ಐತಿಹಾಸಿಕ ಶ್ರೀ ವೀರಭದ್ರಸ್ವಾಮಿ ರಥೋತ್ಸವ ಸಂಪನ್ನ

KannadaprabhaNewsNetwork | Published : Jun 25, 2024 12:34 AM

ಸಾರಾಂಶ

ಕಡೂರುರಾಜ್ಯದ ಬಯಲು ಪ್ರದೇಶದ ವರ್ಷದ ಕೊನೆ ರಥೋತ್ಸವ ಎಂದು ಕರೆಯುವ ಕಡೂರು ಪಟ್ಟಣದ ಐತಿಹಾಸಿಕ ಶ್ರೀ ವೀರ ಭಧ್ರಸ್ವಾಮಿ ರಥೋತ್ಸವ ಸೋಮವಾರ ಸಾವಿರಾರು ಸದ್ಭಕ್ತರ ನಡುವೆ ಶ್ರದ್ಧಾಭಕ್ತಿಯಿಂದ ನಡೆಯಿತು.

ಬಯಲು ಪ್ರದೇಶದ ವರ್ಷದ ಕೊನೆ ರಥೋತ್ಸವ

ಕನ್ನಡಪ್ರಭ ವಾರ್ತೆ, ಕಡೂರು

ರಾಜ್ಯದ ಬಯಲು ಪ್ರದೇಶದ ವರ್ಷದ ಕೊನೆ ರಥೋತ್ಸವ ಎಂದು ಕರೆಯುವ ಕಡೂರು ಪಟ್ಟಣದ ಐತಿಹಾಸಿಕ ಶ್ರೀ ವೀರ ಭಧ್ರಸ್ವಾಮಿ ರಥೋತ್ಸವ ಸೋಮವಾರ ಸಾವಿರಾರು ಸದ್ಭಕ್ತರ ನಡುವೆ ಶ್ರದ್ಧಾಭಕ್ತಿಯಿಂದ ನಡೆಯಿತು.

ಪಟ್ಟಣದ ಛತ್ರದ ಬೀದಿಯಲ್ಲಿರುವ ದೇವಾಲಯದಲ್ಲಿ ಬೆಳಿಗ್ಗೆ ಶ್ರೀ ವೀರಭಧ್ರ ಸ್ವಾಮಿಗೆ ವಿಶೇಷ ಅಭಿಷೇಕ, ಪೂಜೆಗಳು ನಡೆದವು ಅನಂತರ ಮಲ್ಲೇಶ್ವರದ ಶ್ರೀಸ್ವರ್ಣಾಂಬ ದೇವಿ, ಶ್ರೀ ಕೆಂಚಾಂಬ ದೇವಿ ಮತ್ತಿತರ ಗ್ರಾಮ ದೇವತೆಗಳೊಂದಿಗೆ ಶ್ರೀ ವೀರಭಧ್ರಸ್ವಾಮಿ ಉತ್ಸವ ಮೂರ್ತಿಯನ್ನು ಸಾಂಪ್ರದಾಯಿಕವಾಗಿ ಕಲಾತಂಡಗಳ ಜತೆ ಮದ್ದು ಗುಂಡುಗಳ ಸಿಡಿಸುತ್ತಾ ಜಯ ಘೋಷಣೆಗಳೊಂದಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ನಂತರ ರಥದ ಬಳಿಗೆ ಕರೆ ತರಲಾಯಿತು.

ಅಲಂಕೃತ ರಥದಲ್ಲಿ ದೇವಸ್ಥಾನ ಪ್ರಧಾನ ಗುರು ಎಚ್.ಎಂ.ಲೋಕೇಶ್ ನೇತೃತ್ವದಲ್ಲಿ ಸ್ವಾಮಿಯನ್ನು ಪ್ರತಿಷ್ಟಾಪಿಸ ಲಾಯಿತು.

ಹನ್ನೆರಡು ಹರಿವಾಣದ ಗುಡಕಟ್ಟಿನ ಗೌಡರಾದ ಭರತ್ ಕೆಂಪರಾಜು ಅಂಬು ಹೊಡೆದ ನಂತರ ವಾಡಿಕೆಯಂತೆ ಗಣ್ಯರನ್ನು ಗೌರವಿಸುವ ಕಾರ್ಯಕ್ರಮದಲ್ಲಿ ಶಾಸಕ ಕೆ.ಎಸ್.ಆನಂದ್, ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್, ಶರತ್ ಕೃಷ್ಣಮೂರ್ತಿ, ತೋಟದಮನೆ ಮೋಹನ್, ಈರಳ್ಳಿ ರಮೇಶ್, ಮತ್ತಿತರ ಸದಸ್ಯರನ್ನು ಗೌರವಿಸಲಾಯಿತು.

