ಎಲ್.ವಿ.ನವೀನ್ ಕುಮಾರ್
ಶ್ರೀರಂಗಪಟ್ಟಣದಲ್ಲಿ ಅ.4ರಿಂದ 7ರವರೆಗೆ ನಡೆಯಲಿರುವ ಐತಿಹಾಸಿಕ ಶ್ರೀರಂಗಪಟ್ಟಣ ದಸರಾ ಮಹೋತ್ಸವದಲ್ಲಿ ಜಂಬೂ ಸವಾರಿ ಮೆರವಣಿಗೆಗೆ ಹಿರಿಯ ನಟ ಶಿವರಾಜ್ ಕುಮಾರ್ ಚಾಲನೆ ನೀಡಲಿದ್ದಾರೆ. ದಸರಾ ಅಂಗವಾಗಿ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ವಸ್ತು ಪ್ರದರ್ಶನ ಮತ್ತು ಆಹಾರ ಮೇಳ ಸೇರಿದಂತೆ ವಿಶೇಷ ಆಕರ್ಷಣೆಯ ಕಾರ್ಯಕ್ರಮಗಳನ್ನು ನಡೆಸಲು ವೇದಿಕೆ ಸಿದ್ಧಗೊಳ್ಳುತ್ತಿದೆ.
ಈ ಬಾರಿ ಹಲವು ವಿಶೇಷತೆಗಳೊಂದಿಗೆ ಪಾರಂಪರಿಕಾ ದಸರಾ ಆಚರಣೆಗೆ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಅ.4 ರಂದು ಮಧ್ಯಾಹ್ನ 2.30ಕ್ಕೆ ಕಿರಂಗೂರು ಬಳಿಯ ಬನ್ನಿಮಂಟಪ ಬಳಿ ಚಿತ್ರನಟ ಶಿವರಾಜ್ ಕುಮಾರ್ ಜಂಬೂ ಸವಾರಿ, ವಿವಿಧ ಕಲಾತಂಡಗಳ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.ಜಂಬೂ ಸವಾರಿಯಲ್ಲಿ ಮಹೇಂದ್ರ (ಅಂಬಾರಿ ಆನೆ) ಹಿರಣ್ಯ, ಲಕ್ಷ್ಮಿ ಆನೆಗಳು ಭಾಗವಹಿಸಲಿದ್ದು, ನಾಡದೇವತೆ ಶ್ರೀಚಾಮುಂಡೇಶ್ವರಿ ದೇವಿಯ ಅಗ್ರಪೂಜೆ ನಂತರ ಸ್ತಬ್ಧ ಚಿತ್ರ, ಸ್ಥಳೀಯ ಕಲಾ ತಂಡಗಳೊಂದಿಗೆ ಜಂಬೂ ಸವಾರಿ ಮೆರವಣಿಗೆ ಬೆಂಗಳೂರು- ಮೈಸೂರು ಹೆದ್ದಾರಿ ಮೂಲಕ ಪಟ್ಟಣಕ್ಕೆ ಹೊರಡಲಿದೆ.
ಸಂಜೆ 6 ಗಂಟೆಗೆ ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯದ ಆವರಣದಲ್ಲಿ ದಸರಾ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ. ನಂತರ ಶ್ರೀರಂಗ ವೇದಿಕೆಯಲ್ಲಿ ಗಾಯಕ ಹಾಗೂ ಸಂಗೀತ ನಿರ್ದೇಶಕ ವಾಸುಕಿ ವೈಭವ್ ಮತ್ತು ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ. ಇದಕ್ಕೂ ಮುನ್ನ ಬೆಳಗ್ಗೆ 7 ಗಂಟೆಗೆ ತಾಲೂಕು ಕ್ರೀಡಾಂಗಣದಲ್ಲಿ ಫಿಟ್ ಇಂಡಿಯಾ ಮ್ಯಾರಥಾನ್ ಸ್ಪರ್ಧೆ ನಡೆಯಲಿದೆ.
