ಪಹಲ್ಗಾಮ್ ನಲ್ಲಿ ಅಮಾಯಕರನ್ನು ಹತ್ಯೆಗೈದಿದ್ದಕ್ಕಾಗಿ ಪ್ರತೀಕಾರವಾಗಿ ಪಾಕಿಸ್ತಾನದ ಉಗ್ರ ನೆಲೆಗಳ ಮೇಲೆ ಭಾರತ ದಾಳಿ ನಡೆಸಿರುವ ಆಪರೇಷನ್ ಸಿಂಧೂರ್ ಭಾರತ ರಕ್ಷಣಾ ವ್ಯವಸ್ಥೆಯಲ್ಲಿ ಐತಿಹಾಸಿಕ ದಿನ ಎಂದು ಸಂಸದ ಡಾ.ಸಿ.ಎನ್.ಮಂಜುನಾಥ್ ಬಣ್ಣಿಸಿದರು.
ರಾಮನಗರ : ಪಹಲ್ಗಾಮ್ ನಲ್ಲಿ ಅಮಾಯಕರನ್ನು ಹತ್ಯೆಗೈದಿದ್ದಕ್ಕಾಗಿ ಪ್ರತೀಕಾರವಾಗಿ ಪಾಕಿಸ್ತಾನದ ಉಗ್ರ ನೆಲೆಗಳ ಮೇಲೆ ಭಾರತ ದಾಳಿ ನಡೆಸಿರುವ ಆಪರೇಷನ್ ಸಿಂಧೂರ್ ಭಾರತ ರಕ್ಷಣಾ ವ್ಯವಸ್ಥೆಯಲ್ಲಿ ಐತಿಹಾಸಿಕ ದಿನ ಎಂದು ಸಂಸದ ಡಾ.ಸಿ.ಎನ್.ಮಂಜುನಾಥ್ ಬಣ್ಣಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಯೋತ್ಪಾದನೆಗೆ ತಕ್ಕ ಪಾಠ ಕಲಿಸಬೇಕಿದೆ. ಭಾರತದ ದೃಷ್ಟಿಯಿಂದ ಮಾತ್ರವಲ್ಲದೆ ವಿಶ್ವದಲ್ಲಿಯೇ ಭಯೋತ್ಪಾದನೆಯನ್ನು ಮಟ್ಟ ಹಾಕಬೇಕಿದೆ. ಭಾರತೀಯ ಸೇನೆ ಏರ್ ಸ್ಟ್ರೈಕ್ ಮೂಲಕ ಪಾಕಿಸ್ತಾನದ 9 ಉಗ್ರ ತಾಣಗಳ ಮೇಲೆ ದಾಳಿ ಮಾಡಿದೆ. ಅಲ್ಲಿನ ಸಿವಿಲಿಯನ್ಸ್ ಜಾಗದ ಮೇಲೆ ದಾಳಿ ಮಾಡಿಲ್ಲ. ಪಾಕಿಸ್ತಾನ ಏರ್ ಸ್ಪೇಸ್ ಗೆ ಭಾರತ ಹೋಗಿಲ್ಲ ಎಂದರು.
ಯುದ್ಧಗಳಲ್ಲಿ ಬೇರೆ ಬೇರೆ ರೀತಿ ಇದೆ. 15 ದೇಶಗಳು ಇರುವ ಸಂಸ್ಥೆಯಲ್ಲಿ 13 ದೇಶಗಳು ಭಾರತದ ಪರ ಇದ್ದರೆ, ಎರಡು ದೇಶಗಳು ಮಾತ್ರ ಪಾಕಿಸ್ತಾನ ಪರ ಅಂತ ಹೇಳಿಕೊಂಡಿವೆ. ರಾಜತಾಂತ್ರಿಕವಾಗಿಯೂ ಕೂಡ ಪಾಕಿಸ್ತಾನವನ್ನು ಐಸೋಲೇಟ್ ಮಾಡುವಂತಹ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ಅಚ್ಚುಕಟ್ಟಾಗಿ ಮಾಡಿದೆ. ನೀರು ನಿಲ್ಲಿಸುವ ಯುದ್ಧ ಕೂಡ ಮಾಡಿದೆ.
ಭಯೋತ್ಪಾದನೆ ನಿರಂತರವಾಗಿ ಕಾಡುತ್ತಿದೆ. ಪುಲ್ವಾಮ, ಪಾರ್ಲಿಮೆಂಟ್, ಮುಂಬೈ ಅಟ್ಯಾಕ್ ಆಗಿವೆ. ಭಾರತದ ರಕ್ಷಣಾ ದೃಷ್ಟಿಯಿಂದ ದೇಶದ 140 ಕೋಟಿ ಜನರು ಪ್ರಧಾನ ಮಂತ್ರಿ ಹಾಗೂ ರಕ್ಷಣಾ ಪಡೆಗಳು ಯಾವ ತೀರ್ಮಾನ ಮಾಡುತ್ತವೆಯೋ ಅದಕ್ಕೆ ಒಗ್ಗಟ್ಟಾಗಿ ಸಹಕಾರ ನೀಡಬೇಕು. ಭಾರತ ಎಂದೂ ಕೂಡ ಏಕಾಏಕಿ ಯುದ್ಧ ಮಾಡಿಲ್ಲ. ಈಗ ಮಾಡಿರೋದು ಯುದ್ಧ ಅಲ್ಲ. ಭಯೋತ್ಪಾದಕ ತಂಗುದಾಣದ ಮೇಲೆ ಅಟ್ಯಾಕ್ ಮಾಡಿರೋದಷ್ಟೆ. ಇದು ಸಾಂಪ್ರದಾಯಿಕ ಯುದ್ಧ ಅಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಯುನೈಟೆಡ್ ಸೆಕ್ಯುರಿಟಿ ಕೌನ್ಸಿಲ್ ಕೂಡ ಎರಡು ದೇಶಗಳ ವಾದ ಪ್ರತಿ ವಾದ ಆಲಿಸಿದೆ. ಪಾಕಿಸ್ತಾನದ ಕುಮ್ಮಕ್ಕಿನಿಂದ ಉಗ್ರರು ದಾಳಿ ಮಾಡಿ 26 ಮಂದಿ ಭಾರತೀಯರನ್ನು ಕೊಂದಿದ್ದಾರೆ. ಹಾಗಾಗಿ ಈ ರೀತಿ ದಾಳಿ (ಪ್ರತಿಕ್ರಿಯೆ) ನೀಡುವುದು ನಮ್ಮ ಕರ್ತವ್ಯ ಎಂದು ಮಂಜುನಾಥ್ ಹೇಳಿದರು.