ಹಿಪ್ಪು ನೇರಳೆ ಬೆಳೆಗೆ ವ್ಯಾಪಕ ಸುರುಳಿಕೀಟ ಬಾಧೆ!

KannadaprabhaNewsNetwork |  
Published : Aug 14, 2024, 12:58 AM IST
1.ಹಿಪ್ಪುನೇರಳೆ ಬೆಳೆಗೆ ಸುರುಳಿಕೀಟ ಬಾಧಿಸಿರುವುದು | Kannada Prabha

ಸಾರಾಂಶ

ಈ ಕೀಟದ ನಿರ್ವಹಣೆಗಾಗಿ ಅನುಸರಿಸಬೇಕಾದ ತಾಂತ್ರಿಕತೆ ಅಂಶಗಳನ್ನು ಚನ್ನಪಟ್ಟಣ ರೇಷ್ಮೆ ತರಬೇತಿ ಶಾಲೆ ಪ್ರಾಂಶುಪಾಲ ಕುಮಾರ್ ಸುಬ್ರಹ್ಮಣ್ಯ ಕನ್ನಡಪ್ರಭದೊಂದಿಗೆ ಹಂಚಿಕೊಂಡಿದ್ದಾರೆ. ಈ ಕಾರ್ಯತಂತ್ರಗಳನ್ನು ಯಥಾವತ್ತಾಗಿ ಅನುಸರಿಸದಿದ್ದಲ್ಲಿ ಹಾನಿ ನಿಶ್ಚಿತ ಎಂದು ಚನ್ನಪಟ್ಟಣ ರೇಷ್ಮೆ ತರಬೇತಿ ಶಾಲೆ ಪ್ರಾಂಶುಪಾಲ ಕುಮಾರ್ ಸುಬ್ರಹ್ಮಣ್ಯ ಎಚ್ಚರಿಸಿದ್ದಾರೆ.

ಕನ್ನಡಪ್ರಭ ವಾರ್ತೆ ರಾಮನಗರ

ಹಿಪ್ಪು ನೇರಳೆ ಬೆಳೆಗೆ ಬಾಧಿಸಿರುವ ನುಸಿ ಪೀಡೆ ನಿಯಂತ್ರಣಕ್ಕೆ ಬಾರದೇ ರೇಷ್ಮೆ ಬೆಳೆಗಾರರು ಕಳವಳದಲ್ಲಿರುವಾಗಲೇ ಸುರುಳಿಕೀಟ ಅಥವಾ ಕುಡಿಹುಳು ಬಾಧೆ ವ್ಯಾಪಕವಾಗಿರುವುದು ರೈತರನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ.

ಹಿಪ್ಪುನೇರಳೆಗೆ ಎಲೆ ಸುರುಳಿಕೀಟ ಅಥವಾ ಕುಡಿಹುಳು ಬಾಧೆ ಈಗ ರೇಷ್ಮೆ ಬೆಳೆಗಾರರನ್ನು ಕಾಡುತ್ತಿರುವ ಅತಿ ದೊಡ್ಡ ಸಮಸ್ಯೆ. ಸೊಪ್ಪಿನ ಇಳುವರಿ ಹಾಗೂ ಗುಣಮಟ್ಟದಲ್ಲಿ ಗಮನಾರ್ಹವಾದ ಇಳಿಕೆ ರೇಷ್ಮೆ ಬೆಳೆಗಾರರನ್ನು ಚಿಂತೆಗೀಡು ಮಾಡಿದೆ.

