ಆಲೂರು: ಕ್ಷೇತ್ರದ ಅಭಿವೃದ್ಧಿಯ ದೃಷ್ಟಿಯಿಂದ ಮೂಲಭೂತ ಸೌಕರ್ಯಗಳಾದ ರಸ್ತೆ,ಕುಡಿಯುವ ನೀರು, ಚರಂಡಿ, ಬೀದಿದೀಪಗಳನ್ನು ಸರ್ಕಾರದಿಂದ ಬಿಡುಗಡೆಯಾಗುವ ಬಿಡುಗಡೆಯಾಗುವ ಅನುದಾನಕ್ಕೆ ತಕ್ಕಂತೆ ಒದಗಿಸುತ್ತಿದ್ದು ಮುಂದಿನ ದಿನಗಳಲ್ಲಿ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿಪಡಿಸುವುದಾಗಿ ಆಲೂರು ಸಕಲೇಶಪುರ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು ತಿಳಿಸಿದರು.ತಾಲೂಕಿನ ಕಸಬಾ ಹೋಬಳಿ ಧರ್ಮಪುರಿ ಗ್ರಾಮದ ಮುಖ್ಯ ರಸ್ತೆಗೆ ಮರು ಡಾಂಬರೀರಣ 20 ಲಕ್ಷ , ಹೊಸೂರು ಗ್ರಾಮದ ಪರಿಮಿತಿಯಲ್ಲಿ ಕಾಂಕ್ರೀಟ್ ರಸ್ತೆ ₹10 ಲಕ್ಷ, ಬ್ಯಾಬ ಕಾಲೋನಿಯಲ್ಲಿ ಕಾಂಕ್ರೀಟ್ ರಸ್ತೆ ₹5 ಲಕ್ಷ, ಪಾಳ್ಯ ಹೋಬಳಿ ಲಕ್ಷ್ಮೀಪುರ ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆಗೆ 19 ಲಕ್ಷ, ಜನ್ನಾಪುರ ತಿಮ್ಮನಹಳ್ಳಿ ರಸ್ತೆಗೆ ₹ 7 ಲಕ್ಷ, ಚಿಕ್ಕಣಗಾಲು ಕಾಲೋನಿ ರಸ್ತೆ ₹5 ಲಕ್ಷದ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಸ್ವಾತಂತ್ರ್ಯ ಬಂದು 80 ವರ್ಷಗಳಾಗುತ್ತ ಬಂದರೂ ಗ್ರಾಮೀಣ ಪ್ರದೇಶಗಳಿಗೆ ಮೂಲಭೂತ ಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸಲಾಗಿಲ್ಲ. ಇನ್ನೂ ಅನೇಕ ಕುಗ್ರಾಮಗಳಲ್ಲಿ ಬಂಡಿ ದಾರಿಯಲ್ಲೇ ಸಾಗಬೇಕಾಗಿದೆ. ಅಂತಹ ಸ್ಥಳಗಳನ್ನು ಹುಡುಕಿ ರಸ್ತೆ ನಿರ್ಮಾಣ ಮಾಡಲು ಶಪಥ ಮಾಡಿದ್ದೇನೆ. ಜನಪ್ರತಿನಿಧಿಗಳ ಜೊತೆ ಸ್ಥಳೀಯ ಗ್ರಾಮಸ್ಥರು, ಮುಖಂಡರು ಕೈ ಜೋಡಿಸಿದರೆ ಗ್ರಾಮಗಳಿಗೆ ಅಗತ್ಯವಾಗಿರುವ ಎಲ್ಲ ಸೌಲಭ್ಯಗಳನ್ನು ಮಾಡಿಕೊಳ್ಳಬಹುದು ಎಂದರು. ನಾನು ಶಾಸಕನಾದ 3 ವರ್ಷಗಳಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಪ್ರಯತ್ನಪಡುತ್ತಿದ್ದು, ನಮ್ಮ ಸರ್ಕಾರ ಇಲ್ಲದೆ ಇದ್ದರೂ ಕೂಡ ಸದನದ ಹೊರಗೆ ಮತ್ತು ಒಳಗೆ ಕ್ಷೇತ್ರದ ಅಭಿವೃದ್ಧಿಯ ವಿಚಾರವಾಗಿ ಧ್ವನಿ ಎತ್ತುವ ಮೂಲಕ ಪ್ರಯತ್ನ ಮೀರಿ ಅನುದಾನವನ್ನು ತರುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ಕೂಡ ಅನ್ನದಾನಕ್ಕೆ ಅನುಗುಣವಾಗಿ ಕ್ಷೇತ್ರದ ಅಭಿವೃದ್ಧಿಗೆ ಪ್ರಯತ್ನಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಆಲೂರು- ಕಟ್ಟಾಯ ಮಂಡಲದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ, ತಾಲೂಕು ಯುವ ಘಟಕದ ಅಧ್ಯಕ್ಷ ಗಣೇಶ್, ವಕೀಲ ಮಂಜೇಗೌಡ, ನಿವೃತ್ತ ಸೈನಿಕ ನಾಗೇಶ್, ಮಾಜಿ ಗ್ರಾಪಂ ಸದಸ್ಯ ಕೃಷ್ಣೇಗೌಡ, ಮಲ್ಲೇಶ್, ಸ್ಥಳೀಯ ಮುಖಂಡರು ಹಾಗೂ ಬಿಜೆಪಿ ಪಕ್ಷದ ಮುಖಂಡರು ಉಪಸ್ಥಿತರಿದ್ದರು.