ನಾಗರಮಕ್ಕಿ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಹಿಂದೂ ಸಮಾಜೋತ್ಸವ
ಸನಾತನ ಧರ್ಮದಿಂದಲೇ ಇಂದು ಹಿಂದೂಗಳು ದೇಶದಲ್ಲಿ ತಲೆ ಎತ್ತಿ ನಿಲ್ಲಲು ಸಾಧ್ಯವಾಗಿದೆ ಎಂದು ಗೌರಿ ಗದ್ದೆಯ ಅವಧೂತ ಶ್ರೀ ವಿನಯ ಗುರೂಜಿ ತಿಳಿಸಿದರು.
ಭಾನುವಾರ ನಾಗರಮಕ್ಕಿ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಹಿಂದೂ ಸಮಾಜೋತ್ಸವ ಆಯೋಜನಾ ಸಮಿತಿ ಆಶ್ರಯದಲ್ಲಿ ನಡೆದ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿದ್ಯ ವಹಿಸಿ ಆರ್ಶೀರ್ವಾಚನ ನೀಡಿದರು.ಗೋವಿಗೆ, ತೀರ್ಥಕ್ಕೆ , ಭೂಮಿಗೆ, ಹೆತ್ತ ತಾಯಿಗೆ ಮೊದಲ ಸ್ಥಾನ ನೀಡಿದವರು ಹಿಂದೂಗಳು. ಇತ್ತೀಚಿನ ವರ್ಷಗಳಲ್ಲಿ ಮಕ್ಕಳು ತಂದೆ, ತಾಯಿ ಯನ್ನು ವೃದ್ದಾಶ್ರಮಕ್ಕೆ ಸೇರಿಸುತ್ತಿದ್ದಾರೆ. ತಂದೆ, ತಾಯಿಯನ್ನು ಸರಿಯಾಗಿ ನೋಡಿಕೊಳ್ಳದೆ ಇರುವವರು ದೇಶವನ್ನು ಕಟ್ಟಲು ಸಾಧ್ಯವೇ ಎಂದು ಪ್ರಶ್ನೆ ಮಾಡಿಕೊಳ್ಳಬೇಕಾಗಿದೆ. ಸರಿಯಾಗಿ ಸಂಸ್ಕಾರ ಸಿಗದೆ ಇರುವುದೇ ಮಕ್ಕಳ ಇಂತಹ ನಡವಳಿಕೆಗೆ ಕಾರಣ. ತಾಯಂದಿರು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು. ಹಿಂದಿನ ಕಾಲದಲ್ಲಿ ತಾಯಿ ಬೇರು ಗಟ್ಟಿಯಾಗಿತ್ತು. ಈಗ ತಾಯಿ ಶಕ್ತಿ ಕಡಿಮೆಯಾಗಿದೆ ಎಂದರು.
ಸಭೆ ಅಧ್ಯಕ್ಷತೆ ವಹಿಸಿದ್ದ ಸಾಮಾಜಿಕ ಕಾರ್ಯಕರ್ತ ಬೆಮ್ಮನೆ ಮೋಹನ್ ಮಾತನಾಡಿ, ಹಿಂದೂಗಳು ಒಂದು ಕುಟುಂಬದವರಂತೆ ಇದ್ದು ಒಟ್ಟಾಗಿ ದೇಶ ಕಟ್ಟೋಣ.ನಾವು ಸಮಾಜದಿಂದ ಪಡೆದಿದ್ದನ್ನು ಸಮಾಜಕ್ಕೆ ಅರ್ಪಿಸಬೇಕಾಗಿದೆ ಎಂದರು. ಬೆಮ್ಮನೆ ಕೃಷ್ಣಮೂರ್ತಿ ಮತ್ತು ತಂಡದವರು ಅಂಟಿಕೆ-ಪಿಂಟಿಕೆ ಹಾಡಿನೊಂದಿಗೆ ಜ್ಯೋತಿ ತಂದು ದೀಪ ಬೆಳಗಿಸಿದರು.
ಮಹಿಳಾ ವಕ್ತಾರೆ ಕಡೇಗದ್ದೆಯ ಡಾ.ಪ್ರತೀಕ್ಷಾ ಆರ್. ಕಾರಂತ್ ,ಸೀತೂರಿನ ಯಕ್ಷಗಾನ ಕಲಾವಿದ ಅನಂತಪದ್ಮನಾಭ , ತಾಲೂಕು ಹಿಂದೂ ಸಮಾಜೋತ್ಸವ ಆಯೋಜನಾ ಸಮಿತಿ ಸಂಯೋಜಕ ಯಡಗೆರೆ ಸುಬ್ರಮಣ್ಯ, ಬಿ.ಎಸ್.ರಾಮಚಂದ್ರ, ಅನಿಲ್ ಕುಮಾರ್ , ಸಾಲೇಸಿಮಕ್ಕಿ ಚೇತನ್ ಇದ್ದರು.