಾಲಿಟಿಕ್ಸ್‌ ಬ್ಯುರೋ ಮುಖ್ಯಸ್ಥ ಕಬೀರ್ ಹೇಳಿದರು.

- ಆರ್‌ಎಸ್‌ಎಸ್‌ ಹಿಂದುತ್ವ- ಸಂವಿಧಾನ ಮತ್ತು ಪ್ರಜಾಪ್ರಭುತ್ವ ಕುರಿತು ವಿಚಾರ ಸಂಕಿರಣ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಹಿಂದೂ ಫ್ಯಾಸಿಸ್ಟ್ ನೀತಿಯನ್ನು ಸೋಲಿಸಲು ಐಕ್ಯ ಹೋರಾಟ ಏಕೈಕ ಮಾರ್ಗವೆಂದು ಸಿಪಿಐ (ಎಂ.ಎಲ್.) ರೆಡ್‌ ಸ್ಟಾರ್ ಪಕ್ಷದ ಪಾಲಿಟಿಕ್ಸ್‌ ಬ್ಯುರೋ ಮುಖ್ಯಸ್ಥ ಕಬೀರ್ ಹೇಳಿದರು.ನಗರದ ಕುವೆಂಪು ಕಲಾಮಂದಿರದಲ್ಲಿ ಸಿಪಿಐ (ಎಂ.ಎಲ್), ದಲಿತ ಸಂಘಟನೆಗಳ ಒಕ್ಕೂಟ ಸೇರಿದಂತೆ ಜಿಲ್ಲೆಯ ಪ್ರಗತಿಪರ ಸಂಘಟನೆಗಳು ಸಹಯೋಗದಲ್ಲಿ ಶನಿವಾರ ಆರ್‌ಎಸ್‌ಎಸ್‌ ಹಿಂದುತ್ವ- ಸಂವಿಧಾನ ಮತ್ತು ಪ್ರಜಾಪ್ರಭುತ್ವ ಕುರಿತು ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿ, ಫ್ಯಾಸಿಸ್ಟ್ ಶಕ್ತಿಯನ್ನು ಸೋಲಿಸಬೇಕಾದರೆ ನಾವೆಲ್ಲರೂ ಒಂದೇ ವೇದಿಕೆಯಡಿ ಬರಬೇಕಾಗಿದೆ ಎಂದು ಹೇಳಿದರು.ಕೇರಳದಿಂದ ಪಂಜಾಬ್‌ವರೆಗೆ ಫ್ಯಾಸಿಸ್ಟ್‌ ವಿರೋಧಿ ಜನತಾ ಸಮಾವೇಶ ನಡೆಸಲಾಗುತ್ತಿದೆ. ಹೈದರಬಾದ್‌ನಲ್ಲಿ ಡಿ.6ಕ್ಕೆ ರಾಷ್ಟ್ರ ಮಟ್ಟದ ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಸಿಬೇಕಾದರೆ ನಮ್ಮೊಳಗಿರುವ ಸಣ್ಣ, ಪುಟ್ಟ ವಿಚಾರಗಳನ್ನು ಮರೆತು ಒಗ್ಗೂಡಬೇಕಾಗಿದೆ ಎಂದು ತಿಳಿಸಿದರು.ದೇಶವನ್ನು ವಿಭಜಿಸುವ ಯತ್ನಗಳು ನಡೆಯುತ್ತಿವೆ. ದಾರ್ಶನಿಕರ ಆಶಯಗಳಿಗೆ ಧಕ್ಕೆ ಬಂದೊದಗಿದೆ. ದೇಶದಲ್ಲಿ ಹಣಕಾಸು ಬಂಡವಾಳ ಫ್ಯಾಸಿಸ್ಟ್ ಶಕ್ತಿಯನ್ನು ಮುನ್ನಡೆಸುತ್ತಿದೆ. ಸಂಘ ಪರಿವಾರ ಶಕ್ತಿಗಳಿಗೆ ಹಣಕಾಸು ಬಂಡವಾಳ ಅನುಕೂಲಮಾಡಿ ಕೊಡುತ್ತಿದೆ. ಕಾರ್ಮಿಕರು ಹೋರಾಟದ ಮೂಲಕ ಪಡೆದ ಕಾರ್ಮಿಕ ಕಾಯ್ದೆಗಳತಿದ್ದುಪಡಿ ತರಲಾಗಿದೆ. ದುಡಿಯುವ ವರ್ಗದ ಮೇಲೆ ಸವಾರಿ ಮಾಡಲಾಗುತ್ತಿದ್ದು, ಬಂಡವಾಳಗಾರರ ಪರವಾಗಿ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಟೀಕಿಸಿದರು.ದೇಶದಲ್ಲಿ ಬಹುತ್ವ ಬದಿಗೆ ಸರಿಸಿ, ಹಿಂದೂತ್ವ ಹೇರಲಾಗುತ್ತಿದೆ. ನಿರಂಕುಶ ಆಡಳಿತ ಹೇರುವ ಹವಣಿಕೆ ನಿರಂತರವಾಗಿ ನಡೆಯುತ್ತಿದೆ. ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ತಿರುಚಲಾಗುತ್ತಿದೆ. ಸಂಘ ಪರಿವಾರದವರು ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯ ಪಾತ್ರವಹಿಸಿದ್ದರು ಎಂದು ಹಸಿ ಸುಳ್ಳನ್ನು ಯುವ ಜನತೆ ತಲೆಗೆ ತುಂಬಲಾಗುತ್ತಿದೆ ಎಂದು ಹೇಳಿದರು.

