- ಹಿಂದೂ ಸಂಗಮ ಜಾಗೃತಿ ಸಮಾರಂಭದಲ್ಲಿ ಆರ್‌ಎಸ್‌ಎಸ್ ಮುಖಂಡ ಸತೀಶ್ ಪೂಜಾರಿ
ಕನ್ನಡಪ್ರಭ ವಾರ್ತೆ ಮಲೇಬೆನ್ನೂರು
ಹಿಂದು ಸಂಘಟನೆಗೆ ಸಮನ್ವಯ, ಕುಟುಂಬ ನಿರ್ವಹಣೆ, ಸ್ವದೇಶಿ ವಸ್ತುಗಳ ಬಳಕೆ, ಪರಿಸರ, ನಾಗರೀಕ ಶಿಷ್ಟಾಚಾರ ಇವುಗಳು ತುರ್ತು ಅಗತ್ಯವಾಗಿವೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಭಾರತದ ಸಹ ಸಂಚಾಲಕ ಸತೀಶ್ ಪೂಜಾರಿ ಹೇಳಿದರು. ಪಟ್ಟಣದ ಜಲಸಂಪನ್ಮೂಲ ಇಲಾಖೆ ಆವರಣದಲ್ಲಿ ನಾಲ್ಕು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿಂದೂ ಸಂಗಮ ಜಾಗೃತಿ ಸಮಾರಂಭದಲ್ಲಿ ಅವರು ಮಾತನಾಡಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ 100 ವರ್ಷ ತುಂಬಿದ ಅಂಗವಾಗಿ ಜನಜಾಗೃತಿ ಮೂಡಿಸಲು ಹಿಂದೂ ಸಂಗಮ ಕಾರ್ಯಕ್ರಮ ಆಯೋಜಿಸಲಾಗಿದೆ. ಹಿಂದೂ ಧರ್ಮ ಯಾರ ಮೇಲೆಯೂ ದಬ್ಬಾಳಿಕೆ ಮಾಡುವುದಿಲ್ಲ. ದೇಶಾದ್ಯಂತ ಹಿಂದುಗಳ ಸಂಘಟನೆ ಮಾಡುತ್ತೇವೆಯೇ ಹೊರತು, ಜನ್ಮದಿನವಾಗಲೀ, ರಾಜಕೀಯ ಸಮಾರಂಭವಾಗಲಿ ಮಾಡುವುದಿಲ್ಲ ಎಂದರು.ಭಗವಧ್ಗೀತೆ, ರಾಮಾಯಣದ ಕತೆಗಳು, ಸ್ವಾಮಿ ವಿವೇಕಾನಂದ, ಸಂಗೊಳ್ಳಿ ರಾಯಣ್ಣ, ಛತ್ರಪತಿ ಶಿವಾಜಿ, ಮದನ್ ಲಾಲ್ ಬಿಂದ್ರಾ, ಒನಕೆ ಓಬವ್ವ, ಕಿತ್ತೂರು ಚನ್ನಮ್ಮ, ಭಗತ್ ಸಿಂಗ್ ಮತ್ತಿತರೆ ದೇಶಪ್ರೇಮಿಗಳ ಮಾಹಿತಿಯನ್ನು ಮಕ್ಕಳಿಗೆ ತಿಳಿಸಬೇಕಿದೆ. ಜತೆಗೆ ಭಜನೆಯೂ ಅಗತ್ಯವಿದೆ. ಭಜನೆ ಇಲ್ಲದಿದ್ದರೆ ಭಾರತ ವಿಭಜನೆ ಖಂಡಿತಾ ಎಂದ ಸತೀಶ್, ದಾವಣಗೆರೆಯಲ್ಲಿ ಡ್ರಗ್ ಪ್ರಕರಣ, ಲವ್ ಜಿಹಾದ್ ಘಟನೆಗಳು ನಡೆದರೂ ಪೋಲಿಸರು ರಾಜಕಾರಣಿಗಳ ಒತ್ತಡಕ್ಕೆ ಮಣಿಯುತ್ತಾರೆ ಎಂದು ದೂರಿದರು.
ಆರ್‌ಎಸ್‌ಎಸ್ ಸಂಘಟನೆಯ ಸುರೇಶ್, ಉಮೇಶ್, ಪ್ರದೀಪ್, ಮಂಗಳಮ್ಮ, ಮಹಂತೇಶ್ ಹಾಗೂ ಸಾವಿರಾರು ಅಭಿಮಾನಿಗಳು ಇದ್ದರು. ಅಂಗನವಾಡಿ ಮಕ್ಕಳ ವಿವಿಧ ಮಹಾತ್ಮರ ವೇಷಭೂಷಣ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಕೃತಿಕಾ ಪ್ರಾರ್ಥಿಸಿದರು. ವಂದೇ ಮಾತರಂ ಗೀತೆ ಹಾಡಲಾಯಿತು.
(ಕೋಟ್) ವಿಶ್ವವಿಖ್ಯಾತ ತಾಜ್ ಮಹಲ್ ಅನ್ನು ವರ್ಷಕ್ಕೆ ೧೧ ಲಕ್ಷ ಜನ ವೀಕ್ಷಣೆ ಮಾಡಿದ್ದರು. ಪ್ರಸ್ತುತ ಕೋಟಿ ಭಾರತೀಯರ ಕನಸು ಅಯೋಧ್ಯೆ ಶ್ರೀರಾಮ ಮಂದಿರವನ್ನು ವರ್ಷಕ್ಕೆ ೧೧ ಕೋಟಿ ಭಕ್ತರು ವೀಕ್ಷಣೆ ಮಾಡುತ್ತಾರೆ. ಅದು ಭಾರತದ ಸೌಭಾಗ್ಯವಾಗಿದೆ.
- ಸತೀಶ್ ಪೂಜಾರಿ, ಸಹ ಸಂಚಾಲಕ.- - -