ಕಂಚಿಕಾಮಕೋಟಿ ಪೀಠಂನಿಂದ ಐತಿಹಾಸಿಕ ಸೈಕಲ್ ಧರ್ಮಸ್ಥಳಕ್ಕೆ ಕೊಡುಗೆ

KannadaprabhaNewsNetwork |  
Published : Oct 27, 2025, 12:30 AM IST
ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಪುಷ್ಪಾರ್ಚನೆ ಮೂಲಕ ಸೈಕಲನ್ನು ಸ್ವಾಗತಿಸಿ ರಿಕ್ಷಾವನ್ನು ಸ್ವೀಕರಿಸಿದರು. | Kannada Prabha

ಸಾರಾಂಶ

ಶ್ರೀಕ್ಷೇತ್ರ ಧರ್ಮಸ್ಥಳದ ಕಾರ್ ಮ್ಯೂಸಿಯಂಗೆ ಶುಕ್ರವಾರ ಐತಿಹಾಸಿಕ, ಧಾರ್ಮಿಕ ಮಹತ್ವವುಳ್ಳ ಸೈಕಲ್ ರಿಕ್ಷಾ ಕೊಡುಗೆಯಾಗಿ ಸೇರ್ಪಡೆಯಾಗಿದೆ. ಇದು ಬಂದಿರುವುದು ಆದಿ ಶಂಕರಾಚಾರ್ಯರು ಸ್ಥಾಪಿಸಿದ ತಮಿಳುನಾಡಿನ ಕಾಂಚಿಪುರಂನಲ್ಲಿರುವ ಕಂಚಿ ಕಾಮ ಕೋಟಿ ಪೀಠಂನಿಂದ.

ಯತಿಗಳು ಭಾರತ ಪರ್ಯಟನ ಮಾಡಿದ ವಾಹನ ಇದು । ಧರ್ಮಸ್ಥಳದಲ್ಲಿ ಅದ್ಧೂರಿ ಸ್ವಾಗತಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಶ್ರೀಕ್ಷೇತ್ರ ಧರ್ಮಸ್ಥಳದ ಕಾರ್ ಮ್ಯೂಸಿಯಂಗೆ ಶುಕ್ರವಾರ ಐತಿಹಾಸಿಕ, ಧಾರ್ಮಿಕ ಮಹತ್ವವುಳ್ಳ ಸೈಕಲ್ ರಿಕ್ಷಾ ಕೊಡುಗೆಯಾಗಿ ಸೇರ್ಪಡೆಯಾಗಿದೆ. ಇದು ಬಂದಿರುವುದು ಆದಿ ಶಂಕರಾಚಾರ್ಯರು ಸ್ಥಾಪಿಸಿದ ತಮಿಳುನಾಡಿನ ಕಾಂಚಿಪುರಂನಲ್ಲಿರುವ ಕಂಚಿ ಕಾಮ ಕೋಟಿ ಪೀಠಂನಿಂದ. ಅಲ್ಲಿನ 67ನೇ ಪೀಠಾಧಿಪತಿ ಶ್ರೀ ಮಹಾದೇವೇಂದ್ರ ಸರಸ್ವತಿ ಸ್ವಾಮೀಜಿ ಹಾಗೂ ಇವರ ನಂತರ ಪೀಠವನ್ನಲಂಕರಿಸಿದ ಶ್ರೀ ಚಂದ್ರಶೇಖರೇಂದ್ರ ಸರಸ್ವತಿ ಸ್ವಾಮೀಜಿ ಹಾಗೂ ನಂತರದ ಶ್ರೀ ಜಯೇಂದ್ರ ಸರಸ್ವತಿ ಸ್ವಾಮೀಜಿ ತಮ್ಮ ಪರ್ಯಟನ ಕಾಲದಲ್ಲಿ ಉಪಯೋಗಿಸಿದ ಸೈಕಲ್ ಇದಾಗಿದೆ.

ಇದರ ಹಿಂಭಾಗದಲ್ಲಿ ಸ್ವಾಮೀಜಿಯವರು ತಮ್ಮ ಪಾದಯಾತ್ರೆ ಸಂದರ್ಭದಲ್ಲಿ ದೇವರೊಂದಿಗೆ ಅವಶ್ಯಕ ವಸ್ತುಗಳಾದ ಪಾದುಕೆಗಳನ್ನು, ಅನುಷ್ಠಾನ ಪಾತ್ರೆಗಳನ್ನು ಮತ್ತು ದರ್ಭಾಸನದ ಸಾಗಾಣಿಕೆಗೆ ಇದನ್ನು ಬಳಸುತ್ತಿದ್ದರು. ಅವರ ಶಿಷ್ಯರು ಅದನ್ನು ತಳ್ಳಿಕೊಂಡು ಹೋಗುತ್ತಿದ್ದರು. ಸ್ವಾಮೀಜಿ ಅದರ ಪಕ್ಕದಲ್ಲೇ ನಡೆದುಕೊಂಡು ಬರುತ್ತಿದ್ದರು.

