ಸಂವಿಧಾನ, ಐಕ್ಯತೆ, ಗಾಂಧೀಜಿ, ಅಂಬೇಡ್ಕರ್ ತತ್ವ ರಕ್ಷಣೆಗೆ ಐತಿಹಾಸಿಕ ಸಮಾವೇಶ: ಡಿಕೆಶಿ

KannadaprabhaNewsNetwork |  
Published : Jan 20, 2025, 01:32 AM IST
ಬೆಳಗಾವಿಯ ಕಪಿಲೇಶ್ವರ ಮಂದಿರದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅಭಿಷೇಕ ನಡೆಸಿದರು. | Kannada Prabha

ಸಾರಾಂಶ

ದೇಶದ ಸ್ವಾತಂತ್ರ್ಯ, ಸಂವಿಧಾನ, ಐಕ್ಯತೆ, ಗಾಂಧಿ ತತ್ವ, ಅಂಬೇಡ್ಕರ್ ಅವರ ನೀತಿ ರಕ್ಷಣೆ ಮಾಡಲು ಬೆಳಗಾವಿಯಲ್ಲಿ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ದೇಶದ ಸ್ವಾತಂತ್ರ್ಯ, ಸಂವಿಧಾನ, ಐಕ್ಯತೆ, ಗಾಂಧಿ ತತ್ವ, ಅಂಬೇಡ್ಕರ್ ಅವರ ನೀತಿ ರಕ್ಷಣೆ ಮಾಡಲು ಬೆಳಗಾವಿಯಲ್ಲಿ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಬೆಳಗಾವಿಯ ಸಿಪಿಎಡ್ ಮೈದಾನದಲ್ಲಿ 21ರಂದು ನಡೆಯಲಿರುವ ಗಾಂಧಿ ಭಾರತ ಸಮಾವೇಶದ ಸಿದ್ಧತೆ ಪರಿಶೀಲನೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಳಗಾವಿಯಲ್ಲಿ ಐತಿಹಾಸಿಕ ಸಮಾವೇಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಎಐಸಿಸಿ ನಾಯಕರು ಈ ಸಮಾವೇಶಕ್ಕೆ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಎಂದು ಹೆಸರಿಟ್ಟಿದ್ದಾರೆ. ಸಂವಿಧಾನ, ಗಾಂಧೀಜಿ ಹಾಗೂ ಅಂಬೇಡ್ಕರ್ ಅವರ ತತ್ವ ಸಿದ್ಧಾಂತದ ಬಗ್ಗೆ ಮುಂದಿನ ಪೀಳಿಗೆಗೆ ಮಾರ್ಗದರ್ಶನ ನೀಡಲಾಗುವುದು ಎಂದು ತಿಳಿಸಿದರು.

ಇದು ಕೇವಲ ಕಾಂಗ್ರೆಸ್ ಕಾರ್ಯಕ್ರಮವಲ್ಲ. ಇದು ದೇಶದ ಕಾರ್ಯಕ್ರಮ. ಕಾಂಗ್ರೆಸ್ ಪಕ್ಷ, ಗಾಂಧೀಜಿ, ಅಂಬೇಡ್ಕರ್, ಸಂವಿಧಾನದ ಆದರ್ಶ, ತತ್ವ ಸಿದ್ಧಾಂತದ ಮೇಲೆ ನಂಬಿಕೆ ಇಟ್ಟಿರುವ ಯಾರು ಬೇಕಾದರೂ ಈ ಸಮಾವೇಶಕ್ಕೆ ಆಗಮಿಸಬಹುದು. ಈ ಸಮಾವೇಶದಲ್ಲಿ ಭಾಗವಹಿಸಿ ನೀವೆಲ್ಲರೂ ಇತಿಹಾಸದ ಪುಟಕ್ಕೆ ಸೇರಬೇಕು ಎಂದು ತಿಳಿಸಿದರು.

ಗಾಂಧೀಜಿ ಅವರ ಅಧ್ಯಕ್ಷತೆಯಲ್ಲಿ ನಡೆದ ಬೆಳಗಾವಿ ಅಧಿವೇಶನಕ್ಕೆ ಶತಮಾನೋತ್ಸವ ಆಚರಣೆ ಸಮಯದಲ್ಲಿ ನಮ್ಮದೇ ರಾಜ್ಯದ ನಾಯಕರಾದ, ಬ್ಲಾಕ್ ಅಧ್ಯಕ್ಷ ಸ್ಥಾನದಿಂದ ಎಐಸಿಸಿ ಅಧ್ಯಕ್ಷ ಸ್ಥಾನದವರೆಗೆ ಏರಿರುವ ಮಲ್ಲಿಕಾರ್ಜುನ ಖರ್ಗೆ ಅವರು ಆ ಸ್ಥಾನದಲ್ಲಿ ಕೂತಿರುವುದು ವಿಶೇಷ. ಇವರ ಜತೆಗೆ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಸುವರ್ಣಸೌಧದಲ್ಲಿ ವಿಶೇಷವಾದ ಗಾಂಧಿ ಪ್ರತಿಮೆ ನಿರ್ಮಿಸಲಾಗಿದ್ದು, ಇದರ ಅನಾವರಣ ಕಾರ್ಯಕ್ರಮಕ್ಕೆ ಎಲ್ಲಾ ಪಕ್ಷದ ನಾಯಕರಿಗೆ ಆಹ್ವಾನ ನೀಡಲಾಗಿದೆ ಎಂದು ತಿಳಿಸಿದರು.