ಸಿಪಿಐ (ಎಂ.ಎಲ್) ರೆಡ್‌ಸ್ಟಾರ್ ಪಕ್ಷದ ಕೇಂದ್ರ ಸಮಿತಿ ಸದಸ್ಯ ಬಸೀರ್ ಮಾತನಾಡಿ, ಫ್ಯಾಸಿಸ್ಟ್ ಶಕ್ತಿಯನ್ನು ಮಣಿಸಲು, ದೇಶದ ಸಂವಿಧಾನ ರಕ್ಷಿಸಲು ಎಡಪಕ್ಷಗಳು, ಪ್ರಗತಿಪರ ಸಂಘಟನೆಗಳು ಒಗ್ಗೂಡುವ ಮೂಲಕ ಐಕ್ಯ ಹೋರಾಟಕ್ಕೆ ಮುಂದಾಗಬೇಕೆಂದು ಕರೆ ನೀಡಿದರು.

ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ರಿಯಾಜ್ ಪೆಡಂಬೂರು ಮಾತನಾಡಿ, ದೇಶದ ಉಸಿರು ಸಂವಿಧಾನ. ಇಂತಹ ಸಂವಿಧಾನಕ್ಕೆ ಆಪತ್ತು ಬಂದೊದಗಿದೆ. ದೇಶವನ್ನು ಬೇರೆ ದಿಕ್ಕಿಗೆ ಕೊಂಡೊಯ್ಯುವ ಕೆಲಸ ನಡೆದಿದೆ. ದೇಶದಲ್ಲಿ ಆರ್‌ಎಸ್‌ಎಸ್‌ ಫ್ಯಾಸಿಸ್ಟ್ ಶಕ್ತಿ ವಿರೋಧಿಸುವವರು ಒಟ್ಟಾಗಬೇಕಾಗಿದೆ. ಸಂವಿಧಾನದಲ್ಲಿರುವ ಜಾತ್ಯತೀತ, ಸಮಾಜವಾದ ಪದ ತೆಗೆದುಹಾಕಬೇಕೆಂಬ ಒತ್ತಡಗಳು ಬರುತ್ತಿದ್ದು, ಇದಕ್ಕೆ ನಾವುಗಳು ಅವಕಾಶಮಾಡಿಕೊಡಬಾರದೆಂದು ತಿಳಿಸಿದರು.

ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿ ಕೇಂದ್ರ ಸರ್ಕಾರ ಮತ್ತು ಆರ್‌ಎಸ್‌ಎಸ್‌ ನೀತಿಯನ್ನು ಟೀಕಿಸುತ್ತಿದ್ದಾರೆ. ಅವರಿಗೆ ಆ ಪಕ್ಷದ ನಾಯಕರು ಬೆಂಬಲ ನೀಡುತ್ತಿಲ್ಲ, ಬದ್ಧತೆ ಪ್ರದರ್ಶಿಸುತ್ತಿಲ್ಲ, ಕಾಂಗ್ರೆಸ್ ಆಡಳಿತ ಅವಧಿ ಯಲ್ಲಿ ಇಂತಹ ಕೆಲಸ ನಿರ್ವಹಿಸುತ್ತಾ ಬಂದಿದ್ದರೆ ಆರ್‌ಎಸ್‌ಎಸ್‌ಗೆ ಅಧಿಕಾರ ಹಿಡಿಯುವ ಅವಕಾಶ ದೊರೆಯುತ್ತಿರಲಿಲ್ಲವೆಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಾಹಿತಿ ರವೀಶ್ ಬಸಪ್ಪ, ಬಹುತ್ವದ ಭಾರತವನ್ನು ಉಳಿಸಿಕೊಳ್ಳಬೇಕಾಗಿದೆ. ಮನುಷ್ಯರ ನಡುವೆ ಮುಳ್ಳಿನಬೇಲಿ, ತಡೆಗೋಡೆ ನಿರ್ಮಿಸುತ್ತಿದ್ದು, ಇದನ್ನು ಚಿದ್ರಗೊಳಿಸಬೇಕಾಗಿದೆ. ಜನಪರವನ್ನು ಗಟ್ಟಿಗೊಳಿಸ ಬೇಕಾಗಿದ್ದು, ಸತ್ಯದ ಪರವಾಗಿ ಧ್ವನಿ ಎತ್ತುವ ಕೆಲಸವಾಗಬೇಕು ಎಂದು ತಿಳಿಸಿದರು.

ದಲಿತ ಸಂಘರ್ಷ ಸಮಿತಿ ರಾಜ್ಯ ಸಮಿತಿ ಸದಸ್ಯ ಮರ್ಲೆ ಅಣ್ಣಯ್ಯ ಮಾತನಾಡಿ, ಸಂವಿಧಾನಕ್ಕೆ ಅಪಾಯದ ಸ್ಥಿತಿ ಬಂದೊದಗಿದೆ. ಪ್ರಗತಿಪರ ಸಂಘಟನೆಗಳು ಒಗ್ಗೂಡಿ ಹೋರಾಟ ನಡೆಸುವ ಮೂಲಕ ಪ್ರಪಂಚದಲ್ಲಿಯೇ ಉತ್ತಮ ಸಂವಿಧಾನವೆಂದು ಕರೆಸಿಕೊಳ್ಳುವ ಭಾರತದ ಸಂವಿಧಾನ ರಕ್ಷಣೆಗೆ ಸಂಕಲ್ಪ ಅಗತ್ಯ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಸಿಪಿಐ(ಎಂ.ಎಲ್.) ರಾಜ್ಯ ಕಾರ್ಯದರ್ಶಿ ಬಿ.ರುದ್ರಯ್ಯ ಮಾತನಾಡಿ, ಆರ್‌ಎಸ್‌ಎಸ್‌ಗೆ 100 ವರ್ಷ ತುಂಬಿದ ಹಿನ್ನಲೆಯಲ್ಲಿ ಫ್ಯಾಸಿಸ್ಟ್ ವಿರೋಧ ಹೋರಾಟ ತೀವ್ರಗೊಳಿಸಬೇಕಾಗಿದೆ. ಆರ್‌ಎಸ್‌ಎಸ್‌ ದೊಡ್ಡ ಸಂಘಟನೆ ಯಾಗಿದ್ದು ರಾಜ್ಯ, ಜಿಲ್ಲಾಮಟ್ಟದಲ್ಲಿ ದೊಡ್ಡಮಟ್ಟದ ಹೋರಾಟ ತೀವ್ರಗೊಳಿಸಬೇಕಾಗಿದೆ ಎಂದು ಹೇಳಿದರು.