ಬೆವರಿನ ಶ್ರಮ ನೀರಿನಲ್ಲಿ ಹೋಮ:

ಕುಡಿ ಹುಳುವಿನ ನಿಯಂತ್ರಣಕ್ಕಾಗಿ ರೇಷ್ಮೆ ಬೆಳೆಗಾರರು ಎಲ್ಲಾ ಶಿಫಾರಸ್ಸು ಗಳನ್ನು ಪ್ರಯತ್ನಿಸಿ ಸೋತಿದ್ದಾರೆ. ಪೀಡೆ ನಿರ್ವಹಣಾ ಖರ್ಚು ಒಟ್ಟು ಖರ್ಚಿನ ಶೇ.15 ರಿಂದ 20 ಮೀರುತ್ತಿದೆ. ಇದರಿಂದಾಗಿ ಆರ್ಥಿಕ ಸಂಕಷ್ಟಕ್ಕೂ ಸಿಲುಕುತ್ತಿದ್ದಾರೆ.

ಜಿಲ್ಲೆಯ ಎಲ್ಲ ತಾಲೂಕುಗಳ ಗ್ರಾಮಗಳಲ್ಲಿಯೂ ನುಸಿ ಪೀಡೆ, ಪಪಾಯ ಮೀಲಿ ಬಗ್, ಶಂಖದ ಹುಳು, ಓಡುಹುಳು (ಬೀಟಲ್ಸ್) ಇತ್ಯಾದಿ ಕೀಟಗಳ ಹಾವಳಿಯಿಂದ ತೀವ್ರ ನಷ್ಟ ಅನುಭವಿಸುತ್ತಿರುವ ರೇಷ್ಮೆ ಬೆಳೆಗಾರರಿಗೆ ಸುರುಳಿಕೀಟದಿಂದಾಗಿ ತಲೆ ನೋವು ಶುರುವಾಗಿದೆ.

ರೇಷ್ಮೆಗೂಡು ಮಾರಾಟಕ್ಕೆ ಹರಸಾಹಸ ಪಡುತ್ತ ಆರ್ಥಿಕ ಸಂಕಷ್ಟದ ಸುಳಿಯಲ್ಲಿ ಸಿಲುಕಿರುವ ರೇಷ್ಮೆ ಬೆಳೆಗಾರರಿಗೆ ಕೀಟಬಾಧೆ ನಿದ್ದೆಗೆಡಿಸಿದ್ದು ,ತೋಟಗಳಲ್ಲಿ ಬೆವರು ಸುರಿಸಿ ಬೆಳೆಯುತ್ತಿರುವ ಅಪಾರ ಪ್ರಮಾಣದ ಹಿಪ್ಪುನೇರಳೆ ಸೊಪ್ಪು ಈಗ ಕೈಗೆ ಬಾರದಂತಹ ಸ್ಥಿತಿ ತಲುಪುವಂತಾಗಿದೆ.

ನಿರ್ವಹಣಾ ಕಾರ್ಯತಂತ್ರ:

ಇದೀಗ ರೇಷ್ಮೆ ಬೆಳೆಗಾರರ ವಲಯದಲ್ಲಿ ‘ಸೊಪ್ಪೇ ಬರ್ತಾ ಇಲ್ಲ’ಎನ್ನುವ ಮಾತು ಸರ್ವೆ ಸಾಮಾನ್ಯ. ಇದಕ್ಕೆ ಎಲೆ ಸುರುಳಿಕೀಟ (ಕುಡಿ ಹುಳು) ಮತ್ತು ನುಸಿ ರೋಗ ಕಾರಣ. ಇದಕ್ಕೆ ಏನು ಮಾಡಬೇಕೆಂದು ಸಾಧಾರಣವಾಗಿ ಎಲ್ಲ ರೇಷ್ಮೆ ಬೆಳೆಗಾರರಿಗೆ ಅರಿವಿದೆ.

