ನ.6 ರಂದು ಐತಿಹಾಸಿಕ ಶ್ರೀ ಕೋಟೆವಿದ್ಯಾಗಣಪತಿ ವಿಸರ್ಜನಾ ಮಹೋತ್ಸವ

KannadaprabhaNewsNetwork |  
Published : Nov 02, 2026, 02:45 AM IST
1ಕೆಎಂಎನ್ ಡಿ33,34 | Kannada Prabha

ಸಾರಾಂಶ

ಐತಿಹಾಸಿಕ ಶ್ರೀಕೋಟೆ ವಿದ್ಯಾಗಣಪತಿ ವಿಸರ್ಜನಾ ಮಹೋತ್ಸವವು ನ.6ರಂದು ಪಟ್ಟಣದಲ್ಲಿ ಬಹಳ ವಿಜೃಂಭಣೆಯಿಂದ ನಡೆಯಲಿರುವ ಹಿನ್ನೆಲೆಯಲ್ಲಿ ಟಿ.ಮರಿಯಪ್ಪ ವೃತ್ತದಲ್ಲಿ ಬೃಹತ್ ಗಾತ್ರದ ಪಂಚಮುಖಿ ಆಂಜನೇಯ ಮತ್ತು ಟಿ.ಬಿ.ಬಡಾವಣೆಯ ಬಿಜಿಎಸ್ ವೃತ್ತದಲ್ಲಿ ಗರುಡಾರೂಢ ವಿಷ್ಣುವಿನ ಮೂರ್ತಿಯ ಮಹಾದ್ವಾರಗಳನ್ನು ಸ್ಥಾಪಿಸಿ ಇಡೀ ಪಟ್ಟಣವನ್ನು ವಿಶೇಷವಾಗಿ ಸಿಂಗರಿಸಲಾಗಿದೆ.

ಕರಡಹಳ್ಳಿ ಸೀತಾರಾಮು

ಕನ್ನಡಪ್ರಭ ವಾರ್ತೆ ನಾಗಮಂಗಲ

ಐತಿಹಾಸಿಕ ಶ್ರೀಕೋಟೆ ವಿದ್ಯಾಗಣಪತಿ ವಿಸರ್ಜನಾ ಮಹೋತ್ಸವವು ನ.6ರಂದು ಪಟ್ಟಣದಲ್ಲಿ ಬಹಳ ವಿಜೃಂಭಣೆಯಿಂದ ನಡೆಯಲಿರುವ ಹಿನ್ನೆಲೆಯಲ್ಲಿ ಟಿ.ಮರಿಯಪ್ಪ ವೃತ್ತದಲ್ಲಿ ಬೃಹತ್ ಗಾತ್ರದ ಪಂಚಮುಖಿ ಆಂಜನೇಯ ಮತ್ತು ಟಿ.ಬಿ.ಬಡಾವಣೆಯ ಬಿಜಿಎಸ್ ವೃತ್ತದಲ್ಲಿ ಗರುಡಾರೂಢ ವಿಷ್ಣುವಿನ ಮೂರ್ತಿಯ ಮಹಾದ್ವಾರಗಳನ್ನು ಸ್ಥಾಪಿಸಿ ಇಡೀ ಪಟ್ಟಣವನ್ನು ವಿಶೇಷವಾಗಿ ಸಿಂಗರಿಸಲಾಗಿದೆ.

ಶ್ರೀಕೋಟೆ ವಿದ್ಯಾಗಣಪತಿ ಸೇವಾ ಸಮಿತಿ ಜೊತೆಗೆ ತಾಲೂಕಿನ ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ದುರ್ಗಾವಾಹಿನಿ ಸಂಘಟನೆಯ ಸಹಭಾಗಿತ್ವದಲ್ಲಿ 74ನೇ ವರ್ಷದ ಅದ್ಧೂರಿ ಗಣೇಶೋತ್ಸವ ನಡೆಯುತ್ತಿದೆ. ಇಡೀ ಪಟ್ಟಣ ವರ್ಣರಂಜಿತವಾಗಿ ಕಂಗೊಳಿಸುತ್ತಿದೆ. ಸ್ವಾಗತ ಕೋರುವ ಫ್ಲೆಕ್ಸ್ ಬ್ಯಾನರ್‌ಗಳು ಪಟ್ಟಣದಾದ್ಯಂತ ರಾರಾಜಿಸುತ್ತಿವೆ.

