ಕೊಟ್ಟ ಮಾತಿನಂತೆ ನಡೆದುಕೊಳ್ಳದ ತಮ್ಮನ ಕೊಲೆಗೆ ಅಣ್ಣನೇ ಸುಫಾರಿ

KannadaprabhaNewsNetwork |  
Published : Feb 16, 2025, 01:48 AM IST
15ಕೆಎಂಎನ್ ಡಿ20,21 | Kannada Prabha

ಸಾರಾಂಶ

ಕೊಲೆಯಾದ ಕೃಷ್ಣೇಗೌಡನ ಅಣ್ಣ ಶಿವನಂಜೇಗೌಡ ಲಕ್ಷ್ಮೇಗೌಡನದೊಡ್ಡಿ ಗ್ರಾಮದಲ್ಲಿ ದೇವಸ್ಥಾನ ನಿರ್ಮಿಸಿಕೊಂಡು ಪೂಜೆ ಮಾಡುತ್ತಿದ್ದರು. ಕೃಷ್ಣೇಗೌಡ ತುಂಬಾ ಸಾಲ ಮಾಡಿಕೊಂಡಿದ್ದ. ತಮ್ಮ ಮಾಡಿದ್ದ ಸಾಲವನ್ನು ಶಿವನಂಜೇಗೌಡ ತೀರಿಸಿದ್ದ. ಆ ಹಣಕ್ಕೆ ಬದಲಾಗಿ ತನ್ನ ಪಾಲಿಗೆ ಬಂದಿದ್ದ ಜಮೀನನ್ನು ಕೊಡುವುದಾಗಿ ಕೃಷ್ಣೇಗೌಡ ಭರವಸೆ ನೀಡಿದ್ದನು.

ಕನ್ನಡಪ್ರಭ ವಾರ್ತೆ ಮಂಡ್ಯ

ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ವ್ಯಕ್ತಿ ಹತ್ಯೆಗೈದಿದ್ದ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಬಂಧಿತರಿಂದ 1 ಲಕ್ಷ ರು. ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.

ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಹತ್ಯೆಗೊಳಗಾದ ಕೃಷ್ಣೇಗೌಡನ ಸಹೋದರ ಶಿವನಂಜೇಗೌಡ, ಮಳವಳ್ಳಿ ತಾಲೂಕು ನಿಟ್ಟೂರು ಗ್ರಾಮದ ಎನ್.ಎಸ್. ಚಂದ್ರಶೇಖರ್, ಮದ್ದೂರು ತಾಲೂಕು ಕೊಪ್ಪ ಗ್ರಾಮದ ಬಿ. ಸುನಿಲ್, ಕೆ.ಪಿ. ಉಲ್ಲಾಸ್‌ಗೌಡ ಉರ್ಫ್ ಸಂಜು, ಆಬಲವಾಡಿ ಗ್ರಾಮದ ಎ.ಎಂ. ಪ್ರತಾಪ, ಕೆ.ಎಂ. ಅಭಿಷೇಕ್, ಕೆ. ಶ್ರೀನಿವಾಸ್, ರಾಮನಗರ ಜಿಲ್ಲೆ ಜಕ್ಕೇಗೌಡನದೊಡ್ಡಿ ಗ್ರಾಮದ ಎಚ್. ಹನುಮೇಗೌಡ ಉ. ಹರ್ಷ ಎಂಬುವವರನ್ನು ಬಂಧಿಸಲಾಗಿದೆ ಎಂದು ಹೇಳಿದರು.

ಘಟನೆ ವಿವರ:

ಕೊಲೆಯಾದ ಕೃಷ್ಣೇಗೌಡನ ಅಣ್ಣ ಶಿವನಂಜೇಗೌಡ ಲಕ್ಷ್ಮೇಗೌಡನದೊಡ್ಡಿ ಗ್ರಾಮದಲ್ಲಿ ದೇವಸ್ಥಾನ ನಿರ್ಮಿಸಿಕೊಂಡು ಪೂಜೆ ಮಾಡುತ್ತಿದ್ದರು. ಕೃಷ್ಣೇಗೌಡ ತುಂಬಾ ಸಾಲ ಮಾಡಿಕೊಂಡಿದ್ದ. ತಮ್ಮ ಮಾಡಿದ್ದ ಸಾಲವನ್ನು ಶಿವನಂಜೇಗೌಡ ತೀರಿಸಿದ್ದ. ಆ ಹಣಕ್ಕೆ ಬದಲಾಗಿ ತನ್ನ ಪಾಲಿಗೆ ಬಂದಿದ್ದ ಜಮೀನನ್ನು ಕೊಡುವುದಾಗಿ ಕೃಷ್ಣೇಗೌಡ ಭರವಸೆ ನೀಡಿದ್ದನು.

