ಹಿರಿಯೂರು ಉಪ ಚುನಾವಣೆ: ಅಖಾಡಕ್ಕೆ ಇಳಿದ ಆಕಾಂಕ್ಷಿಗಳು

KannadaprabhaNewsNetwork |  
Published : Jun 14, 2026, 02:00 AM IST
ಚಿತ್ರ 5 | Kannada Prabha

ಸಾರಾಂಶ

ಡಿ.ಸುಧಾಕರ್ ಅಕಾಲಿಕ ಮರಣದಿಂದ ತೆರವಾದ ಹಿರಿಯೂರು ಮತಕ್ಷೇತ್ರಕ್ಕೆ ಚುನಾವಣೆ । ತಂದೆ ಸಾವಿನ ಅನುಕಂಪದ ಮೇಲೆ ಗೆಲುವಿನ ನಿರೀಕ್ಷೆಯತ್ತ ಸುಹಾಸ್‌

ರಮೇಶ್ ಬಿದರಕೆರೆ

ಕನ್ನಡಪ್ರಭ ವಾರ್ತೆ ಹಿರಿಯೂರು

ಸಚಿವ ಡಿ.ಸುಧಾಕರ್ ರವರ ಅಕಾಲಿಕ ಮರಣದಿಂದ ತೆರವಾದ ಹಿರಿಯೂರು ಮತಕ್ಷೇತ್ರಕ್ಕೆ ಇನ್ನೂ ಚುನಾವಣೆಯ ದಿನಾಂಕವೇ ನಿಗದಿಯಾಗಿಲ್ಲ. ಆದರೆ ನಾನೇ ಅಭ್ಯರ್ಥಿ, ನಂದೇ ಟಿಕೆಟ್, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ದಿಸಿ ಗೆಲ್ಲುವೆ ಎಂದು ಸುಮಾರು 8ಕ್ಕೂ ಹೆಚ್ಚು ಅಭ್ಯರ್ಥಿಗಳು ಒಂದರ್ಥದಲ್ಲಿ ಆಗಲೇ ಪ್ರಚಾರಕ್ಕೇ ಇಳಿದು ಬಿಟ್ಟಿದ್ದಾರೆ. ಆರಂಭದಲ್ಲಿ ಅಬ್ಬರಿಸಿದವರ ಹೆಸರು ಅಂತಿಮ ಅಭ್ಯರ್ಥಿಗಳ ಪಟ್ಟಿಯಲ್ಲಿ ಇರುವುದು ಅನುಮಾನ ಎಂಬುದು ಪ್ರತಿ ಚುನಾವಣೆಯಲ್ಲೂ ಸಾಬೀತು ಆಗುತ್ತಾ ಬಂದಿದೆ. ಆದರೆ ಟಿಕೆಟ್‌ನ ನಿರೀಕ್ಷೆ ಇಟ್ಟುಕೊಂಡು ಎಗಾದಿಗಾ ಕ್ಷೇತ್ರದ ತುಂಬಾ ಓಡಾಡುತ್ತಿರುವವರ ಸಂಖ್ಯೆ ಕಡಿಮೆ ಏನೂ ಇಲ್ಲ. ಕಾಂಗ್ರೆಸ್ ಪಕ್ಷದಿಂದ ಡಿ.ಸುಧಾಕರ್ ಪುತ್ರ ಸುಹಾಸ್ ಸುಧಾಕರ್ ಸ್ಪರ್ದಿಸುವ ಇಂಗಿತದಿಂದ ಈಗಾಗಲೇ ಕ್ಷೇತ್ರದಲ್ಲಿ ಮನೆ ಮನೆ ಭೇಟಿ ಆರಂಭಿಸಿದ್ದಾರೆ. ತನ್ನ ತಂದೆಯ ಸಾವಿನ ಅನುಕಂಪ ಮತ್ತು ಅವರು ಮಾಡಿದ ಸೇವೆ, ದಾನ ಧರ್ಮಗಳು ಗೆಲುವಿನ ದಡ ಮುಟ್ಟಿಸುತ್ತವೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಈ ನಡುವೆ ಕಾಂಗ್ರೆಸ್ ಟಿಕೆಟ್ ಆಕಾoಕ್ಷಿಗಳ ಪಟ್ಟಿಯಲ್ಲಿ ಆರ್.ಮಂಜುನಾಥ್, ಬೇತೂರು ಪಾಳ್ಯ ರಾಜುರವರ ಹೆಸರು ಸಹ ಕೇಳಿಬರುತ್ತಿದ್ದು ಅವರು ಸಹ ಕ್ಷೇತ್ರದಲ್ಲಿ ಸ್ಥಳೀಯರಿಗೆ ಬೆಂಬಲ ನೀಡಿ ಎಂದು ಓಡಾಟ ಆರಂಭಿಸಿದ್ದಾರೆ.

ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ರವರ ಹೆಸರನ್ನು ಬೆಂಬಲಿಗರು ಅಲ್ಲೂಮ್ಮೆ ಇಲ್ಲೊಮ್ಮೆ ಹಬ್ಬಿಸುತ್ತಿದ್ದು, ಇದುವರೆಗೂ ಅವರು ನಾನು ಸಹ ಆಕಾoಕ್ಷಿ ಎಂದು ಎಲ್ಲೂ ಹೇಳಿಲ್ಲ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಇರುವುದರಿಂದ ಅವರು ಯಾವ ಪಕ್ಷದ ಅಭ್ಯರ್ಥಿಯ ಸ್ಪರ್ಧೆ ಎಂಬುದನ್ನು ಅವರಿನ್ನೂ ಬಹಿರಂಗ ಪಡಿಸಿಲ್ಲವಾದ್ದರಿಂದ ಎರಡೂ ಪಕ್ಷಗಳಲ್ಲಿ ಅಭ್ಯರ್ಥಿಗಳು ತಯಾರಿ ನಡೆಸುತ್ತಿದ್ದಾರೆ. ಕಾಡುಗೊಲ್ಲ ಸಂಘದ ರಾಜ್ಯಾಧ್ಯಕ್ಷ ರಾಜಣ್ಣ ಈಗಾಗಲೇ ರಾಜ್ಯ ನಾಯಕರ ಸಮ್ಮುಖದಲ್ಲಿ ಬಿಜೆಪಿ ಪಕ್ಷ ಸೇರಿ ಪಕ್ಷದ ಅಭ್ಯರ್ಥಿ ಎಂಬ ಮೆಸೇಜ್ ರವಾನಿಸಿದ್ದು ಅವರ ನಾಗಾಲೋಟಕ್ಕೆ ತಡೆಯೊಡ್ಡುವಂತೆ ಪಕ್ಷದ ಹಿರಿಯ ಮುಖಂಡ ಎನ್‌.ಆರ್.ಲಕ್ಷ್ಮಿಕಾಂತ್ ಹಾಗೂ ಬಿಜೆಪಿ ತಾಲೂಕು ಅಧ್ಯಕ್ಷ ಅಭಿನಂದನ್ ರವರು ಸಹ ನಮ್ಮಿಬ್ಬರಲ್ಲಿ ಯಾರಿಗಾದರೂ ಟಿಕೆಟ್ ನೀಡಲಿ. ಒಟ್ಟಿನಲ್ಲಿ ಸ್ಥಳೀಯರಿಗೆ ಟಿಕೆಟ್ ನೀಡಬೇಕು ಎಂದು ಮನವಿ ಮಾಡಿದ್ದಾರೆ. ದಾವಣಗೆರೆ ಉಪ ಚುನಾವಣೆಯ ಪ್ರಚಾರಕ್ಕೆ ಆರ್.ಅಶೋಕ್ ಬಂದು ಹೋಗುವಾಗ ಈ ಬಾರಿ ಇಲ್ಲಿ ಸ್ಥಳೀಯರಿಗೆ ಮೊದಲ ಆದ್ಯತೆ ಎಂದು ಹೇಳಿ ಹೋಗಿರುವುದು ಅವರಿಗೆ ಅಸ್ತ್ರವಾಗಿದೆ. ಇನ್ನು ಜೆಡಿಎಸ್ ಪಕ್ಷದಲ್ಲಿ ಟಿಕೆಟ್‌ಗಾಗಿ ಹೆಚ್ಚಿನ ಆಕಾಂಕ್ಷಿಗಳ ಫೈಟ್ ಕಾಣದಿದ್ದರು ಸಹ ಕಳೆದ ಚುನಾವಣೆಯ ಪರಾಜಿತ ಅಭ್ಯರ್ಥಿ ಎಂ.ರವೀಂದ್ರಪ್ಪ, ಜೆಡಿಎಸ್ ಮಾಜಿ ಜಿಲ್ಲಾಧ್ಯಕ್ಷ ಎಂ.ಜಯಣ್ಣ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಮೂರು ಬಹು ಸಂಖ್ಯಾತ ಜಾತಿಗಳ ಮತದಾರರು ತಾಲೂಕಿನಲ್ಲಿ ಇದ್ದರೂ ಸಹ ನೂರಿನ್ನೂರು ಸ್ವಂತ ಜಾತಿಯ ಮತಗಳು ಇಲ್ಲದ ಡಿ.ಸುಧಾಕರ್ ರವರು ಮೂರು ಬಾರಿ ಗೆದ್ದದ್ದು ಪಕ್ಷೇತರರಾಗಿ ಸ್ಪರ್ಧಿಸಲು ಬಯಸಿರುವವರಿಗೆ ಆಶಾಭಾವನೆ ಹುಟ್ಟಿಸುತ್ತಿದೆ. ಈಗಾಗಲೇ ತಾಲೂಕಿನಲ್ಲಿ ಮನೆ ಮಾಡಿ ಅಬ್ಬರದ ಪ್ರಚಾರದಲ್ಲಿ ತೊಡಗಿರುವ ಉದ್ಯಮಿ ಬೊಮ್ಮನಹಳ್ಳಿ ಬಾಬು, ಸತೀಶ್ ಗೌಡ, ಜಯರಾಮಯ್ಯ ಮುಂತಾದವರು ಉಪ ಚುನಾವಣೆಯಲ್ಲಿ ಒಂದು ಕೈ ನೋಡುವ ಹುಮ್ಮಸ್ಸಿನಲ್ಲಿದ್ದಾರೆ.

