ಮಕ್ಕಳ ಮನೆಗಳಲ್ಲಿ ಅಕ್ಷರಾಭ್ಯಾಸದ ಸಂಭ್ರಮ

KannadaprabhaNewsNetwork |  
Published : Jun 14, 2026, 01:45 AM IST
13ಎಚ್ಎಸ್ಎನ್5 : ಕಾರ್ಯಕ್ರಮದಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದರು. | Kannada Prabha

ಸಾರಾಂಶ

ಮಕ್ಕಳ ಶಿಕ್ಷಣದ ಮೊದಲ ಹೆಜ್ಜೆಯಾದ ಅಕ್ಷರಾಭ್ಯಾಸವು ಭಾರತೀಯ ಸಂಸ್ಕೃತಿಯ ಮಹತ್ವದ ಆಚರಣೆಗಳಲ್ಲಿ ಒಂದಾಗಿದೆ. ಮಗುವಿನ ಜೀವನದಲ್ಲಿ ಜ್ಞಾನದ ದೀಪ ಬೆಳಗುವ ಈ ಶುಭ ಕ್ಷಣವನ್ನು ಸ್ಮರಣೀಯವಾಗಿಸಲು ತಾಲೂಕಿನ ಎಲ್ಲ ಮಕ್ಕಳ ಮನೆಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಕ್ಷೇತ್ರದ ಶಾಸಕ ಎ. ಮಂಜು ಅವರ ಧರ್ಮಪತ್ನಿ ತಾರಾ ಅವರ ಪರಿಕಲ್ಪನೆ ಹಾಗೂ ಮಾರ್ಗದರ್ಶನದಂತೆ ಖಾಸಗಿ ಶಾಲೆಗಳಿಗೆ ಸಮಾನವಾದ ಗುಣಮಟ್ಟದ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಸರ್ಕಾರಿ ಶಾಲೆಗಳಲ್ಲಿ ಒದಗಿಸುವ ಉದ್ದೇಶದಿಂದ ಅರಕಲಗೂಡು ತಾಲೂಕಿನ 19 ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಮನೆಗಳನ್ನು ಪ್ರಾರಂಭಿಸಲಾಗಿದೆ.

ಕನ್ನಡಪ್ರಭ ವಾರ್ತೆ ರಾಮನಾಥಪುರ

‘ಸರಸ್ವತಿ ನಮಸ್ತುಭ್ಯಂ ವರದೇ ಕಾಮರೂಪಿಣಿ । ವಿದ್ಯಾರಂಭಂ ಕರಿಷ್ಯಾಮಿ ಸಿದ್ಧಿರ್ಭವತು ಮೇ ಸದಾ’ ಎಂಬ ಮಂಗಳ ಶ್ಲೋಕದೊಂದಿಗೆ ಅರಕಲಗೂಡು ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ಆರಂಭಗೊಂಡಿರುವ 19 ಮಕ್ಕಳ ಮನೆ (ಎಲ್‌ಕೆಜಿ & ಯುಕೆಜಿ) ಕೇಂದ್ರಗಳಲ್ಲಿ ಅಕ್ಷರಾಭ್ಯಾಸ ಕಾರ್ಯಕ್ರಮವು ಇಂದು ಅತ್ಯಂತ ಸಂಭ್ರಮ, ಸಡಗರ ಹಾಗೂ ಧಾರ್ಮಿಕ ಭಾವನೆಯೊಂದಿಗೆ ನಡೆಯಿತು.