ತ್ರಿಚಕ್ರದೊಂದಿಗೆ ಚಂದ್ರಶೇಖರೇಂದ್ರ ಸರಸ್ವತಿ ಸ್ವಾಮೀಜಿ ಸಂಪೂರ್ಣ ಭಾರತವನ್ನು ಒಂದು ಬಾರಿ ಸುತ್ತಿ ಬಂದಿದ್ದರೆ, ಅವರ ನಂತರದ ಶ್ರೀಜಯೇಂದ್ರ ಸರಸ್ವತೀ ಸ್ವಾಮೀಜಿ ಮೂರು ಬಾರಿ ಭಾರತ ಪರ್ಯಟನ ಮಾಡಿದ್ದರು. ಈ ಸಂದರ್ಭ ಎರಡು ಬಾರಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬಂದಿದ್ದರು. ಈಗಿನ ಶ್ರೀ ವಿಜಯೇಂದ್ರ ಸರಸ್ವತಿ ಸ್ವಾಮೀಜಿ ಇದನ್ನು ಜತನವಾಗಿ ನೋಡಿಕೊಂಡಿದ್ದಾರೆ. ಹೀಗಾಗಿ ಈ ವಾಹನ ನಾಲ್ಕು ಪೀಠಾಧಿಪತಿಗಳನ್ನು ನೋಡಿದೆ.

ಧರ್ಮಸ್ಥಳ ಕ್ಷೇತ್ರದ ಹೆಗ್ಗಡೆಯವರಿಗೂ ಕಂಚಿ ಪೀಠಕ್ಕೂ ಬಹುಕಾಲದಿಂದ ಅವಿಚ್ಛಿನ್ನ ಸಂಬಂಧ. ಈಗಿನ ಪೀಠಾಧಿಪತಿ ಶ್ರೀ ವಿಜಯೇಂದ್ರ ಸರಸ್ವತಿ ಸ್ವಾಮೀಜಿ ಕ್ಷೇತ್ರಕ್ಕೆ ಬಂದು ಅನ್ನಪೂರ್ಣ ಛತ್ರ ಉದ್ಘಾಟಿಸಿದ್ದರು. ಚಾತುರ್ಮಾಸ್ಯ ಸಂದರ್ಭ ಪ್ರಸಾದವನ್ನು ಇಲ್ಲಿಗೆ ತರಲಾಗುತ್ತಿದೆ ಎಂದು ಕಾಂಚಿಪುರದ ಗಣೇಶ ಘನಪಾಠಿಗಳು ಮಾಧ್ಯಮದವರಿಗೆ ಮಾಹಿತಿ ನೀಡಿದರು.

ಶುಕ್ರವಾರ ಭಕ್ತರು ತಂದ ಈ ಸೈಕಲ್‌ ವಾಹನವನ್ನು ಟ್ರಾಕ್ಟರ್ ಮೇಲೆ ಇರಿಸಿ ಅಲಂಕರಿಸಿಕೊಂಡು ಕ್ಷೇತ್ರ ಮಾಹಿತಿ ಕಚೇರಿಯಿಂದ ಬೀಡಿನವರೆಗೆ ಮೆರವಣಿಗೆಯಲ್ಲಿ ತರಲಾಯಿತು. ಧರ್ಮಾಧಿಕಾರಿ ಡಾ. ಡಾ. ವೀರೇಂದ್ರ ಹೆಗ್ಗಡೆ ಪುಷ್ಪಾರ್ಚನೆ ಮಾಡುವ ಮೂಲಕ ಸ್ವಾಗತಿಸಿ, ಸೈಕಲ್ ರಿಕ್ಷಾ ಸ್ವೀಕರಿಸಿದರು. ಹೇಮಾವತಿ ವೀ. ಹೆಗ್ಗಡೆ, ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಶ್ರೇಯಸ್ ಕುಮಾರ್, ಸೀತಾರಾಮ ತೋಳ್ಪಾಡಿತ್ತಾಯ, ಹೆಗ್ಗಡೆ ಕುಟುಂಬಸ್ಥರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

8ನೇ ಸೆಮಿಸ್ಟರ್‌ನಲ್ಲಿ 6 ತಿಂಗಳು ಕಡ್ಡಾಯ ಇಂಟರ್ನ್ ಶಿಪ್
ಕ್ರೀಡೆಯಲ್ಲಿ ಸೋಲು, ಗೆಲುವು ಸಮಾನವಾಗಿ ಸ್ವೀಕರಿಸಿ: ಆರ್ ಟಿಒ ಮಲ್ಲಿಕಾರ್ಜುನ್ ಕಿವಿಮಾತು