ಅ.6ರಂದು ಬೆಳಗ್ಗೆ 6 ಗಂಟೆಗೆ ಶ್ರೀರಂಗ ವೇದಿಕೆಯಲ್ಲಿ ಸಾಮೂಹಿಕ ಸೂರ್ಯ ನಮಸ್ಕಾರ, 10 ಗಂಟೆಗೆ ಶ್ರೀರಂಗಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಹಗ್ಗ ಜಗ್ಗಾಟ, ಮಧ್ಯಾಹ್ನ 2 ಗಂಟೆಗೆ ಶ್ರೀರಂಗ ವೇದಿಕೆಯಲ್ಲಿ ಜಿಲ್ಲಾ ಕಸಾಪದಿಂದ ವಿಚಾರಗೋಷ್ಠಿ, ಮಧ್ಯಾಹ್ನ 3 ಗಂಟೆಗೆ ಸ್ಥಳೀಯ ಕಲಾ ತಂಡಗಳಿಂದ, ಸಂಜೆ 7ರಿಂದ ಹಿನ್ನೆಲೆ ಗಾಯಕರಾದ ಆಲ್‌ಓಕೆ ಮತ್ತು ತಂಡದಿಂದ ಹಾಗೂ ಹಿನ್ನೆಲೆ ಗಾಯಕರಾದ ಲಗೋರಿ ಮತ್ತು ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ಪ್ರತಿದಿನ ಸಿನಿಮೋತ್ಸವ:
ಅ.4 ರಿಂದ 7ರ ವರೆಗೆ ಬೆಳಗ್ಗೆಯಿಂದ ರಾತ್ರಿವರೆಗೆ ಕರಕುಶಲ ಸಾಮಗ್ರಿಗಳು, ಗುಡಿ ಕೈಗಾರಿಕಾ ಸಾಮಗ್ರಿಗಳು, ರಾಸಾಯನಿಕ ಮತ್ತು ಬೆಲ್ಲ ಹಾಗೂ ಸರ್ಕಾರದ ವಿವಿಧ ಇಲಾಖೆಗಳ ಯೋಜನೆ ಮತ್ತು ಮಾಹಿತಿಗಳ ಪ್ರದರ್ಶನ, ಮಂಡ್ಯ ಜನಪರ ಶೈಲಿಯ ಮೇಲುಕೋಟೆ ಪುಳಿಯೊಗರೆ, ಬೆಲ್ಲದ ಕಡುಬು, ಬೆಲ್ಲದ ಹೋಳಿಗೆ ಮತ್ತು ಬೆಲ್ಲದ ಖಾದ್ಯಗಳು ಹಾಗೂ ಕರ್ನಾಟಕದ ಪ್ರಸಿದ್ಧ ಖಾದ್ಯಗಳ ಅನಾವರಣ ನಡೆಯಲಿದೆ.
ಮೈಸೂರು ಒಡೆಯರ್ ಅವರು 1610ರಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ ತಮ್ಮ ಮೊದಲ ರಾಜಧಾನಿ ಶ್ರೀರಂಗಪಟ್ಟಣದಲ್ಲಿ ದಸರಾ ಆಚರಿಸಲು ಪ್ರಾರಂಭಿಸಿದರು. ಪ್ರಾರಂಭದಲ್ಲಿ ಶ್ರೀರಂಗನಾಥಸ್ವಾಮಿ ದೇವಸ್ಥಾನದ ಬಳಿ ಇದ್ದ ಅರಮನೆ ಆವರಣದಲ್ಲಿ ದಸರಾ ಆಚರಣೆ 10 ದಿನ ನಡೆಯುತ್ತಿತ್ತು. ಮಹಾರಾಜರೇ ಖುದ್ದು ಧಾರ್ಮಿಕ ಕೈಂಕರ್ಯದಲ್ಲಿ ಪಾಲ್ಗೊಳ್ಳುತ್ತಿದ್ದರು.
ಕಾವೇರಿ ನದಿ ದಡಕ್ಕೆ ಆಯುಧಗಳನ್ನು ಕೊಂಡೊಯ್ದು ಪೂಜೆ ಸಲ್ಲಿಸಲಾಗುತ್ತಿತ್ತು. ನಂತರ ಅರಮನೆ ಪಕ್ಕದ ವಸಂತಕೊಳದಲ್ಲಿ ಮಜ್ಜನ ನಡೆಸಿ ಕಸ್ತೂರಿ, ಸಾಮ್ರಾಣಿ, ಪನ್ನೀರುಗಳಿಂದ ಸಿಂಪಡಿಸುತ್ತಿದ್ದರು. ಅರಮನೆ ಆವರಣ ಸೇರಿದಂತೆ ಪಟ್ಟಣವನ್ನು ತಳಿರು ತೋರಣಗಳಿಂದ ಅಲಂಕರಿಸಲಾಗುತ್ತಿತ್ತು ಎಂಬ ವಿಷಯಗಳನ್ನು ಕವಿ ಗೋವಿಂದ ವೈದ್ಯ ಕಂಠೀರವ ನರಸರರಾಜ ವಿಜಯಂ ಕೃತಿಯಲ್ಲಿ ವರ್ಣಿಸಿದ್ದಾರೆ.