ಆದರೆ, ತನ್ನ ನಾಲ್ವರು ಸಹೋದರಿಯರನ್ನು ಎತ್ತಿ ಕಟ್ಟಿದ ಕೃಷ್ಣೇಗೌಡ ಅಣ್ಣನಿಗೆ ಜಮೀನು ಕೊಡದೆ ಸತಾಯಿಸುತ್ತಿದ್ದ. ಇದರಿಂದ ಬೇಸತ್ತ ಅಣ್ಣ ಶಿವನಂಜೇಗೌಡ ತಮ್ಮನ ಕೊಲೆಗೆ ಸಂಚು ರೂಪಿಸಿ ಸುಪಾರಿ ನೀಡಿದ್ದಾನೆ.

ತನ್ನ ದೇವಸ್ಥಾನಕ್ಕೆ ಆಗಾಗ್ಗೆ ಬಂದು ಹೋಗುತ್ತಿದ್ದ ಚಂದ್ರಶೇಖರ್‌ನಿಗೆ ಸುಪಾರಿ ಕೊಟ್ಟಿದ್ದ ಶಿವನಂಜೇಗೌಡ ಕಳೆದ ಫೆ.6ರಂದು ಪ್ರಯಾಗ್‌ ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ಶ್ರೀನಿವಾಸ್ ಎಂಬುವವರ ಜೊತೆಗೆ ಹೋಗಿದ್ದನು. ಆರೋಪಿ ಶಿವನಂಜೇಗೌಡನಿಂದ ಮೂರೂವರೆ ಲಕ್ಷ ರು.ಗಳೊಂದಿಗೆ ಸುಪಾರಿ ಪಡೆದಿದ್ದ ಚಂದ್ರಶೇಖರ್ ಕೊಪ್ಪ ಗ್ರಾಮದ ಆರೋಪಿಗಳೊಂದಿಗೆ ಮಾತುಕತೆ ನಡೆಸಿ ಕೊಲೆಗೆ ಸಂಚು ರೂಪಿಸಿದ್ದ.

ಕೊಲೆ ನಡೆಯುವ ಎರಡು ದಿನಗಳ ಮುನ್ನ ಕೃಷ್ಣೇಗೌಡನನ್ನು ಮುಗಿಸಲು ವಿಫಲ ಯತ್ನ ನಡೆಸಿದ್ದರು. ಕೃಷ್ಣೇಗೌಡನ ಚಲನವನಗಳ ಬಗ್ಗೆ ಶಿವನಂಜೇಗೌಡನಿಂದ ಸಂಪೂರ್ಣ ಮಾಹಿತಿ ಪಡೆದ ಆರೋಪಿಗಳು, ಫೆ.11ರಂದು ಬೆಳಗ್ಗೆ 6 ಗಂಟೆ ಸಮಯದಲ್ಲಿ ಮದನಹಟ್ಟಿ ದೇವಸ್ಥಾನದ ಪಕ್ಕದ ಜಮೀನಿನ ಬಳಿ ಕೃಷ್ಣೇಗೌಡನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಆತನ ಕತ್ತು ಕೊಯ್ದು ಪರಾರಿಯಾಗಿದ್ದರು.

ಚಂದ್ರಶೇಖರ್ ಬಗ್ಗೆ ಅನುಮಾನಗೊಂಡ ಪೊಲೀಸರು ಆತನನ್ನು ವಿಚಾರಣೆಗೊಳಪಡಿಸಿದಾಗ ಕೃಷ್ಣೇಗೌಡನ ಹತ್ಯೆಯ ಬಗ್ಗೆ ಸಂಪೂರ್ಣ ಮಾಹಿತಿ ದೊರೆಯಿತು. ಎಲ್ಲ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಅವರಿಂದ 1 ಲಕ್ಷ ರು.ಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಧೀಶರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ವಿವರಿಸಿದರು.

ಸುದ್ಧಿಗೋಷ್ಠಿಯಲ್ಲಿ ಅಪರ ಪೊಲೀಸ್ ಅಧೀಕ್ಷಕರಾದ ಸಿ.ಇ. ತಿಮ್ಮಯ್ಯ, ಎಸ್.ಇ. ಗಂಗಾಧರಸ್ವಾಮಿ, ಡಿವೈಎಸ್ಪಿ ವಿ. ಕೃಷ್ಣಪ್ಪ, ಕೆ.ಎಂ. ದೊಡ್ಡಿ ಠಾಣೆ ಇನ್ಸ್‌ಪೆಕ್ಟರ್ ಎಸ್. ಆನಂದ್ ಇತರರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