ಗಣೇಶಮೂರ್ತಿ ಪ್ರತಿಷ್ಠಾಪಿಸಿರುವ ಪಟ್ಟಣದ ಪಡುವಲಪಟ್ಟಣ ರಸ್ತೆ, ಶ್ರೀಸೌಮ್ಯಕೇಶವಸ್ವಾಮಿ ದೇವಸ್ಥಾನದ ರಸ್ತೆ ಸೇರಿದಂತೆ ಮರೆವಣಿಗೆ ಸಾಗುವ ಚಾಮರಾಜನಗರ ಜೀವರ್ಗಿ ರಾಷ್ಟ್ರೀಯ ಹೆದ್ದಾರಿಯ ಟಿ.ಬಿ.ಬಡಾವಣೆ ಉಪ್ಪಾರಹಳ್ಳಿ ಗೇಟ್‌ನಿಂದ ಮೈಸೂರು ರಸ್ತೆ ವರೆಗೆ ಇದೇ ಮೊದಲ ಬಾರಿಗೆ ಮೈಸೂರು ದಸರಾ ಮಾದರಿಯ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ.

ಗಣೇಶೋತ್ಸವದ ಹಿನ್ನೆಲೆಯಲ್ಲಿ ಪಟ್ಟಣದ ಹೃದಯಭಾಗ ಟಿ.ಮರಿಯಪ್ಪ ವೃತ್ತದಲ್ಲಿ ಅಹಿರಾವಣ ಎಂಬ ಮಾಯಾವಿ ರಾಕ್ಷಸನನ್ನು ಸೋಲಿಸಿ ಪಾತಾಳದಲ್ಲಿ ಅಡಗಿಸಿಟ್ಟಿದ್ದ ಶ್ರೀರಾಮ ಲಕ್ಷ್ಮಣರನ್ನು ರಕ್ಷಿಸಲು ಐದು ದಿಕ್ಕುಗಳಲ್ಲಿ ಏಕಕಾಲಕ್ಕೆ ಅವತರಿಸಿದ್ದ ಪಂಚಮುಖಿ ಆಂಜನೇಯ ಮತ್ತು ಟಿ.ಬಿ.ಬಡಾವಣೆ ಬಿಜಿಎಸ್ ವೃತ್ತದಲ್ಲಿ ಲೋಕ ರಕ್ಷಣೆಗಾಗಿ ಸಂಚರಿಸಲು ಗರುಡನ ಮೇಲೆ ನಿಂತಿರುವ ಮಹಾವಿಷ್ಣುವಿನ ಮೂರ್ತಿಯುಳ್ಳ ಕೇಸರಿ ಬಣ್ಣದ ಮಹಾದ್ವಾರಗಳು ಪಟ್ಟಣಕ್ಕೆ ಬರುವ ಜನರ ಹಾಗೂ ಹೆದ್ದಾರಿಯಲ್ಲಿ ಸಂಚರಿಸುವ ಪ್ರಯಾಣಿಕರನ್ನು ಆಕರ್ಷಿಸುತ್ತಿವೆ.

ಗಣೇಶೋತ್ಸವದ ಹಿನ್ನೆಲೆಯಲ್ಲಿ ಶನಿವಾರ ಸಂಜೆ ಪೌರಾಣಿಕ ರಂಗ ಗೀತೆ ಸ್ಪರ್ಧೆ ಮತ್ತು ಭಾನುವಾರ ಸಂಜೆ ಭರತನಾಟ್ಯ ಕಾರ್ಯಕ್ರಮ ಆಯೋಜಿಸಲಾಗಿದೆ. ಸೋಮವಾರ ಬೆಳಗ್ಗೆ ರಕ್ತದಾನ ಶಿಬಿರ, ಸಂಜೆ ರಾಜ್ಯ ಮಟ್ಟದ ರಂಗ ಕುಣಿತ ಸ್ಪರ್ಧೆ ನಡೆಯಲಿದೆ.

