ಕನ್ನಡಪ್ರಭ ವಾರ್ತೆ ಉಡುಪಿ
ಹಿಂದೂ ಧರ್ಮೀಯರು ಆಚರಣೆ ಮಾಡುವ ಬೆಳಕಿನ ಹಬ್ಬದ ಮಹತ್ವವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಅಗತ್ಯ ಇದೆ ಎಂದು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ತಿಳಿಸಿದರು.ಅವರು ಇಲ್ಲಿನ ಮೂಡುಬೆಟ್ಟು ಶ್ರೀ ಸಾಯಿಬಾಬಾ ಮಂದಿರದಲ್ಲಿ ಜಿಲ್ಲಾ ಶಬರಿಮಲೆ ಅಯ್ಯಪ್ಪ ಸಮಾಜಂ ಮತ್ತು ಅದರ ಮಹಿಳಾ ಘಟಕ, ಎ.ಪಿ.ಎಂ.ಸಿ. ರಕ್ಷಣಾ ಸಮಿತಿಗಳ ಸಹಭಾಗಿತ್ವದಲ್ಲಿ ನಡೆದ ಗೂಡುದೀಪ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.ದೀಪಾವಳಿ ಹಬ್ಬವನ್ನು ನಮ್ಮ ಹಿರಿಯರು ಬಹಳ ಶ್ರದ್ಧಾಭಕ್ತಿಯಿಂದ ಸಂಪ್ರದಾಯಬದ್ಧವಾಗಿ ಆಚರಿಸುತ್ತಿದ್ದರು. ಆದರೆ ಈಗಿನ ಯುವಪೀಳೀಗೆ ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗಿ ನಮ್ಮ ಸಂಸ್ಕೃತಿ, ಸಂಪ್ರದಾಯವನ್ನು ಮರೆಯುತ್ತಿದ್ದಾರೆ. ಅದನ್ನು ಈ ಗೂಡುದೀಪ ಸ್ಪರ್ಧೆಯ ಮುಖೇನ ಸಂಪ್ರದಾಯದ ಅರಿವು ಮೂಡಿಸುವ ಈ ಸಂಘಟಕರ ಕೆಲಸವನ್ನು ಮೆಚ್ಚುವಂತದ್ದು ಎಂದು ಆಯೋಜಕರನ್ನು ಅಭಿನಂದಿಸಿದರು.ಕಾರ್ಯಕ್ರಮದಲ್ಲಿ ಶಬರಿಮಲೆ ಅಯ್ಯಪ್ಪ ಸಮಾಜಂನ ಗೌರವಾಧ್ಯಕ್ಷ ಹರಿಯಪ್ಪ ಕೋಟ್ಯಾನ್, ಸಾಯಿಬಾಬಾ ಮಂದಿರದ ಧರ್ಮದರ್ಶಿ ದಿವಾಕರ ಶೆಟ್ಟಿ, ಉಡುಪಿ ನಗರಸಭಾಧ್ಯಕ್ಷ ಪ್ರಭಾಕರ ಪೂಜಾರಿ, ಉಡುಪಿ ಸಿರಿತುಳುವ ಚಾವಡಿಯ ಕಾರ್ಯಾಧ್ಯಕ್ಷ ಈಶ್ವರ್ ಶೆಟ್ಟಿ ಚಿಟ್ಪಾಡಿ ಮಾತನಾಡಿದರು.ವೇದಿಕೆಯಲ್ಲಿ ಶಬರಿಮಲೆ ಅಯ್ಯಪ್ಪ ಸಮಾಜಂ ಉಪಾಧ್ಯಕ್ಷ ಗೋಪಾಲ್ ಗುರುಸ್ವಾಮಿ, ಎ.ಪಿ.ಎಂ.ಸಿ. ರಕ್ಷಣಾ ಸಮಿತಿಯ ವಿರೂಪಾಕ್ಷ, ಸಮಾಜಸೇವಕ ಸುಭಾಷಿತ್, ಶಬರಿಮಲೆ ಅಯ್ಯಪ್ಪ ಸಮಾಜಂ ಕಾಪು ವಲಯಾಧ್ಯಕ್ಷ ರಘರಾಮ ಶೆಟ್ಟಿ, ಮಾಧ್ಯಮ ಸಂಚಾಲಕಿ ಯಶೋದ ಕೇಶವ್ ಉಪಸ್ಥಿತರಿದ್ದರು.ಕಾರ್ಯಕ್ರಮದ ಸಂಯೋಜಕರಾದ ಉಡುಪಿ ನಗರಸಭಾ ಸದಸ್ಯ ವಿಜಯ ಕೊಡವೂರು ಪ್ರಾಸ್ತಾವಿಕ ಮಾತನಾಡಿದರು. ಶಬರಿಮಲೆ ಅಯ್ಯಪ್ಪ ಸಮಾಜಂನ ಅಧ್ಯಕ್ಷ ರಾಧಾಕೃಷ್ಣ ಮೆಂಡನ್ ಸ್ವಾಗತ ಮಾಡಿದರು, ಕಾರ್ಯದರ್ಶಿ ರಂಜಿತ್ ಶೆಟ್ಟಿ ವಂದಿಸಿದರು. ಜ್ಯೋತಿ ಎಸ್. ದೇವಾಡಿಗ ಪ್ರಾರ್ಥನೆ ಮಾಡಿದರು. ಕನ್ನಡ ಉಪನ್ಯಾಸಕರ ರಾಮಾಂಜಿ ಕಾರ್ಯಕ್ರಮ ನಿರೂಪಿಸಿದರು.ಗೂಡುದೀಪ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು. ವಿಜೇತರಿಗೆ ಸಮಾರೋಪದಲ್ಲಿ ಗಣ್ಯರ ಸಮ್ಮುಖದಲ್ಲಿ ಬಹುಮಾನ ವಿತರಿಸಲಾಯಿತು.