ಈ ಕೀಟದ ನಿರ್ವಹಣೆಗಾಗಿ ಅನುಸರಿಸಬೇಕಾದ ತಾಂತ್ರಿಕತೆ ಅಂಶಗಳನ್ನು ಚನ್ನಪಟ್ಟಣ ರೇಷ್ಮೆ ತರಬೇತಿ ಶಾಲೆ ಪ್ರಾಂಶುಪಾಲ ಕುಮಾರ್ ಸುಬ್ರಹ್ಮಣ್ಯ ಕನ್ನಡಪ್ರಭದೊಂದಿಗೆ ಹಂಚಿಕೊಂಡಿದ್ದಾರೆ. ಈ ಕಾರ್ಯತಂತ್ರಗಳನ್ನು ಯಥಾವತ್ತಾಗಿ ಅನುಸರಿಸದಿದ್ದಲ್ಲಿ ಹಾನಿ ನಿಶ್ಚಿತ ಎಂದು ಚನ್ನಪಟ್ಟಣ ರೇಷ್ಮೆ ತರಬೇತಿ ಶಾಲೆ ಪ್ರಾಂಶುಪಾಲ ಕುಮಾರ್ ಸುಬ್ರಹ್ಮಣ್ಯ ಎಚ್ಚರಿಸಿದ್ದಾರೆ.

ಕಾರ್ಯತಂತ್ರ ಒಂದು: (ಸಂಪೂರ್ಣ ಸಾವಯವ)

1.ಕಡ್ಡಿ ಕಟಾವಾದ (ಹುಳು ಹಣ್ಣಾದ ದಿನಾಂಕ) ಗುರುತು ಹಾಕಿಕೊಳ್ಳಿ.

2.ಆ ದಿನಾಂಕದಿಂದ 12 ನೇ ದಿನ ಪ್ರತಿ ಲೀ. ನೀರಿಗೆ 5 ಮಿ ಲೀ ಬೇವಿನ ಎಣ್ಣೆ, 2-3 ಗ್ರಾಂ ಸೋಪಿನ ಪುಡಿ ಮಿಶ್ರ ಮಾಡಿ ಸಿಂಪಡಿಸಿ.

3.ಮೊದಲನೇ ಸಿಂಪರಣೆ ದಿನಾಂಕದಿಂದ 10 ದಿನದೊಳಗೆ ಇನ್ನೊಂದು ಸಾರಿ ಬೇವಿನ ಎಣ್ಣೆ ಸಿಂಪರಣೆ.

4.ಆಗತ್ಯವಿದ್ದಲ್ಲಿ ಎರಡನೇ ಸಿಂಪರಣೆ ಯಿಂದ 10 ದಿನ ಬಿಟ್ಟು 3 ನೇ ಸಾರಿ ಬೇವಿನ ಎಣ್ಣೆ ಸಿಂಪರಣೆ.

5.3 ನೇ ಸಿಂಪರಣೆ ದಿನಾಂಕದಿಂದ 8 -10 ದಿನದ ನಂತರ ಚಾಕಿಗೆ ಸೊಪ್ಪುಣಿಸಬಹುದು.

ಕಾರ್ಯತಂತ್ರ ಎರಡು: ಕೀಟನಾಶಕ - ಸಾವಯವ ವಿಧಾನ

1.ಕಡ್ಡಿ ಕಟಾವಾದ 12-15 ದಿನದಲ್ಲಿ ಇಂಟ್ರಿಪಿಡ್ ಕೀಟನಾಶಕವನ್ನು ಪ್ರತಿ ಲೀಟರ್‌ ನೀರಿಗೆ 1.5 ಮಿ ಲೀ ಮಿಶ್ರ ಮಾಡಿ ಸಿಂಪಡಿಸಬೇಕು. ಕುಡಿಹುಳಕ್ಕೆ ಇನ್ಯಾವುದೇ ಕೀಟನಾಶಕವನ್ನು ಶಿಫಾರಸ್ಸು ಮಾಡಿಲ್ಲ.( ಅಟ್ಯಾಕ್, ಕಿಲ್ಲರ್, ನುವಾನ್ ಮಾರಾಟ ಮತ್ತು ಉಪಯೋಗ ಅಪರಾಧ)

2.ಮೊದಲನೇ ಸಿಂಪರಣೆಯಿಂದ 20 ದಿನದ ನಂತರ ಬೇವಿನ ಎಣ್ಣೆಯನ್ನು ಕಾರ್ಯತಂತ್ರ ಒಂದರಲ್ಲಿ ತಿಳಿಸಿದ ವಿಧಾನಗಳನ್ನು ಅನುಸರಿಸಿ ಸಿಂಪಡಿಸಿ.