74ನೇ ವರ್ಷದ ಪುಷ್ಪಮಂಟಪೋತ್ಸವದ ಪ್ರಯುಕ್ತ ನ.3ರಂದು ಬೆಳಗ್ಗೆ 6.30ಕ್ಕೆ ಪ್ರಥಮ ಬಾರಿಗೆ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದಿಂದ ಆರೋಗ್ಯಕ್ಕಾಗಿ ಮತ್ತು ಡ್ರಗ್ಸ್ ಮುಕ್ತ ಭಾರತಕ್ಕಾಗಿ ಮಹಿಳೆಯರಿಗೆ 3 ಕಿ.ಮೀ. ಹಾಗೂ ಪುರುಷರಿಗೆ 6 ಕಿ.ಮೀ. ದೂರದ ಮ್ಯಾರಥಾನ್ ಓಟ ಆಯೋಜಿಸಲಾಗಿದೆ. ಓಟದಲ್ಲಿ ವಿಜೇತರಾದ ಒಟ್ಟು 10 ಮಂದಿಗೆ ನಗದು ಬಹುಮಾನ ಮತ್ತು ಪಾಲ್ಗೊಳ್ಳುವ ಪ್ರತಿಯೊಬ್ಬರಿಗೂ ಪ್ರಶಸ್ತಿಪತ್ರ ನೀಡಲಾಗುವುದು. ಅಂದು ಸಂಜೆ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

ಅಲ್ಲದೇ, ಪಟ್ಟಣದ ವರ್ತಕರು, ಅಕ್ಕಿ ಗಿರಣಿ ಮಾಲೀಕರು ಹಾಗೂ ಸಾರ್ವಜನಿಕರ ಸಹಭಾಗಿತ್ವದಲ್ಲಿ ನ.4 ರಂದು ಮಧ್ಯಾಹ್ನ 12 ಗಂಟೆಯಿಂದ ಶ್ರೀ ಕೋಟೆವಿದ್ಯಾಗಣಪತಿ ದೇವಸ್ಥಾನದ ಮುಂಭಾಗದಲ್ಲಿ ಅನ್ನಸಂತರ್ಪಣೆ ನಡೆಯಲಿದೆ. ಅಂದು ಸಂಜೆ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ.

ನ.5 ರಂದು ಬೆಳಗ್ಗೆ ಪಟ್ಟಣದ ಟಿ.ಬಿ.ಬಡಾವಣೆಯ ಪುಣ್ಯಕೋಟಿ ಶಿಶುಮಂದಿರದ ಮಕ್ಕಳಿಂದ ಭರತನಾಟ್ಯ ಕಾರ್ಯಕ್ರಮ. ಸಂಜೆ 10 ಕಿ.ಮೀ.ದೂರದ ಸೈಕ್ಲಿಂಗ್ ಸ್ಪರ್ಧೆ ನಡೆಯಲಿದೆ. ಮೊದಲ ನೋಂದಣಿ ಮಾಡಿಕೊಳ್ಳುವ 100 ಮಂದಿಗೆ ಪದಕ ಹಾಗೂ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರಿಗೂ ಪ್ರಶಸ್ತಿಪತ್ರ ಸಿಗಲಿದೆ.