ಗಾಂಧಿ ಭಾರತ ಅಂಗವಾಗಿ ಅನೇಕ ಕಾರ್ಯಕ್ರಮ: ಗಾಂಧಿ ಭಾರತ ಹಿನ್ನೆಲೆಯಲ್ಲಿ ಹೊಸದಾದ ಕಾರ್ಯಕ್ರಮ ಘೋಷಣೆ ಮಾಡಿತ್ತೀರಾ ಎಂದು ಕೇಳಿದಾಗ, ನಮ್ಮ ನಾಯಕರಾದ ಎಚ್. ಕೆ ಪಾಟೀಲ್, ವೀರಪ್ಪ ಮೊಯ್ಲಿ, ಬಿ.ಎಲ್ ಶಂಕರ್, ಮುನಿಯಪ್ಪ, ರೆಹಮಾನ್ ಖಾನ್ ಅವರ ನೇತೃತ್ವದ ಸಮಿತಿ ನಮಗೆ ಅನೇಕ ಕಾರ್ಯಕ್ರಮಗಳ ಬಗ್ಗೆ ಸಲಹೆ ನೀಡಿದ್ದಾರೆ. ಶಾಲಾ ಕಾಲೇಜುಗಳಿಂದ ಬೇರೆ ಬೇರೆ ಕಡೆಗಳಲ್ಲಿ ಇದನ್ನು ಆಚರಿಸಲು ಸೂಚಿಸಿದ್ದಾರೆ. ಮುಖ್ಯಮಂತ್ರಿಗಳು ಇದಕ್ಕಾಗಿ ಬಜೆಟ್ ನಲ್ಲಿ ಹಣ ಇಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಇಡೀ ವರ್ಷ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದು ತಿಳಿಸಿದರು.

ಬೆಳಗಾವಿಗೆ ವಿಶೇಷ ಕೊಡುಗೆ ನೀಡುತ್ತೀರಾ ಎಂದು ಕೇಳಿದಾಗ, ಖಂಡಿತವಾಗಿ ನೀಡುತ್ತೇವೆ. ಇಡೀ ದೇಶ ಗಾಂಧೀಜಿ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬೆಳಗಾವಿಯತ್ತ ತಿರುಗಿ ನೋಡುತ್ತಿದೆ. ಅಂದೇ ಕಾಂಗ್ರೆಸ್ ದೇಶಕ್ಕೆ ಬೆಳಗಾವಿ ಪರಿಚಯಿಸಿದ್ದು, ಅದನ್ನು ಮುಂದುವರಿಸಿಕೊಂಡು ಹೋಗುತ್ತೇವೆ ಎಂದು ಹೇಳಿದರು.

ಸಚಿವ ಸಂಪುಟ ವಿಸ್ತರಣೆ ಆದರೆ ಬೆಳಗಾವಿಗೆ ಮತ್ತೊಂದು ಸಚಿವ ಸ್ಥಾನ ನೀಡುತ್ತೀರಾ ಎಂದು ಕೇಳಿದಾಗ, ಬೆಳಿಗ್ಗೆ ಉಪಹಾರ ಕೂಟದಲ್ಲಿ ಈ ವಿಚಾರ ಚರ್ಚೆ ಮಾಡುತ್ತೇನೆ ಎಂದರು.

