ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಹೋಂ ಗಾರ್ಡ್ ಬದಲಾವಣೆ ಮಾಡುವ ನೆಪದಲ್ಲಿ ಜಿಲ್ಲಾಡಳಿತ ಒಂದಲ್ಲ ಒಂದು ತಿಂಗಳಲ್ಲಿ ಹೋಂ ಗಾರ್ಡ್ ಮುಚ್ಚುವುದು ಸಾಮಾನ್ಯ ವಿಷಯ. ತಿಂಗಳ ಮೊದಲೆರಡು ದಿನಗಳ ಕಾಲ ಚೆಕ್ ಪೋಸ್ಟ್ ಮುಚ್ಚುವುದು ಕ್ರಷರ್, ಟಿಪ್ಪರ್ ಮಾಲೀಕರಿಗೆ ಸಂತಸವೋ ಸಂತಸ ತರುತ್ತಿದೆ. ಹೋಂ ಗಾರ್ಡ್ ಬದಲಿಸುವ ನೆಪದಲ್ಲಿ ಹಿರೀಕಾಟಿ ಖನಿಜ ತನಿಖಾ ಠಾಣೆ ಬಾಗಿಲು ಮಂಗಳವಾರ ಸಂಜೆಯಿಂದಲೇ ಮುಚ್ಚಿರುವ ಕಾರಣ ರಾಯಲ್ಟಿ/ಎಂಡಿಪಿ ವಂಚಿಸಿ ಕಲ್ಲು ಹಾಗೂ ಕ್ರಷರ್ ಉತ್ಪನ್ನಗಳು ತೆರಳುತ್ತಿವೆ. ಪ್ರತಿನಿತ್ಯ ಸರ್ಕಾರಕ್ಕೆ ರಾಜಧನ ಲಕ್ಷಾಂತರ ರು.ವಂಚನೆಯಂತೂ ಆಗುತ್ತಿದೆ. ಆದರೂ ಜಿಲ್ಲಾಡಳಿತ ಹೋಂ ಗಾರ್ಡ್ ಬದಲಾವಣೆ ನೆಪದಲ್ಲಿ ಖನಿಜ ತನಿಖಾ ಠಾಣೆ ಬಂದ್ ಮಾಡುವ ಮೂಲಕ ರಾಜಧನ ಸೋರಿಕೆಗೆ ಜಿಲ್ಲಾಡಳಿತವೇ ಕಾರಣವಾಗಿದೆ.
ಹಿರೀಕಾಟಿ ಖನಿಜ ತನಿಖಾ ಠಾಣೆಗೆ ಹೋಂ ಗಾರ್ಡ್ ಇಲ್ಲದೆ ಬೀಗ ಬಿದ್ದಿದೆ. ಇಂಥ ಅವಕಾಶ ಸದುಪಯೋಗಪಡಿಸಿಕೊಂಡು ನೂರಾರು ಟಿಪ್ಪರ್‌ಗಳಲ್ಲಿ ಕಲ್ಲು ಹಾಗೂ ಕ್ರಷರ್‌ನ ಉತ್ಪನ್ನವನ್ನು ರಾಜಧನ ವಂಚಿಸಿ ಸರ್ಕಾರಕ್ಕೆ ವಂಚಿಸುತ್ತಿರುವುದು ಇದೇನು ಮೊದಲಲ್ಲ. ಹಿರೀಕಾಟಿ ಖನಿಜ ತನಿಖಾ ಠಾಣೆ ಸಿಬ್ಬಂದಿ ಇರುವಾಗಲೇ ಠಾಣೆಗೆ ಸಿಬ್ಬಂದಿ ಯಾಮಾರಿಸಿ ರಾಯಲ್ಟಿ, ಎಂಡಿಪಿ ವಂಚಿಸಿ ಕರಗತ ಮಾಡಿಕೊಂಡಿರುವ ಕೆಲ ಕ್ರಷರ್, ಕ್ವಾರಿ ಮಾಲೀಕರು ಈಗ ಖನಿಜ ತನಿಖಾ ಠಾಣೆ ಬಾಗಿಲಿಗೆ ಬೀಗ ಹಾಕಿರುವಾಗ ಬಿಟ್ಟಾರೆಯೇ ಎಂದು ಗ್ರಾಮದ ಪ್ರಸನ್ನ ಪ್ರಶ್ನಿಸಿದ್ದಾರೆ.ಹೋಂ ಗಾರ್ಡ್ ಬದಲಾವಣೆ ಮಾಡಿ ಬೇರೆ ಸಿಬ್ಬಂದಿ ನೇಮಿಸಲು ಖನಿಜ ತನಿಖಾ ಠಾಣೆ ಮುಚ್ಚುವುದು ಇದ್ಯಾವ ನ್ಯಾಯ, ಇದೆಂತ ಆಡಳಿತ ಎಂದು ಸಾರ್ವಜನಿಕರು ಜಿಲ್ಲಾಡಳಿತವನ್ನು ಪ್ರಶ್ನಿಸಿದ್ದಾರೆ.
ಹೋಂ ಗಾರ್ಡ್ ತಪಾಸಣೆ:
ಪ್ರತಿ ತಿಂಗಳ ಮೊದಲ ದಿನಗಳಲ್ಲಿ ಖನಿಜ ತನಿಖಾ ಠಾಣೆಗೆ ನೇಮಕಗೊಂಡ ಹೋಂ ಗಾರ್ಡ್ ಬದಲಾವಣೆ ಸಹಜ ಪ್ರಕ್ರಿಯೆ. ಹೋಂ ಗಾರ್ಡ್ ನೇಮಿಸಲು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದೇನೆ. ಖನಿಜ ತನಿಖಾ ಠಾಣೆಗೆ ಎರಡು ಮೂರು ದಿನ ಹೋಂ ಗಾರ್ಡ್ ಬರಲ್ಲ. ಭೂ ವಿಜ್ಞಾನಿ ಕಳುಹಿಸಲು ಹೇಳುತ್ತೇನೆ. ರಾಜೇಶ್, ಹಿರಿಯ ಭೂ ವಿಜ್ಞಾನಿ