ಹನುಮಸಾಗರ : ಹಿಂದೂ ಧರ್ಮ ಸಧೃಡವಾಗಿ ಬೆಳೆಯಬೇಕಾದರೆ ಹಿಂದೂಗಳು 8 ರಿಂದ 10 ಮಕ್ಕಳಿಗೆ ಜನ್ಮ ನೀಡಬೇಕು ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.
ಸಮೀಪದ ವೆಂಕಟಾಪುರ ಗ್ರಾಮದ ಬೀರಲಿಂಗೇಶ್ವರ 2ನೇ ವರ್ಷದ ಜಾತ್ರಾ ಮಹೋತ್ಸವದ ನಿಮಿತ್ತ ಶನಿವಾರ ಹಮ್ಮಿಕೊಂಡಿದ್ದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಭಾರತೀಯ ಸಂಸ್ಕೃತಿ ಬೆಳೆಯಬೇಕಾದರೆ ಹಿಂದೂ ಧರ್ಮದಲ್ಲಿ ಇರುವ ಎಲ್ಲಾ ಜಾತಿಯವರು ಒಗ್ಗಟ್ಟಾಗಬೇಕು. ಭಾರತೀಯ ಸಂಸ್ಕೃತಿಯಲ್ಲಿ ವಿವಾಹಕ್ಕೆ ಹೆಚ್ಚು ಮಹತ್ವ ನೀಡಲಾಗಿದೆ. ಸಾಮೂಹಿಕ ವಿವಾಹದಲ್ಲಿ ಮದುವೆ ಆಗುವವರು ಭಾಗ್ಯವಂತರು. ನವ ದಂಪತಿಗಳು ಅದನ್ನು ಕಾಪಾಡಿಕೊಳ್ಳಬೇಕು. ಅವರಿಗೆ ಸ್ವಾಮೀಜಿಗಳು, ವಿವಿಧ ಗಣ್ಯರು ಹಾಗೂ ಗುರು ಹಿರಿಯರ ಆಶೀರ್ವಾದ ದೊರೆಯುತ್ತದೆ. ಇಂದು ಮದುವೆ ಆಗುತ್ತಿರುವ ಪುರುಷರು ದುಶ್ಚಟಗಳನ್ನು ಬಿಟ್ಟು ಬಿಡುತ್ತೇನೆ ಎಂದು ಪ್ರತಿಜ್ಞೆ ಮಾಡಬೇಕು. ನವ ದಂಪತಿಗಳು ವರ್ಷ ತುಂಬುವುದರೊಳಗೆ ಗಂಡು ಮಗುವಿಗೆ ಜನ್ಮ ನೀಡಿ. ಪಾಲಕರು ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ. ಶಿಕ್ಷಣದಿಂದ ಮಾತ್ರ ನಿಮ್ಮ ಭವಿಷ್ಯ ಉಜ್ವಲವಾಗಲು ಸಾಧ್ಯ ಎಂದರು.
ಶಾಸಕ ದೊಡ್ಡನಗೌಡ ಎಚ್. ಪಾಟೀಲ್ ಮಾತನಾಡಿ, ಸಮಾಜದಲ್ಲಿ ಇಂದು ಮಾನವೀಯ ಮೌಲ್ಯಗಳು ನಾಶವಾಗುತ್ತಿರುವುದು ವಿಷಾದನೀಯ. ತಂದೆ-ತಾಯಿಗಳ ಕಣ್ಣಲ್ಲಿ ನೀರು ಬರುವ ಕೆಲಸವನ್ನು ಮಕ್ಕಳು ಮಾಡಬಾರದು. ತಂದೆ-ತಾಯಿಗಳನ್ನು ಗೌರವದಿಂದ ಕಂಡು. ಅವರನ್ನು ಸರಿಯಾಗಿ ನೋಡಿಕೊಂಡು ಹೋಗಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಒಳ್ಳೆಯ ಸಂಸ್ಕಾರವನ್ನು ಸಹ ನೀಡಬೇಕು. ಒಗ್ಗಟ್ಟಿನಿಂದ ಮಾತ್ರ ಒಂದು ಸಮುದಾಯ, ಒಂದು ಗ್ರಾಮ ಅಭಿವೃದ್ಧಿ ಆಗಲು ಸಾಧ್ಯ ಎಂದರು.
ಬಾದಿಮನಾಳ ಕನಕ ಗುರು ಪೀಠದ ಶಿವಸಿದ್ದೇಶ್ವರ, ಕೊರಡಕೇರಾ ಗ್ರಾಮದ ಸಂಗಯ್ಯ ಗುರುವಿನ ಸ್ವಾಮೀಜಿ, ನಿಂಗನಗೌಡ ಸಾರಾಂಗಮಠ, ಗುರುಸಂಗನಗೌಡ ಸಾರಾಂಗಮಠ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು.
ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ಎಚ್.ಎಸ್. ಸೋಂಪುರ, ಹಾಲುಮತ ಸಮುದಾಯದ ತಾಲೂಕಾಧ್ಯಕ್ಷ ಮಲ್ಲಣ್ಣ ಪಲ್ಲೆದ, ಬಿಜೆಪಿ ಮಾಜಿ ತಾಲ್ಲೂಕಾಧ್ಯಕ್ಷ ಬಸವರಾಜ ಹಳ್ಳೂರು, ಜಿಪಂ ಮಾಜಿ ಸದಸ್ಯ ಕೆ. ಮಹೇಶ, ಗ್ರಾಪಂ ಅಧ್ಯಕ್ಷೆ ರೇಖಾ ಹನಮಂತ ಲಂಡೂರಿ, ತಾಪಂ ಮಾಜಿ ಸದಸ್ಯ ಮುತ್ತಣ್ಣ ಯರಗೇರಿ, ಯಲಬುರ್ಗಾ ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಪ್ರಕಾಶ ಚೂರಿ, ಸಂತೋಷ ಕುದರಿ, ಮುಖಂಡರಾದ ಮಹಾಂತೇಶ ಗಣವರಿ, ಶಂಕರ ಕರಪಾಡಿ, ವೀರನಗೌಡ ಬಳೂಟಗಿ, ಮಂಜು ನಾಲಗಾರ, ವೀರಣ್ಣ ಹಳೇಗೌಡರ, ಲಕ್ಷ್ಮಮ್ಮ ಠಕ್ಕಳಕಿ, ಎಚ್.ಎಂ. ಗೌಡ್ರ, ಮಂಜು ಮಾಳಗೇರ ಇತರರು ಇದ್ದರು.