ನೀರಿನ ಬಳಕೆಯಲ್ಲಿ ಲೆಕ್ಕಾಚಾರಗಳಿವೆ: ಬೆಳಗಾವಿಯ ಹಿಡಕಲ್ ಅಣೆಕಟ್ಟಿನಿಂದ ಧಾರವಾಡ ಕೈಗಾರಿಕಾ ಪ್ರದೇಶಕ್ಕೆ 5 ಟಿಎಂಸಿ ನೀರು ತೆಗೆದುಕೊಂಡು ಹೋಗುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ, 5 ಟಿಎಂಸಿ ನೀರನ್ನು ಬೆಂಗಳೂರಿಗೆ ನೀಡಲು ಆಗುತ್ತಿಲ್ಲ. ಇಲ್ಲಿ ಹೇಗೆ ತೆಗೆದುಕೊಂಡು ಹೋಗಲು ಸಾಧ್ಯ. ಯಾರೋ ಹೇಳಿದರು ಎಂದ ಮಾತ್ರಕ್ಕೆ ನಾವು ಉತ್ತರ ಕೊಡಲು ಆಗುವುದಿಲ್ಲ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ಫಿರೋಜ್‌ ಸೇಠ್‌ ಮನೆಯ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಎಂಸಿ ಎಂದರೆ ಎಷ್ಟು ಎಂದು ನಿಮಗೆ ಅರ್ಥವಾಗಿಲ್ಲ. ನಿನ್ನೆ ಹುಕ್ಕೇರಿ ಶಾಸಕ ನಿಖಿಲ್ ಕತ್ತಿ ಅವರು ನನ್ನನ್ನು ಭೇಟಿ ಮಾಡಿ ಚರ್ಚೆ ಮಾಡಿ ಕೆಲವು ವಿಚಾರ ತಿಳಿಸಿದ್ದಾರೆ. ಈ ವಿಚಾರವಾಗಿ ನಾನು ನಿನ್ನೆ ಪರಿಶೀಲನೆ ಮಾಡಿ ವರದಿ ಕೇಳಿದ್ದೇನೆ. ವರದಿ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಯಾವುದಕ್ಕೆ ನೀರು ಬಿಡಬೇಕಾದರೆ ಅಧಿಕೃತ ಅನುಮತಿ ಬೇಕು. ಕೈಗಾರಿಕೆಗಳಿಗೆ ನೀರು ನೀಡುವಾಗ ನಾನು ದರ ಹೆಚ್ಚಿಸಿದ್ದೇನೆ. ಈ ವಿಚಾರವಾಗಿ ಕೇಂದ್ರ ಸರ್ಕಾರ ಮಾರ್ಗಸೂಚಿ ಕಳುಹಿಸಿದೆ. ನೀರಿನ ಬಳಕೆ ಬಗ್ಗೆ ಹೊಸ ನೀತಿ ನೀಡಿದೆ. ಮುಂದಿನ ಅಧಿವೇಶನದಲ್ಲಿ ನಾವು ಅದನ್ನು ಪ್ರಸ್ತಾಪ ಮಾಡುತ್ತೇವೆ. ನೀರನ್ನು ಯಾರೇ ಆಗಲಿ ಈ ರೀತಿ ಬಳಸಲು ಆಗುವುದಿಲ್ಲ. ರೈತರು, ಕೈಗಾರಿಕೆ ಅಥವಾ ನಗರ ಪ್ರದೇಶಗಳ, ಕುಡಿಯುವ ನೀರಿಗೆ ಆಗಲಿ ಎಲ್ಲದಕ್ಕೂ ನಿರ್ದಿಷ್ಟ ಲೆಕ್ಕಾಚಾರ ಇರುತ್ತವೆ ಎಂದು ಹೇಳಿದರು.

ಈ ವಿಚಾರವಾಗಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮಾಹಿತಿ ಇರಲಿಲ್ಲ. ನಿಮಗೆ ಮಾಹಿತಿ ಇತ್ತೇ ಎಂದು ಕೇಳಿದಾಗ, ನಮಗೆ ಗೊತ್ತಿದೆ, ಸಮಯ ಬಂದಾಗ ಮಾತನಾಡುತ್ತೇನೆ. ಎಲ್ಲಾ ಸಚಿವರಿಗೆ ಎಲ್ಲಾ ಮಾಹಿತಿ ಇರುವುದಿಲ್ಲ. ಒಂದೊಂದು ಇಲಾಖೆಯಲ್ಲಿ ಒಂದೊಂದು ನಿರ್ಧಾರ ಮಾಡಿರುತ್ತಾರೆ. ಎಲ್ಲರೂ ಎಲ್ಲಾ ಮಾಹಿತಿ ತಿಳಿದಿರುವುದಿಲ್ಲ. ಪರಿಶೀಲನೆ ಮಾಡಿದಾಗ ತಿಳಿಯುತ್ತದೆ ಎಂದು ಹೇಳಿದರು.