ಪ್ರತಿ ಸಲದಂತೆ ಈ ಬಾರಿಯೂ ಸ್ಥಳೀಯ ವರ್ಸಸ್ ಹೊರಗಿನವರು ಎಂಬ ದಾಳ ತಾಲೂಕಿನಲ್ಲಿ ಉರುಳುತ್ತಿದ್ದು ಮತದಾರ ಅದಕ್ಕೆಲ್ಲಾ ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಕಾಲ ಕಾಲಕ್ಕೆ ಯಾರು ಬೇಕೋ ಅವರನ್ನು ಆರಿಸಿಕೊಂಡ ಮತದಾರ ಸ್ಥಳೀಯ ಎಂಬ ಪದವನ್ನು ಸವಕಲು ನಾಣ್ಯವನ್ನಾಗಿಸಿದ್ದಾನೆ. ಕಳೆದ ಚುನಾವಣೆಯಲ್ಲಿ ಡಿ.ಸುಧಾಕರ್ ಮತ್ತು ಪೂರ್ಣಿಮಾ ಶ್ರೀನಿವಾಸ್ ಇಬ್ಬರೂ ಸೇರಿ ಒಂದೂವರೆ ಲಕ್ಷದಷ್ಟು ಮತ ಪಡೆದಿದ್ದರೆ ಅವರಷ್ಟೇ ಎಲ್ಲಾ ವಿಧದಲ್ಲೂ ಹೋರಾಟ ನಡೆಸಿದ್ದ ಜೆಡಿಎಸ್ ಸ್ಥಳೀಯ ಅಭ್ಯರ್ಥಿಗೆ ಬಿದ್ದದ್ದು ಕೇವಲ 30 ಸಾವಿರ ಮತ. 2008, 2013, 2018 ಮತ್ತು 2023ರಲ್ಲಿಯೂ ಸ್ಥಳೀಯ ಅಭ್ಯರ್ಥಿಗಳನ್ನು ಮತದಾರ ಕೈ ಹಿಡಿಯಲಿಲ್ಲ. ತಾಲೂಕಿನ ಜನರು ಸ್ಥಳೀಯ ಮತ್ತು ಹೊರಗಿನ ಅಭ್ಯರ್ಥಿ ಎಂಬ ವಿಷಯವನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂಬುದು ಪ್ರತಿ ಚುನಾವಣೆಯಲ್ಲೂ ಸಾಬೀತು ಆಗುತ್ತಲೇ ಇದೆ. ಒಟ್ಟಿನಲ್ಲಿ ಉಪ ಚುನಾವಣೆಯ ದಿನಾಂಕ ಘೋಷಣೆಗೂ ಮುನ್ನವೇ ಚುನಾವಣೆಯ ಕಾವು ತಾಲೂಕಿನ ತುಂಬಾ ಹಬ್ಬಿದ್ದು ಯಾರು ಯಾವ ಪಕ್ಷದ ಟಿಕೆಟ್ ಗಿಟ್ಟಿಸುತ್ತಾರೆ, ಯಾರು ಗೆಲುವಿನ ದಡ ಮುಟ್ಟುವರು ಎಂಬುದು ಕುತೂಹಲ ಮೂಡಿಸಿದೆ.------

--------ಪೋಟೋ ಕ್ಯಾಪ್ಶನ್: 1 ಸುಹಾಸ್ ಸುಧಾಕರ್

ಪೋಟೋ: 2 ಎಂ.ರವೀಂದ್ರಪ್ಪ

ಪೋಟೋ: 3 ರಾಜಣ್ಣ

ಪೋಟೋ: 4 ಎನ್.ಆರ್.ಲಕ್ಷ್ಮಿಕಾಂತ್

ಪೋಟೋ: 5 ಅಭಿನಂದನ್

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮತಪಟ್ಟಿ ಪರಿಷ್ಕರಣೆಗೆ ಸಹಕರಿಸಿ: ಡಾ.ಸಿದ್ದರಾಮಯ್ಯ
ಕ್ಷೇತ್ರದ ಅಭಿವೃದ್ಧಿಯೇ ನನ್ನ ಉದ್ದೇಶ ಎಂದ ಶಾಸಕ ಸಿಮೆಂಟ್ ಮಂಜು