ದೇವನಹಳ್ಳಿ: ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯಲ್ಲಿ ಕೆಐಡಿಬಿಗೆ ಎರಡನೇ ಹಂತದಲ್ಲಿ ರೈತರ ೧೭೭೭ ಎಕರೆ ವ್ಯವಸಾಯ ಭೂಮಿ ಸ್ವಾಧೀನಪಡಿಸಿಕೊಳ್ಳುವುದನ್ನು ವಿರೋಧಿಸಿ ೧೩ ಹಳ್ಳಿಗಳ ರೈತರು ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ರಚಿಸಿ, ವಿವಿಧ ಹಂತಗಳಲ್ಲಿ ನಿರಂತರ ೧೧೯೮ ದಿನ ಹೋರಾಟ ನಡೆಸಿದ್ದರು.
ಅಂತಿಮ ಸಭೆಯಲ್ಲಿ ಚನ್ನರಾಯಪಟ್ಟಣ ವ್ಯಾಪ್ತಿಯ ೧೩ ಹಳ್ಳಿಗಳ ೧೧೭೭ ಎಕರೆ ಭೂಸ್ವಾಧೀನ ಪ್ರಕ್ರಿಯೆ ಸಂಪೂರ್ಣ ರದ್ದುಪಡಿಸಲಾಗಿದೆ. ಸ್ವಯಂಪ್ರೇರಿತರಾಗಿ ರೈತರೇ ಭೂಮಿ ಕೊಡಲು ಮುಂದೆ ಬಂದರೆ ಸರ್ಕಾರದ ಮಾರ್ಗಸೂಚಿ ಬೆಲೆಗಿಂತ ಹೆಚ್ಚಿನ ಹಣ ಕೊಟ್ಟು ಖರೀದಿಸಲಾಗುವುದು. ಭೂಮಿ ನೀಡದ ರೈತರು ತಮ್ಮಿಚ್ಚೆಯಂತೆ ವ್ಯವಸಾಯ ಮುಂದುವರಿಸಬಹುದು. ನಮಗೆ ಕೈಗಾರಿಕೆಗಳು ಎಷ್ಟು ಮುಖ್ಯವೋ, ರೈತರೂ ಅದಕ್ಕಿಂತಲೂ ಮುಖ್ಯ ಎಂದು ಸಿದ್ದರಾಮಯ್ಯನವರು ಘೋಷಿಸುತ್ತಿದ್ದಂತೆ ರೈತ ಹೋರಾಟಗಾರರ ಆನಂದ, ಸಂಭ್ರಮ, ವಿಜಯೋತ್ಸವ ಮುಗಿಲು ಮುಟ್ಟಿತು.
ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಿ, ಗೆಲುವಿನ ಖುಷಿಯಲ್ಲಿ ಸಂಜೆ ದೇವನಹಳ್ಳಿ ಕಡೆ ಮುಖ ಮಾಡಿದ ರೈತ ಮುಖಂಡರಿಗೆ ಪಟ್ಟಣದ ಕೆಂಪೇಗೌಡ ವೃತ್ತದಲ್ಲಿ ಹೂಮಾಲೆ ಹಾಕಿ ಜೈಕಾರ ಕೂಗಿ ಸ್ವಾಗತಿಸಿದರು.ರೈತ ನಾಯಕಿ ಚುಕ್ಕಿ ನಂಜುಂಡಸ್ವಾಮಿ ಮಾತನಾಡಿ, ಇದು ರೈತರ ಸಂಘಟಿತ ಹೋರಾಟಕ್ಕೆ ಸಿಕ್ಕ ಜಯ. ಒಗ್ಗಟ್ಟಿನ ಹೋರಾಟದಿಂದ ಜಯ ಸಾಧಿಸಬಹುದು ಎಂಬುದು ಸಾಬೀತಾಗಿದೆ ಎಂದರು.ರಾಜ್ಯ ರೈತ ಸಂಘದ ಹಸಿರು ಸೇನೆ ಅಧ್ಯಕ್ಷ ಡಾ. ಬಿ.ಕೆ.ವಿನೋದ್ ಕುಮಾರಗೌಡ ಮಾತನಾಡಿ, ಇದು ಮೂರೂವರೆ ವರ್ಷಗಳ ಸಂಘಟಿತ ಹೋರಾಟದ ಫಲ. ಮುಖ್ಯಮಂತ್ರಿಗಳು ರೈತರ ಪರ ನಿರ್ಣಯ ತೆಗೆದುಕೊಳ್ಳದಿದ್ದರೆ ರಾಜ್ಯ ಸರ್ಕಾರದ ಬುಡವೇ ಅಲುಗಾಡುವ ಸ್ಥಿತಿಗೆ ಹೋಗುತ್ತಿತ್ತು. ಆದರೆ ಸಿಎಂ ಗಟ್ಟಿ ತೀರ್ಮಾನ ತಾವು ಹೋರಾಟದಿಂದ ಬಂದವರು, ರೈತರ ಪರವೆಂದು ಸಾಬೀತುಪಡಿಸಿದ್ದಾರೆ. ನಾಡಿನ ಎಲ್ಲಾ ರೈತಪರ ಸಂಘಟನೆಗಳ ಪರ ಸರ್ಕಾರಕ್ಕೆ ಮತ್ತು ಮುಖ್ಯಮಂತ್ರಿಗಳಿಗೆ ವಿಶೇಷವಾಗಿ ಸಹಕರಿಸಿದ ಕೆ.ಎಚ್. ಮುನಿಯಪ್ಪನವರನ್ನು ಅಭಿನಂದಿಸುತ್ತೇವೆ ಎಂದರು.
ವಿಜಯೋತ್ಸವದಲ್ಲಿ ಸಿಐಟಿಯುನ ವರಲಕ್ಷ್ಮೀ, ಚುಕ್ಕಿನಂಜುಂಡಸ್ವಾಮಿ, ಕಾರಹಳ್ಳಿ ಶ್ರೀನಿವಾಸ್, ಬೆಳವಂಗಲ ಪ್ರಭಾ, ಚಂದ್ರತೇಜಸ್ವಿ, ಮಾರೇಗೌಡ, ನಂಜಪ್ಪ, ಕಾರಹರ್ಳಲಿ ಶ್ರೀನಿವಾಸ್, ಬಡಗಲಪುರ ನಾಗೇಂದ್ರ, ಆಂಜನೇಯರಡ್ಡಿ, ನಾಗರತ್ನಮ್ಮ, ಡಾ. ಬಿ.ಕೆ. ವಿನೋದ ಕುಮಾರಗೌಡ, ರಾಮಚಂದ್ರಪ್ಪ, ಯು.ಬಸವರಾಜ್, ಮಧು, ಮೋಹನ, ರೈತ ಮುಖಂಡರಿದ್ದರು.೧೬ ದೇವನಹಳ್ಳಿ ಚಿತ್ರಸುದ್ದಿ:೦೧
ದೇವನಹಳ್ಳಿಯಲ್ಲಿ ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟಗಾರರು ವಿಜಯೋತ್ಸವ ಆಚರಿಸಿದರು.