ಬಾಕ್ಸ್----

ಶೆಟ್ಟರ್ ಬಂದ್ರೆ ಬೆಳಗಾವಿ ಪ್ರವಾಸ ಮಾಡಿಸುವೆ: ಕಾಂಗ್ರೆಸ್ ನವರು ಸರ್ಕಾರದ ಹಣದಲ್ಲಿ ಜಾತ್ರೆ ಮಾಡುತ್ತಿದ್ದಾರೆ. ಗಾಂಧಿ ಫೋಟೋ ಹಾಕದೆ ಕಾಂಗ್ರೆಸ್ ನಾಯಕರ ಫೋಟೋ ಹಾಕಿದ್ದಾರೆ ಎಂದು ಜಗದೀಶ್ ಶೆಟ್ಟರ್ ಅವರ ಆರೋಪ ಕುರಿತು ಪ್ರತಿಕ್ರಿಯಿಸಿ ಡಿಕೆಶಿ, ಜಗದೀಶ್ ಶೆಟ್ಟರ್ ಅವರು ಬಂದರೆ ಅವರನ್ನು ಬೆಳಗಾವಿ ಪ್ರವಾಸ ಮಾಡಿಸುತ್ತೇನೆ. ನಾವು ಎಲ್ಲೆಲ್ಲಿ ಏನು ಮಾಡಿದ್ದೇವೆ ಎಂದು ಕರೆದುಕೊಂಡು ಹೋಗಿ ತೋರಿಸುತ್ತೇನೆ. ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದಾಗ ಆಡಿದ ನುಡಿಮುತ್ತುಗಳನ್ನು ನೆನಪಿಸಿಕೊಳ್ಳಲಿ ಎಂದು ತಿರುಗೇಟು ನೀಡಿದರು.

ದೇವಾಲಯಗಳ ಭೇಟಿ ಕುರಿತ ಪಶ್ನೆಗೆ, ನಾನು ದಿನಾ ಬೆಳಗಾದರೆ ದೇವರಿಗೆ ಪೂಜೆ ಮಾಡಿಯೇ ಮನೆಯಿಂದ ಹೊರಬರುತ್ತೇನೆ. ನಾಳೆ, ನಾಡಿದ್ದು ಕಾರ್ಯಕ್ರಮಗಳ ಕೆಲಸದಲ್ಲಿ ನಿರತನಾಗುತ್ತೇನೆ. ಹೀಗಾಗಿ ಇಂದು ದೇವಾಲಯಗಳಿಗೆ ಭೇಟಿ ನೀಡುತ್ತಿದ್ದೇನೆ. ನಿಮ್ಮಿಂದ (ಮಾಧ್ಯಮಗಳ) ರಕ್ಷಣೆಗೆ ಭೇಟಿ ನೀಡುತ್ತಿದ್ದೇನೆ ಎಂದು ಹಾಸ್ಯ ಚಟಾಕಿ ಹಾರಿಸಿದರು.

ಕುಂಭಮೇಳದಲ್ಲಿ ಪಾಲ್ಗೊಳ್ಳುವೆ: ನಾನು ಈ ಬಾರಿ ಕುಟುಂಬ ಸಮೇತರಾಗಿ ಕುಂಭಮೇಳಕ್ಕೆ ಹೋಗಬೇಕು ಎಂದು ಕೊಂಡಿದ್ದೇನೆ. ಅಲ್ಲಿನ ಸರ್ಕಾರದವರು ಆಹ್ವಾನ ನೀಡಿದ್ದಾರೆ. ಹೋಗುವ ದಿನಾಂಕ ಇನ್ನೂ ನಿಗದಿಯಾಗಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ಕಪಿಲೇಶ್ವರ ದೇವಸ್ಥಾನದಲ್ಲಿ ಅಭಿಷೇಕ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ದೇವರ ಮೇಲೆ ಒಬ್ಬೊಬ್ಬರ ನಂಬಿಕೆ. ಪರಮೇಶ್ವರ ಅವತಾರ ಕಪಿಲೇಶ್ವೇರ. ಇಲ್ಲಿಗೆ ಮಹಾತ್ಮ ಗಾಂಧೀಜಿ, ಬಾಲಗಂಗಾಧರ ತಿಲಕ್ , ಸ್ವಾಮಿ ವಿವೇಕಾನಂದ, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಈ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ನಾವು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ ಉಳಿಯಬೇಕು ಎಂದು ಹೋರಾಟ ಮಾಡುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ನಾವು ರುದ್ರೇಶ್ವರನ ಪೂಜೆ ಮಾಡಿದ್ದೇವೆ. ಈ ರಾಜ್ಯದ ಜನರಿಗೆ ಒಳ್ಳೆಯದಾಗಲಿ ಎಂದು ಬೇಡಿಕೊಂಡಿದ್ದೇವೆ. ಕಾರ್ಯಕ್ರಮ ಯಶಸ್ವಿಯಾಗಲಿ, ರಾಜ್ಯಕ್ಕೂ, ನಿಮಗೂ ಒಳ್ಳೆಯದಾಗಲಿ ಎಂದು ಬೇಡಿಕೊಂಡಿದ್ದೇನೆ ಎಂದು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