ಮಕ್ಕಳ ಶಿಕ್ಷಣದ ಮೊದಲ ಹೆಜ್ಜೆಯಾದ ಅಕ್ಷರಾಭ್ಯಾಸವು ಭಾರತೀಯ ಸಂಸ್ಕೃತಿಯ ಮಹತ್ವದ ಆಚರಣೆಗಳಲ್ಲಿ ಒಂದಾಗಿದೆ. ಮಗುವಿನ ಜೀವನದಲ್ಲಿ ಜ್ಞಾನದ ದೀಪ ಬೆಳಗುವ ಈ ಶುಭ ಕ್ಷಣವನ್ನು ಸ್ಮರಣೀಯವಾಗಿಸಲು ತಾಲೂಕಿನ ಎಲ್ಲ ಮಕ್ಕಳ ಮನೆಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಕ್ಷೇತ್ರದ ಶಾಸಕ ಎ. ಮಂಜು ಅವರ ಧರ್ಮಪತ್ನಿ ತಾರಾ ಅವರ ಪರಿಕಲ್ಪನೆ ಹಾಗೂ ಮಾರ್ಗದರ್ಶನದಂತೆ ಖಾಸಗಿ ಶಾಲೆಗಳಿಗೆ ಸಮಾನವಾದ ಗುಣಮಟ್ಟದ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಸರ್ಕಾರಿ ಶಾಲೆಗಳಲ್ಲಿ ಒದಗಿಸುವ ಉದ್ದೇಶದಿಂದ ಅರಕಲಗೂಡು ತಾಲೂಕಿನ 19 ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಮನೆಗಳನ್ನು ಪ್ರಾರಂಭಿಸಲಾಗಿದೆ. ಈ ಯೋಜನೆ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉಚಿತವಾಗಿ ಗುಣಮಟ್ಟದ ಶಿಕ್ಷಣದ ಜೊತೆಗೆ ಉತ್ತಮ ಕಲಿಕಾ ವಾತಾವರಣವನ್ನು ಒದಗಿಸುವಲ್ಲಿ ಯಶಸ್ವಿಯಾಗಿದೆ. ಸರ್ಕಾರಿ ಶಾಲೆಗಳಲ್ಲಿ ಆರಂಭಗೊಂಡಿರುವ ಮಕ್ಕಳ ಮನೆ ಶಿಕ್ಷಣ ವ್ಯವಸ್ಥೆಯಲ್ಲಿ ಅಕ್ಷರಾಭ್ಯಾಸ ಕಾರ್ಯಕ್ರಮವು ಕೇವಲ ಶೈಕ್ಷಣಿಕ ಚಟುವಟಿಕೆಯಷ್ಟೇ ಅಲ್ಲದೆ, ಭಾರತೀಯ ಸಂಸ್ಕೃತಿ, ಪರಂಪರೆ ಹಾಗೂ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮಹತ್ವದ ಕಾರ್ಯಕ್ರಮವಾಗಿದೆ. ಇಂತಹ ಕಾರ್ಯಕ್ರಮಗಳು ಮಕ್ಕಳಲ್ಲಿ ಶಾಲೆಯ ಬಗ್ಗೆ ಆಸಕ್ತಿ, ಆತ್ಮವಿಶ್ವಾಸ ಮತ್ತು ಕಲಿಕೆಯತ್ತ ಸಕಾರಾತ್ಮಕ ಮನೋಭಾವವನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಅಕ್ಷರಾಭ್ಯಾಸ ಕಾರ್ಯಕ್ರಮದಲ್ಲಿ ಪೋಷಕರು ತಮ್ಮ ಮಕ್ಕಳೊಂದಿಗೆ ಭಾಗವಹಿಸಿ ಪುರೋಹಿತರ ಸಮ್ಮುಖದಲ್ಲಿ ಸಂಪ್ರದಾಯಬದ್ಧವಾಗಿ ವಿದ್ಯಾರಂಭ ನೆರವೇರಿಸಿದರು. ತಾಯಿ ಸರಸ್ವತಿಯ ಆರಾಧನೆ, ಮಂತ್ರೋಚ್ಚಾರಣೆ ಹಾಗೂ ಆಶೀರ್ವಾದಗಳ ನಡುವೆ ಪೋಷಕರು ಮಕ್ಕಳ ಕೈಹಿಡಿದು ಅಕ್ಷತೆಯ ಮೇಲೆ ‘ಓಂ’ ಬರೆಸುವ ಮೂಲಕ ವಿದ್ಯಾಭ್ಯಾಸಕ್ಕೆ ಚಾಲನೆ ನೀಡಿದರು. ಕೆಲವು ಶಾಲೆಗಳಲ್ಲಿ ಅಕ್ಕಿ ತುಂಬಿದ ತಟ್ಟೆಯಲ್ಲಿ ಅಕ್ಷರ ಬರೆಯಿಸುವ ಮೂಲಕ ಮಕ್ಕಳಿಗೆ ಮೊದಲ ಅಕ್ಷರದ ಪರಿಚಯ ಮಾಡಿಕೊಡಲಾಯಿತು