ಪ್ರತಿವರ್ಷದಂತೆ ಈ ವರ್ಷವೂ ಸ್ವಾಮಿಯ ಬಾವುಟ ಹರಾಜು ಪ್ರಕ್ರಿಯೆಯಲ್ಲಿ. ದೊಡ್ಡಪೇಟೆ ಭಂಡಾರಿ ಮುದಿಯಪ್ಪನವರ ಮೊಮ್ಮಗ (ಹಳಕಟ್ಟಪ್ಪನವರ ಪುತ್ರ) ಕೃಷ್ಣಮೂರ್ತಿ ₹ 3 ಲಕ್ಷಕ್ಕೆ ಹರಾಜು ಕೂಗಿ ಬಾವುಟ ತಮ್ಮದಾಗಿಸಿಕೊಂಡರು.

ರಥಪೂಜೆಯ ಬಳಿಕ ಹೊಸ ದಂಪತಿಗಳು ಸೇರಿದಂತೆ ನೆರೆದ ಭಕ್ತರು ಉತ್ಸಾಹದಿಂದ ರಥವನ್ನೆಳೆದು ಸಂಭ್ರಮಿಸಿದರು. ಚೌಡ್ಲಾಪುರದ ಶ್ರೀ ಕರಿಯಮ್ಮ ದೇವಿ, ತುರುವನಹಳ್ಳಿಯ ಶ್ರೀ ಭೈರವೇಶ್ವರ ಸ್ವಾಮಿ, ಪಟ್ಟಣದ ಗ್ರಾಮದೇವತೆಯರಾದ ಶ್ರೀ ಕೆಂಚಮ್ಮದೇವಿ ಶ್ರೀ ಕಾಳಿಕಾಂಬ, ಮತ್ತು ಶ್ರೀಬನಶಂಕರಿ ದೇವರ ಉಪಸ್ಥಿತಿಯಲ್ಲಿ ನಡೆದ ರಥೋತ್ಸವದಲ್ಲಿ ಸುತ್ತಮುತ್ತಲ ಗ್ರಾಮಗಳಿಂದ ಸಾವಿರಾರು ಭಕ್ತರು ಭಾಗವಹಿಸಿದ್ದರು. ದೇವಸ್ಥಾನದಿಂದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. --ಬಾಕ್ಸ್ ---

ಶ್ರೀ ಸ್ವಾಮಿಯವರ ರಥೋತ್ಸವದ ಬಳಿಕ ಕೆಲವೇ ನಿಮಿಷಗಳಲ್ಲಿ ತಂಪಾದ ಮಳೆ ಸುರಿದು ತಂಪಾಗಿಸಿತು. ಬೆಳಗಿನಿಂದಲೂ ಸುಡು ಬಿಸಿಲಿನ ವಾತಾವರಣ ಇದ್ದು ಮಧ್ಯಾಹ್ನ 12.30ರ ಬಳಿಕ ರಥ ಎಳೆಯಲು ಸಜ್ಜಾಗಿ ಭಕ್ತರು ರಥ‍ವನ್ನು ಶ್ರೀ ಕೆಂಚಾಂಬ ದೇವಾಲದಿಂದ ಶ್ರೀ ವೀರಭದ್ರ ಸ್ವಾ ಮಿಯವರ ದೇವಾಲಯದ ತನಕ ಎಳೆದರು. ಅದಾದ ಕಲವೇ ನಿಮಿಷಗಳ ನಂತರ ಸೋನೆ ಮಳೆ ಬರುವ ಮೂಲಕ ಭಕ್ತರ ಮನಸನ್ನು ತಣಿಸಿತು.

24ಕೆಕೆಡಿಯು1.

ಕಡೂರು ಪಟ್ಟಣದ ಶ್ರೀ ವೀರಭಧ್ರಸ್ಥಾಮಿಯವರ ರಥೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು .

Share this article