ಮೆರವಣಿಗೆಗೆ ಚಾಲನೆ:

ನ.6ರ ಶುಕ್ರವಾರ ಬೆಳಗ್ಗೆ ಶ್ರೀ ಕೋಟೆವಿದ್ಯಾಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯಗಳ ನಂತರ ಅದ್ಧೂರಿ ಗಣೇಶೋತ್ಸವ ಮೆರವಣಿಗೆಗೆ ಚಾಲನೆ ಸಿಗಲಿದೆ. ಕಳೆದ 52 ದಿನಗಳ ಹಿಂದೆ ಪ್ರತಿಷ್ಠಾಪಿಸಿರುವ ಶ್ರೀಕೋಟೆ ವಿದ್ಯಾಗಣಪತಿ ಮೂರ್ತಿಯನ್ನು ಅಲಂಕೃತ ಪುಷ್ಪ ಮಂಟಪೋತ್ಸವದಲ್ಲಿರಿಸಿ ಅದ್ಧೂರಿ ಮೆರವಣಿಗೆ ನಡೆಸಲಾಗುವುದು. ಬೃಹತ್ ಡಿಜೆ ಸೇರಿದಂತೆ ಡೊಳ್ಳು ಕುಣಿತ, ಪೂಜಾ ಕುಣಿತ, ವೀರಗಾಸೆ, ನಾದಸ್ವರ, ಚಿಲಿಪಿಲಿ ಬೊಂಬೆ, ನಾಸಿಕ್ ಡೋಲ್, ಅಪ್ಸರೆ ನೃತ್ಯ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ.

ಶ್ರೀಕೋಟೆವಿದ್ಯಾಗಣಪತಿ ದೇವಸ್ಥಾನದ ಮುಂಭಾಗದಿಂದ ಆರಂಭಗೊಳ್ಳುವ ಮೆರವಣಿಗೆ ಕೆಎಸ್‌ಟಿ ರಸ್ತೆ ಮೂಲಕ ಟಿ.ಮರಿಯಪ್ಪ ವೃತ್ತಕ್ಕೆ ಬಂದು ಚಾಮರಾಜನಗರ ಜೀವರ್ಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿ ಟಿ.ಬಿ.ಬಡಾವಣೆಯ ಬಿಜಿಎಸ್ ವೃತ್ತದಲ್ಲಿ ತಿರುವು ಪಡೆದು ಮಂಡ್ಯ ವೃತ್ತದಿಂದ ಮೈಸೂರು ರಸ್ತೆಯ ಸರ್ಕಾರಿ ಉರ್ದು ಶಾಲೆಯ ಬಳಿ ತಿರುವು ಪಡೆದು ಮುಸ್ಲೀಂ ದರ್ಗಾ ಮುಂಭಾಗದಲ್ಲಿ ಸಾಗಿ ಕನ್ನಿಕಾಪರಮೇಶ್ವರಿ ದೇವಸ್ಥಾನದ ರಸ್ತೆ ಮೂಲಕ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಶುಕ್ರವಾರ ರಾತ್ರಿ ವರೆಗೂ ಮೆರವಣಿಗೆ ನಡೆಯಲಿದೆ. ಮೆರವಣಿಗೆ ನಡೆಸಿದ ಬಳಿಕ ಪಟ್ಟಣದ ಇತಿಹಾಸ ಪ್ರಸಿದ್ಧ ಹಂಪೆ ಅರಸನ ಕೊಳದಲ್ಲಿ ತೆಪ್ಪೋತ್ಸವ ನಡೆಸಿದ ಬಳಿಕ ಗಣೇಶ ಮೂರ್ತಿಯನ್ನು ವಿಸರ್ಜಿಸಲಾಗುವುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗ್ಳೂರು ಸೇರಿ 7 ಏರ್ಪೋರ್ಟಲ್ಲಿ ವಿದೇಶಿ ಯಾತ್ರಿಗೂ ಡಿಜಿ ಯಾತ್ರಾ
ಕನ್ನಡತನವನ್ನು ಬದುಕಿನಲ್ಲಿ ಮೈಗೂಡಿಸಿಕೊಳ್ಳಲು ಶಾಸಕ ಟಿ.ಡಿ. ರಾಜೇಗೌಡ ಕರೆ