ಮಕ್ಕಳ ಮನೆ ಕಾರ್ಯನಿರ್ವಹಿಸುತ್ತಿರುವ ಶಾಲೆಗಳು:ರಾಮನಾಥಪುರ, ಹನ್ಯಾಳು, ಕಾಳೇನಹಳ್ಳಿ, ಮಧುರನಹಳ್ಳಿ, ಹಂಡ್ರಂಗಿ, ಮಲ್ಲಿಪಟ್ಟಣ, ಹುಲಿಕಲ್, ಬೈಚನಹಳ್ಳಿ, ಸಂತೆಮರೂರು, ಹೊನ್ನೇನಹಳ್ಳಿ, ಕೋಟೆ ಅರಕಲಗೂಡು, ಬಿದರಕ್ಕ(ಹಳ್ಳಿಮೈಸೂರು), ಓಡನಹಳ್ಳಿ (ಹಳ್ಳಿಮೈಸೂರು), ಕೇರಳಾಪುರ, ಲಕ್ಕೂರು ಕಟ್ಟೇಪುರ, ದೊಡ್ಡ ಬಿಮ್ಮತ್ತಿ , ಶ್ರವಣೂರು (ಹಳ್ಳಿಮೈಸೂರು), ಬೋರೆಕೊಪ್ಪಲು ಈಗಾಗಲೇ ಮಕ್ಕಳ ಮನೆ ಪ್ರಾರಂಭವಾಗಿವೆ. ಕಾರ್ಯಕ್ರಮದ ಯಶಸ್ಸಿಗೆ ಹಿರಿಯ ವಿದ್ಯಾರ್ಥಿಗಳು, ಶಿಕ್ಷಕರು, ಮಕ್ಕಳ ಮನೆ ಶಿಕ್ಷಕಿಯರು, ಗ್ರಾಮ ಪಂಚಾಯಿತಿ ಸಿಬ್ಬಂದಿ, ಶಾಲಾಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿಯ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಗ್ರಾಮದ ಹಿರಿಯ ಮುಖಂಡರು ಸಹಕಾರ ನೀಡಿದರು. ಅವರ ಸಕ್ರಿಯ ಭಾಗವಹಿಸುವಿಕೆಯಿಂದ ಶಾಲಾ ಆವರಣಗಳು ಹಬ್ಬದ ವಾತಾವರಣವನ್ನು ಪಡೆದುಕೊಂಡಿದ್ದವು.

‘ಅಕ್ಷರದ ಮೊದಲ ಹೆಜ್ಜೆಯಿಂದ ಜ್ಞಾನದ ಬೆಳಕಿನತ್ತ’ ಎಂಬ ಸಂದೇಶದೊಂದಿಗೆ ನಡೆದ ಈ ಕಾರ್ಯಕ್ರಮವು ಅರಕಲಗೂಡು ತಾಲೂಕಿನ ಸರ್ಕಾರಿ ಶಾಲೆಗಳ ಶೈಕ್ಷಣಿಕ ಪ್ರಗತಿಗೆ ಮತ್ತೊಂದು ಮೈಲಿಗಲ್ಲಾಗಿದ್ದು, ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ಶಿಕ್ಷಣ, ಸಂಸ್ಕೃತಿ ಮತ್ತು ಸಮುದಾಯದ ಸಹಭಾಗಿತ್ವದ ಸುಂದರ ಸಂಗಮವಾಗಿ ಈ ಅಕ್ಷರಾಭ್ಯಾಸ ಕಾರ್ಯಕ್ರಮ ಯಶಸ್ವಿಯಾಗಿ ಮೂಡಿಬಂದಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪೋಷಕರು ಸರ್ಕಾರಿ ಶಾಲೆಗಳಲ್ಲಿ ಇಂತಹ ವಿನೂತನ ಹಾಗೂ ಸಂಸ್ಕೃತಿ ಆಧಾರಿತ ಕಾರ್ಯಕ್ರಮಗಳನ್ನು ಆಯೋಜಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಮಕ್ಕಳ ಮುಖದಲ್ಲಿನ ಉತ್ಸಾಹ, ಪೋಷಕರ ಸಂತಸ ಹಾಗೂ ಶಿಕ್ಷಕರ ಬದ್ಧತೆ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮತಪಟ್ಟಿ ಪರಿಷ್ಕರಣೆಗೆ ಸಹಕರಿಸಿ: ಡಾ.ಸಿದ್ದರಾಮಯ್ಯ
ಕ್ಷೇತ್ರದ ಅಭಿವೃದ್ಧಿಯೇ ನನ್ನ ಉದ್ದೇಶ ಎಂದ ಶಾಸಕ ಸಿಮೆಂಟ್ ಮಂಜು