ಕನ್ನಡಪ್ರಭ ವಾರ್ತೆ ಮಂಡ್ಯ
ಸಾಹಿತ್ಯ ಎಂದರೆ ಅರಿವು, ಜ್ಞಾನ ಎಂದರ್ಥ. ಮಠಾಧೀಶರೂ ಕೂಡ ತಮ್ಮಲ್ಲಿರುವ ಜ್ಞಾನವನ್ನು ಎಲ್ಲೆಡೆ ಹಂಚುತ್ತಿದ್ದಾರೆ. ಹನ್ನೆರಡನೇ ಶತಮಾನದಲ್ಲಿದ್ದ ಶರಣರು ಸಾಹಿತ್ಯ ಲೋಕಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ. ಪುಟ್ಟರಾಜ ಗವಾಯಿ, ಸಿದ್ದೇಶ್ವರ ಸ್ವಾಮೀಜಿ, ಶ್ರೀಸಿದ್ಧಗಂಗಾಶ್ರೀಗಳು ಸೇರಿದಂತೆ ಅನೇಕರಿಂದಲೂ ಕನ್ನಡ ಸಾರಸ್ವತ ಲೋಕ ಬೆಳವಣಿಗೆ ಸಾಧಿಸಿದೆ. ಈಗಿನ ಅನೇಕ ಸ್ವಾಮೀಜಿಗಳೂ ಉದಾತ್ತ ಜ್ಞಾನವನ್ನು ಹೊಂದಿದ್ದಾರೆ. ಅವರನ್ನೂ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರನ್ನಾಗಿ ಮಾಡುವುದರಿಂದ ಅವರಲ್ಲಿರುವ ಸಾಹಿತ್ಯ ಜ್ಞಾನವನ್ನೂ ಹೊರತಂದಂತಾಗುತ್ತದೆ ಎಂದರು.
ಸ್ವಾಮೀಜಿಗಳನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಮಾಡುವಾಗಲೂ ಒಂದು ಅಪಾಯವಿದೆ. ಜಾತಿ, ಮತ, ಪಂಗಡ, ಲಾಭಿ, ಪ್ರಭಾವ ಇವೆಲ್ಲವನ್ನೂ ದೂರವಿಟ್ಟು ನಿಜವಾದ ಜ್ಞಾನಿಗಳನ್ನು ಹುಡುಕಿ ಸಮ್ಮೇಳನಾಧ್ಯಕ್ಷರನ್ನಾಗಿ ಮಾಡಬೇಕು. ಅಂತಹದೊಂದು ಮಹತ್ವದ ಪರಂಪರೆ ಮಂಡ್ಯದಿಂದಲೇ ಆರಂಭವಾಗಬೇಕು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಮಠಗಳ ಒಳಗೊಳ್ಳುವಿಕೆ ಇಲ್ಲ:
ಸಾಹಿತ್ಯ ಸಮ್ಮೇಳನ, ನುಡಿಜಾತ್ರೆ ಎನ್ನುವುದು ಎಲ್ಲರ ಹಬ್ಬ. ಸಾಹಿತಿಗಳಿಗಷ್ಟೇ ಸೀಮಿತವಾಗಿರುವುದಿಲ್ಲ. ಮಠಗಳನ್ನೂ ಒಳಗೊಂಡು ಸಮ್ಮೇಳನ ನಡೆಸಿದಾಗ ಅನ್ನ ದಾಸೋಹ, ಆಶ್ರಯ, ಮಠದ ಸಂಪರ್ಕದಲ್ಲಿರುವ ಸಾಹಿತ್ಯಾಸಕ್ತರು, ವಿದೇಶದಲ್ಲಿರುವ ಕನ್ನಡಿಗರನ್ನೂ ಕರೆತರುವುದು ಸೇರಿದಂತೆ ಇನ್ನಿತರ ಜವಾಬ್ದಾರಿಗಳನ್ನು ಶಕ್ತಾನುಸಾರ ನಿಭಾಯಿಸಲು ಸಾಧ್ಯವಾಗುತ್ತದೆ ಎಂದರು.
ಇಂದಿನ ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರದ ಶಿಕ್ಷಣ ಕೊಡಬೇಕು. ನಮ್ಮಲ್ಲಿ ತಂದೆ-ತಾಯಿಯರನ್ನು, ಗುರು-ಹಿರಿಯರನ್ನು ಪ್ರೀತಿಸುವ ಶಿಕ್ಷಣವೇ ಇಲ್ಲ. ಎಲ್ಲರನ್ನು ಪ್ರೀತಿಸುವ ಶ್ರೇಷ್ಠತೆಯ ಗುಣವನ್ನು ಮಕ್ಕಳಲ್ಲಿ ತುಂಬಬೇಕು. ಅಂತಹ ವಿಷಯಗಳನ್ನೇ ಪಠ್ಯದಲ್ಲಿ ಅಳವಡಿಸುವ ಆಲೋಚನೆಗಳು ಯಾರಲ್ಲೂ ಇದ್ದಂತಿಲ್ಲ. ಶಾಲೆಯಲ್ಲಿ ಕಲಿಯುವುದಷ್ಟೇ ಶಿಕ್ಷಣವಲ್ಲ, ಶಾಲೆಯಿಂದ ಹೊರಗಿರುವ ಜೀವನ ಶಿಕ್ಷಣವೇ ಬಹಳ ದೊಡ್ಡದು ಎಂದು ಅಭಿಪ್ರಾಯಿಸಿದರು.
ಸಂವಾದದಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಪಿ.ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಆನಂದ, ಉಪಾಧ್ಯಕ್ಷ ನವೀನ್‌ಕುಮಾರ್ ಇದ್ದರು.
ಧರ್ಮ ಎನ್ನುವುದು ಶೋಷಣೆಯಲ್ಲ. ಪೋಷಣೆ ಮಾಡುವುದು. ಕರುಣೆ, ಪ್ರೀತಿ, ದಯೆ ಎಲ್ಲವನ್ನೂ ಧರ್ಮ ಒಳಗೊಂಡಿರಬೇಕು. ಸಮಾಜಕ್ಕೆ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಬೇಕು. ಮತ-ಪಂಥಗಳನ್ನು ಮರೆತು ನಾವೆಲ್ಲರೂ ಒಂದೇ ಎಂಬ ಭಾವನೆ ಇರಬೇಕು. ಆಗ ಮಠಗಳ ಮೇಲೆ ಜನರಿಗೆ ನಂಬಿಕೆ, ವಿಶ್ವಾಸ ಉಳಿಯುತ್ತದೆ ಎಂದರು.
ಕನ್ನಡದ ಬೆಳವಣಿಗೆ ಕುಂಠಿತಕ್ಕೆ ಒಗ್ಗಟ್ಟಿನ ಕೊರತೆ
ಸ್ವಾಮೀಜಿಗಳು ಮತ್ತು ರಾಜಕಾರಣಿಗಳ ನಡುವೆ ನಿಕಟ ಸಂಬಂಧವಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ವಾಸ್ತವದಲ್ಲಿ ಸ್ವಾಮೀಜಿಗಳ ಮಾತನ್ನು ರಾಜಕಾರಣಿಗಳು ಸ್ವೀಕರಿಸುವುದಿಲ್ಲ. ಭಾಷೆಯ ಬೆಳವಣಿಗೆಗೆ ಸಂಬಂಧ ನಾವೂ ಅನೇಕ ಬಾರಿ ಆಡಳಿತ ನಡೆಸುವವರ ಗಮನಸೆಳೆದಿದ್ದರೂ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.