ಕೆಪಿಸಿಸಿ ವಕ್ತಾರ ಎಚ್‌.ಎಚ್‌. ದೇವರಾಜ್ ಮಾತನಾಡಿ, ರೈತಸಂಘದ ಮುಖಂಡರಾಗಿದ್ದ ಪ್ರೊ. ನಂಜುಂಡಸ್ವಾಮಿ ಗರಡಿಯಲ್ಲಿ ಸಾಗಿ ಬಂದವರು. ಜೀವದ ಹಂಗುತೊರೆದು ಆರ್‌ಎಸ್‌ಎಸ್‌ ವಿರುದ್ಧ ಹೋರಾಟ ನಡೆಸಲಾಯಿತು. ಬೂಕರ್ ಪ್ರಶಸ್ತಿ ಪುರಸ್ಕೃತ ಬಾನುಮುಷ್ತಾಕ್ ದಸರಾ ಉದ್ಘಾಟನೆಗೆ ಒಂದು ವರ್ಗ ವಿರೋಧ ವ್ಯಕ್ತಪಡಿಸಿದ್ದು, ಸಾಹಿತಿ ಪರವಾಗಿ ನಾವೆಲ್ಲ ಜಿಲ್ಲೆಯಲ್ಲಿ ಧ್ವನಿ ಎತ್ತಬೇಕಾಗಿತ್ತೆಂದರು.

ರೈತ ಸಂಘದ ಜಿಲ್ಲಾಧ್ಯಕ್ಷ ಡಿ.ಮಹೇಶ್, ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ದಂಟರಮಕ್ಕಿ ಶ್ರೀನಿವಾಸ್‌, ಸಂವಿಧಾನ ಉಳಿಸಿ ಹೋರಾಟ ವೇದಿಕೆ ಮುಖಂಡ ಕೃಷ್ಣಮೂರ್ತಿ ಮಾತನಾಡಿದರು.

ವಿವಿಧ ಸಂಘಟನೆ ಮುಖಂಡರಾದ ಗುರುಶಾಂತಪ್ಪ, ಗೌಸ್‌ ಮೊಹಿಯುದ್ದೀನ್, ಅಂಗಡಿ ಚಂದ್ರು, ಗಂಗಾಧರ, ಉಮೇಶ್‌ ಕುಮಾರ್, ಮಂಜುನಾಥ, ಕೃಷ್ಣಪ್ಪ, ಬೊಗಸೆ ಸಂದೀಪ, ನಾಗೇಶ್, ಹುಲ್ಲೇಮನೆ ಶಂಕರ್, ಕಾರ್ಮಿಕ ಸಂಘಟನೆಯ ಕೃಷ್ಣಪ್ಪ, ಬಾಚಿಗನಹಳ್ಳಿ ಮಂಜಯ್ಯ, ಹುಣಸೆಮಕ್ಕಿ ಲಕ್ಷ್ಮಣ್, ಛಲವಾದಿ ಸಂಘಟನೆಯ ರಘು, ಎಸ್‌ಡಿಪಿಐ ಗೌಸ್‌ ಮುನೀರ್ ಇದ್ದರು. ಹರೀಶ್ ನೆಲ್ಕೆ ಕಾರ್ಯಕ್ರಮ ನಿರೂಪಿಸಿದರು. 27 ಕೆಸಿಕೆಎಂ 5ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ಸಿಪಿಐ (ಎಂ.ಎಲ್), ದಲಿತ ಸಂಘಟನೆಗಳ ಒಕ್ಕೂಟ ಸೇರಿದಂತೆ ಜಿಲ್ಲೆಯ ಪ್ರಗತಿಪರ ಸಂಘಟನೆಗಳು ಸಹಯೋಗದಲ್ಲಿ ಶನಿವಾರ ಆರ್‌ಎಸ್ಎಸ್‌ ಹಿಂದುತ್ವ- ಸಂವಿಧಾನ ಮತ್ತು ಪ್ರಜಾಪ್ರಭುತ್ವ ಕುರಿತು ವಿಚಾರ ಸಂಕಿರಣ ನಡೆಯಿತು.

PREV

Recommended Stories

ಅ.4ರಿಂದ ಅಂತಾರಾಜ್ಯ ವಿವಿ ಕಬಡ್ಡಿ ಕ್ರೀಡಾಕೂಟ
ಜಾನಪದ ಕಲೆ ಉಳಿಸಲು ಸಂಘಟನೆಗಳ ಪಾತ್ರ ಪ್ರಮುಖ: ಎಂ.ಎಂ. ವಿರಕ್ತಮಠ