3.ಮೊದಲು ಬೇವಿನ ಎಣ್ಣೆ ನಂತರ ಕೀಟನಾಶಕ ಸಿಂಪರಣೆ ಮಾಡಕೂಡದು.

4.ಅಕ್ಕ ಪಕ್ಕದಲ್ಲಿ ಹುಳು ಮೇಯಿಸುತ್ತಿರುವ ತೋಟವಿದ್ದಲ್ಲಿ ಈ ಕಾರ್ಯತಂತ್ರ ಉಪಯೋಗಿಸಕೂಡದು.

ಕಾರ್ಯತಂತ್ರ ಮೂರು: ಜೈವಿಕ ವಿಧಾನ

1.ಕಡ್ಡಿ ಕಟಾವಾದ ವಾರದಲ್ಲಿ 2 ರಿಂದ 3 ಟ್ರೈಕೋಕಾರ್ಡ ನ್ನು (ಟ್ರೈಕೋಗ್ರಾಮ ಖಿಲೋನಿಸ್ - ಇದು ಕುಡಿ ಹುಳುವಿನ ಮೊಟ್ಟೆಯ ಮೇಲೆ ತನ್ನ ಮೊಟ್ಟೆಯಿಟ್ಟು ನಾಶಪಡಿಸುತ್ತದೆ) ಪ್ರತಿ ಎಕರೆ ತೋಟಕ್ಕೆ ಬಿಡುಗಡೆ ಮಾಡಬೇಕು ಹಾಗೂ ಪ್ರತಿ 10 ದಿನಕ್ಕೊಮ್ಮೆ ನಾಲ್ಕು ಬಾರಿ ಪುನರಾವರ್ತಿಸಬೇಕು.

2.ಕಡ್ಡಿ ಕಟಾವಾದ ಮೊದಲ ವಾರದಲ್ಲಿಯೇ ಕುಡಿ ಹುಳುವಿನ ಕೋಶಾವಸ್ಥೆಯ ಮೇಲೆ ಮೊಟ್ಟೆ ಇಡುವ ಟೆಟ್ರಾಸ್ಟೈಕಸ್ ಹೊವಾರ್ಡಿ ಪರತಂತ್ರ ಕೀಟಗಳನ್ನು ಪ್ರತಿ ಎಕ್ರೆ ಗೆ 250 ಕೀಟಗಳಂತೆ ಬಿಡುಗಡೆ ಮಾಡಬೇಕು.

3.ಕಡ್ಡಿ ಕಟಾವಾದ 2 -3 ನೇ ವಾರದಲ್ಲಿ ಎಲೆ ಸುರುಳಿ ಕೀಟದ ಹುಳುವಿನ ಮೇಲೆ ಮೊಟ್ಟೆ ಇಡುವ ಬ್ರಾಕೋನ್ ಬ್ರೇವಿಕಾರ್ನಿಸ್ ಪರತಂತ್ರ ಕೀಟದ 250 ಕೀಟಗಳನ್ನು ಬಿಡುಗಡೆಗೊಳಿಸಬೇಕು .

4.ಈ ಪರತಂತ್ರ ಜೀವಿಗಳನ್ನು ಬಿಡುಗಡೆ ಮಾಡಿರುವಾಗ ಬೇವಿನ ಎಣ್ಣೆ ಅಥವಾ ಇಂಟ್ರಿಪಿಡ್ ಕೀಟನಾಶಕ ಸಿಂಪರಣೆ ಮಾಡಕೂಡದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