ಸ್ಥಳೀಯ ಕಲಾವಿದರಿಗೆ ಪ್ರೋತ್ಸಾಹ ಅಗತ್ಯ: ಕೆ.ಎನ್. ರಾಜಣ್ಣ

KannadaprabhaNewsNetwork |  
Published : Sep 28, 2025, 02:00 AM IST

ಸಾರಾಂಶ

ನಾವು ಕಿರಿ ವಯಸ್ಸಿನಲ್ಲಿದ್ದಾಗ ಹಾಸ್ಯ ನಟರಾದ ನರಸಿಂಹರಾಜು ಅವರು ತೆರೆ ಮೇಲೆ ಬಂದರೆ ಮನರಂಜನೆಯ ಹೊಳೆಯೇ ಹರಿಯುತ್ತಿತ್ತು.

ಕನ್ನಡಪ್ರಭ ವಾರ್ತೆ ತುಮಕೂರು

ದಸರಾ ಉತ್ಸವ ಸೇರಿದಂತೆ ಇತರೆ ಕಾರ್ಯಕ್ರಮಗಳಲ್ಲಿ ಸ್ಥಳೀಯ ಕಲಾವಿದರಿಗೆ ಪ್ರೋತ್ಸಾಹ ನೀಡುವುದು ಅಗತ್ಯವಾಗಿದೆ ಎಂದು ಶಾಸಕ ಹಾಗೂ ಮಾಜಿ ಸಚಿವ ಕೆ.ಎನ್. ರಾಜಣ್ಣ ಹೇಳಿದರು.

ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ದಸರಾ ಉತ್ಸವದ ಅಂಗವಾಗಿ ನಿರ್ಮಿಸಲಾಗಿರುವ ಹಾಸ್ಯನಟ ಶ್ರೀ ನರಸಿಂಹರಾಜು ವೇದಿಕೆಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಲಾವಿದರನ್ನು ಅಭಿನಂದಿಸಿ ಅವರು ಮಾತನಾಡಿದರು.

ನಾವು ಕಿರಿ ವಯಸ್ಸಿನಲ್ಲಿದ್ದಾಗ ಹಾಸ್ಯ ನಟರಾದ ನರಸಿಂಹರಾಜು ಅವರು ತೆರೆ ಮೇಲೆ ಬಂದರೆ ಮನರಂಜನೆಯ ಹೊಳೆಯೇ ಹರಿಯುತ್ತಿತ್ತು. ಅಂದು ನಾವು ಟೂರಿಂಗ್ ಟಾಕೀಸ್‌ಗಳಲ್ಲಿ ಸಿನಿಮಾ ನೋಡಲು ಹೋಗುತ್ತಿದ್ದೆವು. ನರಸಿಂಹರಾಜುರವರಂತಹ ಮೇರು ಕಲಾವಿದರು ನಮ್ಮ ಜಿಲ್ಲೆಯವರು ಎನ್ನುವುದು ಹೆಮ್ಮೆಯ ಸಂಗತಿ ಎಂದರು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಸಿನಿಮಾಗಳಲ್ಲೂ ಮನರಂಜನೆ ಮಾಯವಾಗುತ್ತಿದೆ. ದಸರಾ ಉತ್ಸವ, ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಮನರಂಜನೆ ನೀಡುವ ಕಾರ್ಯ ನಡೆಯುತ್ತಿರುವುದು ಉತ್ತಮವಾಗಿದೆ. ಹಿಂದಿನಿಂದ ಬಂದಿರುವ ಪೌರಾಣಿಕ ನಾಟಕಗಳು ಮನರಂಜನೆ ನೀಡುವಲ್ಲಿ ಯಶಸ್ವಿಯಾಗುತ್ತಲೇ ಇವೆ ಎಂದರು.

ದಸರಾ ಅಂಗವಾಗಿ ಕಲಾಕೃತಿಗಳ ಪ್ರದರ್ಶನ, ವಸ್ತು ಪ್ರದರ್ಶನ ವ್ಯವಸ್ಥೆ ಮಾಡಲಾಗಿದ್ದು, ಜಿಲ್ಲೆ ಹಾಗೂ ಹೊರ ಜಿಲ್ಲೆಗಳ ಜನರ ವೀಕ್ಷಣೆಗೆ ಅನುವು ಮಾಡಿಕೊಡಲಾಗಿದೆ. ಜನರಿಗೆ ಈ ವಸ್ತುಪ್ರದರ್ಶನಗಳಿಂದ ಅಗತ್ಯ ಮಾಹಿತಿ ಒದಗಿಸುವ ಪ್ರಯತ್ನ ನಡೆದಿರುವುದು ಉತ್ತಮ ಕಾರ್ಯವಾಗಿದೆ ಎಂದರು.

ದಸರಾ ಆಚರಣೆ ಸಂಪ್ರದಾಯವನ್ನು ಜಿಲ್ಲಾಡಳಿತ ಮುಂದುವರೆಸಿಕೊಂಡು ಹೋಗಲಿ ಎಂದು ಅವರು ಆಶಿಸಿದರು.

ತುಮಕೂರು ದಸರಾ ಉತ್ಸವವನ್ನು 2ನೇ ಬಾರಿಗೆ ಜಿಲ್ಲಾಡಳಿತದ ವತಿಯಿಂದ ಆಚರಿಸಲಾಗುತ್ತಿದೆ. ಈ ಬಾರಿ ಕಳೆದ ವರ್ಷಕ್ಕಿಂತ ಅದ್ದೂರಿಯಾಗಿ, ವೈಭವೋಪೇತವಾಗಿ ದಸರಾ ಆಚರಿಸಲಾಗುತ್ತಿದೆ. ದಸರಾ ಉತ್ಸವವನ್ನು ಬಹಳ ಅಚ್ಚುಕಟ್ಟಾಗಿ ಆಚರಿಸುತ್ತಿರುವ ಜಿಲ್ಲಾಡಳಿತಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್ ಮತ್ತಿತರರು ಉಪಸ್ಥಿತರಿದ್ದರು.

PREV

Recommended Stories

ಅ.4ರಿಂದ ಅಂತಾರಾಜ್ಯ ವಿವಿ ಕಬಡ್ಡಿ ಕ್ರೀಡಾಕೂಟ
ಜಾನಪದ ಕಲೆ ಉಳಿಸಲು ಸಂಘಟನೆಗಳ ಪಾತ್ರ ಪ್ರಮುಖ: ಎಂ.ಎಂ. ವಿರಕ್ತಮಠ