ಉಡುಪಿ: ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ರಾಷ್ಟ್ರ ಧ್ವಜಕ್ಕಾಗುವ ಅಪಮಾನವನ್ನು ತಡೆಗಟ್ಟಲು ಹಾಗೂ ರಾಷ್ಟ್ರಧ್ವಜಗಳ ಮಾರಾಟವನ್ನು ನಿಷೇಧಿಸಲು ಆಗ್ರಹಿಸಿ, ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಉಡುಪಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಎಲ್ಲ ತಹಸೀಲ್ದಾರರಿಗೆ ಮನವಿ ನೀಡಲಾಯಿತು. ರಾಷ್ಟ್ರಧ್ವಜವು ರಾಷ್ಟ್ರದ ಭಾವೈಕ್ಯತೆಯ ಸಂಕೇತವಾಗಿದೆ. ಆಗಸ್ಟ್ 15 ಮತ್ತು ಜನವರಿ 26ರಂದು ರಾಷ್ಟ್ರಧ್ವಜವನ್ನು ಹೆಮ್ಮೆಯಿಂದ ಪ್ರದರ್ಶಿಸುತ್ತೇವೆ. ಆದರೆ ಅದೇ ದಿನ ಬಳಸಿದ ರಾಷ್ಟ್ರಧ್ವಜಗಳು ಕಸ ಮತ್ತು ಚರಂಡಿಗಳಲ್ಲಿ ಕಾಣಸಿಗುತ್ತವೆ. ಅಲ್ಲಿ ಅನೇಕ ದಿನಗಳವರೆಗೆ ಈ ರಾಷ್ಟ್ರಧ್ವಜಗಳಿಗಾಗುವ ಅವಮಾನವನ್ನು ನೋಡಬೇಕಾಗುತ್ತದೆ. ಪ್ಲಾಸ್ಟಿಕ್ ಧ್ವಜಗಳು ಬೇಗನೆೇ ನಾಶವಾಗದ ಕಾರಣ ಪರಿಸರಕ್ಕೂ ಹಾನಿಯಾಗುತ್ತದೆ. ಪ್ಲಾಸ್ಟಿಕ್ ರಾಷ್ಟ್ರಧ್ವಜದ ತಯಾರಿಕೆ ಹಾಗೂ ಮಾರಾಟ ಮಾಡದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ನೀಡಲಾಯಿತು.
ಸುಪ್ರೀಂ ಕೋರ್ಟಿನ ಆದೇಶ ಉಲ್ಲಂಘನೆ !: ಪ್ಲಾಸ್ಟಿಕ್ ಬಳಸಿ ರಾಷ್ಟ್ರಧ್ವಜದ ಅಪಮಾನವನ್ನು ನಿಲ್ಲಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಅದರಂತೆ ಕೇಂದ್ರ ಮತ್ತು ರಾಜ್ಯ ಗೃಹ ಇಲಾಖೆಗಳು ಹಾಗೂ ಶಿಕ್ಷಣ ಇಲಾಖೆಗಳು ಸುತ್ತೋಲೆಗಳನ್ನು ಹೊರಡಿಸಿದ್ದವು. ಅದರ ಪ್ರಕಾರ ಪ್ಲಾಸ್ಟಿಕ್ ರಾಷ್ಟ್ರಧ್ವಜಗಳ ಮಾರಾಟ ಸಂವಿಧಾನಬಾಹಿರವಾಗಿದೆ. ಆದರೂ ಅನೇಕ ಕಡೆಗಳಲ್ಲಿ ಪ್ಲಾಸ್ಟೀಕ್ ದ್ವಜಗಳ ಮಾರಾಟ ನಡೆಯುತ್ತಿದೆ. ಇದನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.